ಮುಡಾ ಹಗರಣ, 3 ಗಂಟೆಗಳ ಕಾಲ ಸಿಎಂ ಪತ್ನಿ ಪಾರ್ವತಿ ವಿಚಾರಣೆ; ಲೋಕಾಯುಕ್ತ ಕೇಳಿದ 20 ಪ್ರಶ್ನೆಗಳ ಪಟ್ಟಿ ಇಲ್ಲಿದೆ
Oct 25, 2024 05:47 PM IST
ಪಾರ್ವತಿ, ಸಿದ್ದರಾಮಯ್ಯ, ಟಿಜೆ ಉದೇಶ್.
- ಮೈಸೂರು ಲೋಕಾಯುಕ್ತ ಪೊಲೀಸರು ಸದ್ದಿಲ್ಲದೇ ಸಿಎಂ ಪತ್ನಿ ಹಾಗೂ ಎ2 ಆರೋಪಿ ಪಾರ್ವತಿ ವಿಚಾರಣೆ ನಡೆಸಿದ್ದಾರೆ. ಗೌಪ್ಯ ಸ್ಥಳದಲ್ಲಿ ಎಸ್‌ಪಿ ಟಿಜೆ ಉದೇಶ್ ನೇತೃತ್ವದಲ್ಲಿ ಪಾರ್ವತಿ ವಿಚಾರಣೆ ನಡೆಸಿದ್ದಾರೆ.
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದ ತನಿಖೆಗೆ ತೀವ್ರಗೊಂಡಿದೆ. ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಲೋಕಾಯುಕ್ತ ಪೊಲೀಸರು ಸದ್ದಿಲ್ಲದೇ ಸಿಎಂ ಪತ್ನಿ ಹಾಗೂ ಎ2 ಆರೋಪಿ ಪಾರ್ವತಿ ವಿಚಾರಣೆ ನಡೆಸಿದ್ದಾರೆ. ಲೋಕಾಯುಕ್ತ ಕಚೇರಿಯಲ್ಲೇ ಎಸ್‌ಪಿ ಟಿಜೆ ಉದೇಶ್ ನೇತೃತ್ವದಲ್ಲಿ ವಿಚಾರಣೆ ನಡೆದಿದ್ದು, ಪಾರ್ವತಿ ಅವರಿಂದ ವಿಡಿಯೋ ಆಧಾರಿತ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅದಕ್ಕೂ ಮುನ್ನ ಎ4, ಎ3 ಆರೋಪಿಗಳ ವಿಚಾರ ನಡೆಸಿದ್ದರು.
ಇಡೀ ಪ್ರಕರಣದಲ್ಲಿ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಪಾರ್ವತಿ, 14 ನಿವೇಶನಗಳನ್ನು ವಾಪಸ್ ನೀಡಿದ ಸಂದರ್ಭದಲ್ಲೂ ಗೌಪ್ಯತೆ ಕಾಪಾಡಿಕೊಂಡಿದ್ದರು. ಸಬ್ ರಿಜಿಸ್ಟರ್ ಅವರು ಪಾರ್ವತಿ ಇರುವಲ್ಲಿಗೆ ಹೋಗಿ ಖಾತೆ ರದ್ದು ಕೆಲಸ ಮಾಡಿದ್ದರು. ಇದೀಗ ಲೋಕಾಯುಕ್ತ ವಿಚಾರಣೆಯಲ್ಲೂ ಗೌಪ್ಯತೆ ಕಾಪಾಡಿಕೊಂಡಿದ್ದು, ಸಾಲು ಸಾಲು ಪ್ರಶ್ನೆಗಳನ್ನು ಎದುರಿಸಿದ್ದಾರೆ. ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಪಾರ್ವತಿ ಅವರು ಎಲ್ಲದಕ್ಕೂ ನಿರಾತಂಕವಾಗಿ ಉತ್ತರ ನೀಡಿದ್ದಾರೆ. ಪಾರ್ವತಿ ಅವರು ಎದುರಿಸಿದ ಪ್ರಶ್ನೆಗಳ ಪಟ್ಟಿ ಇಲ್ಲಿದೆ ನೋಡಿ.
ನಿರಂತರ 3 ಗಂಟೆ ಎಸ್‌ಪಿ ಉದೇಶ್ ಕೇಳಿದ 20 ಪ್ರಶ್ನೆಗಳು
1. ನಿಮ್ಮ ಹೆಸರೇನು?
2. ನಿಮ್ಮ ಪತಿಯ ಹೆಸರೇನು?
3. ನಿಮ್ಮ ಮನೆಯ ವಿಳಾಸ ತಿಳಿಸಿ?
4. ನೀವು ಯಾವ ಉದ್ಯೋಗ ಮಾಡುತ್ತೀರಿ?
5. ನಿಮ್ಮ ಆದಾಯದ ಮೂಲ ಯಾವುದು?
6. ನಿಮಗೆ ಕೆಸರೆಯ ಸರ್ವೆ ನಂಬರ್ 464 ರ 3.14 ಎಕರೆ ಭೂಮಿ ಬಗ್ಗೆ ಗೊತ್ತಾ?
7. ನಿಮ್ಮ ಅಣ್ಣ ಮಲ್ಲಿಕಾರ್ಜುನಸ್ವಾಮಿ ಭೂಮಿ ಖರೀದಿ ಮಾಡಿದ್ದರ ಬಗ್ಗೆ ಗೊತ್ತಾ?
8. ನಿಮಗೆ ನಿಮ್ಮ ಅಣ್ಣ ನೀಡಿದ ಭೂಮಿ ಹಿನ್ನೆಲೆ ಗೊತ್ತಾ?
9. 2010ರಲ್ಲಿ ಭೂಮಿ ದಾನ ಮಾಡಿದಾಗ ವಿಚಾರಣೆ ನಡೆಸಿದ್ರಾ?
10. ಯಾವ ಸ್ಥಳದಲ್ಲಿ ಭೂಮಿಯನ್ನು ರಿಜಿಸ್ಟರ್ ಮಾಡಿಸಿಕೊಂಡ್ರಿ?
11. ನಿಮ್ಮ ಭೂಮಿ ಮುಡಾ ಅಕ್ವೇರ್ ಮಾಡಿಕೊಂಡಿದ್ದು ತಿಳಿದಿತ್ತಾ?
12. ನಿಮ್ಮ ಭೂಮಿಗೆ ಬದಲಾಗಿ, ಬೇರೆಡೆ ಬದಲಿ ಭೂಮಿ ಕೇಳಿದ್ರಾ? ಅಥವಾ ಹಣ ಕೇಳಿದ್ರಾ?
13. ನಿಮಗೆ ಭೂಮಿ ಬದಲಿಗೆ ಸೈಟ್ ತೆಗೆದುಕೊಳ್ಳಿ ಎಂದವರು ಯಾರು?
14. 14 ಸೈಟ್ ಪಡೆದುಕೊಳ್ಳಲು ನೀವು ಅರ್ಜಿ ಹಾಕಿದ್ರಾ?
15. ಅರ್ಜಿಯಲ್ಲಿ ಹಾಕಿರುವ ಸಹಿ ನಿಮ್ಮದೆಯಾ? ಅಥವಾ ನಿಮ್ಮ ಪರವಾಗಿ ಬೇರೆಯವರು ಸಹಿ ಹಾಕಿದ್ರಾ?
16. ದಾನಪತ್ರದ ಅಸಲಿ ದಾಖಲಾತಿಗಳು ನಿಮ್ಮ ಬಳಿ ಇವೆಯಾ?
17. 14 ಸೈಟ್ ಗಳ ಅಸಲಿ ದಾಖಲಾತಿಗಳು ನಿಮ್ಮ ಬಳಿ ಇವೆಯಾ?
18. ಸೈಟ್ಗಳನ್ನು ವಾಪಸ್ ಯಾಕೆ ನೀಡಿದ್ರಿ?
19. ಈ ಎಲ್ಲಾ ವಿಚಾರಗಳು ನಿಮ್ಮ ಪತಿ ಸಿದ್ದರಾಮಯ್ಯ, ಪುತ್ರ ಯತೀಂದ್ರ ಸೇರಿದಂತೆ ಕುಟುಂಬದವರಿಗೆ ಗೊತ್ತಾ?
20. ನೀವು ನೀಡಿರುವ ಎಲ್ಲಾ ಹೇಳಿಕೆ ಹಾಗು ದಾಖಲೆಗಳು ಸರಿ ಇವೆಯಾ?