ನಮಗೂ ನಿಮಗೂ ಅಲ್ಲ, ರೈಲಿಗೂ ತಟ್ಟಿತು ಬೆಂಗಳೂರು ಟ್ರಾಫಿಕ್ ಬಿಸಿ; ದಟ್ಟಣೆ ಕಾರಣ ರೈಲನ್ನೇ ನಿಲ್ಲಿಸಿದ್ರು, ವಿಡಿಯೋ ವೈರಲ್
Bengaluru News: ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿರುವ ರೈಲು ಸಿಲುಕಿರುವ ಘಟನೆ ಹೊರ ವರ್ತುಲ ರಸ್ತೆಯ ಮುನ್ನೇಕೊಳಲ ರೈಲ್ವೆ ಗೇಟ್ ಬಳಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಗರದ ಸಂಚಾರ ದಟ್ಟಣೆ ಎಷ್ಟು ಕೆಟ್ಟದಾಗಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಮತ್ತೊಂದಿಲ್ಲ.
ಬೆಂಗಳೂರು: ನಗರದ ಟ್ರಾಫಿಕ್ ಎಂಥಹದ್ದು ಎಂಬುದು ಇಡೀ ಜಗತ್ತಿಗೆ ಗೊತ್ತು. ಅದೀಗ ಮತ್ತೆ ಸಾಬೀತಾಗಿದೆ. ಅಲ್ಲದೆ, ಮತ್ತೊಂದು ಹಂತಕ್ಕೂ ಕೊಂಡೊಯ್ದಿದೆ. ಟ್ರಾಫಿಕ್ ಸಮಸ್ಯೆಯ ಬಿಸಿ ವಾಹನ ಸವಾರರಿಗೆ ಮಾತ್ರವಲ್ಲ, ರೈಲಿಗೂ ತಟ್ಟಿದೆ. ವಾಹನಗಳ ದಟ್ಟಣೆಯ ಕಾರಣ ರೈಲು ಬರುತ್ತಿದ್ದರೂ ರೈಲ್ವೆ ಗೇಟುಗಳನ್ನು ಮುಚ್ಚಲಾಗಿಲ್ಲ. ಅಷ್ಟರ ಮಟ್ಟಿಗೆ ಟ್ರಾಫಿಕ್ ಕಾಡಿತ್ತು. ಹೀಗಾಗಿ ಬರುತ್ತಿದ್ದ ರೈಲನ್ನೇ ನಿಲ್ಲಿಸಬೇಕಾಯಿತು. ಬೆಂಗಳೂರು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿರುವ ರೈಲಿನ ವಿಡಿಯೋ ಮತ್ತು ವಾಹನ ದಟ್ಟಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನಗರದ ಟ್ರಾಫಿಕ್ ಸಮಸ್ಯೆ ಎಷ್ಟು ಕೆಟ್ಟದಾಗಿದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದರೂ ತಪ್ಪಾಗಲ್ಲ.
ಸುಧೀರ್ ಚಕ್ರವರ್ತಿ ಎಂಬವರು ಇನ್ಸ್ಟಾಗ್ರಾಂ ಬಳಕೆದಾರರು ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಕಾರಣ ರೈಲನ್ನು ನಿಲ್ಲಿಸುವ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಬೆಂಗಳೂರಿನ ಹೊರ ವರ್ತುಲ ರಸ್ತೆಯ ಮುನ್ನೇಕೊಳಲ ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿದೆ. ಕೇವಲ ನಾನು ಅಥವಾ ನೀವು ಮಾತ್ರವಲ್ಲ, ರೈಲುಗಳು ಸಹ ಬೆಂಗಳೂರು ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಾಸ್ಯಾಸ್ಪದವಾಗಿ ಕ್ಯಾಪ್ಶನ್ ಹಾಕಿದ್ದಾರೆ. ಈ ವಿಡಿಯೋ ವೈರಲ್ ಆದಾಗಿನಿಂದ ಬಗೆ ಬಗೆ ಮೀಮ್ಸ್ಗಳು ವೈರಲ್ ಆಗುತ್ತಿವೆ. ಒಂದೊಂದು ಮೀಮ್ಸ್ ಕೂಡ ಒಂದಕ್ಕಿಂತ ಒಂದು ಫನ್ನಿಯಾಗಿದ್ದು, ನೀವು ನಗದೆ ಇರಲಾರರು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಿಲುಕದವರೇ ಯಾರೂ ಇಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ. ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ವೈರಲ್ ವೀಡಿಯೊವನ್ನು ಚಿತ್ರೀಕರಿಸಿದ ಚಕ್ರವರ್ತಿ, ‘ಮುನ್ನೇಕೊಳಲ ರೈಲ್ವೆ ಗೇಟ್ ಪ್ರದೇಶದಲ್ಲಿ ಸಂಚಾರ ಭಯಾನಕವಾಗಿದೆ. ನಾವು ಇದನ್ನು ಪ್ರತಿದಿನ ಎದುರಿಸುತ್ತೇವೆ. ಈ ಪ್ರದೇಶದಲ್ಲಿ ಸರಿಯಾದ ಸಂಚಾರ ನಿರ್ವಹಣೆ ಇಲ್ಲ, ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ’ ಎಂದು ಹೇಳಿದ್ದಾರೆ. ಟೆಕ್ ರಾಜಧಾನಿಯಲ್ಲಿ ದೈನಂದಿನ ಪ್ರಯಾಣಿಕರ ಜೀವನದ ವಾಸ್ತವತೆಯನ್ನು ಪ್ರದರ್ಶಿಸುವ ಈ ವೀಡಿಯೊ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿತು.
ಸಾಕಷ್ಟು ಮಂದಿ ಈ ಬಗ್ಗೆ ಪ್ರತಿಕ್ರಿಯಿಸಿ, ಇದು ಮುನ್ನೇಕೊಳಲ ರೈಲ್ವೆ ಕ್ರಾಸಿಂಗ್ - ಈ ಗೇಟ್ ದಾಟುವುದು ಅತ್ಯಂತ ಸವಾಲಿನ ಕೆಲಸವಾಗಿರುತ್ತದೆ. ಏಕೆಂದರೆ ದಾರಿಯ ನಾಲ್ಕು ಬದಿಯ ಗೇಟ್ ತೆರೆದೇ ಇರುತ್ತದೆ. ಅಧಿಕಾರಿಗಳು ಇದರ ಪರಿಹಾರಕ್ಕೆ ಮುಂದಾಗಬೇಕೆಂದು ಕೋರಿದ್ದಾರೆ. ಮತ್ತೊಬ್ಬ ನೆಟ್ಟಿಗ, ‘ಇದು ಐಟಿ ಕೊಳೆಗೇರಿ ಮಹದೇವಪುರ ಕ್ಷೇತ್ರದಲ್ಲಿದೆ. ದಯವಿಟ್ಟು ಇದನ್ನು ನೋಡಿ, ತೆರಿಗೆದಾರರಿಗೆ ಸ್ವಲ್ಪ ಘನತೆಯನ್ನು ಪುನಃಸ್ಥಾಪಿಸಿ ಮತ್ತು ನಮ್ಮ ಜೀವಗಳನ್ನು ಉಳಿಸಿ’ ಎಂದು ಕೇಳಿದ್ದಾರೆ.
ಏತನ್ಮಧ್ಯೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಮೆಮ್ ಫೆಸ್ಟ್ ಅನ್ನು ಹುಟ್ಟುಹಾಕಿದೆ. ‘ಲೋಕೋ ಪೈಲಟ್ ಮತ್ತೊಂದು ಟ್ರಾಫಿ ಇಲ್ಲದ ಶಾರ್ಟ್ ಕಟ್ ರಸ್ತೆಯನ್ನು ಗೂಗಲ್ ಮ್ಯಾಪ್ ನೋಡಿ ಎಂದು ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಹೇಳಿದ್ದಾರೆ. 'ಜಿಟಿಎ 6 ಅನ್ನು ಬೆಂಗಳೂರಿನಲ್ಲಿ ತಯಾರಿಸಿದರೆ, ನಾನು ರೈಲನ್ನು ನಿಲ್ಲಿಸಬಹುದು" ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಆದಾಗ್ಯೂ, ತಾಂತ್ರಿಕ ಸಮಸ್ಯೆಗಳಿಂದಾಗಿ ರೈಲು ನಿಂತಿದೆಯೇ ಅಥವಾ ರಸ್ತೆಯ ನಿಜವಾದ ಸಂಚಾರವು ಲೋಕೋ ಪೈಲಟ್ ನಿಲ್ಲಿಸಲು ಕಾರಣವಾಗಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.