logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ಬಿ.ಎಂ.ಹನೀಫ್‌ ಲೇಖನ

ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ; ಬಿ.ಎಂ.ಹನೀಫ್‌ ಲೇಖನ

Umesha Bhatta P H HT Kannada

Sep 12, 2024 04:50 PM IST

google News

ಬೆಂಗಳೂರಿನಲ್ಲಿ ಗುರುವಾರ ಸಿದ್ದರಾಮಯ್ಯ ಸಮಾರಂಭವೊಂದರಲ್ಲಿ ಭಾಗಿಯಾದರು.

    • ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಗಳು ಒಂದು ತಿಂಗಳಿನಿಂದಲೂ ನಡೆದಿದೆ. ಹಲವಾರು ಕಾಂಗ್ರೆಸ್‌ ನಾಯಕರು ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗಿದ್ದರೂ ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಈ ಕುರಿತು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್‌ ಅವರ ಬರಹ ಇಲ್ಲಿದೆ.
ಬೆಂಗಳೂರಿನಲ್ಲಿ ಗುರುವಾರ ಸಿದ್ದರಾಮಯ್ಯ ಸಮಾರಂಭವೊಂದರಲ್ಲಿ ಭಾಗಿಯಾದರು.
ಬೆಂಗಳೂರಿನಲ್ಲಿ ಗುರುವಾರ ಸಿದ್ದರಾಮಯ್ಯ ಸಮಾರಂಭವೊಂದರಲ್ಲಿ ಭಾಗಿಯಾದರು.

ಮುಖ್ಯಮಂತ್ರಿಯ ಕುರ್ಚಿ ಖಾಲಿ ಇಲ್ಲ. ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ. ಇದರಲ್ಲಿ ಯಾವ ಸಂಶಯವೂ ಬೇಡ- ಎಂದು ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಖುದ್ದಾಗಿ ಇದನ್ನು ಹೇಳುವ ಅಗತ್ಯ ಇರಲಿಲ್ಲ. ಏಕೆಂದರೆ ಕಾಂಗ್ರೆಸ್ ನಲ್ಲಿ ಗೋಡೆಯ ಮೇಲಿನ ಬರಹ ಸ್ಪಷ್ಟವಿದೆ. ಈಗ ಸಿದ್ದರಾಮಯ್ಯ ಅವರನ್ನು ಬದಲಿಸಲು ಹೈಕಮಾಂಡ್ ಕೈ ಹಾಕಿದರೆ ರಾಜ್ಯ ಕಾಂಗ್ರೆಸ್ಸಿನ ಅಸ್ಥಿಭಾರವು ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿದಂತೆ ಕುಸಿಯಲಿದೆ!

ಕಾಂಗ್ರೆಸ್ಸಿನ ಘಟಾನುಘಟಿ ಹಿರಿಯ ನಾಯಕರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಶಾಮನೂರು ಶಿವಶಂಕರಪ್ಪ, ಡಾ.ಜಿ.ಪರಮೇಶ್ವರ್, ಎಂಬಿ ಪಾಟೀಲ್ ಮತ್ತು ಆರ್ ವಿ ದೇಶಪಾಂಡೆ ಅವರು ನೀಡಿರುವ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ- ಮುಖ್ಯಮಂತ್ರಿಯನ್ನು ಬದಲಾಯಿಸುವುದಾದರೆ ನಾನೂ ಆ ಹುದ್ದೆಗೆ ಸ್ಪರ್ಧಿ ಎಂಬ 90ರ ವಯೋವೃದ್ಧ, ಲಿಂಗಾಯತ ಸಮುದಾಯದ ಪ್ರಬಲ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯ ಅರ್ಥ ಏನೆಂದರೆ- ಮುಖ್ಯಮಂತ್ರಿಯನ್ನು ಬದಲಾಯಿಸಬೇಡಿ ಎನ್ನುವುದೇ ಆಗಿದೆ.

ಸಾಮಾನ್ಯವಾಗಿ ರಾಜಕಾರಣಿಗಳು ಆಡುವ ಮಾತಿನಲ್ಲಿ ಇರುವ ಗೂಡಾರ್ಥಗಳನ್ನು ತಿಳಿದುಕೊಳ್ಳಲು ಐನ್ ಸ್ಟೀನ್ ತಲೆಯೇನೂ ಬೇಕಾಗಿಲ್ಲ. ಕಾಂಗ್ರೆಸ್ಸಿನ ಎಲ್ಲ ಹಿರಿಯ ನಾಯಕರ ಮಾತಿನಲ್ಲೂ ಇರುವ ಪರೋಕ್ಷ ಸೂಚನೆ ಏನೆಂದರೆ- ಡಿಕೆ ಶಿವಕುಮಾರ್ ಅವರನ್ನು‌ ಸಿಎಂ ಮಾಡಿದರೆ ಪಕ್ಷಕ್ಕೆ ಅಪಾಯ ತಪ್ಪಿದ್ದಲ್ಲ! ಇದನ್ನು ಅವರು ಯಾರೂ ನೇರವಾಗಿ ಹೇಳಿಲ್ಲ. ಆದರೆ "ಬದಲಾವಣೆ ಮಾಡುವುದಾದರೆ ನಾನೇ ಸಿಎಂ ಆಗುತ್ತೇನೆ" ಎನ್ನುವುದರ ಅರ್ಥ - "ಬದಲಾವಣೆ ಮಾಡಬೇಡಿ" ಎನ್ನುವುದೇ ಆಗಿದೆ.

ಹಾಗಿದ್ದರೆ ಈ ನಾಯಕರಿಗೆ ಸಿಎಂ ಆಗುವ ಆಸೆ ಇಲ್ಲವೆ? ಖಂಡಿತಾ ಇದೆ. ಆದರೆ ಮುಖ್ಯಮಂತ್ರಿ ಬದಲಾವಣೆಗೆ ಇದು ಸೂಕ್ತ ಸಮಯ ಅಲ್ಲ- ಎನ್ನುವುದು ಅವರ ಮಾತು.

ಹೈಕಮಾಂಡ್ ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಯೋಚಿಸುತ್ತಿದೆಯೆ? ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಏನು ಯೋಚಿಸುತ್ತಿದ್ದಾರೋ ಗೊತ್ತಿಲ್ಲ ಆದರೆ ಹೈಕಮಾಂಡ್ ನ ನಂಬಿಕಸ್ಥ ದೂತರಾದ ವೇಣುಗೋಪಾಲ್ ಮತ್ತು ಸುರ್ಜೆವಾಲ ಅವರ ತಲೆಯಲ್ಲಿ ಈ ಆಲೋಚನೆ ಮೊಳೆತಿರಬಹುದು ಎನ್ನುವ ಅನುಮಾನ ಹಲವರಿಗಿದೆ!

ಕಾಂಗ್ರೆಸ್ ಗರ್ಭಗುಡಿಯಲ್ಲಿ ಇರುವ ದೇವರಿಗಿಂತ, ಈ ಇಬ್ಬರು ಪೂಜಾರಿಗಳೇ ಹೆಚ್ಚು ಬಲಶಾಲಿಗಳು ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಆಗಾಗ್ಗೆ ಕೇಳಿಸುವುದಿದೆ. ಅದನ್ನು ಅಲ್ಲಗಳೆಯಲಾಗುವುದಿಲ್ಲ.

ಸಿದ್ದರಾಮಯ್ಯ ಅವರನ್ನು ಅಲುಗಾಡಿಸಿದರೆ ಕಾಂಗ್ರೆಸ್ ಕೋಟೆಯನ್ನು ಕೆಡಹುವುದು ಅತ್ಯಂತ ಸುಲಭ ಎನ್ನುವುದು ಅಮಿತ್ ಶಾ ಗೂ ಖಚಿತವಾಗಿದೆ. ಅದಕ್ಕೆಂದೇ ಮೂಡಾ ಹಗರಣವನ್ನು ಅತ್ಯಂತ ದೊಡ್ಡದಾಗಿ ಬಿಂಬಿಸಲಾಗುತ್ತಿದೆ. ( ಈ ಪ್ರಕರಣದಲ್ಲಿ ನಿಯಮಗಳ ಉಲ್ಲಂಘನೆಯ ಪ್ರಶ್ನೆ ಇಲ್ಲವಾದರೂ, ನೈತಿಕತೆಯ ಪ್ರಶ್ನೆಯನ್ನು ಎದುರಿಸುವಲ್ಲಿ ಸಿದ್ದರಾಮಯ್ಯ ಹಿನ್ನಡೆ ಸಾಧಿಸಿದ್ದಾರೆ ಎನ್ನುವುದು ನಿಸ್ಸಂಶಯ. ಒಳಗಿನ ಮಾತುಕತೆಯಲ್ಲಿ ಕಾಂಗ್ರೆಸ್ ನಾಯಕರೇ ಇದನ್ನು ಒಪ್ಪಿಕೊಳ್ಳುತ್ತಾರೆ.)

ಮೂಡಾ ಪ್ರಕರಣದ ತನಿಖೆಯ ಕುರಿತು ರಾಜ್ಯಪಾಲರ ಅನುಮತಿ ಬಗ್ಗೆ ಹೈಕೋರ್ಟ್ ನಲ್ಲಿ ಏನೇ ತೀರ್ಮಾನ ಬಂದರೂ ಉಭಯ ಪಕ್ಷಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುವುದು ಖಚಿತ. ಸಿದ್ದರಾಮಯ್ಯ ಪರವಾಗಿ ಹೈಕೋರ್ಟ್ ತೀರ್ಪು ನೀಡಿದರೆ ರಾಜ್ಯಪಾಲರು ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ. ರಾಜ್ಯಪಾಲರ ಕ್ರಮದ ಪರ ಹೈಕೋರ್ಟ್ ತೀರ್ಪು ಬಂದರೆ, ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಕದ ತಟ್ಟುತ್ತಾರೆ.

ಸುಪ್ರೀಂಕೋರ್ಟ್ ಈ ಅರ್ಜಿಯನ್ನು ತಕ್ಷಣಕ್ಕೆ ಕೈಗೆತ್ತಿಕೊಳ್ಳಲು ಯಾವ ಸಕಾರಣಗಳೂ ಇಲ್ಲ. ನಿಧಾನಕ್ಕೆ ಅರ್ಜಿ ಕೈಗೆತ್ತಿಕೊಂಡರೆ ತನಿಖೆಗೆ ಒಂದೆರಡು ವರ್ಷ ಹಿಡಿಯಬಹುದು. ಅಲ್ಲಿಯವರೆಗೆ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಬಾಧಿತ ಎನ್ನುವುದರಲ್ಲಿ ಅನುಮಾನವಿಲ್ಲ.

ಹರಿಯಾಣ ಮತ್ತು ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಥವಾ ಮಿತ್ರಪಕ್ಷಗಳ ಜೊತೆ ಸೇರಿ ಅಧಿಕಾರಕ್ಕೆ ಬಂದರೆ ಏನಾಗಬಹುದು? ರಾಹುಲ್ ಗಾಂಧಿ ಇನ್ನಷ್ಟು ಬಲಶಾಲಿ ನಾಯಕರಾಗಿ ತಮ್ಮದೇ ಸ್ವಂತ ನಿರ್ಧಾರ ಕೈಗೊಳ್ಳಬಹುದೆ? ಸದ್ಯಕ್ಕೆ ಈ ಪ್ರಶ್ನೆಗೆ " ಗೊತ್ತಿಲ್ಲ " ಎನ್ನುವುದೇ ಉತ್ತರ.

(ಎರಡನೇ ಚಿತ್ರ: ಗಾಂಧಿ ಟೊಪ್ಪಿಗೆ ಧರಿಸಿರುವ ಪ್ರಧಾನಿ ಮೋದಿಯವರು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನಿವಾಸದಲ್ಲಿ ಇತ್ತೀಚೆಗೆ ಗಣೇಶ ಪೂಜೆಯಲ್ಲಿ ಭಾಗವಹಿಸಿದ್ದರು.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ