ಬಿಜೆಪಿ ಶಾಸಕ ಮುನಿರತ್ನಗೆ ಮುಂದುವರೆದ ನ್ಯಾಯಾಂಗ ಬಂಧನ; ಮತ್ತೆ 14 ದಿನ ಪರಪ್ಪನ ಅಗ್ರಹಾರದಲ್ಲೇ ವಾಸ
ಬಿಜೆಪಿ ಶಾಸಕ ಮುನಿರತ್ನಗೆ ಜೈಲು ಸಂಕಷ್ಟ ಮತ್ತೆ ಮುಂದುವರೆದಿದೆ. ಎಸ್‌ಐಟಿ ಮನವಿ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಅಕ್ಟೋಬರ್ 19ರವರೆಗೆ ಮುನಿರತ್ನ ನ್ಯಾಯಾಂಗ ಬಂಧನವನ್ನು ವಿಸ್ತರಿಸಿದೆ. ಹೀಗಾಗಿ ಮತ್ತೆ 14 ದಿನ ಶಾಸಕರು ಪರಪ್ಪನ ಅಗ್ರಹಾರದಲ್ಲೇ ಉಳಿಯಬೇಕಾಗಿದೆ. (ವರದಿ: ಎಚ್. ಮಾರುತಿ)
ಅತ್ಯಾಚಾರ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 14 ದಿನಗಳ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮುನಿರತ್ನ ಬಂಧನ ಅವಧಿ ಶನಿವಾರಕ್ಕೆ ಮುಕ್ತಾಯಗೊಂಡಿತ್ತು. ಈ ಹಿನ್ನಲೆಯಲ್ಲಿ ಅವರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು 42ನೇ ಎಸಿಎಂಎಂ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗೆ ಅವರನ್ನು ಮತ್ತೆ ವಶಕ್ಕೆ ನೀಡುವಂತೆ ಎಸ್‌ಐಟಿ ಮನವಿ ಮಾಡಿಕೊಂಡಿತು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಅಕ್ಟೋಬರ್ 19ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ಇದೇ ವೇಳೆ ಮನೆ ಊಟಕ್ಕೆ ಅನುಮತಿ ನೀಡುವಂತೆ ಮುನಿರತ್ನ ಪರ ವಕೀಲರು ಮನವಿ ಮಾಡಿಕೊಂಡರು. ಆಗ ನ್ಯಾಯಾಧೀಶರು ಜೈಲಿನ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳುವಂತೆ ಸೂಚಿಸಿದರು. ಮುನಿರತ್ನ ವಿರುದ್ಧ ಜಾತಿನಿಂದನೆ, ಲಂಚಕ್ಕೆ ಬೇಡಿಕೆ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಗುತ್ತಿಗೆದಾರರಾದ ಚೆಲುವರಾಜು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ವೇಲು ನಾಯ್ಕರ್ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ಪ್ರತ್ಯೇಕವಾಗಿ ದೂರು ನೀಡಿದ್ದರು. ಈ ದೂರುಗಳ ಅನ್ವಯ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಲಾಗಿತ್ತು.
ಆಂಧ್ರಪ್ರದೇಶದ ಚಿತ್ತೂರಿಗೆ ತೆರಳುತ್ತಿದ್ದ ಮುನಿರತ್ನ ಅವರನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಮತ್ತು ಕೋಲಾರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿತ್ತು.
ಅತ್ಯಾಚಾರ, ಹನಿ ಟ್ರ್ಯಾಪ್ ಮತ್ತು ಬ್ಲ್ಯಾಕ್ ಮೇಲ್ ಪ್ರಕರಣ
ಬಿಜೆಪಿ ಕಾರ್ಯಕರ್ತೆಯೊಬ್ಬರು ಇವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಈ ದೂರು ದಾಖಲಾಗುತ್ತಿದ್ದಂತೆ ಮತ್ತೊಬ್ಬ ಸಂತ್ರಸ್ತೆ ಹನಿ ಟ್ರ್ಯಾಪ್ ಮತ್ತು ಬ್ಲ್ಯಾಕ್ ಮೇಲ್ ಪ್ರಕರಣ ದಾಖಲಿಸಿದ್ದಾರೆ. ವ್ಯವಹಾರದಲ್ಲಿ ಸಹಕರಿಸದ ಪೊಲೀಸರು ಮತ್ತು ಅಧಿಕಾರಿಗಳನ್ನು ಇಂತಹ ಸಂತ್ರಸ್ತರ ಮೂಲಕ ಮುನಿರತ್ನ ಹನಿ ಟ್ರ್ಯಾಪ್ ಮಾಡಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಈ ಸಂತ್ರಸ್ತೆ ಆರೋಪ ಮಾಡಿದ್ದಾರೆ.
ನ್ಯಾಯಾಂಗದ ಬಂಧನದಲ್ಲಿದ್ದ ಮುನಿರತ್ನ ಜಾತಿನಿಂದನೆ ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಎರಡೂ ಪ್ರಕರಣಗಳಲ್ಲಿ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರು. ಆದರೆ ಅತ್ಯಾಚಾರ ಪ್ರಕರಣದಲ್ಲಿ ರಾಮನಗರ ಜಿಲ್ಲೆ ಕಗ್ಗಲಿಪುರ ಠಾಣೆ ಪೊಲೀಸರು ಬಂಧಿಸಿದ್ದರು. ಈ ಮಧ್ಯೆ ಇಂದು ಬೆಳಗ್ಗೆ ಒಕ್ಕಲಿಗ ಸಮುದಾಯದ ಸಚಿವರು, ಶಾಸಕರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾಜಿ ಸಚಿವ ಮುನಿರತ್ನ ಅವರ ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಮನವಿ ಸಲ್ಲಿಸಿತ್ತು. ಅದರಂತೆ ಸರ್ಕಾರ ಹಿರಿಯ ಐಪಿಎಸ್ ಅಧಿಕಾರಿ ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದ್ದು ತನಿಖೆ ನಡೆಯುತ್ತಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಪರ ಒಂದು ಗಂಟೆ ವಾದ ಮಂಡಿಸಿದ ವಕೀಲ; ಜೈಲಾ, ಬೇಲಾ? ಇಂದೇ ಭವಿಷ್ಯ ನಿರ್ಧಾರ