logo
ಕನ್ನಡ ಸುದ್ದಿ  /  ಕರ್ನಾಟಕ  /  Kh Muniyappa Profile: ದೇವನಹಳ್ಳಿ ಕಣದಲ್ಲಿದ್ದಾರೆ 7 ಬಾರಿ ಸಂಸದರಾಗಿದ್ದ ಕೆಎಚ್‌ ಮುನಿಯಪ್ಪ; ಕಾಂಗ್ರೆಸ್ ನಾಯಕನ ಬದುಕಿನ ವಿವರ ಇಲ್ಲಿದೆ

KH Muniyappa Profile: ದೇವನಹಳ್ಳಿ ಕಣದಲ್ಲಿದ್ದಾರೆ 7 ಬಾರಿ ಸಂಸದರಾಗಿದ್ದ ಕೆಎಚ್‌ ಮುನಿಯಪ್ಪ; ಕಾಂಗ್ರೆಸ್ ನಾಯಕನ ಬದುಕಿನ ವಿವರ ಇಲ್ಲಿದೆ

Raghavendra M Y HT Kannada

May 06, 2023 03:38 PM IST

google News

ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕೆಹೆಚ್ ಮುನಿಯಪ್ಪ

  • ಕೋಲಾರದಿಂದ ಸತತವಾಗಿ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಕೆಹೆಚ್‌  ಮುನಿಯಪ್ಪ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕೆಹೆಚ್‌ ಅವರ  ಕುರಿತ ಒಂದು ವರದಿ ಇಲ್ಲಿದೆ.

ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕೆಹೆಚ್ ಮುನಿಯಪ್ಪ
ಕೇಂದ್ರ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕೆಹೆಚ್ ಮುನಿಯಪ್ಪ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಈ ಬಾರಿ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ದೊಡ್ಡ ಘಟಾನುಘಟಿಗಳೇ ಅಖಾಡಕ್ಕೆ ಧುಮುಕಿದ್ದು, ಅದರಲ್ಲಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿದ್ದ ಕೆಹೆಚ್‌ ಮುನಿಯಪ್ಪ ಕೂಡ ಒಬ್ಬರು. ಆದರೆ ಈ ಬಾರಿಯ ಎಲೆಕ್ಷನ್‌ನಲ್ಲಿ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಪರ್ಧಿಸುವ ಬದಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ. ಇದಕ್ಕೆ ಕಾರಣವೂ ಇದೆ.

1991 ರಿಂದ 2019ರವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಕಂಬದಹಳ್ಳಿ ಹನುಮಪ್ಪ ಮುನಿಯಪ್ಪ (ಕೆಹೆಚ್ ಮುನಿಯಪ್ಪ) ದೆಹಲಿ ಮಟ್ಟದ ಕಾಂಗ್ರೆಸ್‌ನಲ್ಲಿ ಭಾರಿ ಪ್ರಭಾವವನ್ನು ಹೊಂದಿದ್ದಾರೆ. ಕೇಂದ್ರದಲ್ಲಿ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ರಾಜ್ಯ ಸಚಿವರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ, ರೈಲ್ವೆ ಖಾತೆ ರಾಜ್ಯ ಸಚಿವರಾಗಿಯೂ ಹಲವು ಯೋಜನೆಗಳನ್ನು ರಾಜ್ಯಕ್ಕೆ ತಂದಿದ್ದಾರೆ. ಇವರ ಅವಧಿಯಲ್ಲೇ ಬಂಗಾರಪೇಟೆಯಿಂದ ಕೋಲಾರಕ್ಕೆ ರೈಲು ಸಂಪರ್ಕ ಸಿಕ್ಕಿದ್ದು ಎಂದು ಹೇಳಲಾಗಿದೆ.

ಪರಿಶಿಷ್ಟ ಜಾತಿ ಅದರಲ್ಲೂ ಎಡಕೈ (ಮಾದಿಗ) ಸಮುದಾಯಕ್ಕೆ ಸೇರಿರುವ ಇವರು ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಶಿಡ್ಲಘಟ್ಟದ ತಾಲೂಕು ಕಾಂಗ್ರೆಸ್, ಕೋಲಾರ ಜಿಲ್ಲಾ ಕಾಂಗ್ರೆಸ್, ಪ್ರದೇಶ ಕಾಂಗ್ರೆಸ್ ಸಮಿತಿ, ಲೀಗಲ್ ಸೆಲ್ ಸೇರಿ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. 35 ವರ್ಷಗಳ ಕಾಲ ಸಂಸದರಾಗಿದ್ದ ಕೆಹೆಚ್‌ ಮುನಿಯಪ್ಪ ಈ ಅವಧಿಯಲ್ಲಿ ರಾಜಕೀಯವಾಗಿ ಯಾರ ವಿರೋಧವನ್ನೂ ಕಟ್ಟಿಕೊಂಡಿರಲಿಲ್ಲ. ಎಲ್ಲಾ ಪಕ್ಷಗಳಲ್ಲಿನ ನಾಯಕರೊಂದಿಗೆ ಉತ್ತಮ ಸಂಬಂಧವನ್ನ ಹೊಂದಿದ್ದರು. ಎಲ್ಲಿ ಯಾರನ್ನು ಹೇಗೆ ಮಣಿಸಬೇಕೆಂಬ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಅವರ ಈ ಕಲೆಯೇ ಸತತ ಗೆಲುವಿಗೆ ಕಾರಣವಾಗಿತ್ತು.

ಆದರೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ವಿರೋಧ ಕೇಳಿಬಂದಿತ್ತು. ಅದೇ ಸಮಯಕ್ಕೆ ಅಂದರೆ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಕ್ಷೇತ್ರದ ಜನರಿಗೆ ಮುಖ ಪರಿಚಯವೇ ಇಲ್ಲದ ಎಸ್ ಮುನಿಸ್ವಾಮಿ ವಿರುದ್ಧ ಬರೋಬ್ಬರಿ 1 ಲಕ್ಷ ಮತಗಳ ಅಂತರದಲ್ಲಿ ಸೋಲು ಕಾಣಬೇಕಾಯಿತು. ಆಗ ಕೆಹೆಚ್‌ ತಮ್ಮ ಸೋಲಿಗೆ ಪಕ್ಷದಲ್ಲಿನ ನಾಯಕರೇ ಕಾರಣ ಅಂತ ದೂರಿದ್ದರು. ಬಳಿಕ ಶ್ರೀನಿವಾಸಪುರ ಕ್ಷೇತ್ರದ ರಮೇಶ್ ಕುಮಾರ್ ಸೇರಿದಂತೆ ಇತರೆ ಕ್ಷೇತ್ರಗಳ ಶಾಸಕರು, ಮುಖಂಡರ ವಿರೋಧವನ್ನು ಕಟ್ಟಿಕೊಂಡಿದ್ದರು. ಆದರೆ ಇವರೊಂದಿಗೆ ಇದ್ದ ವೈಮನಸ್ಸು ಮರೆತು ಹೊಂದಾಗಿದ್ದಾರೆ.

ಕಾಂಗ್ರೆಸ್‌ ಬಿಡಲು ಮುಂದಾಗಿದ್ದ ಕೆಹೆಚ್‌ ಮುನಿಯಪ್ಪ

ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ, ಡಾ ಎಂ ಸಿ ಸುಧಾಕರ್ ಹಾಗೂ ಕೊತ್ತನೂರು ಮಂಜುನಾಥ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದರಿಂದ ಮುನಿಸಿಕೊಂಡಿದ್ದ ಕೈ ನಿಷ್ಟಾವಂತ ಕೆಹೆಚ್‌ ಕಳೆದ ವರ್ಷ ಜೆಡಿಎಸ್‌ ಸೇರಿಲು ಸಿದ್ಧವಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಹೆಚ್‌ಡಿ ದೇವೇಗೌಡರ ಜೊತೆಗೂ ಮಾತನಾಡಿದ್ದಾರೆ ಎನ್ನಲಾಗಿತ್ತು. ಈ ಬೆಳವಣಿಗೆಗಳು ನಡೆದ ಕೆಲವೇ ದಿನಗಳಲ್ಲಿ ಎಲ್ಲವನ್ನು ನುಂಗಿಕೊಂಡು ಪಕ್ಷದಲ್ಲೇ ಮುಂದುವರೆಯುವ ನಿರ್ಧಾರ ಮಾಡಿದ್ದರು.

ಕಾಂಗ್ರೆಸ್ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿಯಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ ಗಿಟ್ಟಿಸಿಕೊಳ್ಳುವಲ್ಲಿ ಕೆಹೆಚ್‌ ಮುನಿಯಪ್ಪ ಯಶಸ್ವಿಯಾಗಿದ್ದರು. ಅಲ್ಲದೆ, ರಾಜ್ಯ ರಾಜಕಾರಣಕ್ಕೆ ಮರಳಬೇಕೆಂಬ ಅವರ ಕನಸು ನನಸಾಗಿದೆ. ಆದರೆ ಇವರಿಗೆ ಟಿಕೆಟ್‌ ಸಿಕ್ಕಿದ್ದು ಪಕ್ಕಾ ಆಗುತ್ತಿದ್ದಂತೆ ದೇವನಹಳ್ಳಿ ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದಿತ್ತು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಇಲ್ಲಿದ್ದರೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆಯನ್ನು ನೀಡಿದ್ರು. ಸದ್ಯ ಭಿನ್ನಮತವನ್ನು ಶಮನಗೊಳಿಸಿಕೊಂಡಿದ್ದಾರೆ.

ಕೆಹೆಚ್ ದೇವನಹಳ್ಳಿ ವಿಧಾನಸಭಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲು ಒಂದು ಕಾರಣವಿದೆ. ಇಲ್ಲಿ ಒಟ್ಟು 2,12,185 ಮತದಾರರು ಇದ್ದು, ಈ ಪೈಕಿ 1,05,520 ಪುರುಷರು ಹಾಗೂ 1,06,646 ಮಹಿಳಾ ಮತದಾರರು ಹಾಗೂ 19 ಇತರೆ ಮತದಾರರು ಇದ್ದಾರೆ. ಇನ್ನ ಜಾತಿ ಲೆಕ್ಕಾಚಾರವನ್ನು ನೋಡುವುದಾದರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಹಾಗೂ ಒಕ್ಕಲಿಗ ಮತಗಳೇ ನಿರ್ಣಾಯಕ. ಇದೇ ಕಾರಣಕ್ಕೆ ತಮ್ಮ ಸಮುದಾಯದ ಮತದಾರರು ಹೆಚ್ಚಿರುವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸುಲಭವಾಗಿ ಗೆಲ್ಲಬಹುದೆಂಬ ಲೆಕ್ಕಾಚಾರ ಇವರದ್ದು. ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್ ಕೆಜಿಎಫ್‌ನ ಹಾಲಿ ಶಾಸಕರಾಗಿದ್ದು, ಈ ಬಾರಿಯೂ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆದು ಕಣದಲ್ಲಿ ಇದ್ದಾರೆ.

ದೇವನಹಳ್ಳಿಯಲ್ಲಿ ಜೆಡಿಎಸ್‌ನ ಎನ್‌ಎಲ್‌ ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನ ವೆಂಕಟಸ್ವಾಮಿಯವರನ್ನು 17,000 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಆದರೆ ಈ ಬಾರಿ ಇಲ್ಲಿ ಕೆ ಹೆಚ್‌ ಮುನಿಯಪ್ಪ ಟಿಕೆಟ್‌ ಪಡೆದು ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿ ಮತಯಾಚನೆ ಮಾಡುತ್ತಿದ್ದಾರೆ. ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಇವರನ್ನು ದೇವನಹಳ್ಳಿಯ ಜನತೆ ಕೈ ಹಿಡಿಯುತ್ತಾರೆ ಎಂಬುದು ಮೇ 13 ರಂದು ಹೊರಬೀಳಲಿರುವ ಫಲಿತಾಂಶದಿಂದ ಗೊತ್ತಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ