ಮಾನವೀಯತೆಗೆ ಸ್ಪೂರ್ತಿಯಾದ ಶರೀಫ್: ನಾಲ್ಕು ಸರಕಾರಿ ಶಾಲೆಗಳಿಗೆ ದಿನವೂ ಉಚಿತ ತರಕಾರಿ ಸೇವೆ
Aug 02, 2024 05:02 PM IST
ಮಾನವೀಯತೆಗೆ ಸ್ಪೂರ್ತಿಯಾದ ಶರೀಫ್: ನಾಲ್ಕು ಸರಕಾರಿ ಶಾಲೆಗಳಿಗೆ ದಿನವೂ ಉಚಿತ ತರಕಾರಿ ಸೇವೆ
ಬಂಟ್ವಾಳ ತಾಲೂಕಿನ ಮಜಿ ವೀರಕಂಭದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವಪ್ರಾಥಮಿಕದಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ 250 ಮಕ್ಕಳ ಬಿಸಿಯೂಟಕ್ಕೆ ಕಳೆದ 8 ವರ್ಷಗಳಿಂದ ಪ್ರತಿದಿನದ ತರಕಾರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಮೆಲ್ಕಾರ್‌ನ ಚಂದ್ರಿಕಾ ವೆಜಿಟೇಬಲ್ಸ್ ನ ಮಾಲೀಕ ಮಹಮ್ಮದ್ ಶರೀಫ್. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಆ ಶಾಲೆಗೆ ಬರುವ ಮಕ್ಕಳು ಯಾರು, ಯಾವ ಊರವರು ಎಂದು ಕೇಳಲಿಲ್ಲ. ಯಾವ ಜಾತಿ, ಧರ್ಮ ಎಂದು ನೋಡಲಿಲ್ಲ. ದೇವರಂತಿರುವ ಮುಗ್ಧ ಮಕ್ಕಳ ಹಸಿದ ಹೊಟ್ಟೆಗೆ ಕೊಡುವ ಬಿಸಿಯೂಟಕ್ಕೆ ಪೂರಕವಾದ ತರಕಾರಿಗಳನ್ನು ಕಳೆದ ಎರಡು ವರ್ಷಗಳಿಂದ ಉಚಿತವಾಗಿ ನೀಡುತ್ತಿದ್ದಾರೆ ಈ ಯುವಕ. ಪುಟ್ಟ ಮಕ್ಕಳ ಊಟದಲ್ಲಿ ನನ್ನದೂ ಒಂದು ಸೇವೆ ಇರಲಿ ಎಂದಷ್ಟೇ ಈ ಕಾರ್ಯ ನಡೆಸುತ್ತಿದ್ದೇನೆ. ಮಕ್ಕಳ ಹೊಟ್ಟೆ ತುಂಬಿದರೆ ನನಗದೇ ಖುಷಿ. ತರಕಾರಿಗಳನ್ನು ಉಚಿತವಾಗಿ ನೀಡಲು ಆರಂಭಿಸಿದ ಮೇಲೆ ನನ್ನ ವ್ಯಾಪಾರದಲ್ಲೂ ಅಭಿವೃದ್ಧಿಯಾಗಿದೆ. ಇದು ಅದರ ಫಲ ಎಂದೇ ನಂಬಿದ್ದೇನೆ ಎನ್ನುತ್ತಾರೆ ಅವರು.
ಇದು ಬಂಟ್ವಾಳ ತಾಲೂಕಿನ ಮಜಿ ವೀರಕಂಭದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವಪ್ರಾಥಮಿಕದಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ 250 ಮಕ್ಕಳ ಬಿಸಿಯೂಟಕ್ಕೆ ಕಳೆದ ಎಂಟು ವರ್ಷಗಳಿಂದ ಪ್ರತಿದಿನದ ತರಕಾರಿಗಳನ್ನು ಉಚಿತವಾಗಿ ನೀಡುತ್ತಿರುವ ಮೆಲ್ಕಾರ್‌ನ ಚಂದ್ರಿಕಾ ವೆಜಿಟೇಬಲ್ಸ್ ನ ಮಾಲೀಕ ಮಹಮ್ಮದ್ ಶರೀಫ್ ಮನದಾಳದ ಮಾತು.
ಮಜಿ ಶಾಲೆಯ ಶಿಕ್ಷಕಿ ಸಂಗೀತಾ ಶರ್ಮ ಅವರು ಈ ಅಂಗಡಿಯಲ್ಲಿ ತರಕಾರಿ ಕೊಳ್ಳುವ ಸಂದರ್ಭ ಶಾಲೆಯ ಬಿಸಿಯೂಟಕ್ಕೆ ತರಕಾರಿ ನೀಡುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಸಂದರ್ಭ ತಾನು ತರಕಾರಿಯನ್ನು ಉಚಿತವಾಗಿ ಕೊಡುತ್ತೇನೆ, ಶಾಲೆಯಿಂದ ಕೊಂಡೊಯ್ಯುವ ವ್ಯವಸ್ಥೆಯಾದರೆ ಆಯಿತು ಎಂದರು. ಶಾಲೆಯ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಳೇ ವಿದ್ಯಾರ್ಥಿ ಚಿನ್ನ ಕಲ್ಲಡ್ಕ ಅವರು ತರಕಾರಿ ಕೊಂಡೊಯ್ಯುವ ಜವಾಬ್ದಾರಿ ನಿರ್ವಹಿಸಿದರು. ಹೀಗೆ ಆರಂಭಗೊಂಡು ಎಂಟು ವರ್ಷಗಳೇ ಆದವು. ಈ ಶೈಕ್ಷಣಿಕ ವರ್ಷಗಳಲ್ಲಿ ಪೂರ್ವ ಪ್ರಾಥಮಿಕ ದಿಂದ ಏಳನೇ ತರಗತಿಯವರೆಗಿನ ಮಕ್ಕಳಿಗೆ ಬಿಸಿಯೂಟದ ಸರಕಾರ ನಿಗದಿಪಡಿಸಿದ ಆಹಾರಗಳೊಂದಿಗೆ ಸಮೃದ್ಧ ಭೋಜನಕ್ಕೆ ಪೂರಕ ತರಕಾರಿ ದೊರಕಿತು.
ನೆರವೀಯುವ ಗುಣಕ್ಕೆ ತಂದೆ, ಅಣ್ಣ ಕಾರಣ
ಊಟಕ್ಕೂ ಕಷ್ಟಪಡುವ ಪರಿಸ್ಥಿತಿಯನ್ನು ಎದುರಿಸಿದ್ದೇನೆ. ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪರದಾಡುವ ಸ್ಥಿತಿ ಹಿಂದೆ ಇತ್ತು. ಈಗ ಹಾಗಿಲ್ಲ. ಅಂಗಡಿಗೆ ಬಂದವರಿಗೆ ನೆರವಾಗುವ ಸ್ವಬಾವವನ್ನು ನಾನು ತಂದೆ ಅಬ್ದುಲ್ ಹಮೀದ್ ಮತ್ತು ಅಣ್ಣ ಮಹಮ್ಮದ್ ನಜೀರ್ ಅವರಿಂದ ಕಲಿತೆ. ಇನ್ನೊಬ್ಬರಿಗೆ ಸಹಾಯ ಮಾಡಿದರೆ, ನಮಗೆ ಖಂಡಿತವಾಗಿಯೂ ನಷ್ಟವಾಗುವುದಿಲ್ಲ. ನಾವು ಅಭಿವೃದ್ಧಿಗೊಳ್ಳುತ್ತೇವೆ. ನಾವೂ ಬೆಳೀತೇವೆ, ಇನ್ನೊಬ್ಬರನ್ನೂ ಬೆಳೆಸಿದಂತಾಗುತ್ತದೆ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದೇನೆ. ಶಾಲೆಗೆ ತರಕಾರಿ ಕೊಟ್ಟ ನಂತರ ನನಗೆ ಒಳ್ಳೆಯದೇ ಆಯಿತು. ನಾವೆಲ್ಲರೂ ನಗುನಗುತ್ತಾ ಒಟ್ಟಾಗಿ ಬಾಳಬೇಕು, ಇನ್ನೊಬ್ಬರೂ ಸಂತೋಷವಾಗಿರಬೇಕು ಎಂಬ ತತ್ತ್ವದಂತೆ ನಾನು ಜೀವಿಸುತ್ತಿದ್ದೇನೆ ಎಂದು ಶರೀಫ್ ಹೇಳಿದರು.
ಶಾಲೆಯ ಎರಡೆರಡು ಪದಾರ್ಥ, ಪಲ್ಯ ಮತ್ತು ಸಾಂಬಾರಿಗೆ ತರಕಾರಿ ಉಪಯೋಗವಾಗುತ್ತದೆ. ಶಾಲೆಯಲ್ಲಿರುವ ಕಾರ್ಯಕ್ರಮಗಳಿಗೂ ಅವರು ತರಕಾರಿ ಕೊಡ್ತಾರೆ. ಆಲುಗಡ್ಡೆ, ಬೀಟ್ ರೂಟ್, ಸೌತೆಕಾಯಿ ಹೀಗೆ ವೈವಿಧ್ಯಗಳೂ ಇರುತ್ತದೆ. ಒಂದು ಬಾರಿ ಮಕ್ಕಳಿಗೆಂದು ಕಲ್ಲಂಗಡಿಯನ್ನೂ ಕೊಟ್ಟಿದ್ದಾರೆ ಎನ್ನುತ್ತಾರೆ ಶಿಕ್ಷಕಿ ಸಂಗೀತಾ ಶರ್ಮ.
ಇನ್ನೊಬ್ಬರಿಗೆ ನಮ್ಮಿಂದ ಉಪಕಾರವಾದರೆ ಅದರಷ್ಟು ಉತ್ತಮ ಕಾರ್ಯ ಬೇರೊಂದಿಲ್ಲ. ನನ್ನ ಕೈಲಾದ ಸೇವೆಯನ್ನು ಮಕ್ಕಳಿಗೆ ಮಾಡಲು ಪ್ರೇರಣೆ ನನ್ನಣ್ಣ ಮಹಮ್ಮದ್ ನಜೀರ್ ಮತ್ತು ತಂದೆ ಅಬ್ದುಲ್ ಹಮೀದ್. ಶಾಲೆಯ ಬಗ್ಗೆ ಗಮನ ಸೆಳೆದವರು ನನ್ನ ತರಕಾರಿ ಅಂಗಡಿಯ ಗ್ರಾಹಕರೂ ಆದ ಶಿಕ್ಷಕಿ ಸಂಗೀತಾ ಮೇಡಂ. ನಾನೀಗ ಶಾಲೆಯ ಭಾಗವೇ ಆಗಿದ್ದೇನೆ ಎಂಬುದು ಖುಷಿ ತರುವ ವಿಚಾರ ಎಂದರು ಶರೀಫ್.
ಇನ್ನಷ್ಟು ಶಾಲೆಗಳಿಗೆ ವಿಸ್ತರಣೆ
ಇದೀಗ ಮಜಿ ಶಾಲೆ ಮಕ್ಕಳ ಸಂಖ್ಯೆ 250ಕ್ಕೆ ಏರಿದೆ. ತರಕಾರಿ ಬೆಲೆ ಗಗನಕ್ಕೇರುತ್ತಿದ್ದರೂ ನಿರಂತರವಾಗಿ ತರಕಾರಿ ಸೇವೆ ದೊರಕುತ್ತಿದೆ. ಹಳೆ ವಿದ್ಯಾರ್ಥಿಯೂ ಶಾಲೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಚಿನ್ನಾ ಕಲ್ಲಡ್ಕ ಅವರು ಶಾಲೆಗೆ ತರಕಾರಿ ಕೊಂಡೊಯ್ಯುತ್ತಿದ್ದಾರೆ. ಮುಗ್ಧ ಮಕ್ಕಳ ಹಸಿದ ಹೊಟ್ಟೆಗೆ ಕೊಡುವ ಬಿಸಿಯೂಟಕ್ಕೆ ಸರಕಾರದಿಂದ ದೊರಕುವ ಅನುದಾನವನ್ನು ಗಮನಿಸಿದರೆ, ಗಗನಕ್ಕೇರುವ ಬೆಲೆಯಲ್ಲಿ ತರಕಾರಿ ಕೊಳ್ಳಲು ಸಾಧ್ಯವೇ ಇಲ್ಲ. ದಾನಿಗಳ ನೆರವಿನಿಂದಷ್ಟೇ ಶಾಲೆಯ ಬಿಸಿಯೂಟಕ್ಕೆ ತರಕಾರಿ ಸಿಗಬೇಕು. ಈ ಹಿನ್ನೆಲೆಯಲ್ಲಿ ಮಜಿ ವೀರಕಂಭ ಶಾಲೆಗೆ ತರಕಾರಿ ಕೊಡಲು ಆರಂಭಿಸಿದ ಮಹಮ್ಮದ್ ಶರೀಫ್ ಅವರು ತಮ್ಮ ಸೇವೆಯನ್ನು ವೀರಕಂಭ ಗ್ರಾಮದ ಇತರ ಸರಕಾರಿ ಶಾಲೆಗಳಾದ ಕೆಲಿಂಜ, ಬಾಯಿಲಕ್ಕೂ ವಿಸ್ತರಿಸಿದ್ದಾರೆ. ಇತ್ತೀಚೆಗೆ ಕಂಚಿನಡ್ಕಪದವು ಸರಕಾರಿ ಶಾಲೆಯ ಮಕ್ಕಳ ಬಿಸಿಯೂಟಕ್ಕೂ ಶರೀಫ್ ಅವರದ್ದೇ ತರಕಾರಿ. ಇದು ನನಗೆ ಸಂತೃಪ್ತ ಭಾವ ನೀಡುತ್ತದೆ.
ದಿನಕ್ಕೆ 1000 ರೂ ತರಕಾರಿ
ಅಷ್ಟೂ ಶಾಲೆಗಳಿಗೆ ಶರೀಫ್ ಅವರು ದಿನವೊಂದಕ್ಕೆ ಸರಾಸರಿ 1 ಸಾವಿರ ರೂಗಳಷ್ಟು ಮೌಲ್ಯದ ತರಕಾರಿಯನ್ನು ಒದಗಿಸುತ್ತಿದ್ದಾರೆ. ಮಜಿ ಶಾಲೆಗೆ ಪ್ರತಿದಿನ ತರಕಾರಿ ವಿತರಣೆಯಾದರೆ, ಕೆಲವು ಶಾಲೆಗಳಿಗೆ ವಾರಕ್ಕೆರಡು, ವಾರಕ್ಕೊಂದು ಬಾರಿ ನೀಡಲಾಗುತ್ತದೆ.
ಶರೀಫ್ ಅವರು ಸರಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ತರಕಾರಿ ನೀಡುವುದು ಮಾದರಿ ಕಾರ್ಯ. ಇದು ಇತರರಿಗೂ ಪ್ರೇರಣೆ. ಸಮುದಾಯ ಶಾಲೆಗಳ ಅಭಿವೃದ್ಧಿಗೆ ನೆರವಾದರೆ, ಮಕ್ಕಳ ಪ್ರಗತಿಯಾಗುತ್ತದೆ ಎನ್ನುತ್ತಾರೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್.
(ವರದಿ: ಹರೀಶ ಮಾಂಬಾಡಿ, ಮಂಗಳೂರು)