logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಮೀಪದ ನಗರಗಳಿಗೆ ನಮೋ ಭಾರತ್ ರ‍್ಯಾಪಿಡ್ ರೈಲು ಆರಂಭ; ಏರ್​ಪೋರ್ಟ್​ನಿಂದ ಯಲಹಂಕಕ್ಕೆ ರೈಲ್ವೆ ಲೈನ್

ಬೆಂಗಳೂರು ಸಮೀಪದ ನಗರಗಳಿಗೆ ನಮೋ ಭಾರತ್ ರ‍್ಯಾಪಿಡ್ ರೈಲು ಆರಂಭ; ಏರ್​ಪೋರ್ಟ್​ನಿಂದ ಯಲಹಂಕಕ್ಕೆ ರೈಲ್ವೆ ಲೈನ್

Prasanna Kumar P N HT Kannada

Oct 06, 2024 12:35 PM IST

google News

ದೇವನಹಳ್ಳಿ ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ಕಾಮಗಾರಿಯನ್ನು ಅಶ್ವಿನಿ ವೈಷ್ಣವ್ ಪರಿಶೀಲಿಸಿದರು. ಸಚಿವ ವಿ ಸೋಮಣ್ಣ ಸಾಥ್ ನೀಡಿದರು.

    • Ashwini Vaishnaw: ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಉಪನಗರ ರೈಲ್ವೆ ನೆಟ್‌ವರ್ಕ್‌ಗೆ ಸಂಬಂಧಿಸಿ ಚಾಲ್ತಿಯಲ್ಲಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ದೇವನಹಳ್ಳಿ ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ಕಾಮಗಾರಿಯನ್ನು ಅಶ್ವಿನಿ ವೈಷ್ಣವ್  ಪರಿಶೀಲಿಸಿದರು. ಸಚಿವ ವಿ ಸೋಮಣ್ಣ ಸಾಥ್ ನೀಡಿದರು.
ದೇವನಹಳ್ಳಿ ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ಕಾಮಗಾರಿಯನ್ನು ಅಶ್ವಿನಿ ವೈಷ್ಣವ್ ಪರಿಶೀಲಿಸಿದರು. ಸಚಿವ ವಿ ಸೋಮಣ್ಣ ಸಾಥ್ ನೀಡಿದರು.

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರೈಲು ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ತನಕ ನಡೆಯುತ್ತಿರುವ ಕಾಮಗಾರಿಗಳನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ (ಅಕ್ಟೋಬರ್ 5), ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ಜೊತೆಗೂಡಿ ಪರಿಶೀಲನೆ ನಡೆಸಿದರು. ಅಶ್ವಿನಿ ವೈಷ್ಣವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅದೇ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಂತರ ಮಾತನಾಡಿದ ಅವರು, ವಿಮಾನ ನಿಲ್ದಾಣದಿಂದ ಯಲಹಂಕದವರೆಗೆ ರೈಲು ಮಾರ್ಗವನ್ನು ದ್ವಿಗುಣಗೊಳಿಸಲಾಗುವುದು ಮತ್ತು ಸಂಚಾರ ಸಾಮರ್ಥ್ಯ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ನಾವು ಬೆಂಗಳೂರು ಸಾರಿಗೆ ಬಗ್ಗೆ ವಿವರವಾಗಿ ಚರ್ಚಿಸಿದ್ದೇವೆ. 3 ದೊಡ್ಡ ಯೋಜನೆಗಳ ಪರಿಶೀಲನೆ ಕಾರ್ಯ ನಡೆದಿದೆ. ಮೊದಲನೆಯದಾಗಿ ಬೆಂಗಳೂರಿನಲ್ಲಿ ನಿರ್ಮಾಣವಾಗಲಿರುವ ಸರ್ಕ್ಯುಲರ್ ರೈಲಿನ ಕುರಿತು ಡಿಪಿಆರ್‌ನ ಪ್ರಗತಿ ಉತ್ತಮವಾಗಿದೆ. ನಾನು ವಿಮಾನ ನಿಲ್ದಾಣದಿಂದ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ತನಕ ಪರಿಶೀಲಿಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ರೈಲ್ವೆ ನಿಲ್ದಾಣವನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ (ಆಗಮನ ಮತ್ತು ನಿರ್ಗಮನದ ಸಮೀಪಕ್ಕೆ) ಸಾಧ್ಯವಾದಷ್ಟು ಹತ್ತಿರ ಇರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಬಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ವಿಮಾನ ನಿಲ್ದಾಣದಿಂದ ಯಲಹಂಕ ರೈಲು ನಿಲ್ದಾಣದವರೆಗಿನ ಮಾರ್ಗವನ್ನು ದ್ವಿಗುಣಗೊಳಿಸಲು ನಾವು ನಿರ್ಧರಿಸಿದ್ದೇವೆ. ಬೆಂಗಳೂರು ನಗರದ ಇತರ ನಿಲ್ದಾಣಗಳ ಪ್ರಗತಿಯೂ ಉತ್ತಮವಾಗಿದೆ ಎಂದು ಇದೇ ವೇಳೆ ಹೇಳಿದ್ದಾರೆ. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದ ಸಚಿವರು, ರೈಲ್ವೆಯು ಶೀಘ್ರದಲ್ಲೇ ಅಮೃತ್ ಭಾರತ್ ರೈಲುಗಳ ಆವೃತ್ತಿ 2.0ರ ದೊಡ್ಡ ಪ್ರಮಾಣದ ಉತ್ಪಾದನೆಯನ್ನು ಸುಧಾರಣೆಗಳೊಂದಿಗೆ ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.

ಅಂಡರ್ ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ

ಕಂಟೊನ್ಮೆಂಟ್ ಬಹಳ ಮಹತ್ವದ ರೈಲ್ವೆ ನಿಲ್ದಾಣವಾಗಿದೆ. ಎಸ್​ಎಂವಿ ಬಳಿಕ ಯಶವಂತಪುರ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಮರು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 18 ಸಾವಿರ ಸ್ಕ್ವೇರ್ ಮೀಟರ್ ಅಗಲೀಕರಣ ಕಾಮಗಾರಿ ಮುಗಿದಿದೆ. ಅಂಡರ್ ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿ ನಡೆಯುತ್ತಿದ್ದು, ಇದು ಡಿಸೆಂಬರ್ ಕೊನೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಬೆಂಗಳೂರು ಉಪನಗರ ರೈಲ್ವೆ ಯೋಜನೆ (ಬಿಎಸ್‌ಆರ್‌ಪಿ) ಕುರಿತು ಮಾತನಾಡಿದ ರೈಲ್ವೆ ಸಚಿವರು, ಎರಡೂ ಕಾರಿಡಾರ್‌ಗಳು ಅತ್ಯಂತ ವೇಗವಾಗಿ ಮುಕ್ತಾಯಗೊಳ್ಳಲಿವೆ ಎಂದರು.

ನಮೋ ಭಾರತ್ ರ‍್ಯಾಪಿಡ್ ರೈಲು ಆರಂಭ

ಬಿಎಸ್‌ಆರ್‌ಪಿ ಮತ್ತು ಮೆಟ್ರೋ ರೈಲು ಆಯ್ಕೆಗಳು ಶೀಘ್ರದಲ್ಲೇ ಪ್ರಯಾಣಿಕರಿಗೆ ಮುಂದೆ ಬರಲಿದ್ದು, ಸಂಚಾರ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು. ಇತ್ತೀಚೆಗಷ್ಟೇ ಆರಂಭಿಸಲಾದ ನಮೋ ಭಾರತ್ ರಾಪಿಡ್ ರೈಲಿನ ಕುರಿತು ಮಾತನಾಡಿದ ವೈಷ್ಣವ್ ಅವರು, ಬೆಂಗಳೂರು ಟು ಮೈಸೂರು ನಮೋ ಭಾರತ್ ರ‍್ಯಾಪಿಡ್ ರೈಲು ಸಂಚರಿಸುತ್ತಿದೆ. ಶ್ರೀಘ್ರದಲ್ಲೇ ಬೆಂಗಳೂರು ಟು ತುಮಕೂರಿಗೆ ಈ ರೈಲು ಆರಂಭಿಸುತ್ತೇವೆ. ಬೆಂಗಳೂರು ನಗರಕ್ಕೆ 200 ಕಿಲೋ ಮೀಟರ್​ ಇರುವ ಪ್ರಮುಖ ನಗರಗಳಿಗೆ ನಮೋ ಭಾರತ್ ರ‍್ಯಾಪಿಡ್ ರೈಲು ಆರಂಭಿಸುವ ಕುರಿತು ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ