Court News; ಮುಡಾ ಕೇಸ್‌ನಲ್ಲಿ ವಿವೇಚನೆಯಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ; ಹೈಕೋರ್ಟ್‌ಗೆ ರಾಜಭವನದ ವಿವರಣೆ
ಕನ್ನಡ ಸುದ್ದಿ  /  ಕರ್ನಾಟಕ  /  Court News; ಮುಡಾ ಕೇಸ್‌ನಲ್ಲಿ ವಿವೇಚನೆಯಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ; ಹೈಕೋರ್ಟ್‌ಗೆ ರಾಜಭವನದ ವಿವರಣೆ

Court News; ಮುಡಾ ಕೇಸ್‌ನಲ್ಲಿ ವಿವೇಚನೆಯಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ; ಹೈಕೋರ್ಟ್‌ಗೆ ರಾಜಭವನದ ವಿವರಣೆ

MUDA Case News; ಮುಡಾ ಕೇಸ್‌ನಲ್ಲಿ ವಿವೇಚನೆಯಿಂದಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜಭವನದ ವಿವರಣೆ ನೀಡಿದೆ. ಈ ಕೇಸ್‌ನ ವಿಚಾರಣೆಯನ್ನು ನ್ಯಾಯಪೀಠ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ.

ಮುಡಾ ಕೇಸ್ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ. (ಸಾಂಕೇತಿಕ ಚಿತ್ರ)
ಮುಡಾ ಕೇಸ್ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸೈಟ್‌ ಹಂಚಿಕೆ ಅಕ್ರಮಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿವೇಚನೆಯಿಂದಲೇ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಲಾಗಿದೆ ಎಂದು ರಾಜ್ಯಪಾಲರ ಪರ ವಕೀಲರು ಕರ್ನಾಟಕ ಹೈಕೋರ್ಟ್​​ಗೆ ವಿವರಣೆ ನೀಡಿದ್ದಾರೆ. ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ರದ್ದುಮಾಡಬೇಕು ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಇಂದು (ಆಗಸ್ಟ್ 31) ವಿಚಾರಣೆ ನಡೆಸಿತು.

ರಾಜ್ಯಪಾಲರು ಮತ್ತು ದೂರುದಾರರ ಪರ ವಾದ ಆಲಿಸಿದ ನ್ಯಾಯಪೀಠ, ವಿಸ್ತೃತ ವಿಚಾರಣೆಯನ್ನು ಸೋಮವಾರ (ಸೆಪ್ಟೆಂಬರ್ 2)ಕ್ಕೆ ಮುಂದೂಡಿತು.

ಹೈಕೋರ್ಟ್‌ನಲ್ಲಿ ರಾಜ್ಯಪಾಲರ ಪರ ವಕೀಲರ ವಾದ

ಮುಡಾ ಸೈಟು ಹಂಚಿಕೆ ಅಕ್ರಮ ಕೇಸ್‌ನಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಸಮರ್ಥಿಸಿಕೊಂಡ ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅರ್ಜಿದಾರರು ಈ ಪ್ರಕರಣದಲ್ಲಿ ರಾಜ್ಯಪಾಲರು ವಿವೇಚನೆ ಬಳಸಿಲ್ಲ, ಸಹಜ‌ ನ್ಯಾಯ ಪಾಲನೆ ಮಾಡಿಲ್ಲ ಎಂಬ ಆಕ್ಷೇಪಗಳನ್ನು ಮಾಡಿದ್ದಾರೆ. ಇದಕ್ಕೆ ದಾಖಲೆಗಳ ಸಹಿತ ವಿವರಣೆ ನೀಡಿದ ಮೆಹ್ತಾ, ಹಲವು ಅಂಶಗಳನ್ನು ಪ್ರಸ್ತಾಪಿಸಿದರು.

ಆರೋಪ 1 - ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ನೀಡುವಾಗ ರಾಜ್ಯಪಾಲರು ವಿವೇಚನೆ ಬಳಸಿಲ್ಲ ಮತ್ತು ಭ್ರಷ್ಟಾಚಾರ‌ ನಿಗ್ರಹ ಕಾಯ್ದೆಯ ಸೆಕ್ಷನ್ 17ಎ ಅಡಿ ಮಾನದಂಡ ಪಾಲನೆ ಮಾಡಿಲ್ಲ.

ವಿವರಣೆ - ಸೆಕ್ಷನ್ 17ಎ ಪ್ರಕಾರ ಮೇಲ್ನೋಟಕ್ಕೆ ಅಪರಾಧ ಅಂಶಗಳು ಕಂಡು ಬರುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಈ ಹಂತದಲ್ಲಿ ಶೋಕಾಸ್ ನೋಟಿಸ್‌ ನೀಡಲೇಬೇಕೆಂಬ ನಿಯಮ ಇಲ್ಲ.

ಆರೋಪ 2 - ಟಿ.ಜೆ.ಅಬ್ರಹಾಂ ಅರ್ಜಿ ಸಂಬಂಧ ವಿವರಣೆ ಕೇಳಿ ರಾಜ್ಯಪಾಲರು ಮುಖ್ಯಮಂತ್ರಿಗೆ, ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಆದರೆ ಉಳಿದ ಇಬ್ಬರ ಅರ್ಜಿದಾರರ ಅರ್ಜಿಗಳ ಸಂಬಂದ ಶೋಕಾಸ್ ನೋಟಿಸ್ ನೀಡಿಲ್ಲ

ವಿವರಣೆ- ಮೂವರು ಒಂದೇ ರೀತಿಯ ಆರೋಪ ಮುಂದಿಟ್ಟು ಅನುಮತಿ ಕೇಳಿದ್ದು, ಎಲ್ಲ ಪ್ರಕರಣಗಳಲ್ಲಿಯೂ ಅನುಮತಿ ಕೇಳಬೇಕು ಎಂಬ ನಿಯಮವಿಲ್ಲ. ಮೂರೂ ದೂರುಗಳ ತುಲನಾತ್ಮಕ ಚಾರ್ಟ್ ಸಿದ್ಧಪಡಿಸಿ ಕ್ರಮ ತೆಗೆದುಕೊಂಡಿದ್ದಾರೆ. ಹೀಗಾಗಿಯೇ ಉಳಿದಿಬ್ಬರ ದೂರಿನಲ್ಲಿ ಶೋಕಾಸ್ ನೋಟಿಸ್ ನೀಡುವ ಅಗತ್ಯವಿಲ್ಲ.

ಆರೋಪ 3 - ಸಚಿವ ಸಂಪುಟ ನಿರ್ಣಯ ತಗೊಂಡು ಅದನ್ನು ರಾಜ್ಯಪಾಲರಿಗೆ ಕಳುಹಿಸಿದ್ದರೂ ಅವರು ಅದನ್ನು ಪರಿಗಣಿಸಿಲ್ಲ‌.

ವಿವರಣೆ - ಸಚಿವ ಸಂಪುಟದಲ್ಲಿ ಸಹೋದ್ಯೋಗಿಗಳನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ನಿಯೋಜಿಸಲಾಗುತ್ತದೆ. ಅವರು ಮುಖ್ಯಮಂತ್ರಿಗೆ ನಿಷ್ಠರಾಗಿರುತ್ತಾರೆ. ಮುಖ್ಯಮಂತ್ರಿ ವಿರುದ್ಧ ಆರೋಪ ಎದುರಾದಾಗ, ಆ ಸಚಿವ ಸಂಪುಟ ನೀಡುವ ಸಲಹೆ, ಶಿಫಾರಸುಗಳನ್ನು ರಾಜ್ಯಪಾಲರು ಒಪ್ಪಬೇಕು ಅಥವಾ ಪರಿಗಣಿಸಬೇಕು ಎಂಬ ನಿಯಮವಿಲ್ಲ. ಆದರೂ ಸಚಿವ ಸಂಪುಟದ ಸಲಹೆಯನ್ನು‌ ರಾಜ್ಯಪಾಲರು ಪರಿಶೀಲಿಸಿ ಉತ್ತರಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಭಾಗವಹಿಸದಿದ್ದರೂ, ಅವರೇ ನೇಮಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದು ಪಕ್ಷಪಾತದ ನಿರ್ಣಯವಾಗಬಹುದು. ಹೀಗಾಗಿ, ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ನಿರ್ಧಾರ ಕೈಗೊಳ್ಳುವುದಕ್ಕೆ ಅವಕಾಶವಿದೆ.

ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನೇ ನಕಲು ಮಾಡಿದ ಸಚಿವ ಸಂಪುಟ

ರಾಜ್ಯಪಾಲರಿಗೆ ಸರ್ಕಾರ ಸಲ್ಲಿಸಿರುವ 91 ಪುಟಗಳ ಸಚಿವ ಸಂಪುಟದ ನಿರ್ಣಯವು ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯ ನಂತರದಲ್ಲಿ ಸಚಿವ ಸಂಪುಟ ತೆಗೆದುಕೊಂಡ ಅತಿದೊಡ್ಡ ನಿರ್ಣಯ ಎಂದು ಬಣ್ಣಿಸಿದ ತುಷಾರ್ ಮೆಹ್ತಾ, ಮುಖ್ಯ ಕಾರ್ಯದರ್ಶಿ ವಾಸ್ತವಿಕ ಅಂಶಗಳನ್ನು ಪರಿಶೀಲಿಸಿ ರಾಜ್ಯ ಅಡ್ವೋಕೇಟ್ ಜನರಲ್‌ಗೆ (ಎಜಿ) ಕಳುಹಿಸಿದ್ದಾರೆ.‌ ಅದರ ಆಧಾರದ ಮೇಲೆ ಎಜಿ ಅಭಿಪ್ರಾಯ ನೀಡಿದ್ದಾರೆ. ಆ ಅಭಿಪ್ರಾಯವನ್ನೇ ಸಚಿವ ಸಂಪುಟ ಅಕ್ಷರಶಃ ನಕಲು ಮಾಡಿದೆ. ಎಜಿ ಅವರ ಅಭಿಪ್ರಾಯವನ್ನೇ ಸಂಪುಟದ ನಿರ್ಣಯದ ಹೆಸರಿನಲ್ಲಿ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ರಾಜ್ಯ ಸಚಿವ ಸಂಪುಟವಾಗಲೀ, ಮುಖ್ಯಮಂತ್ರಿ ಸಿದ್ದರಾಮಯ್ಯನವರಾಗಲಿ ತಮ್ಮ ವಿವೇಚನೆಯನ್ನೇ ಬಳಸಿಲ್ಲ ಎಂದು ವಿವರಿಸಿದರು.

ಮೂವರು ದೂರುದಾರರ ಪರ ವಕೀಲರ ವಾದವನ್ನೂ ಕೋರ್ಟ್ ಆಲಿಸಿತು. ಬಳಿಕ ವಿಸ್ತೃತ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.

Whats_app_banner