Ilayaraja: ತಂಗಾಳಿಯಲ್ಲಿ ತೇಲಿ ಬಂದೆ; ಮೈಸೂರು ಯುವ ದಸರಾದಲ್ಲಿ ಕನ್ನಡದ ಹಾಡುಗಳಿಗೆ ಇಳಯರಾಜ ಪುಳಕ, ಅಭಿಮಾನಿಗಳ ಮನಸಲ್ಲಿ ಖುಷಿಯ ಹಾಯಿ ದೋಣಿ
Oct 11, 2024 10:58 AM IST
ಮೈಸೂರು ಯುವ ದಸರಾದಲ್ಲಿ ಇಳಯರಾಜರ ಪುಳಕದ ಕ್ಷಣ
- ಇಳಯರಾಜ ಹಾಡುಗಳನ್ನೇ ಕೇಳುವುದೇ ಆನಂದ. ಅದೂ ಲೈವ್ ಕಛೇರಿ ಎಂದರೆ ಇನ್ನೂ ಪುಳಕವೇ. ಮೈಸೂರು ಯುವ ದಸರಾದಲ್ಲಿ ಮೂರು ಗಂಟೆ ಕಾಲ ಇಳಯರಾಜ ಆವರಿಸಿದರು. ಅಲ್ಲದೇ ಖುಷಿಯ ಅನುಭೂತಿಯನ್ನು ಸೃಷ್ಟಿಸಿದರು.
ಮೈಸೂರು: ತಂಗಾಳಿಯಲ್ಲಿ ನಾನು ತೇಲಿ ಬಂದೆ ಎಂದು ಯುವ ಗಾಯಕಿ ಅನನ್ಯ ಭಟ್ ಹಾಡುತ್ತಿದ್ದರೆ ಎದುರಿಗೆ ಕುಳಿತಿದ್ದ ಸಂಗೀತ ದಿಗ್ಗಜ ಇಳಯರಾಜ ಅಹಾ ಎಂದು ಉದ್ಘರಿಸುತಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಮಗ ಎಸ್.ಪಿ ಚರಣ್ ಅವರ ಸುಮಧುರ ಧ್ವನಿಯಲ್ಲಿಎಂತ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಕನ್ನಡ ನಾಡಿದು ಚಿನ್ನದ ಬೀಡಿದು ಎಂಬ ಹಾಡನ್ನು ಹೇಳುತ್ತಿದ್ದರೆ ಇಳಯರಾಜರ ಮುಖದಲ್ಲಿ ಖುಷಿಯ ಕಳೆ. ಕೇಳುಗರಲ್ಲಿ ಅಭಿಮಾನದ ಮಳೆ. ಕೇಳದೆ ನಿಮಗೀಗ ದೂರದಲ್ಲಿ ಯಾರೋ ಗೀತೆ ಎನ್ನುವ ಗೀತಾ ಚಿತ್ರದ ಹಾಡಿಗೆ ಮನಸುಗಳಲ್ಲೇ ಖುಷಿಯ ಕುಣಿತ. ಇಂತಹ ಅಪೂರ್ವ ಹಾಡುವ ಕೇಳುವ ಜುಗುಲ್ ಬಂದಿ ನಡುವೆ ಖುಷಿಗೊಂಡವರು ಇಳಯರಾಜ. ಕನ್ನಡದ ಆ ಹಾಡುಗಳು ಜನರ ಮನಸಿನಲ್ಲಿ ನೆಲೆಗೊಂಡಿರುವುದು. ಈಗಲೂ ಅಭಿಮಾನ ಹೆಚ್ಚಿಸುವ ಪ್ರತಿಕ್ರಿಯೆ ಕಂಡ ಇಳಯರಾಜರೇ ಪುಳಕಗೊಂಡರು. ನಿಜಕ್ಕೂ ಕೇಳುಗರ ಮನಸಿನಲ್ಲಿ ಹಾಯಿ ದೋಣಿ ಸೃಷ್ಟಿಸಿತು ಸಂಗೀತ ಸಂಜೆ.
ಮೈಸೂರು ದಸರಾ ಸಮಿತಿಯ ಯುವ ದಸರಾ ಕಾರ್ಯಕ್ರಮದ ಕೊನೆಯ ದಿನದಂದು ಅಚ್ಚಳಿಯದ ಕಾರ್ಯಕ್ರಮ ನೀಡಿದವರು ಇಳಯರಾಜ ಹಾಗೂ ಅವರ ತಂಡ. ಅವರಿಗೆ ಈಗ 81 ವರ್ಷ. ದೇಹ ಹಾಗೂ ಮನಸಿಗೆ ಇನ್ನೂ 50ರ ಹರೆಯ ಎನ್ನುವಂತಯೇ ಇಳಯರಾಜ ಯುವ ಮನಸುಗಳನ್ನು ಖುಷಿಪಡಿಸಿದರು. ಲವಲವಿಕೆಯಿಂದಲೇ ಇದ್ದುಕೊಂಡು ಸಂಗೀತ ಸಂಜೆಯನ್ನು ಸುಮಧುರಗೊಳಿಸಿದರು.ನಾಲ್ಕೈದು ದಿನ ಕುಣಿದಿದ್ದ ಯುವ ಜನತೆ ಕೊನೆ ದಿನ ನೃತ್ಯಕ್ಕೆ ಬ್ರೇಕ್ ಹಾಕಿ ಮಾಧುರ್ಯ ಭರಿತ ಹಾಡುಗಳನ್ನು ಆಲಿಸಿತು.
ವೇದಿಕೆಗೆ ಆಗಮಿಸಿದ ಸುಪ್ರಸಿದ್ಧ ಸಂಗೀತ ನಿರ್ದೇಶಕರಾದ ಇಳಯರಾಜಾ ಅವರು ನಾಡ ದೇವತೆ ಚಾಮುಂಡೇಶ್ವರಿಯ ಗೀತೆಯಾದ ಜನನಿ ಜಗನಿ ಎಂಬ ತಮಿಳು ಗೀತೆಯ ಮೂಲಕ ಗಾಯನವನ್ನು ಆರಂಭಿಸಿ ಕೇಳುಗರ ಮನಸಿಗೆ ಮುದನೀಡಿದರು. ಬಳಿಕ ಓಂ ಶಿವೋಂ ಓಂ ಶಿವೋಂ ಗೀತೆಯ ಮೂಲಕ ಶಿವನ ಆರಾಧಿಸುವ ಮೂಲಕ ನೋಡುಗರ ಎದೆಯಲ್ಲಿ ಜಲ್ ಎನಿಸುವಂತೆ ಮಾಡಿದರು.
ಖುಷಿ ನೀಡಿದ ಚರಣ್
ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಮಗ ಎಸ್.ಪಿ ಚರಣ್ ಅವರ ಸುಮಧುರ ಧ್ವನಿಯಲ್ಲಿ ಅನಂತ್ ನಾಗ್ ಅವರ ಮಾತು ತಪ್ಪದ ಮಗ ಚಿತ್ರದ ಎಂತ ಸೌಂದರ್ಯ ನೋಡು ನಮ್ಮ ಕರುನಾಡ ಬೀಡು ಕನ್ನಡ ನಾಡಿದು ಚಿನ್ನದ ಬೀಡಿದು ಎಂದು ಹಾಡುತ್ತಾ ಕನ್ನಡದ ಕಂಪನ್ನು ತುಂಬಿಸಿದರು. ಕನ್ನಡ ಗೀತೆಗಳ ರಸದೌತಣ ಬಡಿಸಿದಂತೆ ಕಾರ್ಯಕ್ರಮದಲ್ಲಿ ಕಂಡು ಬಂದಿತ್ತು. ಶಂಕರ್ ನಾಗ್ ಅವರ ಸಂತೋಷಕ್ಕೆ ಹಾಡು ಸಂತೋಷಕ್ಕೆ ಗೀತೆಯನ್ನು ಕೇಳುವಾಗರ ನೋಡುಗರ ಮನದಲ್ಲಿ ಸಂತೋಷವನ್ನು ತುಂಬಿ ಕುಣಿಸಿತ್ತು.
ಶಂಕರ್ ನಾಗ್ ಅವರ ಗೀತಾ ಚಿತ್ರದ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಗೀತೆಯು ಕಂಪೋಸಿಂಗ್ ಸಂದರ್ಭದಲ್ಲಿ ನಡೆದ ವಿಚಾರವನ್ನು ಮರುಕಳಿಸಿ ಅದೇ ರೀತಿಯಲ್ಲಿ ಆ ಗೀತೆಯನ್ನು ಎಸ್.ಪಿ ಚರಣ್ ಅವರು ತಮ್ಮ ಧ್ವನಿಯಲ್ಲಿ ಮಧುರವಾದ ಇಂಪನ್ನು ನೀಡಿದರು. ಗೀತಾ ಚಿತ್ರದ ಜೊತೆಯಲ್ಲಿ ಜೊತೆ ಜೊತೆಯಲ್ಲಿ ಇರುವೇನು ಹೀಗೆ ಎಂದು ಗೀತೆಯೂ ಯುವ ಮನಸ್ಸಿನಲ್ಲಿ ಪುಳಕವನ್ನು ಮೂಡಿಸಿತು.
ಡಾ. ರಾಜ್ ಕುಮಾರ್ ಅವರನ್ನು ನೆನೆದು ಅವರು ಮೊದಲಿಗೆ ಹಾಡಿದ ಯಾರೇ ಕೂಗಾಡಲಿ ಊರೇ ಹೋರಾಡಲಿ ಗೀತೆಯನ್ನು ನೆನೆದು, ನನ್ನ ನಿನ್ನ ಗೆಲ್ಲಲಾರೆ. ಚಿತ್ರದ ಗೀತೆಯ ಜೊತೆಗೆ ನನ್ನ ನಿನ್ನ ಗೆಲ್ಲಲಾರೆ ಕುಣಿದು ಕುಣಿದು ಗೀತೆಯನ್ನು ಪ್ರಸ್ತುತ ಪಡಿಸಿದರು.
ಮೊದಲ ಹಾಡಿನ ನೆನಪು
ಇಳಯರಾಜ ಅವರು ಮೊದಲು ಕನ್ನಡದಲ್ಲಿ ರಚಿಸಿದ ಆನಂದ ಕಂಡೆ ನಾನಿಂದು ಮತ್ತಿಗೆ ಸಿಕೋದೆಲ್ಲ ಹೇಳಲು ಬರದಲ್ಲ ನಾನೆಂದೂ ಎಂಬ ಗೀತೆಯನ್ನು ಹಾಡಿದರು ಆ ಗೀತೆಯು ನೋಡುಗರ ಕಣ್ಣಲ್ಲಿ ಆ ದೇವಿಯ ದರ್ಶನವನ್ನು ಮಾಡಿಸಿದಂತೆ ಮೂಡಿ ಬಂತು.
ಹಿನ್ನೆಲೆ ಗಾಯಕರಾದ ಶರತ್, ವಿಭಾರವಿ ಅವರು ಅನಂತ್ ನಾಗ್ ಅವರ ಆಕಾಶದಿಂದ ಜಾರಿ ಭೂಮಿ ಬಂದ ನೋಡಿ ನಮ್ಮಗಾಗಿ ಆ ದೇವನೇ ಗೀತೆಯನ್ನು ಪ್ರಸ್ತುತ ಪಡಿಸಿದರು. ಗಾಯಕಿ ವಿಭಾರವಿ ಅವರು ನಮ್ಮೂರ ಮಂದಾರ ಹೂವೆ ಚಿತ್ರದ ಓಂ ಕಾರವೇ ಕಂಡೇ ಪ್ರೇಮನಾದವ ಗೀತೆಯನ್ನು ಹಾಡಿ ಮನಸೆಳೆದರು. ಜೊತೆಯಲ್ಲಿ ಇಳಯರಾಜ ಅವರು ಧ್ವನಿ ಗೂಡಿಸಿ ಕೇಳುವವರ ಕರ್ಣಗಳಿಗೆ ತಂಪೆರೆದರು.
ಅಣ್ಣಾವ್ರ ಅಭಿಮಾನ
ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಅವರ ಇಂಪಾದ ಧ್ವನಿಯಲ್ಲಿ. ಶಿವರಾಜ್ ಕುಮಾರ್ ಅವರ ನಮ್ಮೂರ ಮಂದಾರ ಹೂವೇ ಚಿತ್ರದ ಹೇಳೇ ಕೋಗಿಲೆ, ಅಂಬರೀಷ್ ಅವರ ಭರ್ಜರಿ ಭೇಟೆ ಚಿತ್ರದ ಯಾರಿಗಾಗಿ ಆಟ ಯಾರಿಗಾಗಿ ನೋಟ ಗೀತೆಯನ್ನು ಪ್ರಸ್ತುತ ಪಡಿಸಿ ಕನ್ನಡಿಗರ ಪ್ರೀತಿ ಬರಿಸುವಲ್ಲಿ ಯಶಸ್ವಿಯಾದರು.
ಗಾಯಕ ಹರಿ ಚರಣ್ ಜೊತೆಗೂಡಿ ಕನ್ನಡದ ಕಂಡ ರಾಜ್ ಕುಮಾರ್ ಅವರ ನೀ ನನ್ನ ಗೆಲ್ಲಲಾರೆ ಚಿತ್ರದ ಜೀವ ಹೂವಾಗಿದೆ ಭಾವ ಜೇನಾಗಿದೆ ಗೀತೆಯನ್ನು ಹಾಡಿ ಕನ್ನಡದ ಕಂಪನ್ನು ಹೆಚ್ಚಿಸಿದರು. ಪಲ್ಲವಿ ಅನು ಪಲ್ಲವಿ ಚಿತ್ರದ ನಗುವ ನಯನ ಮಧುರ ಮೌನ ಮಿಡಿವ ಹೃದಯ ಇದೇ ಮಾತೆಕೆ ಗೀತೆಯು ಕೇಳುಗರಿಗೆ ಇಂಪೇರಿಸಿತು
ಪಲ್ಲವಿ ಅನು ಪಲ್ಲವಿ ಚಿತ್ರದ ಹೃದಯ ರಂಗೋಲಿ ಅಳಿಸುತ್ತಿದೆ ಇಂದು ಗೀತೆಯೂ ಕೇಳುಗಾರ ಕಿವಿಯಲ್ಲಿ ರಂಗೋಲಿ ಹಾಕಿದಂತೆ ಮೂಡಿಬಂದಿತು. ಜನ್ಮ ಜನ್ಮದ ಅನುಬಂಧ ಚಿತ್ರದ ಯಾವ ಶಿಲ್ಪಿ ಕಂಡ ಕಲ್ಲು ನೀನು ಗೀತೆ, ಆ ದಿನಗಳು ಚಿತ್ರದ ಆ ದಿನಗಳು ಪ್ರತಿ ಕ್ಷಣ ಹೃದಯದೊಳಗೆ ಗೀತೆ, ಭರ್ಜರಿ ಬೇಟೆ ಚಿತ್ರದ ಸ್ವೀಟಿ ನನ್ನ ಜೋಡಿ ಗಟ್ಟಿ ನನ್ನ ಜೋಡಿ ಹಿಗಾ ಲೈಫ್ ಲವ್ಲಿ ಲವ್ಲಿ ಗೀತೆ, ರಜನಿ ಕಾಂತ್ ಅವರ ಪ್ರಿಯಾ ಚಿತ್ರದ ಹೇ ಕವಿತೆ ನೀನು, ಪಲ್ಲವಿ ಅನು ಪಲ್ಲವಿ ಚಿತ್ರದ ನಗು ಎಂದಿದೆ ಮಂಜಿನ ಬಿಂದು ಹೀಗೆ ಇನ್ನೂ ವಿವಿಧ ಗೀತೆಗಳಿಂದ ಮೈಸೂರಿನ ಮನ ಸೆಳೆದರು.
ಅನನ್ಯ ಗಾನ
ಗಾಯಕಿ ಅನನ್ಯ ಭಟ್ ಅವರ ಧ್ವನಿಯಲ್ಲಿ ಅನಂತ್ ನಾಗ್ ಅವರ ಜನ್ಮ ಜನ್ಮ ಅನುಬಂಧ ಚಿತ್ರದ ತಂಗಾಳಿಯಲ್ಲಿ ನಾನು ತೇಲಿ ಬಂದೆ ಗೀತೆಯೂ ನೆರೆದಿದ್ದ ಪ್ರೇಕ್ಷಕರ ಮನಸನ್ನು ಒಂದು ಕ್ಷಣ ಜಲ್ ಎನಿಸುವಂತೆ ಮಾಡಿತು. ಜೊತೆಗೆ ಇಳಯರಾಜಾ ಅವರು ಧ್ವನಿ ಗೂಡಿಸಿ ಮತ್ತೆ ಮಂತ್ರವು ಮನಸೇ ಮಂದಿರವು ಗೀತೆಯನ್ನು ತಮಿಳು ಮತ್ತು ಕನ್ನಡದಲ್ಲಿ ಹಾಡಿದರು.
ಗಾಯಕ ಮುದ್ದು ಬಾಲಕೃಷ್ಣ ಅವರ ಕಂಠ ಸಿರಿಯಲ್ಲಿ 1971 ರಲ್ಲಿ ತೆರೆಕಂಡ ಸದ್ಮಾ ಚಿತ್ರದ ಹೇ ಜಿಂದಗೀ ಗಲೇ ಲಾಗ ಲೆ ಗೀತೆಯು ಮನ ಸೆಳೆಯಿತು. ಜೊತೆಗೆ ಮಾತು ತಪ್ಪದ ಮಗ ಚಿತ್ರದ ಭಾನು ಭೂಮಿಯ ಮಿಲನವ ಬಯಸಿ ಬಾಗಿದೆ ಗೀತೆಯ ಮೂಲಕ ಮುದ ನೀಡಿದರು.
ಮೈಸೂರಿನ ಆ ದಿನಗಳು
1974 ರಲ್ಲಿ ನಾನು ಮೈಸೂರಿನಲ್ಲಿ ಕಾರ್ಯಕ್ರಮವನ್ನು ನೀಡಲು ಬಂದಿದೆ ಆ ಸಮಯದಿಂದಲೂ ನಾನು ಮೈಸೂರಿನ ಆತ್ಮೀಯತೆ ಇಷ್ಟವಾಯಿತು. ಆ ದಿನ ಜಿ.ಕೆ ವೆಂಕಟೇಶ್, ಪಿ.ಬಿ ಶ್ರೀನಿವಾಸ್, ಎಸ್ ಜಾನಕಿ ಅವರ ಜೊತೆಯಲ್ಲಿ ಕೀ ಬೋರ್ಡ್ ನುಡಿಸಲು ಬಂದವನು ನಾನು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದವೇ ನನ್ನನ್ನು ಇಂದು ಮೈಸೂರಿಗೆ ಕರೆಸಿ ನಿಮ್ಮನ್ನು ನೋಡುವ ಅವಕಾಶ ದೊರಕಿದೆ ಎಂದು ಇಳಯರಾಜ ಅಭಿಮಾನದಿಂದಲೇ ನೆನದರು.
ಕನ್ನಡ ಚಿತ್ರಗೀತೆಗಳನ್ನು ರಚಿಸಿ ಹಾಡುವ ಮೂಲಕ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಅತ್ಯಂತ ಹೆಚ್ಚಿನ ಪ್ರಾಶಸ್ತ್ಯ ಸಿಗುವಂತೆ ಮಾಡಿದರು. ಕನ್ನಡ ಚಿತ್ರಗಳ ಸಂಗೀತ ನಿರ್ದೇಶನದ ಸಂದರ್ಭದಲ್ಲಿ ಮೇರು ನಟರಾದ ಡಾ. ರಾಜ್ ಕುಮಾರ್, ವಿಷ್ಣು ವರ್ಧನ್, ಅನಂತ ನಾಗ್, ಶಂಕರ್ ನಾಗ್ ರಂತಹ ಮೇರು ನಟರೂ ಮತ್ತು ಅವರ ಜೊತೆಗಿನ ಅನುಭವ ಮೆಲುಕು ಹಾಕುತ್ತಲೇ ಎಂದೂ ಮರೆಯದ ಹಾಡುಗಳ ಗುಚ್ಚವನ್ನು ಉಣಬಡಿಸಿದರು ಪ್ರೀತಿಯ ಇಳಯರಾಜ.
ಕಾರ್ಯಕ್ರಮಕ್ಕೆಂದೇ ಬಂದಿದ್ದ ಬರಹಗಾರರಾದ ವಿ. ಮನೋಹರ್ , ಕೆ ಕಲ್ಯಾಣ್ ಅವರೂ ಇಳಯರಾಜಾ ಅವರ ಜೊತೆಯ ಅನುಭವವನ್ನು ಹಂಚಿಕೊಂಡರು. ನಿರ್ದೇಶಕ ಎಸ್.ನಾರಾಯಣ ಅಪ್ಪಟ ವಿದ್ಯಾರ್ಥಿಯಂತೆ ನಿಂತು ಇಳಯರಾಜರ ಮಾತು ಆಲಿಸಿದರು.