Gadag Trekking: ನೀವು ಚಾರಣ ಪ್ರಿಯರೇ, ಗದಗದ ಕಪ್ಪತಗುಡ್ಡಕ್ಕೆ ಬನ್ನಿ, ನಂದಿವೇರಿ ಮಠದ ಹಸಿರು ಸ್ವಾಮೀಜಿ ಅವರೊಂದಿಗೆ ಚಾರಣ ಸಂಭ್ರಮಿಸಿ
ಕನ್ನಡ ಸುದ್ದಿ  /  ಕರ್ನಾಟಕ  /  Gadag Trekking: ನೀವು ಚಾರಣ ಪ್ರಿಯರೇ, ಗದಗದ ಕಪ್ಪತಗುಡ್ಡಕ್ಕೆ ಬನ್ನಿ, ನಂದಿವೇರಿ ಮಠದ ಹಸಿರು ಸ್ವಾಮೀಜಿ ಅವರೊಂದಿಗೆ ಚಾರಣ ಸಂಭ್ರಮಿಸಿ

Gadag Trekking: ನೀವು ಚಾರಣ ಪ್ರಿಯರೇ, ಗದಗದ ಕಪ್ಪತಗುಡ್ಡಕ್ಕೆ ಬನ್ನಿ, ನಂದಿವೇರಿ ಮಠದ ಹಸಿರು ಸ್ವಾಮೀಜಿ ಅವರೊಂದಿಗೆ ಚಾರಣ ಸಂಭ್ರಮಿಸಿ

ಗದಗ ಜಿಲ್ಲೆಯ ಡಂಬಳ ಸಮೀಪದ ಕಪ್ಪತಗುಡ್ಡ ಚಾರಣಿಗರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿನ ನಂದಿವೇರಿ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರೇ ಪ್ರತಿ ತಿಂಗಳ ಎರಡನೇ ಭಾನುವಾರ ಚಾರಣ ಹಮ್ಮಿಕೊಳ್ಳುತ್ತಾರೆ. ಮುಂದಿನ ಭಾನುವಾರ( ಅಕ್ಟೊಬರ್‌ 13) ಚಾರಣವಿದೆ.

ಗದಗ ಜಿಲ್ಲೆ ಕಪ್ಪತಗುಡ್ಡಕ್ಕೆ ಚಾರಣ ಕಾರ್ಯಕ್ರಮವನ್ನು ಡಂಬಳ ಶ್ರೀ ಶಿವಕುಮಾರಸ್ವಾಮೀಜಿ ಹಮ್ಮಿಕೊಂಡಿದ್ದಾರೆ.
ಗದಗ ಜಿಲ್ಲೆ ಕಪ್ಪತಗುಡ್ಡಕ್ಕೆ ಚಾರಣ ಕಾರ್ಯಕ್ರಮವನ್ನು ಡಂಬಳ ಶ್ರೀ ಶಿವಕುಮಾರಸ್ವಾಮೀಜಿ ಹಮ್ಮಿಕೊಂಡಿದ್ದಾರೆ.

ಗದಗ: ಗದಗ- ಕೊಪ್ಪಳ- ವಿಜಯನಗರ ಜಿಲ್ಲೆಗೆ ಸೇರಿಕೊಂಡಂತೆ ಇರುವ, ಗದಗ ಜಿಲ್ಲೆಯ ಕಪ್ಪತಗುಡ್ಡಕ್ಕೆ ಚಾರಣ ಹೊರಡಬೇಕೇ. ಬೆಟ್ಟವನ್ನು ಏರಿ ಅಲ್ಲಿನ ಹಸಿರು ವೈಭವ ಕಣ್ತುಂಬಿಕೊಳ್ಳಬೇಕು ಎನ್ನುವ ಆಸೆಯಿದೆಯೇ. ಇದಕ್ಕಾಗಿ ಗದಗದ ಕಪ್ಪತಗುಡ್ಡ ಮಡಿಲಲ್ಲಿರುವ, ಅಲ್ಲಿದ್ದುಕೊಂಡೇ ಗಣಿ ಗದ್ದಲದಿಂದ ಬೆಟ್ಟವನ್ನು ಸಂರಕ್ಷಣೆ ಮಾಡಲು ನಿರಂತರ ಹೋರಾಟ ಮಾಡುತ್ತಿರುವ ಡೋಣಿಯ ಶ್ರೀ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ನೇತೃತ್ವದಲ್ಲಿ ಚಾರಣ ಹಮ್ಮಿಕೊಳ್ಳಲಾಗಿದೆ. ಈ ತಿಂಗಳ ಎರಡನೇ ರವಿವಾರ 2024ರ ಅಕ್ಟೋಬರ್‌ 13 ರಂದು ಕಪ್ಪತಗುಡ್ಡದಲ್ಲಿ "ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ ಕಾರ್ಯಕ್ರಮ ಇರಲಿದ್ದು, ಆಸಕ್ತರು ಭಾಗಿಯಾಗಲು ಅವಕಾಶವಿದೆ.

ಗದಗ ಜಿಲ್ಲೆಯ ಡಂಬಳ ಹೋಬಳಿಯ ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದಿಂದ ಪ್ರತಿ ತಿಂಗಳ ಎರಡನೇ ರವಿವಾರದಂದು ಮಾಸಿಕ ಚಾರಣ ಸಂಭ್ರಮ ಹಾಗೂ ಸಸ್ಯಾನುಭಾವ (ಸಸ್ಯ ಪ್ರಬೇಧಗಳ ಅಧ್ಯಯನ) ಕಾರ್ಯಕ್ರಮವನ್ನು ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಆಯೋಜಿಸಲಾಗುತ್ತ ಬರುತ್ತಿದೆ.

ಈ ತಿಂಗಳೂ ಕಾರ್ಯಕ್ರಮವಿದೆ.ಚಾರಣ ಪ್ರಿಯರು ಮತ್ತು ಸಸ್ಯ ಪ್ರಬೇಧಗಳ ಅಧ್ಯಯನ ನಡೆಸಲು ಕ್ಷೇತ್ರಭೇಟಿ ನೀಡಬಯಸುವ ಸಂಶೋಧನಾಕಾರರಿಗೆ, ಅಧ್ಯಾಪಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಆಯುರ್ವೇದ ಹಾಗೂ ಪಾರಂಪರಿಕ ವೈದ್ಯರಿಗೆ, ಹಾಗೂ ಆಸಕ್ತರು ಭಾಗಿಯಾಗಬಹುದು.

ಶ್ರೀ ಶಿವಕುಮಾರಸ್ವಾಮೀಜಿ ಅವರು ಹಲವಾರು ವರ್ಷಗಳಿಂದ ಕಪ್ಪತಗುಡ್ಡ ಉಳಿಸುವ ಹೋರಾಟದ ಜತೆಗೆ ಸಂರಕ್ಷಣೆ, ಜನರಲ್ಲಿ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡು ಹಸಿರು ಸ್ವಾಮೀಜಿ ಎಂದೇ ಹೆಸರು ಪಡೆದಿದ್ದಾರೆ. ಅವರು ನಿಯಮಿತವಾಗಿ ಇಂತಹ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದ್ದಾರೆ.

ಅಂದು ನಂದಿವೇರಿ ಶ್ರೀ ಮಠಕ್ಕೆ ದಾನರೂಪವಾಗಿ ಬಂದಿರುವ ಹಸುವಿಗೆ ಗೋಪೂಜೆ ಮತ್ತು ನಾಮಕರಣ ಸಂಭ್ರಮ ನಂದಿವೇರಿ ಬಸವಣ್ಣನ ಎದುರಿನಲ್ಲಿರುವ ಬಂಗಾರದ ಕೊಳದ 'ಬಂಗಾರ-ತೀರ್ಥಕ್ಕೆ' ಗಂಗಾಪೂಜೆ. ಧಾರವಾಡದ 'ವಿದ್ಯಾವರ್ಧಕ ಸಂಘ' ಹಾಗೂ 'ಪರಿಸರಕ್ಕಾಗಿ ನಾವು' ಸಂಘಟನೆಯ ಸದಸ್ಯರೊಂದಿಗೆ ಕಪ್ಪತಗುಡ್ಡ ಸಂರಕ್ಷಣೆ ಕುರಿತು ಚರ್ಚೆಯೂ ಇರಲಿದೆ.

ಹೀಗಿರಲಿದೆ ಚಾರಣ ಪಟ್ಟಿ

ಬೆಳಿಗ್ಗೆ ಗದಗ ತಾಲ್ಲೂಕಿನ ಡಂಬಳ ಮಠಕ್ಕೆ ಆಗಮಿಸಬೇಕು.ಬೆಳಿಗ್ಗೆ 9-30ಕ್ಕೆ ಉಪಹಾರ, ಕಷಾಯ, 10 ಕ್ಕೆ ಸ್ವಾಗತ, ಪರಿಚಯ, ಕಾರ್ಯಕ್ರಮ ಕುರಿತು ವಿವರಣೆ, ಭಾಗವಹಿಸಲಿರುವ ಚಾರಣಿಗರು ಅನುಸರಿಸಬೇಕಾದ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಣೆ, ಶ್ರೀ ಶಿವಕುಮಾರಸ್ವಾಮಿಗಳಿಂದ ಜೀವ ವೈವಿಧ್ಯದ ತಾಣ ಕಪ್ಪತಗುಡ್ಡದ ಹಿರಿಮೆ ಕುರಿತು ಮಾಹಿತಿ ಹಾಗೂ ಸಸ್ಯಾನುಭಾವದಲ್ಲಿ ಆಶೀರ್ವಚನ, ಬೆಳಿಗ್ಗೆ 10-45 ಕ್ಕೆ ಚಾರಣ ಪ್ರಾರಂಭ. ನಂದಿವೇರಿ ಸಂಸ್ಥಾನ ಮಠದ ಸಮೀಪದ ಬಂಗಾರದ ಕೊಳ್ಳದ ಬಂಗಾರ-ತೀರ್ಥಕ್ಕೆ ಭೇಟಿ.

ಆಸುಪಾಸಿನಲ್ಲಿ ಕಾನನದ ಹಸಿರು ವೃಕ್ಷಗಳ ಮಧ್ಯದಿಂದ ಸೂಸುವ ಚೈತನ್ಯಕಾರಕ ಶುದ್ಧ ಗಾಳಿ ಸೇವನೆಮಾಡುವುದೇ ಅಪ್ಯಾಯಮಾನ ಅನುಭವ ಸಸ್ಯಾನುಭಾವದಿಂದ ಪ್ರಕೃತಿಯೊಂದಿಗೆ ಭಾವಬಂಧ ಬೆಸೆಯುವ ಅಪರೂಪದ ಕ್ಷಣ ಶಾರೀರಿಕ ಮತ್ತು ಮಾನಸಿಕ ವಿಕಸನಕ್ಕೆ ಸೋಪಾನ ಅಪರೂಪದ ಸಸ್ಯಗಳ ವೀಕ್ಷಣೆ, ಚಾರಣದ ಮಧ್ಯ ವಿಶ್ರಾಂತಿ ಕ್ಷಣಗಳಲ್ಲಿ ಸಸ್ಯ ಸಂರಕ್ಷಣೆ ಕುರಿತು ಸಂವಾದ, ಬೀಜಾಂಕುರ ಹಾಗೂ ಸಸಿ ನೆಡಲು ಪ್ರೇರಣೆ ಮಧ್ಯಾಹ್ನ ಎರಡು ಘಂಟೆಗೆ ಪ್ರಸಾದ, ಮೂರು ಘಂಟೆಗೆ ಜರುಗುವ ಸಮಾರೋಪದಲ್ಲಿ ಚಾರಣಾನುಭವದ ವಿನಿಮಯ ಹಾಗೂ ಸಸ್ಯ ಸಂರಕ್ಷಣೆ ಸಂಕಲ್ಪ, ನಾಲ್ಕು ಘಂಟೆಗೆ ಮರು ಪ್ರಯಾಣ ಆರಂಭವಾಗಲಿದೆ ಎಂದು ಚಾರಣದ ಪಟ್ಟಿ ನೀಡಲಾಗಿದೆ.

ಭಾಗವಹಿಸಲು ನೋಂದಣಿ ಕಡ್ಡಾಯ. ನೋಂದಣಿಗಾಗಿ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಬಂದು ಹೋಗಲು ತಮ್ಮ ಸ್ವಂತ ವಾಹನದ ವ್ಯವಸ್ಥೆ ಮಾಡಿಕೊಳ್ಳುವುದು.ಪ್ರಕೃತಿಯೊಂದಿಗೆ ಭಾವಬಂಧ ಬೆಸೆದು ನೆಮ್ಮದಿಯ ಕ್ಷಣಗಳನ್ನು ಕಳೆಯಲು ಬನ್ನಿ, ಭಾಗವಹಿಸಿ, ಕಡ್ಡಾಯವಾಗಿ ಹೆಸರು ನೋಂದಾಯಿಸಿ ತಮ್ಮ ಸ್ಥಾನ ಕಾಯ್ದಿರಿಸಿಕೊಳ್ಳಿ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ಭಾಲಚಂದ್ರ ಜಾಬಶೆಟ್ಟಿ ಅವರನ್ನು ಮೋಬೈಲ್ ಸಂಖ್ಯೆ 9741888365 ನ್ನು ಸಂಪರ್ಕಿಸಲು ಕೋರಿದೆ.

Whats_app_banner