ಬೆಂಗಳೂರು ಶಾಲೆಗಳಲ್ಲಿ ಕ್ರಿಸ್‌ಮಸ್ ರಜೆಗೆ ಕಂಟಕ: ಮಕ್ಕಳ ರಜೆ ಖುಷಿ ಕಸಿದ ಅಕಾಲಿಕ ಮಳೆ, ಕಾರಣವೇನು?
Oct 27, 2024 02:56 PM IST
ನೀರಿನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳು.
- Christmas Holidays: ಬೆಂಗಳೂರಿನಲ್ಲಿ ಮಳೆಯಿಂದಾಗಿ ಕಳೆದುಹೋದ ತರಗತಿಗಳನ್ನು ಸರಿದೂಗಿಸಲು ಹಲವು ಖಾಸಗಿ ಶಾಲೆಗಳು ಕ್ರಿಸ್‌ಮಸ್ ರಜೆಯನ್ನು ಮೊಟಕುಗೊಳಿಸಲು ನಿರ್ಧರಿಸಿವೆ.
ಬೆಂಗಳೂರು: ನಗರದ ಹಲವು ಖಾಸಗಿ ಶಾಲೆಗಳು ಡಿಸೆಂಬರ್‌ನಲ್ಲಿ 3 ದಿನಗಳ ಕ್ರಿಸ್‌ಮಸ್ ರಜೆಯನ್ನು ಮೊಟಕುಗೊಳಿಸಲು ನಿರ್ಧರಿಸಿವೆ. ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಶಾಲೆಗಳಿಗೆ ರಜೆ ನೀಡಿದ್ದ ಕಾರಣ ತರಗತಿಗಳ ನಷ್ಟವನ್ನು ತುಂಬಲು ಕ್ರಿಸ್‌ಮಸ್ ರಜೆಯನ್ನು ಕಸಿಯಲು ನಿರ್ಧರಿಸಿವೆ. ರಾಜ್ಯ ಮಂಡಳಿಯ ಹೆಚ್ಚಿನ ಸರ್ಕಾರಿ ಮತ್ತು ಖಾಸಗಿ ಅನುದಾನರಹಿತ ಶಾಲೆಗಳು ಶನಿವಾರ ಅಕ್ಟೋಬರ್ 26 ರಂದು ಪೂರ್ಣ ದಿನದ ತರಗತಿಗಳನ್ನು ಯೋಜಿಸಿದ್ದವು. ಕೆಲವು ಶಾಲೆಗಳು ರಜೆಯ ಸಮಯವನ್ನು ನವೆಂಬರ್‌ನಲ್ಲಿ ಸರಿದೂಗಿಸಲು ಯೋಜಿಸಿವೆ.
ಇತ್ತೀಚೆಗಷ್ಟೇ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಭಾರೀ ಮಳೆ ಸುರಿದಿದೆ. ಭಾರಿ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಗಳೂರು ಜಿಲ್ಲಾಡಳಿತವು ಅಕ್ಟೋಬರ್ 16, 21 ಮತ್ತು 23 ರಂದು ಅಂಗನವಾಡಿಗಳು ಮತ್ತು ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿತ್ತು. ಈ ರಜೆಗಳಿಂದ ಎದುರಾದ ಕಲಿಕಾ ಸಮಯದ ಕೊರತೆ ನೀಗಿಸಲು ಶನಿವಾರ ಅಥವಾ ಭಾನುವಾರ ದಿನದಂದು ಪೂರ್ಣ ದಿನದ ತರಗತಿಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ, ಬೆಂಗಳೂರಿನ ಹಲವು ಪ್ರತಿಷ್ಠಿತ ಶಾಲೆಗಳು ಕ್ರಿಸ್‌ಮಸ್ ರಜೆಯನ್ನು 3 ದಿನಗಳಿಗೆ ಕಡಿತಗೊಳಿಸಿ ತರಗತಿಗಳನ್ನು ನಡೆಸಲು ನಿರ್ಧರಿಸಿವೆ.
ಕಲಿಕೆ ಕೊರತೆಯನ್ನು ನೀಗಿಸಲು ಶನಿವಾರ ಮತ್ತು ಭಾನುವಾರ ತರಗತಿ ನಡೆಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಬಹುತೇಕ ಪೋಷಕರು ಭಾನುವಾರ ದಿನದಂದು ಮಕ್ಕಳನ್ನು ಶಾಲೆಗೆ ಕಳುಹಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ರಜೆಯನ್ನು ಕಡಿತಗೊಳಿಸಿ ಆ ಸಮಯದಲ್ಲಿ ತರಗತಿಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದೇವೆ ಎಂದು ಬೆಂಗಳೂರಿನ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ತಿಳಿಸಿದ್ದಾರೆ. ಆದರೆ, ನಗರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶನಿವಾರ ಮತ್ತು ಭಾನುವಾರ ಪೂರ್ಣ ದಿನ ತರಗತಿ ನಡೆಸಲು ಕ್ರಮಕೈಗೊಳ್ಳಲಾಗಿದೆ.
ಕೆಪಿಎಸ್ ಪ್ರಿನ್ಸಿಪಲ್ ಹೇಳಿದ್ದೇನು?
ಸರ್ಕಾರದ ಸೂಚನೆಯಂತೆ ನಾವು ಅಕ್ಟೋಬರ್ 26 ರಂದು ಪೂರ್ಣ ದಿನದ ತರಗತಿಗಳನ್ನು ನಡೆಸುತ್ತೇವೆ. ಅಕ್ಟೋಬರ್ 27 ರಂದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗಳನ್ನು ಭರ್ತಿ ಮಾಡಲು ಪರೀಕ್ಷೆ ನಡೆಸಲಿದ್ದು, ನಮ್ಮ ಶಾಲೆ ಪರೀಕ್ಷಾ ಕೇಂದ್ರವಾಗಿದೆ. ಹೀಗಾಗಿ ಉಳಿದ ತರಗತಿಗಳನ್ನು ಮುಂದಿನ ವಾರ ನಡೆಸಲಾಗುವುದು’ ಎಂದು ಬಸವನಗುಡಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಉಪಪ್ರಾಂಶುಪಾಲರು ತಿಳಿಸಿದ್ದಾರೆ.
‘ಪೋಷಕರ ನಿರ್ಧಾರ ಪಡೆಯುತ್ತೇವೆ’
ನಾವು ಶನಿವಾರದಂದು ಪೂರ್ಣ ದಿನ ಮತ್ತು ಭಾನುವಾರದಂದು ತರಗತಿಗಳನ್ನು ನಡೆಸಲು ಸಿದ್ಧರಿದ್ದೇವೆ. ನಮ್ಮ ಶಿಕ್ಷಕರೂ ಒಪ್ಪಿದ್ದಾರೆ. ಆದರೆ, ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಮಕ್ಕಳೂ ಕೂಡ ರಜೆಯಲ್ಲಿ ಶಾಲೆಗೆ ಬರಲು ಇಷ್ಟಪಡುವುದಿಲ್ಲ. ಮಕ್ಕಳು ಶಾಲೆಗೆ ಬರದಿದ್ದರೆ ಮತ್ತೆ ತರಗತಿ ತಪ್ಪಿಸುತ್ತಾರೆ. ಹಾಗಾಗಿ ಪೋಷಕರ ಒಪ್ಪಿಗೆ ಪಡೆದು ಮೂರು ದಿನಗಳ ತರಗತಿಗಳನ್ನು ನಿಗದಿಪಡಿಸುತ್ತೇವೆ ಎಂದು ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.
ಆನ್‌ಲೈನ್ ತರಗತಿ ನಡೆಸಿದ್ದ ಐಸಿಎಸ್‌ಇ, ಸಿಬಿಎಸ್‌ಇ ಶಾಲೆಗಳು
ರಜಾ ದಿನಗಳಲ್ಲಿ ಮನೆಯಲ್ಲಿ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಕಷ್ಟ. ಕಳೆದು ಹೋದ ತರಗತಿಗಳ ಕುರಿತು ನಿರ್ಧಾರ ತೆಗೆದುಕೊಳ್ಳಲು ಶಾಲೆಗಳೊಂದಿಗೆ ಸಭೆ ಇದೆ. ಶಾಲಾ ಆಡಳಿತ ಮಂಡಳಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ’ ಎಂದು ವಿಜಯನಗರದ ಪಾಲಕರಾದ ಪ್ರತಿಭಾ ಹೇಳಿದ್ದಾರೆ. ಅನೇಕ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ), ಇಂಡಿಯನ್ ಸರ್ಟಿಫಿಕೇಟ್ ಸೆಕೆಂಡರಿ ಎಜುಕೇಶನ್ (ಐಸಿಎಸ್‌ಇ) ಶಾಲೆಗಳು ಜಿಲ್ಲಾಡಳಿತ ಘೋಷಿಸಿದ ರಜಾ ದಿನಗಳಲ್ಲಿ ಆನ್‌ಲೈನ್ ತರಗತಿ ನಡೆಸಿದ್ದವು.
ಮಳೆಯಿಂದಾಗಿ ಸರ್ಕಾರ ರಜೆ ಘೋಷಿಸಿದ ದಿನಗಳಲ್ಲಿ ನಾವು ಎಲ್ಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಮಕ್ಕಳ ಕಲಿಕೆಗೆ ಧಕ್ಕೆಯಾಗುವುದಿಲ್ಲ. ಹಾಗಾಗಿ ಹೆಚ್ಚುವರಿ ತರಗತಿಗಳನ್ನು ನಡೆಸುವುದಿಲ್ಲ ಎಂದು ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.