logo
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Crime; ಸಾಲ ತೀರಿಸಲು ಹಣವಿಲ್ಲವೆಂದು ಯೂಟ್ಯೂಬ್ ನೋಡಿ ನಕಲಿ ನೋಟ್ ಮುದ್ರಿಸಿದ, ಮಂಗಳೂರಿನಲ್ಲಿ ಕೇರಳ ತಂಡದ ವಂಚನೆ ಕೃತ್ಯ ಬಯಲಿಗೆ

Mangaluru Crime; ಸಾಲ ತೀರಿಸಲು ಹಣವಿಲ್ಲವೆಂದು ಯೂಟ್ಯೂಬ್ ನೋಡಿ ನಕಲಿ ನೋಟ್ ಮುದ್ರಿಸಿದ, ಮಂಗಳೂರಿನಲ್ಲಿ ಕೇರಳ ತಂಡದ ವಂಚನೆ ಕೃತ್ಯ ಬಯಲಿಗೆ

Umesh Kumar S HT Kannada

Aug 20, 2024 06:23 PM IST

google News

ಮಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

  • Crime News; ಸಾಲ ಮರುಪಾವತಿ ಮಾಡಲು ಯೂಟ್ಯೂಬ್ ನೋಡಿ ನಕಲಿ ನೋಟು ಮಾಡುವುದು ಕಲಿತ ವ್ಯಕ್ತಿ ಸೇರಿ ನಾಲ್ವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಖೋಟಾ ನೋಟು ಮುದ್ರಣ ಮಾಡಿದ್ದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)
ಮಂಗಳೂರು ಅಪರಾಧ ಸುದ್ದಿ (ಸಾಂಕೇತಿಕ ಚಿತ್ರ)

ಮಂಗಳೂರು: ಮಾಡಿದ ಸಾಲ ತೀರಿಸಲು ಮತ್ತೆ ಸಾಲ ಮಾಡುವವರಿದ್ದಾರೆ, ಊರು ಬಿಟ್ಟು ಪರದೇಶಕ್ಕೆ ಓಡಿ ಹೋಗುವವರಿದ್ದಾರೆ. ಕೆಲವೊಮ್ಮೆ ತಪ್ಪು ನಿರ್ಧಾರ ಕೈಗೊಂಡು ಮರ್ಯಾದೆಗೆ ಹೆದರಿ ಜೀವ ಕೈಗೊಳ್ಳುವ ಕಠೋರ ನಿರ್ಧಾರ ಕೈಗೊಳ್ಳುವವರೂ ಇದ್ದಾರೆ. ಆದರೆ ಇಲ್ಲೊಬ್ಬ ಸಾಲ ಪಡೆದಾತ ಹೊಸ ಉಪಾಯ ಮಾಡಿದ. ಸಾಲ ಕೊಟ್ಟವನಿಗೆ ಹಣ ತೀರಿಸಬೇಕು ಎಂದು ಧೈರ್ಯದಿಂದ ನಕಲಿ ನೋಟನ್ನೇ ಮುದ್ರಿಸಿದ. ಇದಕ್ಕೆ ಯೂಟ್ಯೂಬ್‌ನಲ್ಲಿ ಮಾಹಿತಿಯನ್ನೂ ಪಡೆದುಕೊಂಡಿದ್ದ. ಇದೀಗ ತಾನು ಮಾಡಿದ ಸಾಲ ತೀರಿಸಲು ಯೂಟ್ಯೂಬ್ ನೋಡಿ 500 ರೂ ವಿನ ನಕಲಿ ನೋಟು ಮುದ್ರಣ ಮಾಡಿದ ಆರೋಪಿ ಸೇರಿದಂತೆ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಕರಿಚೇರಿ ಪೆರ್ಲಂ ವೀಡು, ಕೊಳತ್ತೂರು ನಿವಾಸಿ ವಿ.ಪ್ರಿಯೇಶ್(38), ಮುಳಿಯಾರು ಗ್ರಾಮ, ಮಲ್ಲಂ ನಿವಾಸಿ ವಿನೋದ್ ಕುಮಾರ್ ಕೆ.(33), ವಡಂಕುಂಕರ, ಕುನಿಯಾ, ಪೆರಿಯಾ ನಿವಾಸಿ ಅಬ್ದುಲ್ ಖಾದರ್ ಎಸ್.ಎ(58), ಕಡಬದ ಬೆಳಂದೂರು ಗ್ರಾಮ ಕುದ್ಮಾರ್ ನಿವಾಸಿ ಆಯೂಬ್ ಖಾನ್, (51) ಬಂಧಿತ ಆರೋಪಿಗಳು.

ಖೋಟಾ ನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದಾಗ ಬಂಧನ

ಕೇರಳ ರಾಜ್ಯದಲ್ಲಿ ಖೋಟಾನೋಟು ಮುದ್ರಿಸಿ ಮಂಗಳೂರು ನಗರದಲ್ಲಿ ಚಲಾವಣೆ ಮಾಡಲು ಬಂದಿದ್ದ ವೇಳೆ ನಾಲ್ವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ 500 ರೂ. ಮುಖಬೆಲೆಯ 427 ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದರು. ಬಳಿಕ ಈ ಖೋಟಾ‌ ನೋಟುಗಳನ್ನು ಮಂಗಳೂರು ನಗರದ ಕ್ಲಾಕ್‌ಟವರ್ ಬಳಿಯ ವಸತಿಗೃಹವೊಂದರ ಪರಿಸರದಲ್ಲಿ ಚಲಾವಣೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 500 ರೂ. ಮುಖಬೆಲೆಯ ಖೋಟಾನೋಟು ವಶಕ್ಕೆ ತೆಗೆದುಕೊಂಡು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 2,13,500 ಮೌಲ್ಯದ 500 ರೂ. ಮುಖಬೆಲೆಯ 427 ಖೋಟಾನೋಟುಗಳು, 4 ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪೈಕಿ ಪ್ರಿಯೇಶ್, ಕಾಸರಗೋಡು ಜಿಲ್ಲೆಯ ಚೆರ್ಕಳ ಎಂಬಲ್ಲಿ ಪ್ರಿಂಟಿಂಗ್ ಪ್ರೆಸ್ ಹೊಂದಿದ್ದಾನೆ. ಈ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಖೋಟಾ ನೋಟುಗಳನ್ನು ತಯಾರಿಸಲಾಗುತ್ತಿತ್ತು. ಖೋಟಾನೋಟು ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ಕೇರಳದ ಕೋಝೀಕೋಡ್ ಮತ್ತು ದೆಹಲಿಯಿಂದ ಖರೀದಿಸಲಾಗುತ್ತಿತ್ತು.

ಸಾಲ ತೀರಿಸಲು ನೋಟು ಮುದ್ರಿಸಿದ

ಪ್ರಿಯೇಶ್ ಸಾಲ ತೀರಿಸಲು ನಕಲಿ ನೋಟು ಮುದ್ರಣಕ್ಕೆ ನಿರ್ಧರಿಸಿದ್ದಾನೆ. ಈತನಿಗೆ ಪ್ರಿಂಟಿಂಗ್ ಉದ್ಯಮದಲ್ಲಿ 20 ವರ್ಷದ ಅನುಭವವಿದೆ. ಖೋಟಾನೋಟು ತಯಾರಿಕಾ ವಿಧಾನವನ್ನು ಯೂಟ್ಯೂಬ್ ಮೂಲಕ ವೀಕ್ಷಿಸಿ ಸುಲಭವಾಗಿ ಹಣ ಸಂಪಾದನೆ ಮಾಡುವ ದಂಧೆಗೆ ಇಳಿದಿದ್ದನು.

ಆರೋಪಿ‌ ಮುದ್ರಿಸಿದ ನೋಟನ್ನು 25 ಶೇಕಡ ಕಮೀಷನ್ ಗೆ ನೀಡುವ ಭರವಸೆ ನೀಡಿ ಉಳಿದ ಮೂವರನ್ನು ಕರೆಸಿದ್ದ. ಇವರು ಆರೋಪಿಯಿಂದ ನಕಲಿ ನೋಟು ಖರೀದಿಸಲು ಬಂದ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗಿದೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ