ಮುಡಾ ಪ್ರಕರಣ, ಅಧಿಕಾರಿಗಳು ಸೇರಿ 6 ಮಂದಿಗೆ ಇಡಿ ನೋಟಿಸ್; ಸಮಗ್ರ ದಾಖಲೆ, ನೆಂಟರ ವಿವರ ತರುವಂತೆ ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಪ್ರಕರಣ, ಅಧಿಕಾರಿಗಳು ಸೇರಿ 6 ಮಂದಿಗೆ ಇಡಿ ನೋಟಿಸ್; ಸಮಗ್ರ ದಾಖಲೆ, ನೆಂಟರ ವಿವರ ತರುವಂತೆ ಸೂಚನೆ

ಮುಡಾ ಪ್ರಕರಣ, ಅಧಿಕಾರಿಗಳು ಸೇರಿ 6 ಮಂದಿಗೆ ಇಡಿ ನೋಟಿಸ್; ಸಮಗ್ರ ದಾಖಲೆ, ನೆಂಟರ ವಿವರ ತರುವಂತೆ ಸೂಚನೆ

MUDA Case: ಮುಡಾ ಪ್ರಕರಣಕ್ಕೆ ಸಂಬಂಧಿಸಿ ಅಧಿಕಾರಿಗಳು ಸೇರಿ ಒಟ್ಟು 6 ಮಂದಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿದೆ. ಸಮಗ್ರ ದಾಖಲೆ ಸಹಿತ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (The Hindu)

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ನೀಡಿದೆ. ಮುಡಾ ಆಯುಕ್ತ ರಘುನಂದನ್, ಅಧಿಕಾರಿ ಶೃತಿ, ತಹಶೀಲ್ದಾರ್ ರಾಜಶೇಖರ್, ಎಫ್​​ಡಿಸಿ ರವಿ, ಪ್ರಶಾಂತ್ ಹಾಗೂ ಟೈಪಿಸ್ಟ್ ಚಂದ್ರುಗೆ ನೋಟಿಸ್ ನೀಡಲಾಗಿದೆ. ಸಮಗ್ರ ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ತಂದೆ, ತಾಯಿ, ಮಕ್ಕಳು, ಸಹೋದರ-ಸಹೋದರಿಯರು, ಅತ್ತೆ-ಮಾವ ಸೇರಿದಂತೆ ನೆಂಟರ ವಿವರ ಜೊತೆ ಬರುವಂತೆ ಸೂಚಿಸಲಾಗಿದೆ.

ಬ್ಯಾಂಕ್ ಖಾತೆ, ಪಾನ್, ಆಸ್ತಿ ಸೇರಿದಂತೆ ಹಲವು ಮಾಹಿತಿ ತರುವಂತೆ ಸೂಚಿಸಲಾಗಿದೆ. ಇಡಿ ನೋಟಿಸ್ ಹಿನ್ನೆಲೆಯಲ್ಲಿ ಇಂದು (ಅಕ್ಟೋಬರ್ 25) ಬೆಂಗಳೂರು ಇಡಿ ಕಚೇರಿ ಪ್ರವೇಶಿಸಲಿರುವ ಮುಡಾ ಸಿಬ್ಬಂದಿ ವಿಚಾರಣೆಗೆ ಒಳಪಡಲಿದ್ದಾರೆ. ಮುಡಾದಲ್ಲಿ ನಡೆದಿರುವ ಅಕ್ರಮ ಪತ್ತೆಗೆ ಇಡಿಯಿಂದ ಸ್ಪೆಷಲ್‌ ಸಾಫ್ಟ್‌ವೇರ್ ಬಳಸಲಾಗಿದೆ. 5 ರಿಂದ 6 ಸಾವಿರ ನಿವೇಶನಗಳ ಡಿಜಿಟಲೈಸ್ ದಾಖಲೆಗಳು, 8 ಸಾವಿರ ದಾಖಲಾತಿ ಪುಟಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಕಳೆದ ವಾರ 2 ದಿನಗಳ ಇಡಿ ದಾಳಿ ನಡೆಸಿ 8,000 ಪುಟಗಳ ದಾಖಲೆ ವಶಪಡಿಸಿಕೊಂಡಿತ್ತು.

ಇದರ ಬೆನ್ನಲ್ಲೇ ರಾಜಕಾರಣಿಗಳು, ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು, ನೌಕರರು ಹಾಗು ಕುಟುಂಬಸ್ಥರ ಎದೆಯಲ್ಲಿ ಢವ-ಢವ ಸೃಷ್ಟಿಯಾಗಿದೆ. ಯಾರ ಹೆಸರಿನಲ್ಲಿ ಸ್ಥಿರಾಸ್ತಿ ನೋಂದಣಿಯಾಗಿದೆ? ನಿವೇಶನಗಳ ಖರೀದಿ, ಹಣಕಾಸು ವ್ಯವಹಾರ, ಮಾರಾಟ, ವರ್ಗಾವಣೆ ಕುರಿತು ಶೋಧ ನಡೆಯುತ್ತಿದೆ. ಆಪ್ತರು, ಬೇನಾಮಿ‌ ಹೆಸರಲ್ಲಿ ಆಸ್ತಿ ಮಾಡಿಕೊಂಡಿರುವ ಪತ್ತೆ ಕಾರ್ಯ ಮುಂದುವರೆದಿದ್ದು, 2020ರಿಂದ ಈಚೆಗೆ ನೋಂದಣಿ ಆಗಿರುವ ಆಸ್ತಿಗಳು ಪತ್ತೆಯಾಗಿವೆ. ಮೊಬೈಲ್ ನಂಬರ್, ಆಧಾರ್ ನಂಬರ್​​​ಗಳ ಮೂಲಕ ಪತ್ತೆ ಕಾರ್ಯ ನಡೆಯುತ್ತಿದೆ. ದಾಖಲಾತಿಗಳ ಮೂಲಕ ವಂಶವೃಕ್ಷ ಕೂಡ ಶೋಧ ನಡೆಯುತ್ತಿದೆ.

ಎಲ್ಲರ ಮೊಬೈಲ್ ನಂಬರ್ ಸಂಗ್ರಹ

ಮುಡಾದ ಮಾಜಿ ಅಧ್ಯಕ್ಷರು, ಮಾಜಿ ಹಾಗು ಹಾಲಿ ಆಯುಕ್ತರು, ಆಡಳಿತ ಮಂಡಳಿ ಸದಸ್ಯರು, ಮಾಜಿ ಸದಸ್ಯರು, ಕಾರ್ಯದರ್ಶಿ, ಮಾಜಿ ಕಾರ್ಯದರ್ಶಿಗಳು, ವಿಶೇಷ ಭೂ ಸ್ವಾಧೀನ ಅಧಿಕಾರಿಗಳು, ನಗರ ಯೋಜಕ ಸಿಬ್ಬಂದಿಗಳು,ವಿಶೇಷ ತಹಶೀಲ್ದಾರ್​​ಗಳು, ವಲಯಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಸೈಟ್ ಸೆಕ್ಷನ್ ಅಧಿಕಾರಿಗಳು, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ನೌಕರರು , ಡಿ ಗ್ರೂಪ್‌ ಸೇರಿ ಮುಡಾದ ಎಲ್ಲಾ ಸಿಬ್ಬಂದಿ ಮತ್ತು ಅವರ ಸಂಬಂಧಿಕರ ಫೋನ್ ನಂಬರ್​​​ಗಳನ್ನು ಸಂಗ್ರಹಿಸಲಾಗಿದೆ. ಇದರ ಜೊತೆಗೆ ಡೀಲರ್​​ಗಳು, ಮಧ್ಯವರ್ತಿಗಳ ನಂಬರ್ ಕೂಡ ಸಂಗ್ರಹ ಮಾಡಲಾಗಿದ್ದು, 2020 ರಿಂದ 2023 ವರಗೆ ಯಾರ ಯಾರ ಸಂಪರ್ಕದಲ್ಲಿದ್ದರು ಎಂಬುದರ ತನಿಖೆ ನಡೆಯುತ್ತಿದೆ.

ಸ್ನೇಹಮಯಿ ಕೃಷ್ಣ ಆಯ್ತು ಈಗ ಗಂಗರಾಜು

ಪಾರ್ವತಿ ಅವರ ಹೆಸರಿನಲ್ಲಿ ಮತ್ತೊಂದು ಭೂ ಅಕ್ರಮದ ಕುರಿತು ಧನಿ ಎತ್ತಿದ್ದ ಆರ್​​ಟಿಐ ಕಾರ್ಯಕರ್ತ ಎನ್ ಗಂಗರಾಜು ಅವರಿಗೂ ಇಡಿ ನೋಟಿಸ್ ಜಾರಿ ಮಾಡಲಾಗಿದೆ. ಅಕ್ಟೋಬರ್ 22ರಂದು ನೋಟಿಸ್ ಜಾರಿ ಮಾಡಿದೆ. ಕೆಆರ್‌ಎಸ್ ರಸ್ತೆಯಲ್ಲಿ 20 ಗುಂಟೆ ಜಮೀನು ಖರೀದಿ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಇವರು ಮೊದಲ ಪ್ರಕರಣದಲ್ಲಿ ಕೂಡ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಕೆಸರೆಯ ಸರ್ವೇ ನಂಬರ್ 464 ಹಾಗು 14 ಸೈಟ್ ವಿಚಾರದಲ್ಲಿ ದಾಖಲೆ ಬಿಡುಗಡೆ ಮಾಡಿದ್ದರು. ಇದೀಗ ಗಂಗರಾಜು ಖುದ್ದು ದಾಖಲೆಗಳೊಂದಿಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿತ್ತು.

Whats_app_banner