Mangalore News: ಕಾಲೇಜಿನಲ್ಲಿ ಕುಸಿದುಬಿದ್ದು ಮೃತಪಟ್ಟ ಮಂಗಳೂರು ಉಪನ್ಯಾಸಕಿ, ಅಂಗಾಂಗ ದಾನ ಮೂಲಕ ಐವರಿಗೆ ಜೀವದಾನ
Nov 15, 2024 01:46 PM IST
ಕಾಲೇಜಿನಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಮಂಗಳೂರಿನ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಲಾಯಿತು.
- ಮಂಗಳೂರಿನ ಖಾಸಗಿ ಕಾಲೇಜೊಂದರ ಉಪನ್ಯಾಸಕಿ ಕಾರ್ಯಕ್ರಮದ ವೇಳೆಯೇ ಕುಸಿದು ಬಿದ್ದು ನಂತರ ಮೃತಪಟ್ಟರು. ಆದರೆ ಅವರ ದೇಹದ ಅಂಗಾಂಗಳನ್ನು ಐವರಿಗೆ ನೀಡಲಾಯಿತು.
- ವರದಿ: ಹರೀಶ ಮಾಂಬಾಡಿ. ಮಂಗಳೂರು
ಮಂಗಳೂರು: ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್ (23) ಕಾಲೇಜಿನಲ್ಲಿ ನಡೆಯುವ ವೇಳೆ ಏಕಾಏಕಿ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಈಗ ಅವರ ದೇಹದ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಐವರಿಗೆ ಜೀವದಾನ ಮಾಡಿದ್ದಾರೆ. ವಾರದ ಹಿಂದೆ ನಡೆದ ಘಟನೆ ಇದು. ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಗ್ಲೋರಿಯಾ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮೆಟ್ಟಿಲಿನಿಂದ ಏಕಾಏಕಿ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಮಂಗಳೂರು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿತು.
ಗ್ಲೋರಿಯಾ ಅವರಿಗೆ ಏನಾಗಿತ್ತು
ಅನಿರೀಕ್ಷಿತವಾಗಿ ಸಾವನ್ನಪ್ಪಿದ ಗ್ಲೋರಿಯಾ ಅವರಿಗೆ ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಫುಡ್ ಅಲರ್ಜಿ ಇತ್ತು. ಇದರಿಂದಾಗಿ ಈ ಹಿಂದೆಯೂ ಅವರು ಸ್ವಲ್ಪ ಪ್ರಮಾಣದ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದರು. ಬಳಿಕ ಚೇತರಿಸಿಕೊಂಡಿದ್ದರು.
ಇದೀಗ ಸಮಸ್ಯೆಯ ಅಂತಿಮ ಘಟ್ಟಕ್ಕೆ ಅವರು ತಲುಪಿದ್ದರು. ಆದರೂ ಇಂಥ ಸನ್ನಿವೇಶದಲ್ಲಿ ಸಾವು ಸಂಭವಿಸುವುದು ವಿರಳ. ಸಾಮಾನ್ಯವಾಗಿ ಇಂಥ ಸನ್ನಿವೇಶವಿದ್ದಾಗ ಆಹಾರ ಕ್ರಮದ ಕುರಿತು ಸಂಬಂಧಪಟ್ಟವರು ಜಾಗ್ರತೆ ವಹಿಸುತ್ತಾರೆ. ಗ್ಲೋರಿಯಾ ಅವರೂ ಆಹಾರ ಸೇವನೆ ಸಂದರ್ಭ ಎಚ್ಚರ ವಹಿಸುತ್ತಿದ್ದರು. ಆದರೂ ಅನಿರೀಕ್ಷಿತವಾಗಿ ಅವರು ಸಾವನ್ನಪ್ಪಿದರು.
ಅಂಗಾಂಗ ದಾನ ಮೂಲಕ ಶ್ರೇಷ್ಠ ಕಾರ್ಯ
ಗ್ಲೋರಿಯಾ ಮೆದುಳು ನಿಷ್ಕ್ರಿಯಗೊಂಡ ಕಾರಣ ಅವರು ಬದುಕುವ ಸಾಧ್ಯತೆ ಕ್ಷೀಣಗೊಂಡಿದೆ ಎಂದಾಗ ಪೋಷಕರು ಅಂಗಾಂಗ ದಾನ ಮಾಡುವ ತೀರ್ಮಾನಕ್ಕೆ ಬಂದರು.
ಇದರಂತೆಯೇ ಅಗತ್ಯ ಇರುವವರಿಗೆ ದೇಹದ ಭಾಗಗಳನ್ನು ನೀಡುವ ಪತ್ರಕ್ಕೆ ಕುಟುಂಬಸ್ಥರು ಪ್ರೀತಿಯಿಂದಲೇ ಸಹಿ ಹಾಕಿದರು.
ಈ ರೀತಿಯಲ್ಲಿ ಗ್ಲೋರಿಯಾ ರೋಡ್ರಿಗಸ್ ದೇಹದ ಅಂಗಗಳಾದ ಕಣ್ಣು, ಹೃದಯ, ಚರ್ಮ, ಯಕೃತ್, ಎರಡು ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡಲಾಗಿದೆ.ಯಕೃತ್ ಅನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ನೀಡಲಾಗಿದೆ. ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ನೀಡಲಾಗಿದೆ. ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ. ಕಿಡ್ನಿಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗ ಕೊಡಲಾಗಿದೆ. ಚರ್ಮ ಮತ್ತು ಕಣ್ಣುಗಳನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಮೂಲಕ ಸಾವಿನಲ್ಲು ಗ್ಲೋರಿಯಾ ಸಾರ್ಥಕತೆ ಮೆರೆದಿದ್ದಾರೆ.
ಕಾಲೇಜಿಗೆ ಇತ್ತೀಚಿಗಷ್ಟೇ ಉಪನ್ಯಾಸಕಿಯಾಗಿ ಸೇರಿದ್ದ ಗ್ಲೋರಿಯಾ ರೋಡ್ರಿಗಸ್ ಎಲ್ಲರೊಂದಿಗೆ ಆತ್ಮೀಯವಾಗಿ ಇರುತ್ತಿದ್ದರು. ಅವರ ಆರೋಗ್ಯದಲ್ಲಿ ವ್ಯತ್ಯಾಸಗಳಾಗಿರುವುದು ಸ್ನೇಹಿತರಿಗೆ ತಿಳಿದಿತ್ತು. ಅದನ್ನು ಮೀರಿ ಅವರು ತರಗತಿಗಳಲ್ಲಿ ತೊಡಗಿಸಿಕೊಂಡಿದ್ದರು. ಈಗ ಏಕಾಏಕಿ ಈ ರೀತಿ ಆಗಿದ್ದು ಬೇಸರ ತಂದಿತು. ಆದರೂ ಅವರ ದೇಹದ ಭಾಗಗಳನ್ನು ಕುಟುಂಬದವರು ಅಗತ್ಯ ಇರುವವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಗ್ಲೋರಿಯಾ ರೋಡ್ರಿಗಸ್ ಅವರ ಸಪಾಠಿಗಳು ಹೇಳಿದರು.
(ವರದಿ: ಹರೀಶ ಮಾಂಬಾಡಿ. ಮಂಗಳೂರು)
ವಿಭಾಗ