Praveen Nettaru: ಹೊಸ ಮನೆಗೆ ಸಿದ್ಧಪಡಿಸಿದ ಜಾಗದಲ್ಲೇ ಪ್ರವೀಣ್ ನೆಟ್ಟಾರು ಅಂತ್ಯಕ್ರಿಯೆ
Jul 27, 2022 09:25 PM IST
ಬೆಳ್ಳಾರೆಯ ಸ್ವಗ್ರಾಮದಲ್ಲಿ ಪಂಚಭೂತಗಳಲ್ಲಿ ಲೀನರಾದ ಪ್ರವೀಣ್ ನೆಟ್ಟಾರು
- ಅಂಗಡಿ ಮುಚ್ಚಿ ಮನೆಗೆ ತೆರಳಲು ಮುಂದಾದ ವೇಳೆ ದಾರುಣವಾಗಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಅವರ ಅಂತ್ಯ ಸಂಸ್ಕಾರ ಬುಧವಾರ ಅಪರಾಹ್ನ ಅವರ ಸ್ವಗ್ರಾಮದಲ್ಲೇ ನೆರವೇರಿತು. ಕುಟುಂಬಸ್ಥರ ಆಕ್ರಂದನ, ಅಭಿಮಾನಿಗಳು, ಹಿತೈಷಿಗಳ ಕಣ್ಣೀರಿನ ನಡುವೆ, ಹೊಸ ಮನೆ ಕಟ್ಟಿಸಬೇಕು ಎಂದು ಸಮತಟ್ಟು ಮಾಡಿದ ಜಾಗದಲ್ಲೇ ಅವರು ಪಂಚಭೂತಗಳಲ್ಲಿ ಲೀನರಾದರು.
ಬೆಳ್ಳಾರೆ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ದಾರುಣವಾಗಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು (Praveen Nettaru) ಅವರ ಅಂತ್ಯಸಂಸ್ಕಾರ ಬುಧವಾರ ಅಪರಾಹ್ನ ಅವರ ಸ್ವಗ್ರಾಮದಲ್ಲೇ ನೆರವೇರಿತು.
ಅವರು ಗ್ರಾಮದಲ್ಲಿ ಹೊಸ ಮನೆ ಕಟ್ಟಿಸಬೇಕು ಎಂಬ ಉದ್ದೇಶದಿಂದ ಸಮತಟ್ಟು ಮಾಡಿಸಿದ್ದ ಜಾಗದಲ್ಲೇ ಅವರು ಕುಟುಂಬಸ್ಥರ ಆಕ್ರಂದನದ ನಡುವೆ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಭಿಮಾನಿಗಳು, ಹಿತೈಷಿಗಳ ಕಣ್ಣೀರ ವಿದಾಯದ ನಡುವೆ ಈ ಅಂತಿಮ ಸಂಸ್ಕಾರ ನಡೆಯಿತು.
ಅವರು ಬೆಳ್ಳಾರೆಯಿಂದ ಪೆರುವಾಜೆಗೆ ಹೋಗುವ ಕ್ರಾಸ್ ಬಳಿ ಕೋಳಿ ಮಾಂಸದಂಗಡಿ ನಡೆಸುತ್ತಿದ್ದರು. ಎಂದಿನಂತೆ ಮಂಗಳವಾರ ರಾತ್ರಿ ವ್ಯಾಪಾರ ಮುಗಿಸಿ ಅಂಗಡಿಗೆ ಬಾಗಿಲು ಹಾಕುತ್ತಿರುವಾಗ ಬೈಕೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಮೇಲೆ ಮಾರಾಕಾಸ್ತ್ರಗಳಿಂದ ಏಕಾಕಿ ದಾಳಿ ನಡೆಸಿದ್ದರು.
ಬಿಜೆಪಿ ನಾಯಕರಿಗೂ ತಟ್ಟಿತು ಪ್ರತಿಭಟನೆಯ ಬಿಸಿ
ಈ ಸಂಬಂಧ ಬೆಳ್ಳಾರೆಯಲ್ಲಿ ಹಿಂದೂ ಕಾರ್ಯಕರ್ತರು ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಇಂದು ಕೂಡ ಬೆಳ್ಳಾರೆ ಪಟ್ಟಣದಲ್ಲಿ ಉದ್ವಿಗ್ನ ಸ್ಥಿತಿ ಇದೆ. ಇದರ ಬಿಸಿ ಬಿಜೆಪಿ ನಾಯಕರಿಗೆಲ್ಲ ತಟ್ಟಿದೆ. ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಮಗುಚಿ ಹಾಕುವ ಪ್ರಯತ್ನವೂ ಆಯಿತು. ಪೊಲೀಸರು ಸ್ಥಳದಲ್ಲಿದ್ದ ಕಾರಣ ಯಾವುದೇ ಅಪಾಯವಿಲ್ಲದೇ ಉದ್ರಿಕ್ತ ಬಿಜೆಪಿ ಕಾರ್ಯಕರ್ತರ ಗುಂಪಿನ ಮಧ್ಯದಿಂದ ನಳಿನ್ ಕುಮಾರ್ ಪಾರಾಗಿದ್ದಾರೆ.
ಪ್ರವೀಣ್ ನೆಟ್ಟಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನದ ವೇಳೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ವಿರುದ್ಧ ಅಸಮಾಧಾನಗೊಂಡಿರುವ ಗುಂಪೊಂದು ಬೆಳ್ಳಾರೆ ಜಂಕ್ಷನಿನಲ್ಲಿ ದಿಕ್ಕಾರ ಕೂಗಿತ್ತು. ಇದೇ ರೀತಿ, ಸಚಿವ ಸುನೀಲ್ ಕುಮಾರ್ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ಬೆಳ್ಳಾರೆಗೆ ತಲುಪಿದ ಕೂಡಲೇ ಗುಂಪು ದಿಕ್ಕಾರ ಕೂಗಿತ್ತು.
ಅಂತಿಮ ದರ್ಶನಕ್ಕೆ ಜನಸಾಗರ
ಇಂದು ಮಧ್ಯಾಹ್ನದ ವೇಳೆಗೆ ಬೆಳ್ಳಾರೆ ತಲುಪಿದ ಪ್ರವೀಣ್ ನೆಟ್ಟಾರು ಅವರ ಮೃತದೇಹದ ಅಂತಿಮ ದರ್ಶನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಬೆಳ್ಳಾರೆ ಮೇಲಿನ ಪೇಟೆಯ ಬಸ್ ನಿಲ್ದಾಣವಿರುವ ಸ್ಥಳ, ಸುತ್ತಮುತ್ತಲಿನ ಕಟ್ಟಡಗಳ, ರಸ್ತೆಗಳು, ಎಲ್ಲೆಲ್ಲೂ ಜನ ಸಾಗರವೇ ನೆರದಿತ್ತು. ಈ ಸಮಯದಲ್ಲಿ ಆಗಮಿಸಿದ ಬಿಜೆಪಿ ನಾಯಕರುಗಳಿಗೆ ದಿಕ್ಕಾರದ ಘೋಷಣೆಯ ಸ್ವಾಗತವೂ ದೊರಕಿದೆ.
ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಬೆಳ್ಳಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ನೆಟ್ಟಾರುಗೆ ಕೊಂಡೊಯ್ದು ಅಲ್ಲಿ ಅಂತಿಮ ಸಂಸ್ಕಾರ ಕಾರ್ಯಗಳನ್ನು ನಡೆಸಲಾಗುತ್ತದೆ. ಅಂತಿಮ ಸಂಸ್ಕಾರ ನಡೆಸಲು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು
ಇದೇ ಸಂದರ್ಭದಲ್ಲಿ ಹದಿನೈದು ಶಂಕಿತರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿಗಳೂ ಹೊರಬೀಳುತ್ತಿದ್ದು, ಈ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬರಬೇಕಷ್ಟೇ. ಪ್ರವೀಣ್ ನೆಟ್ಟಾರು ಹತ್ಯೆಗೀಡಾದ ಬಳಿಕ ಬೆಳ್ಳಾರೆಯಲ್ಲಿ ಶೋಕಸಾಗರ ಮಡುಗಟ್ಟಿದೆ. ಸುಳ್ಯ, ಪುತ್ತೂರು ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ.
ಪ್ರವೀಣ್ ಕೊಲೆಗೆ ಕಾರಣ ಬಹಿರಂಗವಾಗಿಲ್ಲ
ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಕಾರಣ ಏನು ಎಂಬುದು ಬಹಿರಂಗವಾಗಿಲ್ಲ. ರಾಜಕೀಯ ದ್ವೇಷ ಎಂದು ಕೆಲವರು ಹೇಳಿದರೆ, ಇಲ್ಲ ವೈಯಕ್ತಿಕ ದ್ವೇಷ ಎಂದು ಹೇಳುತ್ತಿದ್ದಾರೆ. ಕೊಲೆ ಮಾಡಿದವರು ಯಾರು ಎಂಬುದೂ ಸುಳಿವು ಸಿಕ್ಕಿಲ್ಲ. ಪೊಲೀಸರು ಶಂಕಿತರ ವಿಚಾರಣೆ ನಡೆಸುತ್ತಿದ್ದಾರೆಯೇ ಹೊರತು, ಮಾಹಿತಿ ಬಹಿರಂಗಪಡಿಸಿಲ್ಲ. ಹೀಗಾಗಿ ವದಂತಿಗಳ ಹೆಚ್ಚು ಹರಿದಾಡುತ್ತಿದೆ. ವಾಟ್ಸ್‌ಆಪ್ ಗ್ರೂಪ್‌ಗಳಲ್ಲಿ ಹಲವರ ಫೋಟೋ ಹರಿದಾಡುತ್ತಿದ್ದು, ಇವರೇ ಹತ್ಯೆ ಮಾಡಿದ್ದು ಎಂಬ ಒಕ್ಕಣೆಯೂ ಕಾಣಸಿಕ್ಕಿದೆ.