ಕರ್ನಾಟಕದಲ್ಲಿ ನವೆಂಬರ್ 20ರಂದು ಮದ್ಯ ವಹಿವಾಟು ಬಂದ್; ಅಬಕಾರಿ ಇಲಾಖೆ ವಿರುದ್ದ ಸಿಡಿದೆದ್ದ ಮದ್ಯ ವ್ಯಾಪಾರಿಗಳಿಂದ ಪ್ರತಿಭಟನೆ
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ, ಕಿರುಕುಳ ಖಂಡಿಸಿ ಮದ್ಯ ವ್ಯಾಪಾರಿಗಳು ನವೆಂಬರ್ 20ರಂದು ಸೇವೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಬೆಂಗಳೂರು: ಕೆಲವು ದಿನಗಳಿಂದ ತೆರಿಗೆ ಏರಿಕೆ ಜತೆಯಲ್ಲಿ ಬಾರ್‌ಗಳಿಂದ ಹಣ ವಸೂಲಿ ವಿಚಾರದಲ್ಲಿ ಆಕ್ರೋಶಗೊಂಡಿರುವ ಕರ್ನಾಟಕದ ಬಾರ್ ಮಾಲೀಕರು ಹಾಗೂ ಸರ್ಕಾರದ ನಡುವೆ ಸಂಘರ್ಷ ಜೋರಾಗಿದೆ. ಅದರಲ್ಲೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ದ 700 ಕೋಟಿ ರೂ. ವಸೂಲಿ ಮಾಡಿದ ಗಂಭೀರ ಆರೋಪಗಳು ಕೇಳಿ ಬಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮಹಾರಾಷ್ಟ್ರ ಚುನಾವಣೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರದ ಜತೆಗೆ ವರ್ಗಾವಣೆ ಮತ್ತು ಪ್ರಮೋಷನ್‌ಗೆ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದ್ದು, ಇದರಿಂದಾಗಿ ನಕಲಿ ಮದ್ಯದ ಪ್ರಮಾಣ ಹೆಚ್ಚಾಗಿದೆ ಎನ್ನುವ ಆಪಾದನೆಗಳೂ ಹೇಳಿ ಬಂದಿವೆ. ಇದರ ನಡುವೆ ಸಚಿವ ತಿಮ್ಮಾಪುರ ಬದಲಾವಣೆಯೂ ಸೇರಿದಂತೆ ಹಲವು ಬೇಡಿಕೆಗಳೊಂದಿಗೆ ಮದ್ಯದಂಗಡಿ ಮಾಲೀಕರು ನವೆಂಬರ್ 20 ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ವರ್ಗಾವಣೆ, ಪ್ರಮೋಷನ್‌ಗೆ ಸನ್ನದುದಾರರಿಂದ ಮನಸೋ ಇಚ್ಛೆ ಕೋಟಿ ಕೋಟಿ ರೂ. ಲಂಚ ಕೇಳಲಾಗುತ್ತಿದೆ. ಅಧಿಕಾರಿಗಳ ಲಂಚಾವತಾರದಿಂದ ನಕಲಿ ಅಂತಾರಾಜ್ಯ ಮದ್ಯ ಹೆಚ್ಚಳವಾಗಿದೆ. ಹೀಗಾಗಿ ಅಬಕಾರಿ ಅಧಿಕಾರಿಗಳ ವಿರುದ್ಧ ಮದ್ಯದಂಗಡಿ ಮಾಲೀಕರು ಸಮರಕ್ಕೆ ಮುಂದಾಗಿದ್ದು, ನವೆಂಬರ್ 20ರಂದು ಕರ್ನಾಟಕದಾದ್ಯಂತ ಮದ್ಯ ಮಾರಾಟ ಬಂದ್‌ಗೆ ಕರೆ ನೀಡಲಾಗಿದೆ ಎಂದು ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ನೀಡಿರುವ ವಿವರಣೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯ ವೈನ್ ಮರ್ಚೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 20ರಂದು ಕರ್ನಾಟಕದಾದ್ಯಂತ ಎಂಎಸ್ಐಎಲ್ ಹೊರತುಪಡಿಸಿ ಎಲ್ಲಾ ಬಾರ್ಗಳ ಬಂದ್‌ಗೆ ಕರೆ ನೀಡಿರುವುದಾಗಿ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ. ನಮ್ಮ ಜೊತೆ ಸಿಎಂ, ಅಬಕಾರಿ ಸಚಿವರು ಮೀಟಿಂಗ್ ಮಾಡಬೇಕು. ನಾವು 500-900 ಕೋಟಿ ರೂ. ಲಂಚದ ಬಗ್ಗೆ ಎಂದೂ ಮಾತನಾಡಿಲ್ಲ. ತಪ್ಪು ಮಾಹಿತಿಯನ್ನು ಪ್ರಧಾನಿಗೆ ಯಾರು ಕೊಟ್ಟರೋ ಗೊತ್ತಿಲ್ಲ. ಪ್ರಧಾನಿ ವಿಚಾರದ ಬಗ್ಗೆ ಏನೂ ಹೇಳಲ್ಲ ಎಂದಿದ್ದಾರೆ. ಆದರೆ ಹಿಂದೆ ಗೋಪಾಲಯ್ಯ, ನಾಗೇಶ್ ಸಚಿವರಾಗಿದ್ದಾದರೂ ಭ್ರಷ್ಟಾಚಾರವಿತ್ತು. ಈಗ ಅದು ಹೆಚ್ಚಾಗಿದೆ ಎನ್ನುವ ಅಭಿಪ್ರಾಯ ದಟ್ಟವಾಗಿದೆ. ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳುತ್ತಾರೆ.
ಸಿಎಲ್ 7 ಬಾರ್ಗಳಿಗೆ ಬೇಕಾ ಬಿಟ್ಟಿ ಲೈಸನ್ಸ್ ಕೊಡಲಾಗುತ್ತಿದೆ. ಅಧಿಕಾರಿಗಳು ಪರಿಶೀಲನೆ ನಡೆಸುವುದೇ ಇಲ್ಲ. ಆರ್ಟಿಐ ಕಾರ್ಯಕರ್ತರ ಹೇಳಿಕೆ ಬಗ್ಗೆ ಮಾತನಾಡಿರೋದು ಸರಿಯಲ್ಲ. ನಮ್ಮ ಬೇಡಿಕೆಗಳ ಬಗ್ಗೆ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಬೇಡಿಕೆ ಬಗ್ಗೆ ಸರ್ಕಾರ ತಿರ್ಮಾನ ತೆಗೆದುಕೊಂಡರೆ ಒಳ್ಳೇದು ಎಂದು ಹೇಳಿದ್ದಾರೆ.
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿನ ಈ ವಿಚಾರ ದೇಶ ಮಟ್ಟದಲ್ಲೂ ಗಮನ ಸೆಳೆದಿದೆ.ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಭಾಷಣಗಳಲ್ಲೂ ಇದನ್ನು ಉಲ್ಲೇಖಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಗೆ ಕರ್ನಾಟಕ ಎಟಿಎಂ ಆಗಿದೆ ಎನ್ನುವುದು ಆರೋಪ.