ಮಂಗಳೂರು: ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣ; ನೈಜೀರಿಯಾ ಪ್ರಜೆ ಸೇರಿ 6 ಆರೋಪಿಗಳ ಸೆರೆ
Oct 29, 2024 02:48 PM IST
ಮಾದಕ ವಸ್ತು ಮಾರಾಟ ಪ್ರಕರಣ; ನೈಜೀರಿಯಾ ಪ್ರಜೆ ಸೇರಿ 6 ಆರೋಪಿಗಳ ಸೆರೆ
- Mangalore News: ಮಂಗಳೂರು ನಗರದ ಪಣಂಬೂರು ಬಳಿ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ 6 ಜನ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳ ವಶದಲ್ಲಿದ್ದ ಕೋಕೇನ್ ಹಾಗೂ ಎಮ್‌ಡಿಎಮ್‌ಎ ಹಾಗೂ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ನಗರದ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕ ವಸ್ತು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿಗಳನ್ನು ಪಣಂಬೂರು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಅವರಿಂದ ಮಾದಕ ವಸ್ತುಗಳನ್ನು ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿಗಳ ವಶದಲ್ಲಿದ್ದ 11 ಗ್ರಾಮ್ ಕೋಕೇನ್ ಮತ್ತು ಪ್ಯಾಕೇಟ್ ಸಮೇತ 30 ಗ್ರಾಂ ತೂಕದ ಎಮ್‌ಡಿಎಮ್‌ಎ ಹಾಗೂ 91,000 ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಓಸಿಎಲ್ ಹಿಂಬಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಈ ಕುರಿತು ಪಣಂಬೂರು ಠಾಣಾ ಪಿಎಸ್‌ಐ ಶ್ರೀಕಲಾ ಕೆಟಿಅವರಿಗೆ ಬಾತ್ಮೀದಾರರಿಂದ ಮಾಹಿತಿ ದೊರಕಿದೆ. ಮಂಗಳೂರು ನಗರ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತಕ ಶ್ರೀಕಾಂತ್ ಕೆ ನಿರ್ದೆಶನದಂತೆ ಪಿಎಸ್ಐ ಶ್ರೀಕಲಾ ಕೆಟಿ ಅವರು ತಮ್ಮ ಸಿಬ್ಬಂದಿ ಜೊತೆಗೆ ಆರೋಪಿಗಳಾದ ಚಂದನ್ ಮತ್ತು ಶರತ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಮಾದಕ ವಸ್ತು ಮಾರಾಟ ಮಾಡಲು ಸಹಕರಿಸಿದ ಇತರ ಆರೋಪಿಗಳಾದ ಮಧುಸೂಧನ ಕೊಂಚಾಡಿ, ಧನುಷ್ ಆಕಾಶ್ ಭವನ, ಮುಖೇಶ್ ದೇರೆಬೈಲ್ ಮತ್ತು ನೈಜಿರಿಯಾ ದೇಶದ ಪ್ರಜೆ ಮೈಕಲ್ ಬಾಲಾಜಿ@ ಅಝಬೈಕ್ ಜಾನಿ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಆರೋಪಿತರು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ಉಪಯೋಗಿಸುತ್ತಿದ್ದ ಸ್ಕೂಟರ್ ಮತ್ತು ಒಟ್ಟು 9 ಮೊಬೈಲ್‌ಗಳನ್ನು ಸ್ವಾಧೀನಪಡಿಸಲಾಗಿದೆ.
ಒಬ್ಬ ನೈಜೀರಿಯಾ ಪ್ರಜೆ
ಆರೋಪಿಗಳ ಪೈಕಿ 5 ಜನ ಮಂಗಳೂರಿನ ನಿವಾಸಿಗಳಾಗಿದ್ದು, ಒಬ್ಬ ಆರೋಪಿ ನೈಜೀರಿಯಾ ದೇಶದವನಾಗಿರುತ್ತಾನೆ. ಆರೋಪಿಗಳೆಲ್ಲರೂ ಕ್ಯಾಟರಿಂಗ್, ಪೈಂಟಿಂಗ್ ಸೇರಿದಂತೆ ಖಾಸಗಿ ಕೆಲಸ ಮಾಡಿಕೊಂಡಿರುವವರು. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಈ ಪತ್ತೆ ಕಾರ್ಯವನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ಮಾರ್ಗದರ್ಶನಂದಂತೆ, ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ದಾರ್ಥ ಗೋಯಲ್, ಮತ್ತು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ನಿರ್ದೇಶನದಂತೆ ನಡೆಸಲಾಗಿದೆ. ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಕೆ ಮಾರ್ಗದರ್ಶನದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕರಾದ ಮೊಹಮ್ಮದ್ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಉಪ ನಿರೀಕ್ಷಕರಾದ ಶ್ರೀಕಲಾ ಕೆಟಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಭಾಗಿಯಾಗಿದ್ದಾರೆ.