ತುಮಕೂರು-ಯಶವಂತಪುರ ಮೆಮು ರೈಲಿಗೆ ಸಚಿವ ವಿ ಸೋಮಣ್ಣ ಚಾಲನೆ; ಈ ರೈಲು ಓಡಾಟದ ಸಮಯ ಎಷ್ಟೊತ್ತಿಗೆ?
Sep 28, 2024 06:00 AM IST
ತುಮಕೂರು-ಯಶವಂತಪುರ ಮೆಮು ರೈಲಿಗೆ ಸಚಿವ ವಿ ಸೋಮಣ್ಣ ಚಾಲ
- Indian Railway: ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ಮಾರ್ಗವಾಗಿ ಸಂಚರಿಸುವ ನೂತನ ಮೆಮು ರೈಲಿಗೆ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಚಾಲನೆ ನೀಡಿದ್ದಾರೆ.
ತುಮಕೂರು: ತುಮಕೂರು-ಬೆಂಗಳೂರು ಮಾರ್ಗವಾಗಿ ಸಂಚರಿಸುವ ನೂತನ ಮೆಮು ರೈಲಿಗೆ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಅವರು ಶುಕ್ರವಾರ (ಸೆಪ್ಟೆಂಬರ್ 27) ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಜಿಲ್ಲೆಯು ಅತೀವೇಗವಾಗಿ ಬೆಳೆಯುತ್ತಿದ್ದು, ಬೆಂಗಳೂರು ತುಮಕೂರು ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯ ಜನರ ಅನುಕೂಲಕ್ಕಾಗಿ ಭಾನುವಾರ ಹೊರತುಪಡಿಸಿ ಈ ರೈಲು ಪ್ರತಿದಿನ ಬೆಳಗ್ಗೆ 8.45 ಗಂಟೆಗೆ ತುಮಕೂರಿನಿಂದ ಹೊರಟು 10.25 ಗಂಟೆಗೆ ಯಶವಂತಪುರ ತಲುಪಲಿದೆ. ಮತ್ತು ಸಂಜೆ 5.40 ಗಂಟೆಗೆ ಯಶವಂತಪುರದಿಂದ ಹೊರಟು 7.15 ಗಂಟೆಗೆ ತುಮಕೂರು ತಲುಪಲಿದೆ ಎಂದು ತಿಳಿಸಿದ್ದಾರೆ.
ರಾಯದುರ್ಗ ತುಮಕೂರು ರೈಲ್ವೆ ಯೋಜನೆ
ತುಮಕೂರು-ಬೆಂಗಳೂರು ಮಾರ್ಗವಾಗಿ ಸಂಚರಿಸುವ ರೈಲುಗಳ ಸಂಖ್ಯೆಯು ಹೆಚ್ಚಾಗಿದ್ದು, 2 ಲೈನ್ ರೈಲ್ವೆ ಹಳಿಯನ್ನು 4 ಲೈನ್ ರೈಲ್ವೆ ಹಳಿಗಳಾಗಿ ಮಾಡಲು ಅನುಮೋದನೆ ನೀಡಲಾಗಿದೆ. ಸುಮಾರು 220 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ವಯಂ ಚಾಲಿತ ಸಿಗ್ನಲ್ ಸ್ಥಾಪಿಸಲಾಗಿದೆ ಮತ್ತು 2026 ಡಿಸೆಂಬರ್ ಅಥವಾ 2027 ಮಾರ್ಚ್ ಅಂತ್ಯದೊಳಗೆ ರಾಯದುರ್ಗ ತುಮಕೂರು ರೈಲ್ವೆ ಯೋಜನೆಗೆ ಪ್ರಧಾನ ಮಂತ್ರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
300 ಕೋಟಿ ರೂ ಬಿಡುಗಡೆ
ನಗರ ಶಾಸಕ ಜಿಬಿ ಜ್ಯೋತಿ ಗಣೇಶ್ ಮಾತನಾಡಿ, ನೂತನವಾಗಿ ಮೆಮೊ ರೈಲು ಸಂಚಾರದಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರಲ್ಲದೇ ಜಿಲ್ಲೆಯಲ್ಲಿನ ರೈಲ್ವೆ ಕೆಳ ಸೇತುವೆ ಮತ್ತು ಮೇಲ್ಸೆತುವೆ ಕಾಮಗಾರಿಗೆ ಸುಮಾರು 300 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸುರೇಶ್ ಗೌಡ, ಸುರೇಶ್ ಬಾಬು, ಎಂಟಿ ಕೃಷ್ಣಪ್ಪ, ಮಾಜಿ ಸಂಸದ ಜಿಎಸ್ ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆವಿ ಅಶೋಕ್, ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಯೋಗೀಶ್ ಮೋಹನ್, ನೈರುತ್ಯ ರೈಲ್ವೆ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನುಪ್ ದಯಾನಂದ, ಬೆಂಗಳೂರು ವಿಭಾಗ ಹೆಚ್ಚುವರಿ ವ್ಯವಸ್ಥಾಪಕ ಪರೀಕ್ಷಿತ್ ಮೋಹನ್ ಪೊರ್ರ್ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.