Praveen Nettaru: ಬೆದರಿಕೆ ನಿರ್ಲಕ್ಷಿಸಿದ್ರಾ ಪ್ರವೀಣ್ : ಕೇಸ್ NIAಗೆ ಹಸ್ತಾಂತರ ಸಾಧ್ಯತೆ
Jul 27, 2022 09:49 PM IST
ಪ್ರವೀಣ್ ನೆಟ್ಟಾರು
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ಪ್ರವೀಣ್ ನೆಟ್ಟಾರು(Praveen Nettaru) ನಿನ್ನೆ ದುಷ್ಕರ್ಮಿಗಳ ದಾಳಿಗೆ ದಾರುಣವಾಗಿ ಕೊಲೆಯಾಗಿದ್ದಾರೆ. ಅವರಿಗೆ ಶನಿವಾರ ಕೊಲೆ ಬೆದರಿಕೆ ಕರೆ ಬಂದಿತ್ತು. ಅವರು ಅದನ್ನು ನಿರ್ಲಕ್ಷಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ನಡುವೆ, ಈ ಕೊಲೆ ಪ್ರಕರಣ ಎನ್‌ಐಎಗೆ ಹಸ್ತಾಂತರವಾಗುವ ಲಕ್ಷಣಗಳು ಗೋಚರಿಸಿವೆ.
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು (Praveen Nettaru) ಅವರನ್ನು ನಿನ್ನೆ ರಾತ್ರಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.
ಪ್ರವೀಣ್ ನೆಟ್ಟಾರು ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ನಡೆಸುತ್ತಿದ್ದರು. ಎಂದಿನಂತೆ ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಮೇಲೆ ಮಾರಾಕಾಸ್ತ್ರಗಳಿಂದ ಏಕಾಕಿ ದಾಳಿ ನಡೆಸಿದ್ದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ, ಅವರ ಹತ್ಯೆ ವಿಚಾರ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದೆ. ರಾಜಕೀಯ ಹೇಳಿಕೆಗಳೂ ವ್ಯಕ್ತವಾಗಿವೆ. ಈ ನಡುವೆ, ಅವರ ಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಅಧಿಕೃತವಾಗಿ ದೃಢೀಕರಿಸಲ್ಪಟ್ಟಿಲ್ಲ.
ವಾಸ್ತವದಲ್ಲಿ, ಪ್ರವೀಣ್ ಅವರಿಗೆ ಶನಿವಾರ ಬೆದರಿಕೆ ಕರೆ ಬಂದಿತ್ತು. ಈ ವಿಚಾರವನ್ನು ಅವರು ಸ್ನೇಹಿತರ ಜತೆಗೆ ಹಂಚಿಕೊಂಡಿದ್ದರೇ ಹೊರತು, ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪ್ರವೀಣ್ ಅವರ ಸ್ನೇಹಿತರು ನೀಡಿದ ಮಾಹಿತಿ ಆಧರಿಸಿ, ಪ್ರವೀಣ್‌ಗೆ ಬಂದ ಕರೆಗಳ ಜಾಡನ್ನು ಹಿಡಿಯಲಾಗಿದೆ. ಅದರಂತೆ, ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐದು ತಂಡಗಳ ರಚನೆ
ಪ್ರವೀಣ್ ನೆಟ್ಟಾರು ಅವರ ಭೀಕರ ಕೊಲೆ ಪ್ರಕರಣದ ಹಂತಕರ ಪತ್ತೆಗೆ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಬೆನ್ನು ಹತ್ತಿ ಕೇರಳ, ಮಡಿಕೇರಿ, ಹಾಸನಕ್ಕೆ ಪೊಲೀಸರು ಮೂರು ತಂಡಗಳು ತೆರಳಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರುಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ.
ಎನ್‌ಐಎಗೆ ಹಸ್ತಾಂತರ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗಿನ ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರವೀಣ್ ಹತ್ಯೆ ಪ್ರಕರಣದ ಕುರಿತು ಸಿಎಂ ಜತೆ ಮಾತನಾಡಿದ್ದೇವೆ. ಪ್ರವೀಣ್ ಸೂದ್ ಬೆಳವಣಿಗೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಚಿಸಿದ್ದೇವೆ. ಪೊಲೀಸರು ಕೇರಳಕ್ಕೆ ತೆರಳಿ ಹುಡುಕಾಟ ನಡೆಸುತ್ತಿದ್ದಾರೆ. ಅಗತ್ಯವಿದ್ದರೆ ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಲು ಸಿದ್ದರಿದ್ದೇವೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವರಿಗೆ ಕರಂದ್ಲಾಜೆ ಪತ್ರ
ಈ ನಡುವೆ, ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಈ ಪ್ರಕರಣವನ್ನು ಎನ್‌ಐಎ ಮೂಲಕ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದೂ ಅವರು ಒತ್ತಾಯಿಸಿದರು.
ಬಿಜೆಪಿ ನಾಯಕರಿಗೂ ತಟ್ಟಿತು ಪ್ರತಿಭಟನೆಯ ಬಿಸಿ
ಈ ಸಂಬಂಧ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಇಂದು ಕೂಡ ಬೆಳ್ಳಾರೆ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ಇದೆ. ಇದರ ಬಿಸಿ ಬಿಜೆಪಿ ನಾಯಕರಿಗೆಲ್ಲ ತಟ್ಟಿದೆ. ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಮಗುಚಿ ಹಾಕುವ ಪ್ರಯತ್ನವೂ ಆಯಿತು. ಪೊಲೀಸರು ಸ್ಥಳದಲ್ಲಿದ್ದ ಕಾರಣ ಯಾವುದೇ ಅಪಾಯವಿಲ್ಲದೇ ಉದ್ರಿಕ್ತ ಬಿಜೆಪಿ ಕಾರ್ಯಕರ್ತರ ಗುಂಪಿನ ಮಧ್ಯದಿಂದ ನಳಿನ್ ಕುಮಾರ್ ಪಾರಾಗಿದ್ದಾರೆ.
ಪ್ರವೀಣ್ ನೆಟ್ಟಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಅಸಮಾಧಾನಗೊಂಡಿರುವ ಗುಂಪೊಂದು ಬೆಳ್ಳಾರೆ ಜಂಕ್ಷನಿನಲ್ಲಿ ದಿಕ್ಕಾರ ಕೂಗಿತ್ತು. ಇದೇ ರೀತಿ, ಸಚಿವ ಸುನೀಲ್ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಬೆಳ್ಳಾರೆಗೆ ತಲುಪಿದ ಕೂಡಲೇ ಗುಂಪು ದಿಕ್ಕಾರ ಕೂಗಿತ್ತು.