ಅಧಿಕಾರಿಗಳ ಎಡವಟ್ಟು; ಮೈಸೂರು ದಸರಾ ಜಂಬೂಸವಾರಿ ಮುಗಿಸಿದ ಗಜಪಡೆಗೆ ಒಂದೂವರೆ ಗಂಟೆ ಕಾಲ ಲಾರಿಯಲ್ಲೇ ನಿಲ್ಲುವ ಶಿಕ್ಷೆ
Mysore Dasara 2024: ಅಧಿಕಾರಿಗಳ ಎಡವಟ್ಟಿನಿಂದಾಗಿ ಯಶಸ್ವಿಯಾಗಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಮುಗಿಸಿದ ಗಜಪಡೆಗೆ ಒಂದೂವರೆ ಗಂಟೆ ಕಾಲ ಲಾರಿಯಲ್ಲೇ ನಿಲ್ಲುವ ಶಿಕ್ಷೆ ನೀಡಿದ್ದಾರೆ.
ಮೈಸೂರು: ಅಧಿಕಾರಿಗಳು ಮಾಡಿದ ಎಡವಟ್ಟಿನಿಂದಾಗಿ ಯಶಸ್ವಿಯಾಗಿ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ಮುಗಿಸಿದ ಗಜಪಡೆಗೆ ಒಂದೂವರೆ ಗಂಟೆ ಕಾಲ ಲಾರಿಯಲ್ಲೇ ನಿಲ್ಲುವ ಶಿಕ್ಷೆ ನೀಡುವಂತಾಯಿತು. ಅಧಿಕಾರ ವರ್ಗವು ಮಾವುತರು ಕಾವಾಡಿಗರನ್ನು ಅಭಿನಂದಿಸುವುದನ್ನು ವಿಳಂಬ ಮಾಡಿದ ಕಾರಣ ಅಭಿಮನ್ಯು ಸೇರಿದಂತೆ ಎಲ್ಲಾ 14 ಆನೆಗಳು ಒಂದೂವರೆ ಗಂಟೆ ನಿಲ್ಲುವಂತಾಯಿತು. ಆನೆಗಳು ಲಾರಿಯನ್ನೇರಿದ ಬಳಿಕ ಅಧಿಕಾರಿಗಳು ಅಭಿನಂದಿಸಲು ಮುಂದಾದರು.
ಮಾವುತರು-ಕಾವಾಡಿಗರಿಗೆ ಗೌರವ ಧನ ವಿತರಣೆ
ಆನೆಗಳು ನಿಂತಿದ್ದ ಲಾರಿಗಳು ಇನ್ನೇನು ಹೊರಡಬೇಕಿತ್ತು. ಆದರೆ ಆಗ ಮಾವುತರು ಕಾವಾಡಿಗರನ್ನು ಸನ್ಮಾನಿಸಿದ ಅಧಿಕಾರಿಗಳು, ಮೈಸೂರು ದಸರಾ ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಕೆಲವು ಮಾವುತರು ಮತ್ತು ಕಾವಾಡಿಗರು ಲಾರಿ ಏರಿ ಕೂತಿದ್ದರು. ಮಾವುತರು ಮತ್ತು ಕಾವಾಡಿಗರಿಗೆ ಜಿಲ್ಲಾಡಳಿತದ ವತಿಯಿಂದ ತಲಾ 15 ಸಾವಿರ ಗೌರವಧನ ವಿತರಣೆ ಮಾಡಲಾಯಿತು. ಇದರ ಪರಿಣಾಮ ಒಂದೂವರೆ ಗಂಟೆ ಕಾಲ ಲಾರಿಯಲ್ಲೇ ನಿಂತು ಆನೆಗಳು ಪರಿತಪಿಸಿದವು.
ಆನೆಗಳನ್ನು ಗಂಟೆಗಟ್ಟಲೆ ಲಾರಿಯಲ್ಲೇ ನಿಲ್ಲುವಂತೆ ಮಾಡಿದ ಅಧಿಕಾರಿ ವರ್ಗಕ್ಕೆ ಜನರು ಹಿಡಿಶಾಪ ಹಾಕಿದರು. ಲಾರಿಯಲ್ಲಿ ನಿಂತಿದ್ದ ಆನೆಗಳನ್ನು ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ವಾಹನಗಳ ದಟ್ಟಣೆಯಿಂದಾಗಿ ವಾಹನ ಸವಾರರು ಪರದಾಟ ನಡೆಸಿದರು. ಮಧ್ಯಾಹ್ನ 3:30ರ ಸುಮಾರಿಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಸ್ವಸ್ಥಾನದತ್ತ ತೆರಳಿತು.
ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬೀಳ್ಕೊಡುಗೆ
ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ತಂಡವು ನಾಡಿನಿಂದ ಕಾಡಿನತ್ತ ಹೊರಟಿದೆ. ಒಂದೂವರೆ ತಿಂಗಳಿಂದ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ಗಜಪಡೆ, ಇದೀಗ ತಮ್ಮ ಸ್ಥಾನಕ್ಕೆ ಹೆಜ್ಜೆ ಹಾಕಿವೆ. ಜಂಬೂಸವಾರಿ ಮೆರವಣಿಗೆ ಮುಗಿದ 2 ದಿನಗಳ ಬಳಿಕ ಸ್ವಸ್ಥಾನದತ್ತ ಹೊರಟ 14 ಆನೆಗಳಿಗೆ ಅರಮನೆ ಅಂಗಳದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಬೀಳ್ಕೊಡುಗೆ ನೀಡಲಾಯಿತು.