ಬೆಂಗಳೂರು ರಸ್ತೆ ದುರಸ್ತಿ ಕಾರ್ಯ ಬಿಬಿಎಂಪಿ ಗುತ್ತಿಗೆದಾರರಿಗೆ ಏಕೆ ಕೊಡ್ತೀರಿ, ಇಎಲ್‌ಸಿಐಟಿಎಗೆ ಕೊಡಿ; ಉದ್ಯಮಿ ಕಿರಣ್ ಮಜುಂದಾರ್ ಷಾ ಆಗ್ರಹ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆ ದುರಸ್ತಿ ಕಾರ್ಯ ಬಿಬಿಎಂಪಿ ಗುತ್ತಿಗೆದಾರರಿಗೆ ಏಕೆ ಕೊಡ್ತೀರಿ, ಇಎಲ್‌ಸಿಐಟಿಎಗೆ ಕೊಡಿ; ಉದ್ಯಮಿ ಕಿರಣ್ ಮಜುಂದಾರ್ ಷಾ ಆಗ್ರಹ

ಬೆಂಗಳೂರು ರಸ್ತೆ ದುರಸ್ತಿ ಕಾರ್ಯ ಬಿಬಿಎಂಪಿ ಗುತ್ತಿಗೆದಾರರಿಗೆ ಏಕೆ ಕೊಡ್ತೀರಿ, ಇಎಲ್‌ಸಿಐಟಿಎಗೆ ಕೊಡಿ; ಉದ್ಯಮಿ ಕಿರಣ್ ಮಜುಂದಾರ್ ಷಾ ಆಗ್ರಹ

ಬೆಂಗಳೂರು ರಸ್ತೆ ನಿರ್ವಹಣೆ ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇನ್ನೊಂದೆಡೆ, ಎಲೆಕ್ಟ್ರಾನಿಕ್ ಸಿಟಿ ಟೌನ್‌ಶಿಪ್ ಸಲೀಸಾಗಿ ರಸ್ತೆ ನಿರ್ವಹಣೆಗೆ ಗಮನಸೆಳೆದಿದೆ. ಬೆಂಗಳೂರು ರಸ್ತೆ ದುರಸ್ತಿ ಕಾರ್ಯ ಬಿಬಿಎಂಪಿ ಗುತ್ತಿಗೆದಾರರಿಗೆ ಏಕೆ ಕೊಡ್ತೀರಿ, ಎಲೆಕ್ಟ್ರಾನಿಕ್ ಸಿಟಿ ಟೌನ್‌ಶಿಪ್ ಅಥಾರಿಟಿಗೆ ಕೊಡಿ ಎಂದು ಉದ್ಯಮಿ ಕಿರಣ್‌ ಮಜುಂದಾರ್ ಷಾ ಆಗ್ರಹಿಸಿದರು

ಬೆಂಗಳೂರು ರಸ್ತೆ ದುರಸ್ತಿ ಕಾರ್ಯ ಬಿಬಿಎಂಪಿ ಗುತ್ತಿಗೆದಾರರಿಗೆ ಏಕೆ ಕೊಡ್ತೀರಿ, ಇಎಲ್‌ಸಿಐಟಿಎಗೆ ಕೊಡಿ ಎಂದು ಉದ್ಯಮಿ ಕಿರಣ್ ಮಜುಂದಾರ್ ಷಾ ಆಗ್ರಹಿಸಿದ್ದಾರೆ.
ಬೆಂಗಳೂರು ರಸ್ತೆ ದುರಸ್ತಿ ಕಾರ್ಯ ಬಿಬಿಎಂಪಿ ಗುತ್ತಿಗೆದಾರರಿಗೆ ಏಕೆ ಕೊಡ್ತೀರಿ, ಇಎಲ್‌ಸಿಐಟಿಎಗೆ ಕೊಡಿ ಎಂದು ಉದ್ಯಮಿ ಕಿರಣ್ ಮಜುಂದಾರ್ ಷಾ ಆಗ್ರಹಿಸಿದ್ದಾರೆ. (HT News)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ರಸ್ತೆ ಮೂಲಸೌಕರ್ಯಗಳ ಕುರಿತು ವ್ಯಾಪಕ ಟೀಕೆ ಟಿಪ್ಪಣಿಗಳು, ಚರ್ಚೆಗಳು ನಡೆಯುತ್ತಿರುವಾಗಲೇ ಉದ್ಯಮಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ ಅವರು ರಸ್ತೆಗುಂಡಿ ಸಮಸ್ಯೆಗೆ ಕೊಟ್ಟ ಪರಿಹಾರೋಪಾಯ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಸಂಚಲನ ಮೂಡಿಸಿದೆ. ಬಹಳಷ್ಟು ಜನ ಈ ಬಗ್ಗೆ ಗಮನಹರಿಸಿದ್ದು, ವ್ಯಾಪಕ ಚರ್ಚೆ ಶುರುವಾಗಿದೆ. ಬೆಂಗಳೂರು ನಗರದ ರಸ್ತೆಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಬಿಬಿಎಂಪಿ ಗುತ್ತಿಗೆದಾರರಿಗೆ ಯಾಕೆ ಕೊಡ್ತೀರಿ, ಅದನ್ನು ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ಇಎಲ್‌ಸಿಐಟಿಎ)ಗೆ ಕೊಡಿ ಎಂದು ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ. ಅವರು ಈ ರೀತಿ ಹೇಳುವುದಕ್ಕೆ ಏನು ಕಾರಣ, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ ಅಂಥ ಅರ್ಹತೆ ಏನಿದೆ ಎಂಬ ಕುತೂಹಲ ಸಹಜವಾಗಿಯೇ ಹುಟ್ಟಿಕೊಂಡಿದೆ.

ಕಿರಣ್ ಮಜುಂದಾರ್ ಷಾ ಟ್ವೀಟ್‌ನಲ್ಲಿ ಏನಿದೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರನ್ನು ಅವಲಂಬಿಸುವ ಬದಲು ನಗರದ ರಸ್ತೆಗಳ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿಗೆ (ELCITA) ಕೊಡಬೇಕು ಎಂದು 71 ವರ್ಷದ ಉದ್ಯಮಿ ಕಿರಣ್ ಮಜುಂದಾರ್ ಷಾ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಮ್ಮ ನೆರವಿಗೆ ಬರುವಂತಹ ಇಎಲ್‌ಸಿಐಟಿಎ ಇರುವಾಗ ನಾವು ಕಳಪೆ ಕಾಮಗಾರಿ ಮಾಡುವಂತಹ ಗುತ್ತಿಗೆದಾರರನ್ನು ಯಾಕೆ ನೆಚ್ಚಿಕೊಂಡಿರಬೇಕು. ವಿಶೇಷವಾಗಿ ಹೆಚ್ಚು ಸಂಚಾರ ದಟ್ಟಣೆ ಇರುವ ವಲಯಗಳ ರಸ್ತೆಗಳ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿಗೆ ಯಾಕೆ ಕೊಡಬಾರದು ಎಂದು ನೇರವಾರಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟ್ಯಾಗ್ ಮಾಡಿ ಕೇಳಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳ ಸ್ಮಾರ್ಟ್ ನಿರ್ವಹಣೆ

ಅಸಮರ್ಪಕ ಒಳಚರಂಡಿ ವ್ಯವಸ್ಥೆಗಳು ಬೆಂಗಳೂರಿನ ರಸ್ತೆ ಅವನತಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ ಕಿರಣ್ ಮಜುಂದಾರ್ ಷಾ, 75 ಮಳೆನೀರು ಕೊಯ್ಲು ಹೊಂಡಗಳು ಮತ್ತು ಭಾರೀ ಮಳೆಯ ಸಮಯದಲ್ಲಿ ನೀರಿನ ಹರಿವನ್ನು ತಗ್ಗಿಸಲು ವಿನ್ಯಾಸಗೊಳಿಸಲಾದ ಸಮರ್ಥ ಒಳಚರಂಡಿ ಜಾಲವನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್ ಸಿಟಿ ರಸ್ತೆಗಳ ಸ್ಮಾರ್ಟ್ ನಿರ್ವಹಣೆ ಪ್ರಶಂಸಾರ್ಹ ಎಂದು ಹೇಳಿದ್ದಾರೆ.

ಅವರು ಹಂಚಿಕೊಂಡ ಮತ್ತೊಂದು ಚಿತ್ರವು, "ಬೆಂಗಳೂರಿನ ಬೊಮ್ಮನಹಳ್ಳಿಯು ರಸ್ತೆ ಗುಂಡಿ ಮತ್ತು ಹದಗೆಟ್ಟ ರಸ್ತೆಗಳ ವಿರುದ್ಧ ಹೋರಾಡುತ್ತಿರುವಾಗ, ಇಎಲ್‌ಸಿಐಟಿಎನಿಂದ ನಿರ್ವಹಿಸಲ್ಪಡುವ ಎಲೆಕ್ಟ್ರಾನಿಕ್ಸ್ ಸಿಟಿಯು ತದ್ವಿರುದ್ಧವಾಗಿದೆ. ಏನಿದರ ರಹಸ್ಯ ಎಂದರೆ ಸ್ಮಾರ್ಟ್ ನಿರ್ವಹಣೆ ಎಂದು ಷಾ ವಿವರಿಸಿದ್ದಾರೆ.

ಇಎಲ್‌ಸಿಐಟಿಎ ಎಂದರೇನು?

ಬೆಂಗಳೂರಿನ ಹೊರವಲಯದಲ್ಲಿರುವ 902 ಎಕರೆ ಕೈಗಾರಿಕಾ ಟೌನ್‌ಶಿಪ್ ಅನ್ನು 300 ಕ್ಕೂ ಹೆಚ್ಚು ಕಂಪನಿಗಳಿಗೆ ಒದಗಿಸುವ ಪುರಸಭೆ ಮತ್ತು ತೆರಿಗೆ ಪ್ರಾಧಿಕಾರವನ್ನು ಹೊಂದಿರುವ ಶಾಸನಬದ್ಧ ಸಂಸ್ಥೆ ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ. ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಕೈಗಾರಿಕಾ ಪಾರ್ಕ್‌ಗಳಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಒಂದಾಗಿದೆ.

ಇತ್ತೀಚೆಗೆ, ಬೆಂಗಳೂರು ಮೂಲದ ಉದ್ಯಮಿಯೊಬ್ಬರು ನಗರದ ಗುಂಡಿಗಳ ಸಮಸ್ಯೆಯನ್ನು ನಿಭಾಯಿಸಲು ವಿನೂತನ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ ರಸ್ತೆಗುಂಡಿಗೆ ರೇಟಿಂಗ್ ಕೊಡುವ ಮೊಬೈಲ್ ಅಪ್ಲಿಕೇಶನ್ ತಯಾರಿಸಿದರೆ ಹೇಗೆ ಎಂಬ ಆಲೋಚನೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಆ ಅಪ್ಲಿಕೇಶನ್‌ ಬಳಕೆದಾರರಿಗೆ ರಸ್ತೆಯ ಪರಿಸ್ಥಿತಿ, ರಸ್ತೆಗುಂಡಿಗಳನ್ನು ಅದರ ಅಪಾಯಕ್ಕೆ ಅನುಗುಣವಾಗಿ ರೇಟಿಂಗ್ ಹಾಕುವುದಕ್ಕೆ ನೆರವಾಗುವಂತೆ ಇರಬೇಕು ಎಂಬ ಆಲೋಚನೆಯನ್ನು ವ್ಯಕ್ತಪಡಿಸಿದ್ದರು.

ಬೆಂಗಳೂರು ಮೂಲದ ಉದ್ಯಮಿ ಶಿವ ನಾರಾಯಣನ್ ಎಂಬುವವರು ಈ ಚಿಂತನೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, “ನಾವು ಬೆಂಗಳೂರಿನ ರಸ್ತೆ ಗುಂಡಿಗಳಿಗೆ ರೇಟಿಂಗ್ ಕೊಡಲು ಮತ್ತು ಪರಿಶೀಲಿಸಲು ಅಪ್ಲಿಕೇಶನ್ ಅನ್ನು ನಿರ್ಮಿಸಲು ಯೋಜಿಸುತ್ತಿದ್ದೇವೆ. ನಾನು ಇತ್ತೀಚೆಗೆ 7-ಸ್ಟಾರ್ ರಸ್ತೆಗುಂಡಿಯನ್ನು ನೋಡಿದೆ. ಅದಕ್ಕೆ ಅರ್ಹವಾದ ಮನ್ನಣೆ ಸಿಕ್ಕಿಲ್ಲ ಎಂದು ಬೇಸರವಾಯಿತು” ಎಂದು ಬರೆದುಕೊಂಡಿದ್ದರು. ತಿಂಗಳ ಹಿಂದೆ ಬಿಬಿಎಂಪಿ ಅಧಿಕಾರಿಗಳು ನಗರದಲ್ಲಿ 2,795 ರಸ್ತೆ ಗುಂಡಿಗಳನ್ನು ಗುರುತಿಸಿದ್ದರು. ಇದನ್ನು ಮುಚ್ಚಲು 660 ಕೋಟಿ ರೂಪಾಯಿ ವೆಚ್ಚ ಇದೆ ಎಂದೂ ಹೇಳಿದ್ದರು.

Whats_app_banner