ಆಂಧ್ರ ಪ್ರದೇಶದಲ್ಲಿ ಭಾರಿ ಮಳೆ; ಬೆಂಗಳೂರು-ಮೈಸೂರಿನಿಂದ ಹೊರಡುವ ರೈಲುಗಳು ರದ್ದು, ಹಲವು ರೈಲುಗಳ ಮಾರ್ಗ ಬದಲಾವಣೆ
Sep 02, 2024 03:03 PM IST
ಆಂಧ್ರಪ್ರದೇಶದಲ್ಲಿ ಭಾರಿ ಮಳೆ; ಬೆಂಗಳೂರು-ಮೈಸೂರಿನಿಂದ ಹೊರಡುವ ರೈಲುಗಳು ರದ್ದು
- ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಸಕ್ರಿಯವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಈ ನಡುವೆ ಪ್ರಮುಖ ನಗರಗಳಿಂದ ಹಾದುಹೋಗುವ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ.
ಬೆಂಗಳೂರು: ಕರ್ನಾಟಕದ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ವಿಜಯವಾಡ ಸೇರಿದಂತೆ ಇತರ ಕೆಲವು ನಗರಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ವಾಹನ ಸೇರಿದಂತೆ ಹಲವು ರೈಲುಗಳ ಸಂಚಾರ ರದ್ದಾಗಿದೆ. ಆಂಧ್ರದಲ್ಲಿ ಪ್ರವಾಹದಿಂದಾಗಿ ಕರ್ನಾಟಕದ ರಾಜಧಾನಿ ಬೆಂಗಳೂರು ಹಾಗೂ ಮೈಸೂರಿನಿಂದ ತೆರಳುವ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಇದೇ ವೇಳೆ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಕುರಿತು ನೈರುತ್ಯ ರೈಲ್ವೆ ಸಾಮಜಿಕ ಮಾಧ್ಯಮ ಖಾತೆಯಲ್ಲಿ ಸ್ಪಷ್ಟಪಡಿಸಿದೆ.
ಆಂಧ್ರಪ್ರದೇಶದ ರಾಯನಪಾಡು ರೈಲು ನಿಲ್ದಾಣದಲ್ಲಿ ಭಾರಿ ನೀರು ನಿಂತಿರುವುದರಿಂದ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದಿಂದ ದಾನಾಪುರ ತೆರಳುವ ರೈಲನ್ನು ರದ್ದುಪಡಿಸಲಾಗಿದೆ. ಇದೇ ವೇಳೆ ಬೆಂಗಳೂರಿನ ಕೆಎಸ್‌ಆರ್‌ನಿಂದ ದಾನಾಪುರ್, ದಾನಾಪುರದಿಂದ ಕೆಎಸ್‌ಆರ್ ರೈಲುಗಳು ಕೂಡಾ ರದ್ದಾಗಿವೆ.
ಹೌರಾದಿಂದ ಮೈಸೂರಿಗೆ ಬರುವ ರೈಲು ಸಂಖ್ಯೆ 22817, ಮೈಸೂರಿನಿಂದ ಹೌರಾಗೆ ತೆರಳುವ ರೈಲು ಸಂಖ್ಯೆ 22818 ಕೂಡಾ ರದ್ದಾಗಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ರೈಲು ನಿಲ್ದಾಣದಿಂದ ಕಾಕಿನಾಡ ನಗರಕ್ಕೆ ತೆರಳುವ ರೈಲು ಸಂಖ್ಯೆ 17209, ನಾಗರ್‌ಕೋಯಿಲ್‌ನಿಂದ ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬರಬೇಕಿದ್ದ ರೈಲು ಸಂಖ್ಯೆ 17236, ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ನಾಗರ್‌ಕೋಯಿಲ್‌ಗೆ ಹೊರಡಬೇಕಿದ್ದ ರೈಲು ಸಂಖ್ಯೆ 17235 ಕೂಡಾ ರದ್ದಾಗಿದೆ.
ರಾಯನಪಾಡು ನಿಲ್ದಾಣದಲ್ಲಿ ಭಾರಿ ನೀರಿನ ಹರಿವು ಮತ್ತು ವಿಜಯವಾಡ - ನಿಡದವೋಲು ವಿಭಾಗದಲ್ಲಿ ಹಳಿ ತಪ್ಪಿದ ಕಾರಣದಿಂದಾಗಿ 5 ರೈಲುಗಳನ್ನು ರದ್ದುಗೊಳಿಸಲಾಗಿದೆ. ಭುವನೇಶ್ವರದಿಂದ ಬೆಂಗಳೂರಿನ ಕೆಎಸ್‌ಆರ್ ನಿಲ್ದಾಣ (ರೈಲು ಸಂಖ್ಯೆ 18463), ಕೆಎಸ್‌ಆರ್‌ನಿಂದ ಭುವನೇಶ್ವರ್ (ರೈಲು ಸಂಖ್ಯೆ 18464), ಹೌರಾದಿಂದ ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ (ರೈಲು ಸಂಖ್ಯೆ 12863), ಹಟಿಯಾದಿಂದ ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ (ರೈಲು ಸಂಖ್ಯೆ 12835) ಹಾಗೂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹಟಿಯಾಗೆ ತೆರಳಬೇಕಿದ್ದ ರೈಲುಗಳು ಕೂಡಾ ರದ್ದಾಗಿವೆ.
ಹಲವು ರೈಲುಗಳ ಮಾರ್ಗ ಬದಲಾವಣೆ
ಇದೇ ವೇಳೆ ಹಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಪಾಟಲಿಪುತ್ರಕ್ಕೆ ತೆಳಬೇಕಿದ್ದ ರೈಲು ಧರ್ಮಾವರಂ-ಸಿಕಂದರಾಬಾದ್ ಮಾರ್ಗವಾಗಿ ತೆರಳಲಿದೆ. ಯಶವಂತಪುರದಿಂದ ತುಘಲಕಾಬಾದ್‌ಗೆ ಪ್ರಯಾಣಿಸುವ ರೈಲು ಗುಂಟಕಲಾ-ವಾಡಿ- ಮಾರ್ಗವಾಗಿ ತೆರಳಲಿದೆ. ಯಶವಂತಪುರದಿಂದ ಟಾಟಾನಗರ್ ತೆರಳಬೇಕಿದ್ದ ರೈಲು ಗುಂಟೂರು ವಿಜಯವಾಡ ಮಾರ್ಗವಾಗಿ ತೆರಳಲಿದೆ. ಅತ್ತ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಪಾಟ್ನಾ ಜಂಕ್ಷನ್‌ಗೆ ತೆರಳುವ ರೈಲು ಸಿಕಂದರಾಬಾದ್ ಮಾರ್ಗವಾಗಿ ತೆರಳಲಿದೆ.
20ಕ್ಕೂ ಹೆಚ್ಚು ಜನರು ಸಾವು
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾನುವಾರವಿಡೀ ಧಾರಾಕಾರ ಮಳೆಯಾಗಿದ್ದು, ಪ್ರವಾಹದಿಂದಾಗಿ ಹಲವಾರು ಜನರು ಸಾವನ್ನಪ್ಪಿದ್ದಾರೆ. ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ರಸ್ತೆ ಮತ್ತು ರೈಲ್ವೆ ಸಂಚಾರಕ್ಕೆ ಅಡ್ಡಿಯಾಗಿದೆ. ಎರಡೂ ರಾಜ್ಯಗಳ ನದಿಗಳು ಉಕ್ಕಿ ಹರಿಯುತ್ತಿವೆ. ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಗಳು ಸಾವಿರಾರು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಿವೆ. ಎರಡು ರಾಜ್ಯಗಳಲ್ಲಿ ಈವರೆಗೆ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.