logo
ಕನ್ನಡ ಸುದ್ದಿ  /  ಕರ್ನಾಟಕ  /  ಹಿಂದೂ ಧರ್ಮದ ಬಗ್ಗೆ ಬೇಸರ ವ್ಯಕ್ತಪಡಿಸಿ ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್​​ಸಿ ಮಹದೇವಪ್ಪ

ಹಿಂದೂ ಧರ್ಮದ ಬಗ್ಗೆ ಬೇಸರ ವ್ಯಕ್ತಪಡಿಸಿ ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್​​ಸಿ ಮಹದೇವಪ್ಪ

Prasanna Kumar P N HT Kannada

Oct 14, 2024 06:37 PM IST

google News

ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್​​ಸಿ ಮಹದೇವಪ್ಪ

    • HC Mahadevappa: ಹಿಂದೂ ಧರ್ಮ ಸುಧಾರಣೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ. ಹಾಗಾಗಿ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ ಎಂದು ಸಚಿವ ಹೆಚ್​ಸಿ ಮಹದೇವಪ್ಪ ಅವರು ಹೇಳಿದ್ದಾರೆ.
ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್​​ಸಿ ಮಹದೇವಪ್ಪ
ಬೌದ್ಧ ಧರ್ಮ ಸ್ವೀಕರಿಸುವುದಾಗಿ ಘೋಷಿಸಿದ ಸಚಿವ ಹೆಚ್​​ಸಿ ಮಹದೇವಪ್ಪ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ದಸರಾ ಉಸ್ತುವಾರಿ ಹೊತ್ತಿದ್ದ ಸಮಾಜ ಕಲ್ಯಾಣ ಸಚಿವ ಡಾ.ಹೆಚ್​​ಸಿ ಮಹದೇವಪ್ಪಅವರು ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ದಸರಾ ಮುಗಿದ ಎರಡನೇ ದಿನಗಳಲ್ಲಿ ತಾನು ಬೌದ್ಧ ಧರ್ಮಕ್ಕೆ ಮತಾಂತರವಾಗುವುದಾಗಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಹಿರಿಯ ಸಚಿವ ಮಹದೇವಪ್ಪ ಅವರು ಹಿಂದೂ ಧರ್ಮದಲ್ಲಿನ ಜಾತೀಯತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಬೌದ್ಧ ಧರ್ಮ ಸ್ವೀಕರಿಸುತ್ತೇನೆ ಎಂದು ಘೋಷಿಸಿದ್ದಾರೆ.

ಇಂದು (ಅಕ್ಟೋಬರ್ 14) ಧಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಶುಭಾಶಯ ಕೋರಿರುವ ಮಹದೇವಪ್ಪ ಅವರು, ಹಿಂದೂ ಧರ್ಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ, ಏಕೆಂದರೆ ವ್ಯಕ್ತಿಯ ಬೆಳವಣಿಗೆಗೆ ಕರುಣೆ, ಸಮಾನತೆ ಮತ್ತು ಸ್ವಾತಂತ್ರ್ಯ ಅತ್ಯಂತ ಮುಖ್ಯ. ಜಾತಿ ಶ್ರೇಷ್ಠತೆಯ ರೋಗದಿಂದ ಬಳಲುತ್ತಿದೆ. ಹಿಂದೂ ಧರ್ಮ ಸುಧಾರಣೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ನಾನು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಬೋಧಿಸುವ ಧರ್ಮವನ್ನು ಇಷ್ಟಪಡುತ್ತೇನೆ ಎಂದು ಬರೆದುಕೊಂಡು ಭವಿಷ್ಯ ನುಡಿದಿದ್ದಾರೆ.

ಅಲ್ಲದೇ ಬೌದ್ಧ ಧರ್ಮದ ಬಗ್ಗೆ ಪ್ರಚಾರ ಮಾಡುವುದಾಗಿ ಹಾಗೂ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ ಘೋಷಣೆ ಮಾಡಿದ್ದಾರೆ. ಪೋಸ್ಟ್​ನಲ್ಲಿ ಬರಹ ಮುಂದುವರೆಸಿರುವ ಅವರು, ನಾನು ಸಮಾನತೆ ಮತ್ತು ಶಾಂತಿಯ ರೂಪಕವಾದ ಬೌದ್ಧ ಧರ್ಮವನ್ನು ಸ್ವೀಕರಿಸುತ್ತೇನೆ ಮತ್ತು ಮುಂದೆ ಎಲ್ಲರೂ ಭಾರತದ ಮೂಲ ಧರ್ಮವಾಗಿದ್ದ ಬೌದ್ಧ ಧರ್ಮದ ಪ್ರಚಾರ ಮಾಡಬೇಕೆಂದು ಬಯಸುತ್ತೇನೆ ಎಂದು ಹೇಳಿ ತನ್ನ 3.5 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸ್ವೀಕರಿಸಿದ ಬಾಬಾ ಸಾಹೇಬರ ಧಮ್ಮ ಚಕ್ರ ಪರಿವರ್ತನಾ ದಿನದಂದು ಎಲ್ಲರಿಗೂ ನನ್ನ ಆತ್ಮೀಯ ಶುಭಾಶಯಗಳು ಎಂದಿದ್ದಾರೆ.

ಸಾಂಸ್ಕೃತಿಕ ಚಳುವಳಿಯಾದ ಈ ಬಾರಿಯ ದಸರಾ

ಸಂಗೀತ, ಸಾಹಿತ್ಯ, ಕಲೆ, ಕೃಷಿ, ಹೈನುಗಾರಿಗೆ, ಕ್ರೀಡೆ, ಮಹಿಳೆಯರ ಕೊಡುಗೆಗಳು, ಜನರ ಜೀವನ ಕ್ರಮ ಹಾಗೂ ಮೌಲ್ಯಗಳು ಅಭಿವ್ಯಕ್ತಿಯಾದ ಈ ಬಾರಿಯ ದಸರಾವು ಸಾಂಸ್ಕೃತಿಕ ಚಳಿವಳಿಯಾಗಿ ಜರುಗಿದೆ ಎಂದು ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ. ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಕುಪ್ಪಣ್ಣ ಉದ್ಯಾನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ “ದಸರಾ ಫಲಪುಷ್ಪ ಪ್ರದರ್ಶನ”ದಲ್ಲಿ ಅತ್ಯುತ್ತಮ ಉದ್ಯಾನ ವಿನ್ಯಾಸಗೊಳಿಸಿದ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಸಚಿವರು ಮಾತನಾಡಿದರು. ರಾಜ್ಯದಲ್ಲಿ ಉತ್ತಮವಾಗಿ ಮಳೆಯಾದ ಕಾರಣ ನಮ್ಮ ಸಿಎಂ ಸಿದ್ದರಾಮಯ್ಯ ಅವರು ಅದ್ದೂರಿ ದಸರಾ ಆಚರಿಸುವಂತೆ ತಿಳಿಸಿದ್ದರು. ಅದರಂತೆ ಜನರಲ್ಲಿ ಸಹೋದರತೆ, ಸೌಹಾರ್ದತೆ, ಘನತೆಯ ಬದುಕನ್ನು ಬಿತ್ತುವಂತೆ ಈ ಬಾರಿಯ ದಸರಾವನ್ನು ಆಚರಿಸಲಾಗಿದೆ. ಧರ್ಮ, ಜಾತಿಗೂ ಮೀರಿದ ಸಮಾಜವನ್ನು ನಿರ್ಮಿಸುವ ಸಂದೇಶ ಸಾರಲಾಗಿದೆ ಎಂದಿದ್ದಾರೆ.

ಈ ಬಾರಿಯ ದಸರಾ ವಿಭಿನ್ನವಾಗಿತ್ತು ಎಂಬ ಉತ್ತಮ ಅಭಿಪ್ರಾಯ ಜನರಿಂದ ಕೇಳಿ ಬಂದಿದೆ. ದಸರಾ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದುಬಂದಿತ್ತು. ಇದು ಜನರ ದಸರಾವಾಗಿ ಪರಿಣಮಿಸಿದೆ. ದಸರಾ ಯಶಸ್ಸಿಗೆ ಮೈಸೂರಿನ ಎಲ್ಲಾ ಜನತೆ ಕಾರಣೀಭೂತರಾಗಿದ್ದಾರೆ. ಈ ಯಶಸ್ವಿ ದಸರಾ ಆಚರಣೆ ಮೂಲಕ ರಾಜ್ಯ ಸರ್ಕಾರಕ್ಕೆ ಸಾಂಸ್ಕೃತಿಕ ಕಿರೀಟ ಇಟ್ಟಂತಾಗಿದೆ. ತೋಟಗಾರಿಕೆ ಇಲಾಖೆಯಿಂದ ಫಲಪುಷ್ಟ ಪ್ರದರ್ಶನವನ್ನು ಅತ್ಯಂತ ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ವಿವಿಧ ಪುಷ್ಪಗಳು ಹಾಗೂ ಸಿರಿಧಾನ್ಯಗಳಿಂದ ಬಗೆಬಗೆಯ ಕಲಾ ಪ್ರಕಾರಗಳನ್ನು ರಚಿಸಿ ಜನರ ಮೆಚ್ಚುಗೆ ಗಳಿಸಲಾಗಿದೆ. ಸುಮಾರು 5 ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿರುವುದು ಸಂತೋಷದ ವಿಚಾರ ಎಂದು ಹೇಳಿದ್ದಾರೆ.

ಗಾಜಿನಮನೆಯಲ್ಲಿ ಸಿದ್ಧಪಡಿಸಿರುವ `ಪ್ರಜಾಪ್ರಭುತ್ವ ನಡೆದು ಬಂದ ದಾರಿ’ ಎಂಬ ಪರಿಕಲ್ಪನೆಯ ವಿನ್ಯಾಸವು ಆರನೇ ಶತಮಾನದಿಂದ ಇಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿತ್ತು ಎಂಬುದನ್ನು ಹೇಳುತ್ತದೆ. ಬುದ್ಧರ ಕಾಲ, ಅನುಭವ ಮಂಟಪ, ಸ್ವಾತಂತ್ರ್ಯ ಚಳುವಳಿ, ಸಂವಿಧಾನ, ಸಂಸತ್ ಭವನ ಎಲ್ಲವನ್ನು ಸುಂದರವಾಗಿ ವಿನ್ಯಾಸಗೊಳಿಸುವ ಮೂಲಕ ಪ್ರಪಂಚಕ್ಕೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ವಿವರಿಸಲಾಗಿದೆ ಎಂದು ಪ್ರಶಂಸಿದ್ದಾರೆ. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಒ ಕೆಎಂ ಗಾಯಿತ್ರಿ, ತೋಟಗಾರಿಕೆ ಉಪನಿರ್ದೇಶಕ ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕಹಬೀಬಾ ನಿಶಾತ್ ಸೇರಿದಂತೆ ಹಲವರಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ