ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಿಗರ ಕ್ಷಮೆ ಕೋರಿದ ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ
Dec 22, 2024 08:40 PM IST
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಚ್‌ಡಿಕುಮಾರಸ್ವಾಮಿ ಕನ್ನಡಿಗರ ಕ್ಷಮೆ ಕೋರಿದರು.
Mandya Sahitya Sammelana: ಕರ್ನಾಟಕದಲ್ಲಿ ತಾವು ಸಿಎಂ ಆಗಿದ್ದಾಗ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದ ವಿಚಾರವಾಗಿ ಈಗ ಕೇಂದ್ರ ಸಚಿವರಾಗಿರುವ ಎಚ್‌ಡಿಕುಮಾರ ಸ್ವಾಮಿ ಕ್ಷಮೆ ಕೋರಿದ ಪ್ರಸಂಗ ನಡೆಯಿತು.
ಮಂಡ್ಯ: ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಂದ್ರ ಸಚಿವ ಹಾಗೂ ಮಂಡ್ಯ ಸಂಸದ ಎಚ್‌ಡಿಕುಮಾರಸ್ವಾಮಿ ಅವರು ಕನ್ನಡಗಿರ ಕ್ಷಮೆ ಕೋರಿದ ಪ್ರಸಂಗ ನಡೆಯಿತು. ಉದ್ಘಾಟನಾ ಸಮಾರಂಭಕ್ಕೆ ಬರಲು ಆಗದ್ದರಿಂದ ಕುಮಾರಸ್ವಾಮಿಅ ವರು ಸಮಾರೋಪ ಸಮಾರಂಭಕ್ಕೆ ಬಂದಿದ್ದರು. ಅದರಲ್ಲೂ ಕರ್ನಾಟಕದಲ್ಲಿ ಹತ್ತನೇ ತರಗತಿವರೆಗೆ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಬೇಡಿ. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಿ ಎಂದು ಸಮ್ಮೇಳನಾಧ್ಯಕ್ಷ ಗೊರು ಚನ್ನಬಸಪ್ಪ ಅವರು ಎರಡು ದಿನದ ಹಿಂದೆ ಸಮ್ಮೇಳನದ ತಮ್ಮ ಭಾಷಣದ ಮೂಲಕ ಹಕ್ಕೊತ್ತಾಯ ಮಂಡಿಸಿದ ನಂತರ ಅವರ ಉಪಸ್ಥಿತಿಯಲ್ಲಿಯೇ ಕುಮಾರಸ್ವಾಮಿ ಕ್ಷಮೆ ಕೋರಿದರು.
ಮಂಡ್ಯದಲ್ಲಿ ಭಾನುವಾರ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ‘ಗ್ರಾಮೀಣ ಮಕ್ಕಳು ಆಂಗ್ಲ ಭಾಷೆ ಕಲಿಯಬೇಕು, ಕನ್ನಡ ಭಾಷೆಗೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಕಡಿಮೆ ಶುಲ್ಕದಲ್ಲಿ 1000 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ. ಆದನ್ನು ಬಿಟ್ಟು ಬೇರೆ ಉದ್ದೇಶ ನನಗೆ ಇರಲಿಲ್ಲ. ಇದಕ್ಕಾಗಿ ಕನ್ನಡಿಗರ ಕ್ಷಮೆ ಕೋರುವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವ ಬಗ್ಗೆ ಪೋಷಕರಲ್ಲಿ ಕಾಳಜಿ ಇತ್ತು. ಗ್ರಾಮೀಣ ಮಕ್ಕಳಿಗೆ ಕಾನ್ವೆಂಟ್‌ಗೆ ಹೋಗುವ ಮಕ್ಕಳೊಂದಿಗೆ ಪೈಪೋಟಿ ಇತ್ತು.ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಕಾನ್ವೆಂಟ್‌ನಿಂದ ಬಾಧಿತವಾಗಿವೆ. ಹಾಗಾಗಿ ನಾನು ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದೆ ಎಂದು ನೆನಪಿಸಿಕೊಂಡರು.
ಶಿಕ್ಷಣಕ್ಕೆ ನೀಡಿದ ಕೊಡುಗೆಯನ್ನು ತಿಳಿಸಿದ ಕುಮಾರಸ್ವಾಮಿ, ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ 189 ಪ್ರಥಮ ದರ್ಜೆ ಕಾಲೇಜುಗಳು, 500 ಜೂನಿಯರ್ ಕಾಲೇಜುಗಳು ಮತ್ತು 56,000 ಶಿಕ್ಷಕರು ಮತ್ತು ಉಪನ್ಯಾಸಕರನ್ನು ನೇಮಿಸಲಾಯಿತು. ಪ್ರತಿ ಶಾಲಾ ಕಟ್ಟಡ ನವೀಕರಣಕ್ಕೆ 2 ಕೋಟಿ ರೂ. ನೀಡಲಾಗಿದೆ ಎಂದರು.
ನಿರುದ್ಯೋಗ ಸಮಸ್ಯೆ ನಿವಾರಣೆಗೆ ಜಿಲ್ಲೆಯಲ್ಲಿ ಕಾರ್ಖಾನೆ ಸ್ಥಾಪನೆ
ಮಂಡ್ಯಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೆ ಕಾರ್ಖಾನೆ ತರುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕ್ರಮ ವಹಿಸುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ನಮ್ಮ ಸಂಸ್ಕೃತಿ, ಭಾಷೆ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಜಿಲ್ಲೆಯಲ್ಲಿ ಐಐಟಿ ಯನ್ನು ಮುಂದಿನ ದಿನಗಳಲ್ಲಿ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವುದಾಗಿ ತಿಳಿಸಿದರು.
ಭಾಷೆ, ಶಿಕ್ಷಣ, ಪರಿಸರದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸಬೇಕು. ನಮ್ಮ ಭಾಷೆಗೆ ನಾವು ಹೆಚ್ಚು ಮಹತ್ವ ನೀಡಬೇಕು. ಸಾಹಿತ್ಯದಲ್ಲಿ ದೊಡ್ಡ ಕೊಡುಗೆ ಕೊಟ್ಟ ಜಿಲ್ಲೆ ಮಂಡ್ಯ ಜಿಲ್ಲೆ. ಕನ್ನಡ ಪಂಡಿತರು, ಸಾಹಿತಿಗಳನ್ನ ನಾಡಿಗೆ ಕೊಟ್ಟಿದ್ದಾರೆ. ಕುವೆಂಪು ಅವರು ನಮ್ಮವರೇ. ನಮ್ಮ ಭಾಷೆ ಉಳಿಸಲು ನಾವು ಮುಂದಾಗಬೇಕು. ಕನ್ನಡ ಚಿತ್ರರಂಗದದಿಂದ ನನ್ನ ವೃತ್ತಿ ಪ್ರಾರಂಭವಾಗಿದ್ದು. ಅವತ್ತಿನ ಕಥೆ, ಬೇರೆ ಇವತ್ತಿನ ಕಥೆ ಬೇರೆ. ಡಾ.ರಾಜ್ ಕುಮಾರ ಅವರ ಹಾಡು ಶಾಂತರೀತಿಯಲ್ಲಿದ್ದವು. ಇವತ್ತಿನ ಹಾಡುಗಳು ಅಷ್ಟೆ. ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟವಾಗಿರಬೇಕು ಎಂದು ಸಲಹೆ ನೀಡಿದರು.
ಜನತೆಗೆ ಪ್ರೋತ್ಸಾಹ ಸಿಗುವ ವಾತಾವರಣ ಸೃಷ್ಟಿ ಮಾಡಬೇಕು. ಮಂಡ್ಯ ಜಿಲ್ಲೆಯ ಗಂಡು ಭೂಮಿ ನೆಲದಲ್ಲಿ. ಹಳೆಯ ಕಾಲದ ದಿನಗಳು ನಶಿಸುತ್ತಿವೆ. ಹಳ್ಳಿಯಲ್ಲಿ ಪಂತಿ ಕುಳಿತು ಊಟ ಮಾಡ್ತಿದ್ವಿ. ಅಂತಹ ಶಾಂತಿಯ ವಾತಾವರಣ ಈಗಿಲ್ಲ. ಈಗಿನ ಪರಿಸ್ಥಿತಿ ನೋಡಿದರೆ ನಮಗೆ ಗಾಬರಿ ಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸುಗಮ ಸಮ್ಮೇಳನ: ಗೊರುಚ
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಮ್ಮೇಳನಾಧ್ಯಕ್ಷರು, ನಾಡೋಜ ಗೊ.ರು.ಚನ್ನಬಸಪ್ಪ, ಸಾಹಿತ್ಯ, ಸಂಸ್ಕೃತಿ ಸಂಬಂಧ ಸಮಾಜಕ್ಕೆ ದೊರೆತರೆ ವಿಶೇಷ ಪರಿಣಾಮ ಬೀರುತ್ತದೆ. ಇಲ್ಲಿ ಬಹಳ ಸುಗಮವಾಗಿ ಸಮ್ಮೇಳನ ಜರುಗಿದೆ. ಸಾಮಾನ್ಯವಾಗಿ ಊಟ, ವಸತಿ ಬಗ್ಗೆ ದೂರು ಬರುತ್ತವೆ. ಆದರೆ ಇಲ್ಲಿ ಅದ್ಯಾವುದು ಕೇಳಲಿಲ್ಲ. ಸಾಹಿತ್ಯ ಕಾರ್ಯಕ್ರಮಕ್ಕೆ ಇಷ್ಟೊಂದು ಜನ ಸೇರುವುದು ಅಪರೂಪ ಎಂದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಮಾತನಾಡಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡಿರುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ನೆಲ, ಜಲ, ಭಾಷೆ ಉಳಿವಿಗೆ ಸರ್ಕಾರ ಸದಾ ಬದ್ಧ ಎಂದರು.
ಕಳೆದ ಮೂರು ದಿನಗಳಲ್ಲಿ 6 ಲಕ್ಷಕ್ಕೂ ಅಧಿಕ ಜನರು ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಇದಲ್ಲದೇ 18 ದೇಶಗಳಿಂದ 200ಕ್ಕೂ ಅಧಿಕ ಕನ್ನಡ ಪ್ರೇಮಿಗಳು ಆಗಮಿಸಿದ್ದು ವಿಶೇಷ. ಸಮ್ಮೇಳನಾಧ್ಯಕ್ಷರ ಆಯ್ಕೆ, ಗೋಷ್ಠಿ, ಕಾರ್ಯಕ್ರಮಗಳು ಜನರ ಮೆಚ್ಚುಗೆ ಗಳಿಸಿವೆ ಎಂದು ಹೇಳಿದರು.
ನಿರ್ಣಯ ಜಾರಿಗೆ ತರದಿದ್ದರೆ ಪ್ರತಿಭಟನೆ: ಹೊರಟ್ಟಿ
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಕೇವಲ ಸಮ್ಮೇಳನ ಮಾಡಿದರೆ ಸಾಲದು. ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಕ್ಕೆ ಬರುವ ರೀತಿಯಲ್ಲಿ ನೋಡಿಕೊಳ್ಳುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿದೆ. ಇಲ್ಲಿನ ನಿರ್ಣಯಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು. ಅನುಷ್ಠಾನಕ್ಕೆ ಬಂದ ನಿರ್ಣಯಗಳು ಎಷ್ಟು ಎಂಬುದನ್ನು ಬಳ್ಳಾರಿ ಸಾಹಿತ್ಯ ಸಮ್ಮೇಳನದಲ್ಲಿ ಘೋಷಿಸಬೇಕು. ಸರ್ಕಾರ ಕೋಟ್ಯಂತರ ರೂ. ಕೊಟ್ಟು ಇಂತಹ ಸಮ್ಮೇಳನ ಮಾಡುವಾಗ ನಿರ್ಣಯ ಜಾರಿಯಾಗುವುದಿಲ್ಲ ಎಂದರೆ ಹೇಗೆ ಎಂದು ಹೊರಟ್ಟಿ ಪ್ರಶ್ನಿಸಿದ್ದೂ ಅಲ್ಲದೇ ನಿರ್ಣಯ ಜಾರಿಯಾಗದೇ ಇದ್ದರೆ ನಾನು ಪ್ರತಿಭಟಿಸುವೆ ಎಂದು ಎಚ್ಚರಿಸಿದರು.
ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಅವರು ಸಮಾರೋಪದ ಭಾಷಣ ಮಾಡಿದರು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಸ್ವಾಮೀಜಿ, ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ, ಅವಧೂತ ಶ್ರೀ ವಿನಯ್ ಗುರೂಜಿ ಶುಭ ನುಡಿಗಳನ್ನಾಡಿದರು.