logo
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು: ಸಾಲ ಮರುಪಾವತಿ ವಿಚಾರದ ಕಿರುಕುಳಕ್ಕೆ ಬೇಸತ್ತು ಅಂಗವಿಕಲ ಆತ್ಮಹತ್ಯೆ;ಎಂಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಆರೋಪ, ವಿಡಿಯೋ ವೈರಲ್‌

ಮಂಗಳೂರು: ಸಾಲ ಮರುಪಾವತಿ ವಿಚಾರದ ಕಿರುಕುಳಕ್ಕೆ ಬೇಸತ್ತು ಅಂಗವಿಕಲ ಆತ್ಮಹತ್ಯೆ;ಎಂಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಆರೋಪ, ವಿಡಿಯೋ ವೈರಲ್‌

Umesh Kumar S HT Kannada

Dec 18, 2024 12:07 PM IST

google News

ಮಂಗಳೂರು: ಸಾಲ ಮರುಪಾವತಿ ವಿಚಾರದ ಕಿರುಕುಳಕ್ಕೆ ಬೇಸತ್ತು ಅಂಗವಿಕಲ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ನಡೆದಿದೆ. ಮೃತರನ್ನು ಮನೋಹರ್ ಪಿರೇರಾ ಎಂದು ಗುರುತಿಸಲಾಗಿದೆ.

  • Mangaluru Crime: ಸಾಲ ಮರುಪಾವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದು, ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ಅಂಗವಿಕಲ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಮಂಗಳೂರಿನಿಂದ ವರದಿಯಾಗಿದೆ. ಸಂತ್ರಸ್ತನ ವಿಡಿಯೋ ವೈರಲ್ ಆಗಿದ್ದು, ಎಂಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಆರೋಪ ವ್ಯಕ್ತವಾಗಿದೆ.

ಮಂಗಳೂರು: ಸಾಲ ಮರುಪಾವತಿ ವಿಚಾರದ ಕಿರುಕುಳಕ್ಕೆ ಬೇಸತ್ತು ಅಂಗವಿಕಲ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ನಡೆದಿದೆ. ಮೃತರನ್ನು ಮನೋಹರ್ ಪಿರೇರಾ ಎಂದು ಗುರುತಿಸಲಾಗಿದೆ.
ಮಂಗಳೂರು: ಸಾಲ ಮರುಪಾವತಿ ವಿಚಾರದ ಕಿರುಕುಳಕ್ಕೆ ಬೇಸತ್ತು ಅಂಗವಿಕಲ ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ನಡೆದಿದೆ. ಮೃತರನ್ನು ಮನೋಹರ್ ಪಿರೇರಾ ಎಂದು ಗುರುತಿಸಲಾಗಿದೆ.

Mangaluru Crime: ಸಾಲ ಮರುಪಾವತಿ ವಿಚಾರದಲ್ಲಿ ಕಿರುಕುಳ ನೀಡಿದ್ದಾರೆ, ಅನ್ಯಾಯ ಮಾಡಿದ್ದಾರೆ ಎಂದು ಮಂಗಳೂರು ಕಥೋಲಿಕ್ ಕೋ ಆಪರೇಟಿವ್ ಬ್ಯಾಂಕ್‌ (ಎಂಸಿಸಿ ಬ್ಯಾಂಕ್‌) ಅಧ್ಯಕ್ಷನ ವಿರುದ್ಧ ಆರೋಪ ಮಾಡಿ ಅಂಗ ವೈಕಲ್ಯ ಹೊಂದಿದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಮಂಗಳೂರಿನಿಂದ ವರದಿಯಾಗಿದೆ. ಮಂಗಳೂರು ಹೊರವಲಯದ ಪೆರ್ಮಾಯಿ ಎಂಬಲ್ಲಿ ಘಟನೆ ನಡೆದಿದ್ದು, ಮೃತರನ್ನು ಪೆರ್ಮಾಯಿ ಉಳಾಯಿ ಬೆಟ್ಟು ನಿವಾಸಿ ಮನೋಹರ್ ಪಿರೇರಾ (47) ಎಂದು ಗುರುತಿಸಲಾಗಿದೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಾಯುವುದಕ್ಕೆ ಮುನ್ನ ಮನೋಹರ್ ಪಿರೇರಾ ರೆಕಾರ್ಡ್ ಮಾಡಿದ್ದ ವಿಡಿಯೋ ಹೇಳಿಕೆ ಇದೀಗ ವೈರಲ್ ಆಗಿದ್ದು, ಅದರಲ್ಲಿ ಎಂಸಿಸಿ ಬ್ಯಾಂಕ್ ಅಧ್ಯಕ್ಷನ ವಿರುದ್ಧ ಆರೋಪಗಳಿವೆ.

ಏನಿದು ಪ್ರಕರಣ?

ಸಂತ್ರಸ್ತ ಪೆರ್ಮಾಯಿಯ ಮನೋಹರ್ ಪಿರೇರಾ ಅವರು ಮಂಗಳೂರು ಕಥೋಲಿಕ್ ಕೋ ಆಪರೇಟಿವ್ ಬ್ಯಾಂಕ್‌ನಿಂದ ಮನೆಗಾಗಿ 15 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದರಲ್ಲಿ 9 ಲಕ್ಷ ರೂಪಾಯಿ ಸಾಲ ತೀರಿಸಿದ್ದಾಗಿ ವಿಡಿಯೋ ಹೇಳಿಕೆಯಲ್ಲಿ ಹೇಳಿಕೊಂಡಿರುವ ಮನೋಹರ್ ಪಿರೇರಾ, ಕೋವಿಡ್ ಸಂಕಷ್ಟದ ವೇಳೆ ಸಾಲ ಮರುಪಾವತಿ ಮಾಡಿರಲಿಲ್ಲ. ಎರಡು ವರ್ಷ ಹಿಂದೆ ಮನೆ ಜಪ್ತಿಗೆ ಬಂದಾಗ ಚಾರಿಟಿ ಸಂಸ್ಥೆಯಿಂದ ನೆರವು ಪಡೆದು ಸೆಲ್ಫ್ ಚೆಕ್ ಮೂಲಕ 15 ಲಕ್ಷ ರೂಪಾಯಿ ಪಾವತಿಸಿದ್ದೇನೆ ಎಂದಿದ್ದಾರೆ. ಆದರೆ ಆ ಹಣವನ್ನು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ದುರ್ಬಳಕೆ ಮಾಡಿಕೊಂಡಿದ್ದಾರೆ. ಈಗ ಮತ್ತೆ ಮನೆ ಜಪ್ತಿ ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ಯಾರಾಲಿಸಿಸ್‌ಗೆ ಒಳಗಾಗಿ ಕಾಲು ಊನಗೊಂಡಿದ್ದ ಮನೋಹರ್ ಕೆಲಸಕ್ಕೆ ಹೋಗುತ್ತಿಲ್ಲ. ಆದಾಯ ಇಲ್ಲದ ಕಾರಣ ಭಾರಿ ಸಂಕಷ್ಟಕ್ಕೆ ಒಳಗಾಗಿದ್ದರು. ಅನಿಲ್ ಲೋಬೋ ಅವರ ಬೆದರಿಕೆಗಳಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗುತ್ತಿದೆ.

ಮನೋಹರ್ ಪಿರೇರಾ ಅವರದ್ದು ಎನ್ನಲಾದ ವಿಡಿಯೋ ಹೇಳಿಕೆ ಹೀಗಿದೆ

ವಿಡಿಯೋ ಹೇಳಿಕೆ ತುಳು ಭಾಷೆಯಲ್ಲಿದೆ. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋಗೆ 15 ಲಕ್ಷ ರೂಪಾಯಿ ಸೆಲ್ಫ್ ಚೆಕ್ ಕೊಟ್ಟಿದ್ದೇನೆ. ಅದರಲ್ಲಿ ಒಂಭತ್ತು ಲಕ್ಷ ರೂಪಾಯಿ ಆತ ಬಳಸಿಕೊಂಡಿದ್ದಾನೆ. ಇದರ ಬಗ್ಗೆ ಕೇಳಿದರೆ ಬೆದರಿಕೆ ಹಾಕುತ್ತಿದ್ದು, ನನ್ನ ಮಾನಸಿಕ ನೆಮ್ಮದಿ ಹಾಳಾಗಿದೆ. ಖಿನ್ನತೆಗೆ ಜಾರಿದ್ದೇನೆ. ಇದಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದೇನೆ. ನಾಲ್ಕು ಸಲ ಆಸ್ಪತ್ರೆಗೆ ದಾಖಲಾದೆ. 7.20 ಲಕ್ಷ ರೂಪಾಯಿ ಬಿಲ್ ಆಗಿತ್ತು. ಸ್ನೇಹಿತರು ಅದನ್ನು ಭರಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕೆಲಸಕ್ಕೂ ಹೋಗ್ತಿಲ್ಲ. ಈಗ ನಾನು ಹಾರ್ಟ್‌ ಪೇಷೆಂಟ್. ಸರ್ಜರಿ ಆಗಿದೆ. ಪಾಸ್‌ಬುಕ್ ವಿವರ ವಾಟ್ಸ್‌ಅಪ್‌ಗೂ ಹಾಕ್ತೇನೆ ನೋಡಿ ಎಂದು ಹೇಳಿಕೊಂಡಿರುವುದು ವಿಡಿಯೋದಲ್ಲಿದೆ.

ಮನೋಹರ್ ಆತ್ಮಹತ್ಯೆಗೆ ಸಂಬಂಧಿಸಿ, ಅವರ ಸಹೋದರ ಜೀವನ್‌ ಪಿರೇರಾ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ವೈರಲ್ ಆಗಿರುವ ವಿಡಿಯೋ ಮತ್ತು ಅದರಲ್ಲಿರುವ ಮಾಹಿತಿಯ ಸತ್ಯಾಸತ್ಯವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ದೃಢೀಕರಿಸುವುದು ಸಾಧ್ಯವಾಗಿಲ್ಲ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ