logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಪಾದಯಾತ್ರೆ ವಿರುದ್ಧ ಜೆಡಿಎಸ್ ಅಪಸ್ವರ; ಬಂಟ್ವಾಳಕ್ಕೆ ಬಂದ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಿಷ್ಟು

ಬಿಜೆಪಿ ಪಾದಯಾತ್ರೆ ವಿರುದ್ಧ ಜೆಡಿಎಸ್ ಅಪಸ್ವರ; ಬಂಟ್ವಾಳಕ್ಕೆ ಬಂದ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಿಷ್ಟು

HT Kannada Desk HT Kannada

Aug 02, 2024 08:00 PM IST

google News

ಆರ್ ಅಶೋಕ್, ವಿಧಾನ ಸಭೆಯ ಪ್ರತಿಪಕ್ಷ ನಾಯಕ, ಬಿಜೆಪಿ ನಾಯಕ

  • ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಡಾ ಹಗರಣವನ್ನು ವಿರೋಧಿಸಿ ಬಿಜೆಪಿ ಪಾದಯಾತ್ರೆ ಆರಂಭಿಸಲು ತೀರ್ಮಾನಿಸಿದೆ. ಆದರೆ, ಈ ಪಾದಯಾತ್ರೆಯಲ್ಲಿ ಜೆಡಿಎಸ್ ಪಾಲ್ಗೊಳ್ಳುವುದಿಲ್ಲ ಎಂಬ ವಿಚಾರದ ಕುರಿತಾಗಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡುವುದಾಗಿ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)

ಆರ್ ಅಶೋಕ್, ವಿಧಾನ ಸಭೆಯ ಪ್ರತಿಪಕ್ಷ ನಾಯಕ, ಬಿಜೆಪಿ ನಾಯಕ
ಆರ್ ಅಶೋಕ್, ವಿಧಾನ ಸಭೆಯ ಪ್ರತಿಪಕ್ಷ ನಾಯಕ, ಬಿಜೆಪಿ ನಾಯಕ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಡಾ ಹಗರಣವನ್ನು ವಿರೋಧಿಸಿ ಆಯೋಜಿಸಿರುವ ಪಾದಯಾತ್ರೆಗೆ ಜೆಡಿಎಸ್ ಪಾಲ್ಗೊಳ್ಳುವುದಿಲ್ಲ ಎಂಬ ವಿಚಾರದ ಕುರಿತಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡುವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಬಂಟ್ವಾಳದಲ್ಲಿ ಬುಧವಾರ ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ನಮ್ಮ ಉದ್ದೇಶ ಹಗರಣವನ್ನು ಜನರ ಮುಂದಿಡುವುದು ಎಂದರು. ಈ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಅಭಿಪ್ರಾಯವನ್ನು ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕುಮಾರಸ್ವಾಮಿ ಅವರ ಜೊತೆ ನಾನು ಮಾತನಾಡುತ್ತೇನೆ. ನಮ್ಮ ಉದ್ದೇಶ ಸಿದ್ದರಾಮಯ್ಯ ಅವರು ರೆಡ್ ಹ್ಯಾಂಡ್ ಆಗಿ 4 ಸಾವಿರ ಕೋಟಿ ರೂ. ಮೊತ್ತದ ದೊಡ್ಡ ಹಗರಣಕ್ಕೆ ಕಾರಣರಾಗಿದ್ದಾರೆ. 86 ಸಾವಿರ ಮಂದಿ ಅರ್ಜಿ ಹಾಕಿ ಸೈಟ್‍ಗೆ ಕಾಯುತ್ತಿದ್ದಾರೆ. ರಾಜ್ಯ ಕಾಪಾಡುವವರು, ಸಂವಿಧಾನ ರಕ್ಷಣೆಯನ್ನು ಎತ್ತಿ ಹಿಡಿಯಬೇಕಾದವರು, ತಾನೇ ಆ ಸೈಟ್ ಗಳನ್ನು ಕಬಳಿಸಿದರೆ, ರಾಜ್ಯದ ಜನರ ಪಾಡೇನು ಎಂದು ಅಶೋಕ್ ಪ್ರಶ್ನಿಸಿದರು.

ನಾವು ಅನ್ಯಾಯ ಮಾಡುವುದಿಲ್ಲ ಎಂದು ಹೇಳಿದವರು ಭೂಕಬಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅಶೋಕ್, ಸದನದೊಳಗೆ ಕಾಂಗ್ರೆಸ್ ಬಾಯ್ಮುಚ್ಚುವ ರೀತಿಯಲ್ಲಿ ಹೋರಾಟವನ್ನು ಬಿಜೆಪಿಯು ಜೆಡಿಎಸ್ ಜತೆ ಮಾಡಿದೆ. ಹೊರಗೆಯೂ ಇದೇ ರೀತಿ ಹೋರಾಟ ಆಗಬೇಕು ಎಂದು ನನ್ನ ಬಯಕೆ ಎಂದರು. ಹೋರಾಟ ಸಫಲವಾಗಬೇಕಿದ್ದರೆ ಎರಡೂ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಬೇಕಾಗಿದೆ ಎಂದು ಅವರು ಹೇಳಿದರು.

‘ಪಾದಯಾತ್ರೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡ ವಿರೋಧ’

ಜೆಡಿಎಸ್ ರಾಜ್ಯಾಧ್ಯಕ್ಷ ಜಿ.ಟಿ.ದೇವೇಗೌಡ ಕೂಡ ಪಾದಯಾತ್ರೆಗೆ ವಿರೋಧ ಮಾಡಿದ್ದಾರೆ. ಕೃಷಿ, ಮಳೆ ವಿಚಾರ ಇಟ್ಟುಕೊಂಡು ಪಾದಯಾತ್ರೆ ಮುಂದೂಡಿ ಎಂದು ಅವರು ಹೇಳಿದ್ದಾರೆ. ಹೀಗಾಗಿ, ನಾವು ಕೂಡ ಕೇಂದ್ರದ ನಾಯಕರ ಜೊತೆ ಈ ಬಗ್ಗೆ ಮಾತನಾಡುತ್ತೇವೆ. ಜೆಡಿಎಸ್ ಕೂಡ ಎನ್.ಡಿ.ಎ. ಭಾಗವಾಗಿದ್ದು, ಅವರು ಹೋರಾಟದಲ್ಲಿ ಒಟ್ಟಿಗೆ ಇರಬೇಕು. ಕುಮಾರಸ್ವಾಮಿ ಜೊತೆ ಮಾತನಾಡಿ ನಿರ್ಧರಿಸುವುದಾಗಿ ಆರ್. ಅಶೋಕ್ ಹೇಳಿದರು.

ಪಾದಯಾತ್ರೆ ಮಾಡುವ ಬಗ್ಗೆ ನಿರ್ಧಾರ ಮಾಡಿದಾಗ ವೈನಾಡು ಅಥವಾ ಬೇರೆ ಕಡೆ ಪ್ರಕೃತಿ ವಿಕೋಪ ಆಗಿರಲಿಲ್ಲ.ಈಗ ಅದರ ಬಗ್ಗೆ ಹೈಕಮಾಂಡ್ ನಾಯಕರ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದರು.

‘ಸಿದ್ದು ವಿರುದ್ಧ ಕಾಂಗ್ರೆಸ್‍ನೊಳಗಿಂದಲೇ ಅಪಸ್ವರ’: ಸಿದ್ದರಾಮಯ್ಯ ವಿರುದ್ಧ ನಾವಷ್ಟೇ ಅಲ್ಲ, ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಕೂಡ ಸಿದ್ದರಾಮಯ್ಯ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರ ಉಳಿಯುತ್ತೋ ಎಂಬುದನ್ನು ಮೊದಲು ನೋಡಬೇಕು. ಏನೂ ತಪ್ಪು ಮಾಡದಿದ್ದರೆ ಯಾಕೆ ದೆಹಲಿಗೆ ಹೋಗುತ್ತಾರೆ ಎಂದು ಆರ್. ಅಶೋಕ್ ಪ್ರಶ್ನಿಸಿದ್ದು, ಭಿನ್ನಮತ ಇರುವ ಕಾರಣಕ್ಕೆ ಅವರು ದೆಹಲಿಗೆ ಹೋಗಿದ್ದಾರೆ ಎಂದು ಆರೋಪಿಸಿದರು.

ಪಕ್ಷದೊಳಗೆ ಯತ್ನಾಳ್ ಹೇಳಿಕೆ ಚರ್ಚೆ: ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳ ಕುರಿತು ಪ್ರಶ್ನೆಗೆ ಉತ್ತರಿಸಿದ ಆರ್. ಅಶೋಕ್, ನಾಯಕನ ಆಯ್ಕೆಯನ್ನು ಶಾಸಕಾಂಗ ಸಭೆ ಕರೆದು ಮಾಡಲಾಗುತ್ತದೆ. ಹೀಗಾಗಿ ಭಿನ್ನ ಧ್ವನಿಗಳಿದ್ದರೆ, ಅದನ್ನು ಪಕ್ಷದೊಳಗೆ ಕುಳಿತು ಚರ್ಚೆ ಮಾಡಲಾಗುತ್ತದೆಯೇ ಹೊರತು ಬಹಿರಂಗ ಹೇಳಿಕೆ ನೀಡುವುದಿಲ್ಲ ಎಂದರು.

ವಿಜಯೇಂದ್ರ ಅವರನ್ನು ಆಯ್ಕೆ ಮಾಡಿದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು. ಪಕ್ಷದಲ್ಲಿ ಏನೇ ಗೊಂದಲ ಇದ್ದರೂ ಅದನ್ನು ಪಕ್ಷದ ಒಳಗೆಯೇ ಚರ್ಚಿಸುತ್ತೇವೆ. ಹೈಕಮಾಂಡ್ ಅಸ್ತು ಎಂದರೆ ಮಾತ್ರ ಪಾದಯಾತ್ರೆ ಮಾಡುವುದಾಗಿ ಯತ್ನಾಳ್ ಮತ್ತು ಜಾರಕಿಹೊಳಿ ಹೇಳಿರುವುದಾಗಿ ಅಶೋಕ್ ತಿಳಿಸಿದರು.

ಇನ್ನು ಪ್ರೀತಂ ಗೌಡ ಬಗ್ಗೆ ಜೆಡಿಎಸ್‍ ಯಾಕೆ ವಿರೋಧ ಮಾಡುತ್ತಿದೆ ಎಂಬ ಬಗೆ ತನಗೆ ತಿಳಿದಿಲ್ಲ. ಈ ಬಗ್ಗೆ ದೆಹಲಿ ಮಟ್ಟದ ನಾಯಕರು ನೋಡಿಕೊಳ್ಳುತ್ತಾರೆ. ಪಾದಯಾತ್ರೆ ಮಾತ್ರ ಖಂಡಿತಾ ನಡೆಯುತ್ತದೆ, ಇದರಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಆದರೆ, ಪಾದಯಾತ್ರೆ ನಡೆಸುವುದು ಯಾವಾಗ ಅನ್ನೋದಷ್ಟೇ ವಿಚಾರ ಇರುವುದು ಎಂದು ಅವರು ಹೇಳಿದರು.

ರಾಜ್ಯಪಾಲರು ಅಧಿಕಾರ ಚಲಾಯಿಸುವ ಹಕ್ಕಿದೆ:

ಸಿದ್ಧರಾಮಯ್ಯ ಅವರು ನಿಂಗ ಎಂಬುವವರ ಭೂಮಿಯನ್ನು ಕಬಳಿಸಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ. ಸರ್ಕಾರ ಕೊಟ್ಟ ಭೂಮಿ, ಆ ಬಳಿಕ ಆ ವ್ಯಕ್ತಿ ಮೃತಪಟ್ಟಿದ್ದರು. ಅದು‌ ಆತನ ಹೆಂಡತಿ ಹೆಸರಿಗೆ ಬಂದು ಪಿತ್ರಾರ್ಜಿತ ಆಸ್ತಿಯಾಗಿದೆ. ಅದನ್ನು ಮಾರಾಟ ಮಾಡಬೇಕೆಂದರೆ ಮೃತನ ಪತ್ನಿ, ಮಕ್ಕಳು ಎಲ್ಲರ ಒಪ್ಪಿಗೆ ಪಡೆಯಬೇಕು. ಪಹಣಿ ಯಾವುದೇ ದಾಖಲೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ನಿಂಗ ಅನಕ್ಷರಸ್ಥನಾಗಿದ್ದ, ಅಂಥದ್ರಲ್ಲಿ ಡಿನೋಟಿಫಿಕೇಶನ್ ಆಗಿದ್ದಾದರೂ ಹೇಗೆ? ಡಿನೋಟಿಫಿಕೇಶನ್‍ಗೆ ಅರ್ಜಿ ಕೊಟ್ಟಿದ್ಯಾರು ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಕೃಷಿ ಭೂಮಿಯಿಂದ ಅದು ಭೂ ಪರಿವರ್ತನೆ ಕೂಡ ಆಗಿದೆ ಎಂದ ಅವರು, 2002-03ರಲ್ಲಿ ಮೂಡಾದಿಂದ ಲೇಔಟ್ ಅಪ್ರೂವ್ ಆಗಿ ಅಲ್ಲಿ ಲೇಔಟ್ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಪತ್ನಿಯ ಹೆಸರಿನಲ್ಲಿ 12 ಸೈಟ್ ಕೂಡ ರಿಜಿಸ್ಟರ್ ಆಗಿದೆ. ದಲಿತರ ಜಮೀನನ್ನು ಒಳಗೆ ಹಾಕಿದ್ದಾರೆ. ಜಮೀನು ಕಬಳಿಕೆ ಆಗಿದ್ದರೆ ಸರ್ಕಾರ ಅದನ್ನು ರಕ್ಷಿಸಬೇಕು. ರಾಜ್ಯಪಾಲರು ನ್ಯಾಯುತ ಅಧಿಕಾರವನ್ನು ಚಲಾಯಿಸಬೇಕು ಎಂದು ಹೇಳಿದರು.

ಇನ್ನು ನೆರೆಪೀಡಿತ ಪ್ರದೇಶಗಳ ಭೇಟಿ ವೇಳೆ ಆರ್. ಅಶೋಕ್ ಜೊತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಬಂಟ್ವಾಳ ಬಿಜೆಪಿ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್, ಜೆಡಿಎಸ್ ಮುಖಂಡ ಅಕ್ಷಿತ್ ಸುವರ್ಣ ಮತ್ತಿತರರು ಜತೆಗಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ