ಹುಬ್ಬಳ್ಳಿ; ಮದುವೆಗೊಪ್ಪದ ಯುವತಿ, ಅಡ್ಡ ಬಂದ ತಾಯಿಗೆ ಚಾಕು ಇರಿತ; ಪೊಲೀಸರ ಮೇಲೂ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು
Sep 26, 2024 02:33 PM IST
ಮದುವೆಗೊಪ್ಪದ ಯುವತಿ, ಅಡ್ಡ ಬಂದ ತಾಯಿಗೆ ಚಾಕು ಇರಿತ; ಪೊಲೀಸರ ಮೇಲೂ ಹಲ್ಲೆ, ಆರೋಪಿ ಕಾಲಿಗೆ ಗುಂಡೇಟು
- Hubli Dharwad News: ಹಳೇ ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರಿಗೆ ಯುವಕನೊಬ್ಬ ಚಾಕುವಿನಿಂದ ಇರಿದ ಮತ್ತು ಬಂಧನದ ವೇಳೆ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದ ಆರೋಪಿಗೆ ಗುಂಡೇಟು ಹಾರಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬಡ್ಡಿ ಕಿರುಕುಳಕ್ಕೆ ವಿಷ ಸೇವಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಹುಬ್ಬಳ್ಳಿ: ತನ್ನನ್ನು ಮದುವೆಯಾಗುವಂತೆ ಯುವತಿ ಮನೆಯ ಮುಂದೆ ಪೀಡಿಸುತ್ತಿದ್ದ ಸಂದರ್ಭದಲ್ಲಿ ಅಡ್ಡ ಬಂದ ತಾಯಿಗೆ ಪ್ರೇಮಿಯೊಬ್ಬ ಚಾಕುವಿನಿಂದ ಇರಿದಿರುವ ಘಟನೆ ಹಳೇ ಹುಬ್ಬಳ್ಳಿಯಲ್ಲಿ ನಡೆದಿದೆ. ನೀಲವ್ವ ಹಂಪಣ್ಣ ಎಂಬವರು ತೀವ್ರ ಗಾಯಗೊಂಡಿದ್ದು, ಕಿಮ್ಸ್ ಆಸ್ಪ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹೇಶ್ ಮೇಟಿ ಎಂಬಾತ ಇರಿದ ಯುವಕ, ಆತನನ್ನು ಈಗ ಬಂಧಿಸಲಾಗಿದೆ.
ಮಹೇಶ್ ಮೇಟಿ ನೀಲವ್ವ ಹಂಪಣ್ಣ ಅವರ ಮಗಳು ಪ್ರತಿಮಾ ಎಂಬವರನ್ನು ಪ್ರೀತಿಸುತ್ತಿದ್ದ. ಆಕೆ ಒಪ್ಪದಿದ್ದಕ್ಕೆ ಮನೆಯ ಬಳಿ ಬಂದು ಪೀಡಿಸಿದ್ದಾನೆ. ಈ ರಂಪಾದ ಮಧ್ಯೆ ಮಧ್ಯಪ್ರವೇಶಿಸಿದ ನೀಲವ್ವಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಪ್ರತಿಮಾ ಹೆಸರನ್ನು ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿರುವ ಮಹೇಶ್ ಬಂಧನಕ್ಕೆ ಯತ್ನಿಸಿದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ನೀಲವ್ವಗೆ ಐವರು ಹೆಣ್ಣುಮಕ್ಕಳು.
ಪರಾರಿಯಾಗುತ್ತಿದ್ದ ಆರೋಪಿ ಕಾಲಿಗೆ ಹಳೇ ಹುಬ್ಬಳ್ಳಿ ಪೋಲೀಸರು ಗುಂಡೇಟು ಹಾರಿಸಿದ್ದಾರೆ. ಆರೋಪಿ ತಪ್ಪಿಸಿಕೊಳ್ಳುವಾಗ ಪೋಲೀಸರ ಮೇಲೂ ಹಲ್ಲೆ ಮಾಡಿದ್ದು, ಹಳೇಹುಬ್ಬಳ್ಳಿ ಪೋಲೀಸ್ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ಹಾಗೂ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಗಾಯಾಳು ಪೋಲೀಸರ ಆರೋಗ್ಯ ವಿಚಾರಿಸಿದ್ದಾರೆ.
ಮಹಿಳೆ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹ
ದುಷ್ಕರ್ಮಿಯಿಂದ ತೀವ್ರ ಹಲ್ಲೆಗೊಳಗಾದ ಮಹಿಳೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಅವಳಿನಗರ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದೆ. ಅಲ್ಲದೆ, ಆರ್ಥಿಕ ನೆರವು ನೀಡಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಬಡ್ಡಿ ಕಿರುಕುಳಕ್ಕೆ ವಿಷ ಸೇವಿಸಿದ ವ್ಯಕ್ತಿ
ಧಾರವಾಡ: ಬಡ್ಡಿ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ವಿಷ ಸೇವಿಸಿದ ಘಟನೆ ಇಲ್ಲಿನ ಸವದತ್ತಿ ರಸ್ತೆಯಲ್ಲಿನ ಗೊಲ್ಲರ ಕಾಲೋನಿಯಲ್ಲಿ ನಡೆದಿದೆ. ನಜೀರಸಾಬ ಅತ್ತಾರ ಎಂಬುವರು ವಿಷ ಸೇವಿಸಿದ ವ್ಯಕ್ತಿ. ಖಾಸಗಿಯವರಿಂದ ಸಾಲ ಪಡೆದಿದ್ದ ಈತನು, ಬಡ್ಡಿ ಕಿರುಕುಳಕ್ಕೆ ಬೇಸತ್ತು ಇಂದು ಮನೆಯಲ್ಲಿ ವಿಷ ಸೇವಿಸಿದ್ದಾನೆ. ತೀವ್ರ ಅಸ್ವಸ್ಥನಾದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನಿಗೆ ಪ್ರಜ್ಞೆ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಶಹರ ಠಾಣೆಯ ಸಿಪಿಐ ಎನ್ಜಿ ಕಾಡದೇವರ ತಿಳಿಸಿದ್ದಾರೆ.