logo
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ; ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ; ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Umesh Kumar S HT Kannada

Nov 25, 2024 12:29 PM IST

google News

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ಸಮರ್ಪಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಚಾಮುಂಡೇಶ್ವರಿ ದೇವಿಯ ರಥದ ಇತಿಹಾಸ ಮತ್ತು ಇತರೆ ವಿವರ ಇಲ್ಲಿದೆ.

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಾಣದ ವಿಚಾರ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೈಸೂರು: ಮುಡಾ ಸೈಟು ಹಂಚಿಕೆ ಅಕ್ರಮದ ಆರೋಪ, ಟೀಕೆಗಳ ಹೊರತಾಗಿಯೂ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಭರ್ಜರಿ ಗೆಲುವಿನ ಹುಮ್ಮಸ್ಸಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಾಡ ದೇವತೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಮೇಲಿನ ಭಕ್ತಿಯನ್ನು ಮತ್ತೊಮ್ಮೆ ತೋರಿಸಿದ್ದಾರೆ. ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ಸಮರ್ಪಿಸಲು ಒಲವು ತೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಲದ ಮೈಸೂರು ದಸರಾ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸಲು ಅನುವು ಮಾಡಿಕೊಟ್ಟಿದ್ದ ಸರ್ಕಾರ, ಈಗ ಚಾಮುಂಡೇಶ್ವರಿಗೆ ಚಿನ್ನದ ರಥ ಸಮರ್ಪಿಸಲು ಮುಂದಾಗಿರುವುದು ಗಮನಸೆಳೆದಿದೆ.

ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ; ಏನಿದು ಪ್ರಸ್ತಾವನೆ

ನಾಡ ದೇವತೆ ಮೈಸೂರು ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ ನಿರ್ಮಿಸಿ ಸಮರ್ಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ನವೆಂಬರ್ 19ಕ್ಕೆ ಭಕ್ತರ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

ಕನ್ನಡ ನಾಡಿನ ಅಸ್ಮಿತೆ, ನಾಡದೇವತೆ ಚಾಮುಂಡೇಶ್ವರಿ ದೇವಿ. ಮೈಸೂರು ಚಾಮುಂಡಿ ಬೆಟ್ಟ, ದೇವಸ್ಥಾನ, ದೇವಿಗೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ ಇದೆ. ಹೀಗಾಗಿ ನಾಡ ದೇವಿಯನ್ನು ಪೂಜಿಸುವಾಗ ಚಿನ್ನದ ರಥದಲ್ಲಿ ಕೂರಿಸಿ ಮರೆಸಬೇಕು ಎಂಬುದು ಭಕ್ತರ ಬೇಡಿಕೆ. ಚಿನ್ನದ ರಥಕ್ಕೆ ಅಗತ್ಯ ಪ್ರಸ್ತಾವನೆಯನ್ನು ಸರ್ಕಾರವೇ ತಯಾರಿಸಬೇಕು. ಈ ಉದ್ದೇಶಕ್ಕಾಗಿ ದೇವಸ್ಥಾನದಲ್ಲಿ ಪ್ರತ್ಯೇಕ ಹುಂಡಿ ಇಡಬೇಕು. ಸಂಗ್ರಹವಾದ ಹಣಕ್ಕಿಂತ ಹೆಚ್ಚು ಹಣ ಬೇಕಾದಲ್ಲಿ ಅದನ್ನು ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿದಾಗ ತಿಳಿಸಿದ್ದಾಗಿ ದಿನೇಶ್ ಗೂಳಿಗೌಡ ತಿಳಿಸಿದ್ದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ (ಎಡ ಚಿತ್ರ) ಸಲ್ಲಿಸಿದ್ದ ಮನವಿಗೆ (ಬಲ 
ಚಿತ್ರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದು, ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಸ್ಪಂದಿಸಿದ್ದು, ಪರಿಶೀಲಿಸಿ ಕೂಡಲೇ ಪ್ರಸ್ತಾವನೆ ಸಲ್ಲಿಸುವುದು ಎಂದು ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದಾರೆ. 100 ಕೋಟಿ ರೂಪಾಯಿ ವೆಚ್ಚದ ಚಿನ್ನದ ರಥ ನಿರ್ಮಾಣಕ್ಕೆ ಸೂಚನೆ ನೀಡಿರುವುದಾಗಿ ಮೂಲಗಳು ಹೇಳಿವೆ. ಮುಡಾ ಸೈಟು ಹಂಚಿಕೆ ಹಗರಣ ಮತ್ತು ಇತರೆ ಆರೋಪ, ಟೀಕೆಗಳ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹಲವು ಸಲ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿ ಪೂಜೆ ಸಲ್ಲಿಸಿಬಂದಿದ್ದರು.

ಇದಕ್ಕೂ ಮೊದಲು ಮೈಸೂರು ಚಾಮುಂಡೇಶ್ವರಿ ದೇವಿಗೆ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಪಾವತಿಸ ಬೇಕು ಎಂದು ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌, ತಾಯಿ ಚಾಮುಂಡೇಶ್ವರಿಗೆ ಆ ಹಣವನ್ನು ವೈಯಕ್ತಿಕವಾಗಿ ಪಾವತಿಸಿದ್ದರು.

ಮೈಸೂರು ಚಾಮುಂಡೇಶ್ವರಿ ದೇವಿ ರಥದ ಇತಿಹಾಸ

ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಇತಿಹಾಸ ಪ್ರಕಾರ, ಮೈಸೂರಿನ ಮುಮ್ಮಡಿ ಕೃಷ್ಣ ರಾಜ ಒಡೆಯರು 1827ರಲ್ಲಿ ಮರದ “ಸಿಂಹ ವಾಹನ” ರಥವನ್ನು ಚಾಮುಂಡೇಶ್ವರಿ ದೇವಿಗೆ ಸಮರ್ಪಿಸಿದ್ದರು. ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನೂ ಒಡೆಯರೇ ಸಮರ್ಪಿಸಿದ್ದರು. ಅದೇ ರಥದಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಇಟ್ಟು ರಥೋತ್ಸವ ನಡೆಸಲಾಗುತ್ತಿತ್ತು. 1928 ರಿಂದ ರಥೋತ್ಸವ ನಡೆಯುತ್ತ ಬಂದಿದೆ ಎಂಬುದಕ್ಕೆ ಉಲ್ಲೇಖವಿದೆ.

ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸದ್ಯ ಮರದ ರಥ ಇದ್ದು, ಅದನ್ನು 1982ರಲ್ಲಿ ಕೊಯಮತ್ತೂರಿನ ಭಕ್ತರು ಮಾಡಿಸಿಕೊಟ್ಟಿದ್ದರು. ಈ ರಥವೂ ಶಿಥಿಲವಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಹೀಗಾಗಿ ಹೊಸ ರಥ ನಿರ್ಮಿಸುವುದಾದರೆ ಚಿನ್ನದ ರಥವೇ ಆಗಲಿ ಎಂಬ ಆಗ್ರಹ ಭಕ್ತರ ವಲಯದಲ್ಲಿ ಕೇಳಿಬಂತು. ಇದರಂತೆ, ಎಂಎಲ್‌ಸಿ ದಿನೇಶ್‌ ಗೂಳಿಗೌಡ ಅವರು ಮನವಿ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ