Kabini Reservoir: ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಮೈಸೂರು ಜಿಲ್ಲೆ ಕಪಿಲಾ ನದಿ ತೀರದಲ್ಲಿ ಪ್ರವಾಹ ಭೀತಿ
Jul 18, 2024 11:12 PM IST
ಕಬಿನಿ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.
- Kabini Dam ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಬರುತ್ತಿರುವುದರಿಂದ ಹೊರ ಹರಿವು ಹೆಚ್ಚಿಸಲಾಗಿದ್ದು ಪ್ರವಾಹ ಭೀತಿ ಎದುರಾಗಿದೆ.
ಮೈಸೂರು: ಕೇರಳದಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ( Kerala Rains) ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ( Kabini dam) ಹೆಚ್ಚಿನ ನೀರು ಹರಿದು ಬರುತ್ತಿದೆ. ಈ ಕಾರಣದಿಂದಾಗಿ ಕಬಿನಿ ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಿಂದ ಮೈಸೂರು ಜಿಲ್ಲೆಯ ಕಪಿಲಾ ನದಿ ತೀರ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.ಎಚ್‌ಡಿಕೋಟೆ, ಸರಗೂರು, ನಂಜನಗೂಡು ತಾಲ್ಲೂಕು ಹಾಗೂ ತಿ.ನರಸೀಪುರ ತಾಲ್ಲೂಕಿನ ಕಪಿಲಾ ನದಿ ತೀರದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. 70 ಸಾವಿರ ಕ್ಯೂಸೆಕ್ ನೀರು ಹೊರ ಬರುತ್ತಿರುವುದರಿಂದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲವು ಜಲಾವೃತವಾಗಲಿದೆ. ಈಗಾಗಲೇ ದೇಗುಲ ಸಮೀಪಕ್ಕೆ ನೀರು ಬಂದಿದ್ದು ಅಧಿಕ ನೀರು ಬಿಟ್ಟಿರುವುದರಿಂದ ಮಧ್ಯರಾತ್ರಿ ಹೊತ್ತಿಗೆ ನೀರಿನ ಪ್ರಮಾಣ ನಂಜನಗೂಡಿನಲ್ಲಿ ಹೆಚ್ಚಲಿದೆ.
ಕಬಿನಿ ಜಲಾಶಯಕ್ಕೆ ಒಂದು ತಿಂಗಳಿನಿಂದಲೂ ನೀರು ಹರಿದು ಬರುತ್ತಿದೆ. ಒಳ ಹರಿವಿನ ಪ್ರಮಾಣ ಕಡಿಮೆ ಇತ್ತು. ಎರಡು ಬಾರಿ ಮಳೆ ಪ್ರಮಾಣ ಕಡಿಮೆಯಾದರೂ ಒಳ ಹರಿವು ನಿಂತಿರಲಿಲ್ಲ. ಒಂದು ವಾರದಿಂದ ಕೇರಳದ ವಯನಾಡು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರಿಂದ ಕಪಿಲಾ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಹೆಚ್ಚಿ ಕಬಿನಿ ಜಲಾಶಯಕ್ಕೆ ಭರ್ಜರಿ ನೀರು ಹರಿದು ಬರುತ್ತಿದೆ.ಮೂರು ದಿನದಿಂದ ಒಳ ಹರಿವು ಹೆಚ್ಚಿ ಹೊರ ಹರಿವಿನ ಪ್ರಮಾಣವನ್ನೂ ಹೆಚ್ಚು ಮಾಡಲಾಗಿದೆ. ಗುರುವಾರವೂ ಹೊರ ಹರಿವನ್ನು ಹೆಚ್ಚಿಸಲಾಗಿತ್ತು. ಗುರುವಾರ ಸಂಜೆ ಹೊತ್ತಿಗೆ ಒಳ ಹರಿವು 52,777 ಕ್ಯೂಸೆಕ್‌ಗೆ ಏರಿಕೆ ಕಂಡಿತು.ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಹೊರ ಹರಿವನ್ನು 70,000 ಕ್ಯೂಸೆಕ್‌ಗೆ ಏರಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕಬಿನಿ ಜಲಾಶಯದಿಂದ ಇಷ್ಟು ಪ್ರಮಾಣದಲ್ಲಿ ನೀರು ಹೊರ ಹರಿಸುತ್ತಿರುವುದು ಇದೇ ಮೊದಲು. ಸದ್ಯ ಜಲಾಶಯದ ನೀರಿನ ಮಟ್ಟವು 2281.12 ಅಡಿ ಇದೆ. ಜಲಾಶಯದಲ್ಲಿ 17.70 ಟಿಎಂಸಿ ನೀರು ಇದೆ.
ಕಬಿನಿ ಸಣ್ಣ ಜಲಾಶಯ. ಹೆಚ್ಚಿನ ಮಳೆಯಾಗಿ ನೀರು ಹರಿದು ಬಂದರೆ ಜಲಾಶಯದಲ್ಲಿ ಇರಿಸಿಕೊಳ್ಳಲು ಅವಕಾಶವಿಲ್ಲ. ನೀರನ್ನು ಹೊರ ಬಿಡಲೇಬೇಕಾಗುತ್ತದೆ. ಈಗ ಅತ್ಯಧಿಕ ನೀರು ಒಳ ಬರುತ್ತಿರುವುದರಿಂದ ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲೇಬೇಕು. ಇಲ್ಲದೇ ಇದ್ದರೆ ಜಲಾಶಯಕ್ಕೆ ತೊಂದರೆಯಾಗಬಹುದು. ಈಗ 70,000 ಕ್ಯೂಸೆಕ್ ನೀರು ಹೊರ ಹೋಗುತ್ತಿದೆ ಎನ್ನುವುದು ಅಧಿಕಾರಿಯೊಬ್ಬರು ನೀಡಿದ ಮಾಹಿತಿ.
ಕೃಷ್ಣರಾಜಸಾಗರ ಜಲಾಶಯಕ್ಕೆ ಹಾರಂಗಿ ಹಾಗೂ ಹೇಮಾವತಿ ಜಲಾಶಯದ ನಂಟಿದೆ. ಅಲ್ಲಿಂದ ಹರಿಸಿದ ನೀರು ಕೆಆರ್‌ಎಸ್‌ಗೆ ಬರಲೇಬೇಕು. ಆದರೆ ಕಬಿನಿ ಜಲಾಶಯಕ್ಕೆ ಕೆಆರ್‌ಎಸ್ ಸಂಪರ್ಕ ಇಲ್ಲ. ಕಬಿನಿಯಿಂದ ಹರಿಸಿದ ನೀರು ನೇರವಾಗಿ ಕಾವೇರಿ ನದಿಯನ್ನು ಸೇರಿ ತಮಿಳುನಾಡಿಗೆ ಹೋಗಲಿದೆ. ಸದ್ಯ ತಲೆದೋರಿದ್ದ ಕಾವೇರಿ ನೀರಿನ ಬಿಕ್ಕಟ್ಟನ್ನು ಕಬಿನಿ ಜಲಾಶಯ ಪೂರೈಸಿದೆ. ಜೂನ್ ಹಾಗೂ ಜುಲೈ ತಿಂಗಳ ಕೋಟಾ ಸುಮಾರು 40 ಟಿಎಂಸಿ ನೀರು ತಮಿಳುನಾಡಿಗೆ ತಲುಪಿದಂತಾಗಲಿದೆ. ಇನ್ನೂ ಮಳೆ ಬರುವ ಮುನ್ಸೂಚನೆ ಇರುವುದರಿಂದ ಇನ್ನಷ್ಟು ನೀರು ಹೊರ ಹೋಗುವ ಸಾಧ್ಯತೆಯಿದೆ.
ಕಬಿನಿಯಿಂದ ಇಷ್ಟು ಪ್ರಮಾಣದಲ್ಲಿ ನೀರು ಬಿಟ್ಟರೆ ನಂಜನಗೂಡಿನಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಲಿದೆ. ಇದರೊಟ್ಟಿಗೆ ನುಗು ಜಲಾಶಯದಿಂದಲೂ ನೀರು ಹರಿಸುತ್ತಿರುವುದರಿಂದ ಪ್ರವಾಹ ಭೀತಿ ನಂಜನಗೂಡಿನಲ್ಲಿ ಎದುರಾಗಿದೆ. ಅಲ್ಲದೇ ಸುತ್ತೂರು, ತಿ.ನರಸೀಪುರದಲ್ಲೂ ಪ್ರವಾಹದ ಸನ್ನಿವೇಶ ಎದುರಾಗಬಹುದು. ಈ ಕಾರಣದಿಂದ ಕಪಿಲಾ ನದಿ ತೀರದಲ್ಲಿ ಈಗಾಗಲೇ ಮುನ್ನೆಚ್ಚರಿಕೆ ವಹಿಸಲಾಗಿದೆ. ಜನರಿಗೂ ಎಚ್ಚರಿಕೆಯಿಂದ ಇರುವಂತೆ ಸೂಚನೆಗಳನ್ನೂಮೈಸೂರು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಗಳಿಂದ ನೀಡಲಾಗಿದೆ.