logo
ಕನ್ನಡ ಸುದ್ದಿ  /  ಕರ್ನಾಟಕ  /  ಯದುವೀರ್‌ಗೆ ಸಂಸದರಾದ ಬಳಿಕ ಮೊದಲ ಖಾಸಗಿ ದರ್ಬಾರ್‌, ಹತ್ತು ದಿನ ಹೊರಗೆ ಬರೋಲ್ಲ ಮೈಸೂರು- ಕೊಡಗು ಸಂಸದರು, ಹೇಗಿರಲಿದೆ ದರ್ಬಾರ್‌ ವೈಭವ

ಯದುವೀರ್‌ಗೆ ಸಂಸದರಾದ ಬಳಿಕ ಮೊದಲ ಖಾಸಗಿ ದರ್ಬಾರ್‌, ಹತ್ತು ದಿನ ಹೊರಗೆ ಬರೋಲ್ಲ ಮೈಸೂರು- ಕೊಡಗು ಸಂಸದರು, ಹೇಗಿರಲಿದೆ ದರ್ಬಾರ್‌ ವೈಭವ

Umesha Bhatta P H HT Kannada

Sep 18, 2024 04:23 PM IST

google News

ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಅವರು ಖಾಸಗಿ ದರ್ಬಾರ್‌ ಈ ಬಾರಿ ವಿಶೇಷ.

    • ಮೈಸೂರು ದಸರಾ ವೇಳೆ ಅರಮನೆಯಲ್ಲಿ ರಾಜವೈಭವ ಮರುಕಳಿಸಲಿದೆ. ಅಲ್ಲಿನ ಖಾಸಗಿ ದರ್ಬಾರ್‌ ಹಿಂದಿನ ಕಾಲದ ದಿನಗಳನ್ನು ನೆನಪಿಸಿ ಇಲ್ಲಿನ ಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿಯಲಿದೆ. ಹೀಗಿರಲಿದೆ ಮೈಸೂರು ಖಾಸಗಿ ದರ್ಬಾರ್‌.
ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಅವರು ಖಾಸಗಿ ದರ್ಬಾರ್‌ ಈ ಬಾರಿ ವಿಶೇಷ.
ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್‌ ಅವರು ಖಾಸಗಿ ದರ್ಬಾರ್‌ ಈ ಬಾರಿ ವಿಶೇಷ.

ಮೈಸೂರು: ರಾಜಾಧಿರಾಜ, ರಾಜಾ ಮಾರ್ತಾಂಡ, ಯದುಕುಲ ತಿಲಕ, ಯದುವೀರ್‌ ಮಹಾರಾಜರಿಗೆ ಬಹುಪರಾಕ್‌, ಬಹುಪರಾಕ್‌ ಎಂದು ಕೂಗುತ್ತಿದ್ದರೆ ಅತ್ತಕಡೆಯಿಂದ ರಾಜವಂಶಸ್ಥ ಹೆಜ್ಜೆ ಹಾಕುತ್ತಾ ಸಿಂಹಾಸನದತ್ತ ಬರುತ್ತಾರೆ. ವಂದಿ ಮಾಗದರು ಅಲ್ಲಿಯೇ ನಿಂತುಕೊಂಡು ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಿಂಹಾಸನ ಏರುವವರೆಗೂ ಬಹುಪರಾಕ್‌ ಹೇಳುತ್ತಲೇ ಇರುತ್ತಾರೆ. ಅರಮನೆಯ ರಾಜವೈಭೋಗ, ಪರಂಪರೆ, ಕುಟುಂಬದವರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಯದುವೀರ್‌ ಒಡೆಯರ್‌ ತಮ್ಮ ಖಾಸಗಿ ದರ್ಬಾರ್‌ ನಡೆಸುತ್ತಾರೆ. ರತ್ನ ಖಚಿತ ಸಿಂಹಾಸನವನ್ನು ಖಾಸಗಿ ದರ್ಬಾರ್‌ಗಾಗಿ ಅಣಿಗೊಳಿಸಿ ಕೊಡಲಾಗುತ್ತದೆ. ಒಂಬತ್ತು ದಿನಗಳ ಕಾಲ ಮೈಸೂರು ಅರಮನೆ ಆವರಣದಲ್ಲಿ ಶತಮಾನಗಳ ಹಿಂದಿನ ಆ ರಾಜವೈಭವ ಮರಳುತ್ತದೆ. ಒಂಟೆ, ಆನೆ, ಕುದುರೆ, ಪಟ್ಟದ ಹಸುಗಳ ಮೆರವಣಿಗೆ, ಪೂಜಾ ವಿಧಿ ವಿಧಾನಗಳು ನಿತ್ಯ ನಡೆದು ಖಾಸಗಿ ದರ್ಬಾರ್‌ ಕೂಡ ಒಂದು ಗಂಟೆ ಕಾಲ ನೆರವೇರುತ್ತದೆ.

ಒಂಬತ್ತು ದಿನದ ಚಟುವಟಿಕೆ

ರಾಜವಂಶಸ್ಥರಾಗಿರುವ ಯದುವೀರ್‌ ಒಡೆಯರ್‌ ಅವರಿಗೆ ಇದು ಒಂಬತ್ತನೇ ವರ್ಷದ ಖಾಸಗಿ ದರ್ಬಾರ್‌. ಈ ಬಾರಿ ಕೊಂಚ ಭಿನ್ನ. ಏಕೆಂದರೆ ಅವರೀಗ ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದ ಸಂಸದ. ನಾಲ್ಕು ತಿಂಗಳ ಹಿಂದೆ ಅವರು ಸಂಸದರಾಗಿ ಆಯ್ಕೆಯಾಗಿ ಜನಪ್ರತಿನಿಧಿಯಾಗಿದ್ದಾರೆ. ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕೂಡ ನಾಲ್ಕು ಬಾರಿ ಸಂಸದರಾಗಿದ್ದರು. ತಾತ ಜಯಚಾಮರಾಜೇಂದ್ರ ಒಡೆಯರ್‌ ಕೊನೆಯ ಮಹಾರಾಜರಾಗಿ ನಂತರ ರಾಜ್ಯಪಾಲರೂ ಆಗಿದ್ದವರು. ಅದರ ಹಿಂದಿನ ತಲೆಮಾರಿನ ಎಲ್ಲಾ ರಾಜರೂ ಖಾಸಗಿ ದರ್ಬಾರ್‌ ಅನ್ನು ನಡೆಸುಕೊಂಡು ಬಂದಿದ್ದಾರೆ. ಈಗ ಯದುವೀರ್‌ ಸರದಿ.

ಮೈಸೂರಿನ ಯದುವಂಶಜರು ಅರಮನೆ ಆವರಣದಲ್ಲಿ ನವರಾತ್ರಿ ವೇಳೆ ಖಾಸಗಿ ದರ್ಬಾರ್‌ ನಡೆಸುವುದು ಹಿಂದಿನಿಂದ ಬಂದ ಸಂಪ್ರದಾಯ. ಆ ಒಂಬತ್ತು ದಿನ ಅವರು ಅರಮನೆಯಿಂದ ಹೊರಕ್ಕೆ ಹೋಗುವುದಿಲ್ಲ. ಅಂದರೆ ಅವರಿಗೆ ಕಂಕಣಧಾರಣೆಯಾದರೆ ಅರಮನೆ ಬಿಟ್ಟು ಕದಲುವುದಿಲ್ಲ. ಅರಮನೆ ಒಳಗೆ ಏನಿದ್ದರೂ ತಮ್ಮ ಕಾರ್ಯಚಟುವಟಿಕೆ. ಈ ಬಾರಿ ಸಂಸದರಾದ ಯದುವೀರ್‌ ಕೂಡ ಒಂಬತ್ತು ದಿನ ಬಹುತೇಕ ಜನರಿಗೆ ಲಭ್ಯವಾಗುವುದಿಲ್ಲ.

ಹೀಗಿರುತ್ತದೆ ದರ್ಬಾರ್‌

ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರ್‌ ಮಾದರಿಯಲ್ಲೇ ಇಂದಿಗೂ ದಸರೆಯ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ. ಸಿಂಹಾಸನದ ಬಳಿ ತೆರಳಿದ ಯದುವೀರ್ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡುತ್ತಾರೆ. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ, ನಂತರ ಅವರು ಸಿಂಹಾಸನಾರೂಢರಾಗುತ್ತಾರೆ.. ಇದೇ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಯದುವೀರ್ ಪಾದಗಳಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ದಿವಾನರು ಸಿಂಹಾಸನದ ಮುಂದೆ ನಿಂತು ನಡುಬಾಗಿಸಿ ವಂದಿಸುವ ಚಟುವಟಿಕೆಗಳೂ ಇಲ್ಲಿನ ವಿಶೇಷ ಆಕರ್ಷಣೆ.

ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಗಾಂಭೀರ್ಯದಿಂದ ಸಿಂಹಾನದ ಕಡೆ ಹೆಜ್ಜೆ ಇಡುತ್ತಿದ್ದಂತೆ ವಂಧಿ ಮಾಗಧರು ರಾಜಾಧಿರಾಜ, ರಾಜ ಮಾರ್ತಾಂಡ, ರಾಜ ಕುಲತಿಲಕ, ರಾಜ ಮಾರ್ತಾಂಡ, ಯದುವೀರ್ ಮಹಾರಾಜ್‌ ಕೀ ಬಹು ಪರಾಕ್, ಬಹು ಪರಾಕ್ ಎಂದು ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಕೆಲವೇ ಕ್ಷಣಗಳಲ್ಲಿ ಬಹುಪರಾಕ್ ಹೇಳುತ್ತಾರೆ. ಇದಕ್ಕೆ ಅಲ್ಲಿದ್ದವರೂ ದನಿಗೂಡಿಸುತ್ತಾರೆ. ನಂತರ ಜಯಚಾಮರಾಜ ಒಡೆಯರ್‌ ವಿರಚಿತ ಮೈಸೂರು ರಾಜ್ಯ ಗೀತೆಯನ್ನು ನುಡಿಸಲಾಗುತ್ತದೆ. ಈ ವೇಳೆ ರತ್ನ ಖಚಿತ ಸಿಂಹಾಸನದ ಮೇಲೆ ನಿಂತ ಯದುವೀರ್ ಸೆಲ್ಯೂಟ್ ಮಾಡಿ ರಾಜ್ಯ ಗೀತೆಗೆ ಗೌರವ ಸಲ್ಲಿಸಲ್ಲಿಸುತ್ತಾರೆ.

ನೀವೂ ಬರಬಹುದು

ದರ್ಬಾರ್ ಮುಗಿದ ಬಳಿಕ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯಸ್ವಾಮಿ, ಗಣೇಶ ದೇವಾಲಯ, ಕೃಷ್ಣನ ದೇವಾಲಯ ಸೇರಿದಂತೆ 33 ದೇವಾಲಯಗಳಿಂದ ತಂದ ತೀರ್ಥ ಪ್ರಸಾದ ಸೇವಿಸಿದ ನಂತರ ಸಿಂಹಾಸನಾರೂಢ ಚಟುವಟಿಕೆಗಳು ಮುಗಿಯುತ್ತವೆ. ಮೊದಲ ದಿನ ಸಿಂಹಾಸನಾರೂಢರಾದ ಬಳಿಕ ನಂತರದ ದಿನ ಸಂಜೆ ವೇಳೆ ಖಾಸಗಿ ದರ್ಬಾರ್‌ ಚಟುವಟಿಕೆ ಮುಂದುವರಿಯಲಿದೆ.

ಖಾಸಗಿ ದರ್ಬಾರ್‌ನ ಆ ವೈಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಅವಕಾಶವಿದೆ. ಆದರೆ ಅರಮನೆ ಮಂಡಳಿ ಇಲ್ಲವೇ ಯದುವೀರ್‌ ಒಡೆಯರ್‌ ಅವರ ಕಚೇರಿಯಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಪಾಸ್‌ ಇದ್ದವರ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.

ಯದುವೀರ್‌ ಒಡೆಯರ್‌ ಖಾಸಗಿ ದರ್ಬಾರ್‌ ವೇಳೆ ಪತ್ನಿ ತ್ರಿಷಿಕಾಕುಮಾರಿ ಹಾಗೂ ಅಮ್ಮ ಪ್ರಮೋದಾದೇವಿ ಒಡೆಯರ್‌ ಸಾಥ್‌ ನೀಡುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ