Mangalore Online Fraud: ಮಂಗಳೂರು ವ್ಯಕ್ತಿಗೆ 1.12 ಕೋಟಿ ರೂ. ಆನ್‌ಲೈನ್ ವಂಚನೆ; ಡೇಟಿಂಗ್ ಆ್ಯಪ್ ನಲ್ಲಿ ಸ್ನೇಹ, ಟ್ರೇಡಿಂಗ್ ನಲ್ಲಿ ದೋಖಾ
Oct 17, 2024 04:34 PM IST
ಮಂಗಳೂರಿನಲ್ಲಿ ಆನ್‌ಲೈನ್ ಟ್ರೇಡಿಂಗ್‌ಗೆ ಹೋದ ವ್ಯಕ್ತಿಯೊಬ್ಬರು ಒಂದು ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದವರು ಆನ್‌ಲೈನ್ ಟ್ರೇಡಿಂಗ್‌ಗೆ ಆಹ್ವಾನಿಸಿ ಭಾರೀ ವಂಚನೆ ಮಾಡಿರುವ ಪ್ರಕಟಣ ಮಂಗಳೂರಿನಲ್ಲಿ ನಡೆದಿದೆ. ಈ ಕುರಿತು ತನಿಖೆ ಶುರುವಾಗಿದೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು
ಮಂಗಳೂರು: ಡೇಟಿಂಗ್ ಆ್ಯಪ್ ನಲ್ಲಿ ಸ್ನೇಹಿತೆಯಾದ ಮಹಿಳೆಯ ಮಾತು ನಂಬಿ ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿದ ಮಂಗಳೂರಿನ ವ್ಯಕ್ತಿಯೊಬ್ಬರು ರೂ 1.12 ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. 2024 ಜೂನ್ 28 ರಂದು ಹ್ಯಾಪನ್ ಡೇಟಿಂಗ್ ಆಪ್( happn dating app) ನಲ್ಲಿ ಲೀನಾ ಜೋಸ್ ಎಂಬವರು ಈ ವ್ಯಕ್ತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿದ್ದು, ವ್ಯಕ್ತಿ ಅದನ್ನು ಸ್ವೀಕರಿಸಿದ್ದರು. ಬಳಿಕ ಟೆಲಿಗ್ರಾಮ್ ಮುಖಾಂತರ ಚಾಟ್ ಮಾಡಲು ತಿಳಿಸಿದಂತೆ ಚಾಟ್ ಮಾಡುತ್ತಿದ್ದರು.
ಈ ನಡುವೆ ಆ ಯುವತಿ ಅಡ್ಮಿರಲ್ ಮಾರ್ಕೆಟ್ ಪೋರೆಕ್ಸ್ ಟ್ರೇಡಿಂಗ್ (admiral market forex trading ) ನಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ನಂತರ ಈ ವ್ಯಕ್ತಿ ಅಡ್ಮಿರಲ್ ಮಾರ್ಕೆಟ್ ಪೋರೆಕ್ಸ್ ಟ್ರೇಡಿಂಗ್‌ನ ನಕಲಿ ವೇವ್‌ಗೆಟೆಕ್ಸಾ( Wavegptexa ) ಎಂಬ ಆ್ಯಪ್ ಡೌನ್ ಲೋಡ್ ಮಾಡಿ ಅದರಲ್ಲಿ ಲಾಗಿನ್ ಆಗಿದ್ದಾರೆ.
ಜುಲೈ 3 ರಂದು 50,000/- ರೂ ಗಳನ್ನು ನೆಫ್ಟ್ ಮೂಲಕ ವರ್ಗಾಹಿಸಿದ್ದಾರೆ. ನಂತರ ಟ್ರೇಡಿಂಗ್ ನಲ್ಲಿ ನೀವು ಹೆಚ್ಚು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುವುದಾಗಿ ತಿಳಿಸಿದಂತೆ ಈ ವ್ಯಕ್ತಿ ಜುಲೈ 3 ರಿಂದ ಜುಲೈ 23 ವರೆಗೆ ರೂ 10,00,000/- ಗಳನ್ನು ಆರೋಪಿಗಳು ಕೊಟ್ಟಂತ ಬ್ಯಾಂಕ್ ಖಾತೆ ಗಳಿಗೆ ವರ್ಗಾಯಿಸಿರುತ್ತಾರೆ.
ನಂತರ ವೇವ್‌ಗೆಟೆಕ್ಸಾ ಆ್ಯಪ್ ನ ರೂ. 80,00,000/- ಲಾಭಾಂಶ ತೊರಿಸುತ್ತಿದ್ದು, ಅದನ್ನು ಈ ವ್ಯಕ್ತಿ ತೆಗೆಯಲು ಕಸ್ಟಮರ್ ಕೇರ್ ಬಳಿ ಕೇಳಿದಾಗ 30% ಟ್ಯಾಕ್ಸ್ ಅಮೌಂಟ್ ಕಟ್ಟುವಂತೆ ತಿಳಿಸಿದ್ದಾರೆ. ಅದರಂತೆ ಈ ವ್ಯಕ್ತಿ ರೂ.19,26,560/- ಗಳನ್ನು ಆರೋಪಿತರ ವಿವಿಧ ಖಾತೆಗಳಿಗೆ ವರ್ಗಾಯಿಸಿರುತ್ತಾರೆ. ನಂತರ ಡಾಲರ್ ನಿಂದ ಇಂಡಿಯನ್ ರೂಪಿಗೆ ವರ್ಗಾಯಿಸಲು ಬ್ಯಾಂಕ್ ಟ್ರಾನ್ಸಕ್ಷನ್ ಚಾರ್ಜ್ 10% ಕಟ್ಟುವಂತೆ ತಿಳಿಸಿದ್ದಾರೆ. ಅದರಂತೆ ಈ ವ್ಯಕ್ತಿ ರೂ.7,36,880/-ಗಳನ್ನು ವರ್ಗಾಯಿಸಿದ್ದಾರೆ.
ನಂತರ ರೂ.50,00,000/- ಗಳನ್ನು ವರ್ಗಾವಣೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿತರು ನೀವು ಮೊದಲ ಬಾರಿಗೆ ದೊಡ್ಡ ಮೊತ್ತದ ಹಣ ವಿಥ್ ಡ್ರಾ ಮಾಡುತಿದ್ದು ಅದನ್ನು ನಮ್ಮ ರಿಸ್ಕ್ ಕಂಟ್ರೋಲ್ ಡಿಪಾರ್ಟ್ಮೆಂಟ್ ನವರು ಹೋಲ್ಡ್ ಮಾಡಿದ್ದಾರೆ. ಅದನ್ನು ನೀವು ವಿಥ್ ಡ್ರಾ ಮಾಡಲು 50% ಡಿಪೋಜಿಟ್ ಮಾಡಲು ತಿಳಿಸಿರುತ್ತಾರೆ. ಅದರಂತೆ ತನ್ನ ಖಾತೆಯಿಂದ ರೂ.26,84,800/- ವರ್ಗಾಯಿಸಿದ್ದಾರೆ. ನಂತರ ಹಣ ವಿಥ್ ಡ್ರಾ ಮಾಡಲು ಪ್ರಯತ್ನಿಸಿದಾಗ ಆರೋಪಿತರು ನೀವು ವಿಐಪಿ ಕ್ಲೈಂಟ್ ಆಗಬೇಕು ಮತ್ತು ನಿಮ್ಮ ಖಾತೆಯಲ್ಲಿ ಕ್ರೆಡಿಟ್ ಸ್ಕೊರ್ ಕಡಿಮೆ ಇದೇ ಕ್ರೆಡಿಟ್ ಸ್ಕೊರ್ 100% ಆಗಲು ನೀವು ಮತ್ತೆ ಹಣ ಡಿಪೋಜಿಟ್ ಮಾಡಬೇಕೆಂದು ತಿಳಿಸಿದ್ದಾರೆ.
ನಂತರದ ದಿನಗಳಲ್ಲಿ ಇನ್ನು ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದಾಗ ಈ ವ್ಯಕ್ತಿಗೆ ಅನುಮಾನ ಬಂದು ತನ್ನ ಸ್ನೇಹಿತರಲ್ಲಿ ವಿಚಾರಿಸಿದಾಗ ತಾನು ಮೋಸ ಹೋಗಿರುವ ವಿಚಾರ ತಿಳಿಯುತ್ತದೆ.
ಈ ರೀತಿಯಾಗಿ ಅಪರಿಚಿತ ವ್ಯಕ್ತಿಗಳು ಆನ್ ಲೈನ್ಅಡ್ಮಿರಲ್ ಮಾರ್ಕೆಟ್ ಪೋರೆಕ್ಸ್ ಟ್ರೆಡಿಂಗ್ ಎಂಬ ನಕಲಿ ಕಂಪನಿಯ ಹೆಸರಿನಲ್ಲಿ ಆನ್ ಲೈನ್ ಮುಖಾಂತರ ಒಟ್ಟು 1,12,48,240/-(ಒಂದು ಕೋಟಿ ಹನ್ನೆರಡು ಲಕ್ಷ ನಲ್ವತೆಂಟು ಸಾವಿರ ಇನ್ನೂರ ನಲ್ವತ್ತು) ರೂಗಳನ್ನು ಪಾವತಿಸಿಕೊಂಡು ಆನ್ ಲೈನ್ ಮೂಲಕ ಮೋಸ ಮಾಡಿದ್ದಾರೆ. ಈ ಬಗ್ಗೆ ವಂಚನೆಗೊಳಗಾದ ವ್ಯಕ್ತಿ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)