ಮುಡಾ ಕಡತ ನಾಪತ್ತೆ ಪ್ರಕರಣ: ಸಚಿವ ಭೈರತಿ ಸುರೇಶ್ ವಿರುದ್ಧವೂ ಸ್ನೇಹಮಯಿ ಕೃಷ್ಣ ದೂರು
Oct 06, 2024 07:59 PM IST
ಮುಡಾ ಕಡತ ನಾಪತ್ತೆ ಪ್ರಕರಣ: ಸಚಿವ ಭೈರತಿ ಸುರೇಶ್ ವಿರುದ್ಧವೂ ಸ್ನೇಹಮಯಿ ಕೃಷ್ಣ ದೂರು
- ಭೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಮುಡಾದಿಂದ ದಾಖಲೆ ಕೊಂಡೊಯ್ದಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ. ಈ ದಾಖಲೆಗಳನ್ನು ಇಟ್ಟುಕೊಂಡು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಮುಡಾ ಪ್ರಕರಣವು ಈವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೊಡ್ಡ ಕಂಟಕವಾಗಿ ಕಾಣುತ್ತಿತ್ತು. ಇದೀಗ ಸಚಿವ ಭೈರತಿ ಸುರೇಶ್ ಅವರಿಗೂ ಬಿಸಿ ಮುಟ್ಟುವ ಸಾಧ್ಯತೆ ಇದೆ. ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ಸಚಿವ ಭೈರತಿ ಸುರೇಶ್ ವಿರುದ್ಧವೂ ದೂರು ನೀಡಿದ್ದಾರೆ. ಸಚಿವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಡತ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ್ ಮಾತ್ರವಲ್ಲದೆ ಲೋಕಾಯುಕ್ತದ ಈ ಹಿಂದಿನ ಎಸ್‌ಪಿ ಸುಜಿತ್ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಸರ್ಚ್ ವಾರೆಂಟ್ ಪಡೆದು ತನಿಖೆ ನೆಪದಲ್ಲಿ ದಾಖಲೆ ಕೊಂಡೊಯ್ಯಲು ಸಹಕರಿಸಿದ ಆರೋಪದ ಮೇಲೆ ಸುಜಿತ್ ವಿರುದ್ಧವೂ ದೂರು ದಾಖಲಿಸಿಲಾಗಿದೆ. ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ.
ಭೈರತಿ ಸುರೇಶ್ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ದಾಖಲೆ ಕೊಂಡೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಜುಲೈ 26ರಂದು ಮುಡಾದ ದಾಖಲೆಗಳನ್ನು ಕೊಂಡೊಯ್ಯಲಾಗಿದೆ. ಅದೇ ದಾಖಲೆಗಳನ್ನು ಇಟ್ಟುಕೊಂಡು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ದಾರೆ. ದಾಖಲೆಗಳನ್ನು ತೆಗೆದುಕೊಂಡು ಹೋಗಲು ಲೋಕಾಯುಕ್ತ ಎಸ್‌ಪಿ ಕೂಡಾ ಸಹಕರಿಸಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಸ್ನೇಹಮಯಿ ಕೃಷ್ಣ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕು ಅಂತ ಎಲ್ಲಿದೆ?
ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯಲಿದ್ದಾರೆ. ಆ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ಮಾಡಲಿದೆ ಎಂದು ಮೈಸೂರಿನಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ನೀಡಬೇಕು ಅಂತ ಎಲ್ಲಿದೆ? ಆ ರೀತಿ ಹೋದರೆ ಬಿಜೆಪಿಯ ಅರ್ಧಕ್ಕೂ ಹೆಚ್ಚು ಮಂದಿ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಬಿಜೆಪಿ ಅವರಿಗೆ ಮಾಡೋಕೆ ಕೆಲಸ ಇಲ್ಲ. ಅದಕ್ಕೆ ರಾಜೀನಾಮೆ ಕೇಳ್ತಾ ಇದ್ದಾರೆ. ಎಫ್ ಐ ಆರ್ ಆದ ತಕ್ಷಣ ರಾಜೀನಾಮೆ ನೀಡಬೇಕೆಂಬ ಕಾನೂನು ಇದೆಯಾ. ಬಿಜೆಪಿಯವರು ಬಾಯಿ ಬಡಿದುಕೊಳ್ತಾ ಇದ್ದಾರೆ. ಅವರು ಎಷ್ಟು ಜನರು ಬೇಲ್ ಮೇಲ್ ಇದ್ದಾರೆ ಎಂದು ಪ್ರಶ್ನಿಸಿದ್ದಾರೆ.