logo
ಕನ್ನಡ ಸುದ್ದಿ  /  ಕರ್ನಾಟಕ  /  Mysore Flood: ಕಬಿನಿಯಿಂದ ಭಾರೀ ನೀರು , ಕೆಆರ್‌ಎಸ್‌ನಿಂದಲೂ ಹೆಚ್ಚಳ ಸಾಧ್ಯತೆ, ಕಾವೇರಿ ನದಿಪಾತ್ರ ಸುರಕ್ಷತೆಗೆ ಮುಂದಾದ ಮೈಸೂರು ಜಿಲ್ಲಾಡಳಿತ

Mysore Flood: ಕಬಿನಿಯಿಂದ ಭಾರೀ ನೀರು , ಕೆಆರ್‌ಎಸ್‌ನಿಂದಲೂ ಹೆಚ್ಚಳ ಸಾಧ್ಯತೆ, ಕಾವೇರಿ ನದಿಪಾತ್ರ ಸುರಕ್ಷತೆಗೆ ಮುಂದಾದ ಮೈಸೂರು ಜಿಲ್ಲಾಡಳಿತ

Umesha Bhatta P H HT Kannada

Jul 19, 2024 07:30 AM IST

google News

ಮೈಸೂರು ಜಿಲ್ಲೆಯಲ್ಲಿನ ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ಡಿಸಿ ಲಕ್ಷ್ಮಿಕಾಂತರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸಭೆ ನಡೆಸಿದರು.

    • Kabini Flood ಮೈಸೂರು ಜಿಲ್ಲೆಯಲ್ಲಿ ಕಬಿನಿ ಜಲಾಶಯದಿಂದ ತಲೆದೋರಿರುವ ಪ್ರವಾಹವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಪ್ರಯತ್ನಗಳು ನಡೆದಿವೆ.
ಮೈಸೂರು ಜಿಲ್ಲೆಯಲ್ಲಿನ ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ಡಿಸಿ ಲಕ್ಷ್ಮಿಕಾಂತರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸಭೆ ನಡೆಸಿದರು.
ಮೈಸೂರು ಜಿಲ್ಲೆಯಲ್ಲಿನ ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ಡಿಸಿ ಲಕ್ಷ್ಮಿಕಾಂತರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ ಸಭೆ ನಡೆಸಿದರು.

ಮೈಸೂರು: ಮೈಸೂರು ಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿದ್ದು, ಈಗಾಗಲೇ ಕಬಿನಿ ಜಲಾಶಯದಿಂದ ಸುಮಾರು 70,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅಲ್ಲದೆ ನುಗು ಡ್ಯಾಮ್ ನಿಂದಲೂ ನೀರನ್ನು ಹೊರ ಬಿಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ನದಿ ಪಾತ್ರದ ಗ್ರಾಮಗಳ ಜನರ ಸುರಕ್ಷತೆಗೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಲು ಮುಂದಾಗಬೇಕು. ಮುಂದಿನ ಶನಿವಾರದ ಒಳಗೆ ಕೆ.ಆರ್.ಎಸ್ ಜಲಾಶಯದಿಂದ ನೀರನ್ನು ಹೊರಬಿಡುವ ಸಂಭವವಿದ್ದು, ಟಿ.ನರಸೀಪುರ ತಾಲೂಕಿನ ನದಿ ಪಾತ್ರದ ಜನತೆ ಸುರಕ್ಷತೆ ಸೇರಿದಂತೆ ನಂಜನಗೂಡಿನ ನದಿ ಪಾತ್ರದ ಜನರ ಸುರಕ್ಷತೆಗಾಗಿ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಇಂದಿನಿಂದಲೇ ಅಧಿಕಾರಿಗಳು ಎಲ್ಲಾ ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಜನರಿಗೆ ಜಾಗೃತರಾಗಿ ಇರುವಂತೆ ಹಾಗೂ ನದಿಯ ಎರಡೂ ದಂಡೆಗಳಲ್ಲಿನ ಸಾರ್ವಜನಿಕರು ಹಾಗೂ ಜಾನು ವಾರಿಗಳ ರಕ್ಷಣೆಗಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಜಾಗೃತಿ ಮೂಡಿ ಸಬೇಕು ಎನ್ನುವ ಸೂಚನೆಯನ್ನು ಮೈಸೂರು ಜಿಲ್ಲಾಡಳಿತ ನೀಡಿದೆ.

ಅತಿಯಾದ ಮಳೆಯಿಂದ ಹಾನಿ ಉಂಟಾಗಿ ಯಾವುದೇ ಅಚಾತುರ್ಯ ಹಾಗೂ ಪ್ರಾಣಹಾನಿಗಳು ಸಂಭವಿಸದಂತೆ ಮೊದಲೇ ಪರಿಸ್ಥಿತಿಯನ್ನು ಅರಿತು ಅಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಕಳುಹಿಸಲು ಅಗತ್ಯ ಕ್ರಮ ವಹಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಬೇಕಾಗುವಂತಹ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉತ್ತಮ ಆಹಾರ, ಶುದ್ಧ ಕುಡಿಯುವ ನೀರು ಹಾಗೂ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಸೌಲಭ್ಯವನ್ನು ಒದಗಿಸಬೇಕು. ಅದಕ್ಕೆ ಬೇಕಾಗುವಂತಹ ಕ್ರಮವನ್ನು ಹಿಂದಿನಿಂದಲೇ ಕೈಗೊಳ್ಳಬೇಕು. ಎನ್ನುವುದು ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚನೆ.

ದ್ಯುತ್ ನಿಗಮದವರು ಗ್ರಾಮೀಣ ಪ್ರದೇಶದಲ್ಲಿ ಅತಿಯಾದ ಮಳೆ ಗಾಳಿಯಿಂದ ಮರಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಂದರ್ಭ ಉಂಟಾಗುತ್ತದೆ. ಇಂತಹ ಸನ್ನಿವೇಶಗಳು ಎದುರಾಗುವ ಮೊದಲೇ ಅವುಗಳಿಗೆ ಪರ್ಯಾಯವನ್ನು ಹುಡುಕಿ ಜನರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳು ಅತಿಯಾದ ಮಳೆ ಹಾಗೂ ಗಾಳಿಗೆ ಬೀಳುವ ಮರಗಳನ್ನು ಗುರುತಿಸಿ ಅವುಗಳನ್ನು ತಕ್ಷಣವೇ ತೆರವುಗೊಳಿಸಬೇಕು. ಅಲ್ಲದೆ ಹಲವಾರು ಕಡೆ ವಾಟರ್ ಬ್ಲಾಕಿಂಗ್ ಸಮಸ್ಯೆಗಳಿದ್ದು, ಅವುಗಳನ್ನು ಯಾವುದೇ ತಕ್ಷಣವೇ ಪರಿಹರಿಸಲು ನೈಟ್ ಟೀಮ್ ನೇಮಕ ಮಾಡಬೇಕು ಎನ್ನುವ ನಿರ್ದೇಶನವನ್ನೂ ನೀಡಲಾಗಿದೆ.

ಈಗಾಗಲೇ ನಂಜನಗೂಡು, ಸರಗೂರು ತಾಲೂಕುಗಳಲ್ಲಿ ಅತಿಯಾದ ಮಳೆಯಿಂದಾಗಿ ಬ್ರಿಡ್ಜ್ ಗಿಂತಲೂ ಮೇಲೆ ನೀರು ಹರಿಯುತ್ತಿರುವುದರಿಂದ ಅಲ್ಲಿನ ಜನರಿಗೆ ಹಾನಿ ಉಂಟಾಗುವ ಸಂಭವವಿರುತ್ತದೆ. ಹಾಗಾಗಿ ಅಧಿಕಾರಿಗಳು ಸಾರ್ವಜನಿಕರು ಬ್ರಿಡ್ಜ್ ಪ್ರದೇಶದಲ್ಲಿ ಓಡಾಡದಂತೆ ಮಾಹಿತಿ ನೀಡಬೇಕು. ಕುಡಿಯುವ ನೀರನ್ನು ಸರಬರಾಜು ಮಾಡುವ ಮೊದಲು ಅದರ ಗುಣಮಟ್ಟವನ್ನು ಪ್ರತಿದಿನವೂ ಪರೀಕ್ಷಿಸಬೇಕು. ಈ ವಿಷಯವಾಗಿ ಅಧಿಕಾರಿಗಳು ಯಾವುದೇ ನಿರ್ಲಕ್ಷ ತೋರದೆ ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಬೇಕು. ಮಕ್ಕಳಿಗೆ ಯಾವುದೇ ರೀತಿಯ ಹಾನಿ ಉಂಟಾಗದಂತೆ ತಡೆಯಲು ಶಿಥಿಲಗೊಂಡ ಶಾಲೆ ಹಾಗೂ ಅಂಗನವಾಡಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಬೇಕು ಎನ್ನುವ ಸೂಚನೆಯನ್ನೂ ನೀಡಲಾಗಿದೆ.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಕಂದಾಯ ಇಲಾಖೆಯವರು ಮಳೆಹಾನಿ ಸಂಭವಿಸಿದ್ದಲ್ಲಿ ಅವುಗಳ ಬಗ್ಗೆ ತಕ್ಷಣವೇ ಮಾಹಿತಿ ನೀಡಿ ತ್ವರಿತ ಪರಿಹಾರ ದೊರಕಿಸಲು ಮುಂದಾಗಬೇಕು. ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಲ್ಲಿ ಹಾನಿ ಉಂಟಾಗಿದ್ದರೆ, ಆ ಸ್ಥಳಕ್ಕೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಡಿಸಿ ಲಕ್ಷ್ಮಿಕಾಂತರೆಡ್ಡಿ ಹೇಳಿದ್ದಾರೆ.

ಕಾಳಜಿ ಕೇಂದ್ರಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಗತ್ಯವಿರುವ ಔಷಧಗಳನ್ನು ಇಟ್ಟುಕೊಳ್ಳಬೇಕು. ಒಂದು ವೇಳೆ ಆರೋಗ್ಯ ಸಮಸ್ಯೆ ಆದರೆ ತಕ್ಷಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದು ಮೈಸೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಗಾಯತ್ರಿ ನೀಡಿದ ಸೂಚನೆ.

ಸಿಇಒ ಭೇಟಿ

ಕಬಿನಿ ಜಲಾಶಯದಲ್ಲಿ ಹೊರಹರಿವು ಹೆಚ್ಚಳ ದಿಂದ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿರುವ ಹಿನ್ನೆಲೆ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯಿತ್ರಿ ಅವರು ನದಿ ಪಾತ್ರ ಹಾಗೂ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನ ಹುಳಿಮಾವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಕ್ಕಹಳ್ಳಿ, ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಜ್ಜಿಗೆ, ತೊರೆಮಾವು, ಹುಲ್ಲಹಳ್ಳಿ-ರಾಂಪುರ ಸೇತುವೆ, ನದಿ ಪ್ರಾಂತ್ಯದ ಪೌರಕಾರ್ಮಿಕರ ಕಾಲೋನಿ, ನಲ್ಲಿತಾಳಪುರ ಗ್ರಾಮ ಪಂಚಾಯಿತಿಯ ಕಡಬೂರು ಸೇತುವೆ ಸೇರಿದಂತೆ ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿ, ಸ್ಥಳೀಯರಿಂದ ಅಹವಾಲು ಕೇಳಿದರು. ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಕಪಿಲಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಟಾಸ್ಕ್ ಫೋರ್ಸ್ ತಂಡವು ಕಾರ್ಯಪ್ರವೃತ್ತರಾಗಬೇಕು. ನೀರಿನ‌ ಪ್ರಮಾಣ ಹೆಚ್ಚಾದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುಂತೆ, ಹಾಗೂ ಸ್ಥಳೀಯ ಈಜುಗಾರರನ್ನು ಗುರುತಿಸುಬೇಕು. ಪ್ರವಾಹ ಭೀತಿ ಪ್ರದೇಶದಲ್ಲಿ ಸ್ಥಳೀಯವಾಗಿ ಸಿಬ್ಬಂದಿ ನಿಯೋಜಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ