logo
ಕನ್ನಡ ಸುದ್ದಿ  /  ಕರ್ನಾಟಕ  /  ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷವೂ ಆಯೋಜಿಸಿ: ಮಂಡ್ಯ ಸಮ್ಮೇಳನದಲ್ಲಿ ಕೇಳಿ ಬಂದ ಸಲಹೆ

ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ಪ್ರತಿ ವರ್ಷವೂ ಆಯೋಜಿಸಿ: ಮಂಡ್ಯ ಸಮ್ಮೇಳನದಲ್ಲಿ ಕೇಳಿ ಬಂದ ಸಲಹೆ

Umesha Bhatta P H HT Kannada

Dec 22, 2024 04:45 PM IST

google News

ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಗೋಷ್ಠಿ ವಿಶ್ವ ಕನ್ನಡಿಗರ ಡೈರಿ ಬಿಡುಗಡೆ ಮಾಡಲಾಯಿತು.

    • Mandya Sahitya Sammelana: ಮಂಡ್ಯದಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರ ದೇಶದಲ್ಲಿರುವ ನೆಲೆಸಿರುವ ಕನ್ನಡಿಗರು ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತು ಹಲವು ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಗೋಷ್ಠಿ ವಿಶ್ವ ಕನ್ನಡಿಗರ ಡೈರಿ ಬಿಡುಗಡೆ ಮಾಡಲಾಯಿತು.
ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಗೋಷ್ಠಿ ವಿಶ್ವ ಕನ್ನಡಿಗರ ಡೈರಿ ಬಿಡುಗಡೆ ಮಾಡಲಾಯಿತು.

ಮಂಡ್ಯ: ಕನ್ನಡಿಗರು ವಿಶ್ವಾದ್ಯಂತ ಇರುವುದರಿಂದ ಹಿಂದೆ ಆಯೋಜಿಸುತ್ತಿದ್ದಂತೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ರೂಪದಲ್ಲಿ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿ ವರ್ಷ ಆಯೋಜಿಸಬೇಕು. ಈ ಮೂಲಕ ಜಗತ್ತಿನ ನಾನಾ ಭಾಗಗಳಲ್ಲಿ ಹಂಚಿ ಹೋಗಿರುವ ಕನ್ನಡಿಗರನ್ನು ಒಂದೆಡೆ ಸೇರಿಸುವ ಕೆಲಸವಾಗಬೇಕು. ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಬೇಕು ಬೇಡುಗಳ ಕುರಿತಾಗಿ ಚರ್ಚಿಸಬೇಕು. ಇದರಿಂದ ಕನ್ನಡಿಗರಲ್ಲಿ ಇನ್ನಷ್ಟು ಆತ್ಮವಿಶ್ವಾಸವೂ ಹೆಚ್ಚಲಿದೆ. ನಮ್ಮ ನಾಡಿನವರು ನಮ್ಮ ಕ್ಷೇಮವನ್ನಾದರೂ ವಿಚಾರಿಸುತ್ತಾರೆ. ಹೊರ ದೇಶದಲ್ಲಿರುವ ಕನ್ನಡಿಗ ಪೀಳಿಗೆಯವರು ಒಂದು ಗೂಡಲು ಇದು ವೇದಿಕೆಯಾಗಲಿದೆ. ಇದನ್ನು ಕರ್ನಾಟಕ ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತಿನಿಂದ ಮಾಡಿದರೆ ಒಳಿತು.

ಮಂಡ್ಯದಲ್ಲಿ ನಡೆದಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೇಳಿ ಬಂದ ಸಲಹೆಯಿದು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜಮಾತೆ ಕೆಂಪನಂಜಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಆಯೋಜಿಸಿದ್ದ "ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ" ವಿಷಯದ ಬಗ್ಗೆ ನಡೆದ ಗೋಷ್ಠಿಯಲ್ಲಿ ಈ ಕುರಿತು ಚರ್ಚೆ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರನಾಥ ಗೌಡ, ವಿದೇಶದಲ್ಲಿ 40 ಲಕ್ಷಕ್ಕೂ ಅಧಿಕ ಕನ್ನಡಿಗರಿದ್ದು ಅವರಲ್ಲಿ 5 ಲಕ್ಷಕ್ಕೂ ಅಧಿಕ ಕನ್ನಡಿಗರು ಅಮೆರಿಕಾದಲ್ಲೇ ಇದ್ದಾರೆ. ಅಕ್ಕ ಸಮೇಳನದ ಮೂಲಕ ವಿದೇಶದಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ವಿದೇಶದಲ್ಲಿ ಕನ್ನಡ ಕಟ್ಟುವುದು ಸವಾಲಿನ ಕೆಲಸ.‌ ಆದರೂ ಕನ್ನಡತನವನ್ನು ಗಟ್ಟಿಗೊಳಿಸುವ ಕನ್ನಡದ ಲಿಪಿ ಉಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರೂಪಿಸುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಆಶಯ ನುಡಿಗಳನ್ನಾಡಿದ ಬಹರೇನ್ ನ ಕಿರಣ್ ಉಪಾಧ್ಯಾಯ ಅವರು, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂತೆ ವರ್ಷಕ್ಕೊಮ್ಮೆ ಅಂತಾರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮುಖಾಂತರ ವಿದೇಶದಲ್ಲಿ ಕನ್ನಡದ ಕಂಪು ಹರಡಬೇಕು ಎಂದು ಅಭಿಪ್ರಾಯಿಸಿದರು.

ವಿದೇಶದಲ್ಲಿರುವ ಕನ್ನಡಿಗರನ್ನು ಅನ್ಯರಂತೆ ಭಾವಿಸಬೇಡಿ. ಜಗತ್ತಿನ 175 ದೇಶಗಳಲ್ಲಿ ಕನ್ನಡ ಸಂಘಟನೆಗಳು ಬಹಳ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ವಿಶೇಷವೆಂದರೆ ಬಹರೇನ್ ನಲ್ಲಿ ಸ್ವಂತ ಕನ್ನಡ ಭವನದ ಕಟ್ಟಡವಿದೆ. ಅದರಲ್ಲಿ ಸಭಾಂಗಣ, ವಾಚನಾಲಯ, ಸಭಾಭವನ ಒಳಗೊಂಡಿದ್ದು ಅಲ್ಲಿ ಕನ್ನಡದ ತರಗತಿಗಳು ಕೂಡ ನಡೆಯುತ್ತವೆ ಎಂದು ಹೇಳಿದರು.

ವಿದೇಶದಲ್ಲಿರುವ ಕನ್ನಡಿಗರ ಸಮಸ್ಯೆಗಳು, ಪರಿಹಾರಗಳು ವಿಷಯದ ಬಗ್ಗೆ ಮಾತನಾಡಿದ ಕತಾರ್ ನ ಎಚ್. ಕೆ. ಮಧು ಅವರು, ಶ್ರಮಿಕ ವರ್ಗ ಹಾಗೂ ಅವರ ಕುಟುಂಬ ವರ್ಗದ ಸ್ಣತಿಗತಿಗಳ ಬಗ್ಗೆ ವಿವರಿಸಿದರು. ಶ್ರಮಿಕ ವರ್ಗದವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜಗತ್ತಿನ ರಾಷ್ಟ್ರಗಳಲ್ಲಿ ಮಾತೃಭಾಷೆಯನ್ನು ನೋಡುವ ಕ್ರಮ ವಿಷಯದ ಬಗ್ಗೆ ಮಾತನಾಡಿದ ಇಂಗ್ಲೆಂಡ್ ನ ಅಶ್ವಿನ್ ಶೇಷಾದ್ರಿ, ಫ್ರೆಂಚ್, ಜರ್ಮನಿ, ಚೀನಾದವರು ಎಂದಿಗೂ ಮಾತೃಭಾಷೆಯನ್ನು ಬಿಟ್ಟುಕೊಡುವುದಿಲ್ಲ. ಅವರು ಅವರ ಭಾಷೆ ಬಿಟ್ಟು ಅನ್ಯ ಭಾಷೆ ಮಾತನಾಡುವುದಿಲ್ಲ. ಹೀಗಾಗಿ ಅನ್ಯಭಾಷಿಕರು ಅವರ ಭಾಷೆ ಕಲಿಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ನಾವು ಕೂಡ ನಮ್ಮ ಭಾಷೆ ಬಗ್ಗೆ ಅಭಿಮಾನ ಹೊಂದಿರಬೇಕು ಎಂದರು.

ಹೊರನಾಡಿನಲ್ಲಿ ಕನ್ನಡದ ಅಸ್ತಿತ್ವ, ಸವಾಲುಗಳು ವಿಷಯದ ಬಗ್ಗೆ ಮಹಾರಾಷ್ಟ್ರದ ಕಮಲಾಕರ ಕಡವೆ ಮಾತನಾಡಿ, ಬ್ಯಾಂಕಿಂಗ್, ಐಟಿ, ಹೋಟೆಲ್, ಶಿಕ್ಷಣ ಕ್ಷೇತ್ರಗಳಲ್ಲಿ ಬಹುತೇಕ ಕನ್ನಡಿಗರೇ ಕಾಣುತ್ತಾರೆ. ಹೊರರಾಜ್ಯ, ಹೊರದೇಶದ ಸಂಸ್ಕೃತಿ, ಭಾಷೆ ಜೊತೆಗೆ ವಿಲೀನಗೊಂಡು ಹೊಂದಿಕೊಳ್ಳುವ ಶಕ್ತಿ ಕನ್ನಡಿಗರಿಗಿದೆ ಎಂದು ಹೇಳಿದರು.

ವಿದೇಶದಲ್ಲಿರುವ ಕನ್ನಡ ಶಾಲೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಮಾತನಾಡಿದ ಯುಎಇನ ಶಶಿಧರ ನಾಗರಾಜಪ್ಪ ಅವರು, ಅಮೆರಿಕ, ಅರಬ್, ಆಸ್ಟ್ರೇಲಿಯಾ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ 5866 ವಿದ್ಯಾರ್ಥಿಗಳಿಗೆ 704 ಶಿಕ್ಷಕರು ಕನ್ನಡ ಕಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು. ಜರ್ಮನಿಯ ರಶ್ಮಿ ನಾಗರಾಜ್ ಅವರು ಮಾತನಾಡಿ, ಜರ್ಮನಿಯಲ್ಲೂ ನಲಿ ಕಲಿ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ ಕ. ಸಾ. ಪ ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ನಿವೇದಿತ ಹಾವನೂರ - ಹೊನ್ನತ್ತಿ ಅವರು ಪಾಲ್ಗೊಂಡರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ