logo
ಕನ್ನಡ ಸುದ್ದಿ  /  ಕರ್ನಾಟಕ  /  ಅವಾಚ್ಯ ಪದ ಬಳಕೆ ಆರೋಪ: ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ, ಪೊಲೀಸ್‌ ದೂರು

ಅವಾಚ್ಯ ಪದ ಬಳಕೆ ಆರೋಪ: ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ, ಪೊಲೀಸ್‌ ದೂರು

Jayaraj HT Kannada

Dec 19, 2024 06:29 PM IST

google News

ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ

    • ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಗದ್ದಲ, ಹೈಡ್ರಾಮಾ ಬೆನ್ನಲ್ಲೇ ಸುವರ್ಣ ಸೌಧದ ಎಲ್ಲಾ ಗೇಟ್‌ಗಳನ್ನು ಬಂದ್‌ ಮಾಡಿ ಭಾರಿ ಭದ್ರತೆ ನೀಡಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಅವಾಚ್ಯ ಪದ ಬಳಕೆ ಮಾಡಿದ ಆರೋಪದ ಮೇಲೆ ಎಂಎಲ್‌ಸಿ ಸಿಟಿ ರವಿ ವಿರುದ್ಧ ರಾಜ್ಯದಾದ್ಯಂತ ಪ್ರತಿಭಟನೆ ನಡೆದಿದೆ. ಸಚಿವೆ ಪೊಲೀಸ್‌ ದೂರನ್ನೂ ನೀಡಿದ್ದಾರೆ.
ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ
ಗದ್ದಲ ಬೆನ್ನಲ್ಲೇ ಸುವರ್ಣ ಸೌಧದ ಗೇಟ್‌ಗಳು ಕ್ಲೋಸ್‌; ಸಿಟಿ ರವಿ ವಿರುದ್ಧ ಪ್ರತಿಭಟನೆ (PTI File)

ಬೆಳಗಾವಿಯ ಸುವರ್ಣ ವಿಧಾನಸೌಧ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಜನನಾಯಕರ ನಡುವೆ ಮಾತಿಗೆ ಮಾತು ಬೆಳೆದು, ಕೊನೆಗೆ ಸಿಟಿ ರವಿ ಮೇಲೆ ಹಲ್ಲೆ ಯತ್ನ ನಡೆದಿದೆ.‌ ರಾಜ್ಯಸಭೆಯಲ್ಲಿ ಬಿಆರ್‌ ಆಂಬೇಡ್ಕರ್‌ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ, ವಿಧಾನ ಪರಿಷತ್‌ನಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ನಂತರ ಸದನದಲ್ಲಿ ಭಾರಿ ಗದ್ದಲದ ವಾತಾವರಣ ಸೃಷ್ಟಿಯಾಯ್ತು. ಎಂಎಲ್‌ಸಿ ಸಿಟಿ ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮಾತಿಗೆ ಮಾತು ಬೆಳೆದಿದೆ. ಅಪಘಾತ ಮಾಡಿರುವ ಕಾರಣ ನಿಮ್ಮನ್ನು ಕೊಲೆಗಡುಕ ಎನ್ನಬಹುದಲ್ಲ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಇದಕ್ಕೆ ಕೆರಳಿದ ಸಿಟಿ ರವಿ, ಹೆಬ್ಬಾಳ್ಕರ್‌ ಅವರಿಗೆ ಅವಾಚ್ಯ ಪದ ಬಳಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದನ್ನು ಸಹಿಸದೆ ಆಕ್ರೋಶ ವ್ಯಕ್ತಪಡಿಸಿದ ಹೆಬ್ಬಾಳ್ಕರ್‌, ನಿನ್ನ ಮನೆಯಲ್ಲಿ ಹೆಣ್ಮಕ್ಕಳಿಲ್ಲವೇ, ನಿನಗೆ ತಾಯಿ ಇಲ್ಲೇನೋ? ಹೆಣ್ಣು ಮಗಳಿಲ್ಲವೇನೋ ಎಂದು ಪ್ರಶ್ನಿಸಿದ್ದಾರೆ.

ಆಕ್ಷೇಪಾರ್ಹ ಪದ ಬಳಸಿ ನಿಂದಿಸಿದ ಬೆನ್ನಲ್ಲೇ, ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಸಿಟಿ ರವಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಕಾರಿಡಾರ್‌ ಬಳಿ ಸಿಟಿ ರವಿ ನಡೆದುಕೊಂಡು ಬರುತ್ತಿದ್ದಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು, ಅವರ ಮೇಲೆ ಮುತ್ತಿಗೆ ಹಾಕಿ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ. ಹಲ್ಲೆ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.

ಘಟನೆ ಬಳಿಕ ತನ್ನ ಮೇಲೆ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಎಂಎಲ್‌ಸಿ ಸಿಟಿ ರವಿ, ಸುವರ್ಣ ಸೌಧದ ಕಾರಿಡಾರ್‌ನಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. “ನನ್ನ ಮೇಲೆ ಕೊಲೆ ಯತ್ನ ನಡೆದಿದೆ. ಸುವರ್ಣ ಸೌಧದ ಮೊಗಸಾಲೆಯಲ್ಲಿ ಹೋಗುತ್ತಿದ್ದಾಗ ನನ್ನ ಮೇಲೆ ಹಲ್ಲೆ ಮಾಡಲು ಬಂದಿದ್ದಾರೆ. ಒಬ್ಬ ಶಾಸಕನಿಗೆ ರಕ್ಷಣೆ ಇಲ್ಲ ಎಂದಾದರೆ, ರಾಜ್ಯದ ಇತರ ಜನರ ಪರಿಸ್ಥಿತಿ ಏನು ಎಂಬುದನ್ನು ನೀವೇ ಲೆಕ್ಕ ಹಾಕಿ.‌ ಇದಕ್ಕಾಗಿ ಕಾಂಗ್ರೆಸ್‌ ವಿರುದ್ಧ ಧರಣಿ ನಡೆಸುತ್ತಿದ್ದೇನೆ. ಲಕ್ಷ್ಮೀ ಹೆಬ್ಬಾಳ್ಕರ್‌ ಹೆಸರು ಹೇಳಿಕೊಂಡು ದಾಳಿ ನಡೆಸಿದ್ದಾರೆ” ಎಂದು ಹೇಳಿದರು.

ಸದನದ ಕಲಾಪ ಮುಂದೂಡಿಕೆ

ಘಟನೆ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನದ ಕಲಾಪವನ್ನು ಮುಂದೂಡಿದ್ದಾರೆ. ಇಂದು ಕಲಾಪದ ಕೊನೆಯ ದಿನವಾಗಿದ್ದರಿಂದ, ಚಳಿಗಾಲದ ಅಧಿವೇಶನ ಇಂದಿಗೆ ಮುಗಿದಂತಾಗಿದೆ.

ಸುವರ್ಣ ಸೌಧದ ಎಲ್ಲಾ ಗೇಟ್‌ಗಳು ಬಂದ್

ಘಟನೆ ಬೆನ್ನಲ್ಲೇ ಸುವರ್ಣ ಸೌಧದ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಸೌಧದ ಎಲ್ಲಾ ಗೇಟ್‌ಗಳನ್ನು ಮುಚ್ಚಲಾಗಿದೆ. ವಿಧಾನ ಪರಿಷತ್‌ ಮಾತ್ರವಲ್ಲದೆ ಸಂಪೂರ್ಣ ಸುವರ್ಣ ಸೌಧದ ಒಳಗೆ ಯಾರಿಗೂ ಪ್ರವೇಶ ನೀಡಲಾಗುತ್ತಿಲ್ಲ.

ರಾಜ್ಯಾದ್ಯಂತ ಪ್ರತಿಭಟನೆ

ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಎಂಎಲ್‌ಸಿ ಸಿಟಿ ರವಿ ಮೇಲೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದ ವಿವಿಧೆಡೆ ಸಿಟಿ ರವಿ ವಿರುದ್ಧ ಪ್ರತಿಭಟನೆ ನಡೆದಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಗಿದ್ದು, ಅತ್ತ ಚಿಕ್ಕಮಗಳೂರಿನಲ್ಲೂ ಆಕ್ರೋಶ ವ್ಯಕ್ತಪಡಿಸಿಲಾಗಿದೆ.

ಪೊಲೀಸರಿಗೆ ದೂರು ನೀಡಿದ ಸಚಿವೆ

ಘಟನೆ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹಿರೇಬಾಗೇವಾಡಿ ಪೊಲೀಸ್‌ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಹಿರೇಬಾಗೇವಾಡಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ