logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Polls 2023: ಮೋದಿ, ರಾಹುಲ್‌ ಒಂದೇ ದಿನ ಕರ್ನಾಟಕ ಪ್ರವಾಸ: ಚುನಾವಣಾ ಕಣದಲ್ಲಿ‌ ಪ್ರಬಲ ವಿರೋಧಿಗಳ 'ಫೇಸ್‌ ಟು ಫೇಸ್'!

Karnataka Polls 2023: ಮೋದಿ, ರಾಹುಲ್‌ ಒಂದೇ ದಿನ ಕರ್ನಾಟಕ ಪ್ರವಾಸ: ಚುನಾವಣಾ ಕಣದಲ್ಲಿ‌ ಪ್ರಬಲ ವಿರೋಧಿಗಳ 'ಫೇಸ್‌ ಟು ಫೇಸ್'!

HT Kannada Desk HT Kannada

Apr 01, 2023 08:17 AM IST

google News

ಸಂಗ್ರಹ ಚಿತ್ರ

    • ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡ ದಿನದಿಂದ ರಂಗೇರುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ಒಂದೇ ದಿನ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರ ರಾಜಕಾರಣದ ಇಬ್ಬರು ಪ್ರಬಲ ನಾಯಕರು ಒಂದೇ ದಿನ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಗಮನ ಸೆಳೆದಿದೆ. ಏಪ್ರಿಲ್‌ 9ರಂದು ಇಬ್ಬರೂ ನಾಯಕರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (HT)

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡ ದಿನದಿಂದ ರಂಗೇರುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ಒಂದೇ ದಿನ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರ ರಾಜಕಾರಣದ ಇಬ್ಬರು ಪ್ರಬಲ ನಾಯಕರು ಒಂದೇ ದಿನ ಕರ್ನಾಟಕಕ್ಕೆ ಭೇಟಿ ನೀಡುತ್ತಿರುವುದು ಗಮನ ಸೆಳೆದಿದೆ.

ಹೌದು, ಪ್ರಧಾನಿ ಮೋದಿ ಮತ್ತು ರಾಹುಲ್‌ ಗಾಂಧಿ ಅವರು ಇದೇ ಏಪ್ರಿಲ್‌ 9(ಭಾನುವಾರ)ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ಯಾವುದೇ ರಾಜಕೀಯ ಪ್ರಚಾರ ಸಭೆಗಳಲ್ಲಿ ಭಾಗವಹಿಸುವುದಿಲ್ಲವಾದರೂ, ಬಿಜೆಪಿ ನಾಯಕರು ಮತ್ತು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.

ಆದರೆ ರಾಹುಲ್‌ ಗಾಂಧಿ ಅವರು ಕೋಲಾರದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಜೈ ಭಾರತ್‌ ರ‍್ಯಾಲಿಯನ್ನು ಉದ್ಘಾಟಿಸಲಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ರಾಹುಲ್‌ ಗಾಂಧಿ ಅವರ ಕರ್ನಾಟಕ ಭೇಟಿ ಮಹತ್ವ ಪಡೆದುಕೊಂಡಿದೆ.

ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಿ ತಮ್ಮ ವಾಸ್ತವ್ಯದ ಅವಧಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಫಾರಿ ಕೈಗೊಳ್ಳುವ ಸಾಧ್ಯತೆಯಿದೆ.

ಹುಲಿ ಯೋಜನೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.

ಇನ್ನು ಅದೇ ದಿನ (ಏಪ್ರಿಲ್ 9) ಕೋಲಾರದಲ್ಲಿ ರಾಹುಲ್‌ ಗಾಂಧಿ ಅವರು, ಕಾಂಗ್ರೆಸ್‌ ಪಕ್ಷದ ಜೈ ಭಾರತ್‌ ಮೆಗಾ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ, ರಾಹುಲ್‌ ಗಾಂಧಿ ನಡೆಸುತ್ತಿರುವ ಮೊದಲ ಸಾರ್ವಜನಿಕ ಸಭೆ ಇದಾಗಿದೆ. ವಿಶೇಷವೆಂದರೆ ಲೋಕಸಭೆ ಸದಸ್ಯತ್ವ ಅನರ್ಹತೆಗೆ ಕಾರಣವಾದ, ಮೋದಿ ಉಪನಾಮದ ಕುರಿತಾದ ಭಾಷಣವನ್ನು2019ರಲ್ಲಿ ರಾಹುಲ್‌ ಗಾಂಧಿ ಅವರು ಕೋಲಾರದಲ್ಲೇ ಮಾಡಿದ್ದರು.

''ರಾಹುಲ್ ಗಾಂಧಿ ಅವರು ಏಪ್ರಿಲ್ 9ರಂದು ಕೋಲಾರಕ್ಕೆ ಆಗಮಿಸುತ್ತಾರೆ. ಜೈ ಭಾರತ್ ಮೆಗಾ ರ‍್ಯಾಲಿ ಉದ್ದೇಶಿಸಿ ಮಾತನಾಡಲಿರುವ ಅವರು, ಏಪ್ರಿಲ್ 11ರಂದು ಅವರು ವಯನಾಡ್‌ಗೆ ಭೇಟಿ ನೀಡಲಿದ್ದಾರೆ. ಅವರು ಜನರ ಧ್ವನಿ, ನೀವು ಅವರನ್ನು ಎಂದಿಗೂ ಮೌನಗೊಳಿಸಲು ಸಾಧ್ಯವಿಲ್ಲ. ಈ ಧ್ವನಿ ಇನ್ನಷ್ಟು ಬಲಗೊಳ್ಳಲಿದೆ..'' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.

2024ರ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳಿಗೆ, ಕರ್ನಾಟಕ ವಿಧಾನಸಭೆ ಚುನಾವಣೆ ಮಹತ್ವದ್ದಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ಶತಾಯಗತಾಯ ಈ ಚುನಾವಣೆಯನ್ನು ಗೆಲ್ಲಬೇಕು ಎಂಬ ಹುಮ್ಮಸ್ಸಿನಲ್ಲಿ ರಣತಂತ್ರ ರೂಪಿಸುತ್ತಿವೆ.

ಇನ್ನು ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳ ಕೂಡ ಚುನಾವಣೆಗೆ ಸಜ್ಜಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದ ಜನ ತಿರಸ್ಕರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದೆ. ಪಕ್ಷ ಪೂರ್ಣ ಬಹುಮತದ ಸರ್ಕಾರ ರಚಿಸಲಿದೆ ಎಂದು ಜೆಡಿಎಸ್‌ ನಾಯಕರು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಮಾರ್ಚ್ 29ರಂದು ಕೇಂದ್ರ ಚುನಾವಣಾ ಆಯೋಗವು, ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿತು. ರಾಜ್ಯದಲ್ಲಿ ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಘೋಷಣೆಯಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೇ, ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ತೀವ್ರ ಚಟುವುಟಿಕೆ ನಡೆಸುತ್ತಿರುವುದು ರಾಜ್ಯದ ಜನರ ಗಮನ ಸೆಳೆದಿದೆ ಎಂದು ಹೇಳಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ