ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಕೆ ಕ್ರಿಮಿನಲ್ ಅಪರಾಧ ಎಂದ ಸಿಎಂ ಸಿದ್ದರಾಮಯ್ಯ; ಯಾರು ಏನು ಹೇಳಿದರು
ಕನ್ನಡ ಸುದ್ದಿ  /  ಕರ್ನಾಟಕ  /  ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಕೆ ಕ್ರಿಮಿನಲ್ ಅಪರಾಧ ಎಂದ ಸಿಎಂ ಸಿದ್ದರಾಮಯ್ಯ; ಯಾರು ಏನು ಹೇಳಿದರು

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಕೆ ಕ್ರಿಮಿನಲ್ ಅಪರಾಧ ಎಂದ ಸಿಎಂ ಸಿದ್ದರಾಮಯ್ಯ; ಯಾರು ಏನು ಹೇಳಿದರು

CT Ravi: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶದ ನಡುವೆ, ವಿಧಾನ ಪರಿಷತ್ ಕಲಾಪ ಮುಂದೂಡಲ್ಪಟ್ಟ ಸಮಯದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಕೆ ಮಾಡಿದ್ದು ಕ್ರಿಮಿನಲ್ ಅಪರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಈ ಪ್ರಕರಣ ಸಂಬಂಧ ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ಎಡ ಚಿತ್ರ) ವಿರುದ್ಧ ಸಿಟಿ ರವಿ (ಬಲ ಚಿತ್ರ) ಅವಾಚ್ಯ ಪದ ಬಳಕೆ ಕ್ರಿಮಿನಲ್ ಅಪರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. (ಕಡತ ಚಿತ್ರ)
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ಎಡ ಚಿತ್ರ) ವಿರುದ್ಧ ಸಿಟಿ ರವಿ (ಬಲ ಚಿತ್ರ) ಅವಾಚ್ಯ ಪದ ಬಳಕೆ ಕ್ರಿಮಿನಲ್ ಅಪರಾಧ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. (ಕಡತ ಚಿತ್ರ)

CT Ravi: ಬೆಳಗಾವಿಯಲ್ಲಿ ಸುವರ್ಣ ಸೌಧದಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶ ನಡೆಯುತ್ತಿದ್ದು, ಇಂದು (ಡಿಸೆಂಬರ್ 19) ಅಂಬೇಡ್ಕರ್ ವಿವಾದ ಸಂಬಂಧ ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಈ ಗದ್ದಲದ ನಡುವೆ ಪರಿಷತ್ ಸದಸ್ಯ ಬಿಜೆಪಿ ನಾಯಕ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿದರು ಎಂಬ ಆರೋಪ ವ್ಯಕ್ತವಾಗಿದೆ. ಇದು ಸುವರ್ಣ ಸೌಧದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದ್ದು, ಸಿಟಿ ರವಿ ಮೇಲೆ ಹಲ್ಲೆ ನಡೆಸಲು ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಯತ್ನಿಸಿದ್ದು ಕಂಡುಬಂತು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿಟಿ ರವಿ ಹೇಳಿಕೆ ಕ್ರಿಮಿನಲ್ ಅಪರಾಧ ಎಂದು ಹೇಳಿದರು. ಈ ನಡುವೆ, ವಿಧಾನ ಪರಿಷತ್ ಸಭಾಪತಿಗೂ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ. ಈ ಪ್ರಕರಣ ಸಂಬಂಧಿಸಿ ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಪದ ಬಳಕೆ ಕ್ರಿಮಿನಲ್ ಅಪರಾಧ: ಸಿಎಂ ಸಿದ್ದರಾಮಯ್ಯ

ವಿಧಾನ ಪರಿಷತ್ ಸಭಾಂಗಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ ಅವಾಚ್ಯ ಪದ ಬಳಸಿದ್ದು ಗಮನಕ್ಕೆ ಬಂದಿದೆ. ಆ ಸಂದರ್ಭದಲ್ಲಿ ನಾನು ಅಲ್ಲಿ ಇರಲಿಲ್ಲ. ಆದರೆ ಅವರು 10 ಸಲ ಆ ರೀತಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾಗಿ ನಮ್ಮ ಸದಸ್ಯರು ಹೇಳಿದ್ದಾರೆ. ಸಿಟಿ ರವಿ ಹೇಳಿಕೆ ಕ್ರಿಮಿನಲ್ ಅಪರಾಧ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಲಕ್ಷ್ಮೀ ಹೆಬ್ಬಾಳ್ಕರ್ ನಿರ್ಧರಿಸಿದ್ದಾರೆ. ಅವರು ಬಹಳ ನೊಂದಿದ್ದಾರೆ. ಸಿಟಿ ರವಿ ವಿರುದ್ಧ ಪೊಲೀಸರು ಏನು ಕ್ರಮ ತಗೊಳ್ತಾರೆ ಎಂದು ನೋಡೋಣ. ಇದು ಒಂದು ರೀತಿಯ ಲೈಂಗಿಕ ಕಿರುಕುಳವಾಗುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪರಿಷತ್ ಸಭಾಪತಿಗಳಿಗೆ ದೂರು ನೀಡಿದ್ದಾರೆ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಎಂಎಲ್‌ಸಿ ಸಿಟಿ ರವಿ ಅವಾಚ್ಯ ಪದ ಬಳಸಿದ ಆರೋಪ; ಯಾರು ಏನು ಹೇಳಿದರು

1) ಉಮಾಶ್ರೀ: ಯಾವ ಹೆಣ್ಣು ಕೂಡ ತನ್ನನ್ನು ತಾನು ಪ್ರಾಸ್ಟಿ*ಟ್‌ ಅಂತ ಹೇಳಿದರು ಎಂದು ಸುಳ್ಳು ಹೇಳಲ್ಲ. ಸಿಟಿ ರವಿ ಆ ಪದ ಬಳಕೆ ಮಾಡಿದ್ದು ನಿಜ. ನನಗೆ ಅದು ಕೇಳಿಸಿದೆ. ನಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಡ್ರಗ್ ಅಡಿಕ್ಟ್ ಅಂತ ಸಿಟಿ ರವಿ ಹೇಳಿದಾಗ, ಲಕ್ಷ್ಮೀ ಹೆಬ್ಬಾಳ್ಕರ್‌ ನೀವು ಅಪಘಾತದಲ್ಲಿ ಎರಡು ಕೊಲೆ ಮಾಡಿದ್ದೀರಿ. ಕೊಲೆಗಡುಕರು ಎಂದು ಸಿಟಿ ರವಿ ಅವರನ್ನು ಉದ್ದೇಶಿಸಿ ಹೇಳಿದ್ದರು. ಆಗ ಸಿಟಿ ರವಿ ಅವರು ಪ್ರಾಸ್ಟಿ*ಟ್ ಅಂತ 10 ಬಾರಿ ಕೂಗಿ ಹೇಳಿದ್ರು ಎಂದು ಮಾಜಿ ಸಚಿವೆ ಉಮಾಶ್ರೀ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2) ಯತೀಂದ್ರ ಸಿದ್ದರಾಮಯ್ಯ: ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ 2 ಸಾಲು ಹಿಂದೆ ನಾನಿದ್ದೆ. ಲಕ್ಷೀ ಹೆಬ್ಬಾಳ್ಕರ್ ಮತ್ತು ಸಿಟಿ ರವಿ ಮಾತಿನ ಚಕಮಕಿ ನಡೆಸಿದ್ದರು. ಲಕ್ಷ್ಮಿ ಅವರು ಸಿಟಿ ರವಿ ಅವರನ್ನು ಕೊಲೆಗಡುಕ, ಕೊಲೆಗಡುಕ ಅಂತ ಹೇಳ್ತಾ ಇದ್ದರು. ಆ ಕಡೆಯಿಂದ ಸಿಟಿ ರವಿ ಅವರು ಪ್ರಾಸ್ಟಿ*ಟ್ ಅಂತ ಕೂಗ್ತಾ ಇದ್ದರು. ನಾನು ತಪ್ಪಾಗಿ ಕೇಳಿಸಿಕೊಂಡೆನಾ ಅಂತ ಸುಮ್ಮನಿದ್ದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಬಂದು ನನ್ನ ಬಳಿ ಹೇಳಿದ ಬಳಿಕ ಸಿಟಿ ರವಿ ಹೇಳಿದ್ದು ಸ್ಪಷ್ಟವಾಯಿತು ಎಂದು ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

3) ನಾಗರಾಜ್ ಯಾದವ್: ಅಂಬೇಡ್ಕರ್ ಅವರನ್ನು ಅವಮಾನಿಸಿದ ವಿಚಾರ ಸದನದಲ್ಲಿ ಪ್ರಸ್ತಾಪವಾಗಿತ್ತು. ಅಮಿತ್ ಶಾ ವಿಚಾರ ಪ್ರಸ್ತಾಪವಾದಾಗ ಗದ್ದಲವಾಗಿದೆ. ಆಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿಗೆ ಕೊಲೆಗಾರ ಎಂದು ಕೂಗಿದ್ದು ಕೇಳಿಸಿತು. ಸಿಟಿ ರವಿ ಕೂಡ ಉತ್ತರವಾಗಿ ಆಕ್ಷೇಪಾರ್ಹ ಪದ ಬಳಿಸಿದ್ರು. ಈ ಬಗ್ಗೆ ನಾವು ಸಭಾಪತಿಯವರಿಗೆ ದೂರು ನೀಡಿದ್ದೇವೆ. ರವಿ ಅವರನ್ನು ಪರಿಷತ್‌ನಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದು ಎಂಎಲ್‌ಸಿ ನಾಗರಾಜ್ ಯಾದವ್ ಹೇಳಿದ್ದಾರೆ.

4) ಶರವಣ: ವಿಧಾನ ಪರಿಷತ್‌ನಲ್ಲಿ ಅಂಬೇಡ್ಕರ್ ವಿಚಾರವಾಗಿ ಕಾಂಗ್ರೆಸ್ ಮತ್ತು ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯುತ್ತಿತ್ತು. ಆಗ ಗದ್ದಲದ ಕಾರಣ ವಿಧಾನ ಪರಿಷತ್ ಕಲಾಪವನ್ನು 10 ನಿಮಿಷ ಮುಂದೂಡಿ ಒಳನಡೆದರು. ಆಗ ಕೊಲೆಗಡುಕ, ಡ್ರಗ್ ಅಡಿಕ್ಟ್‌ ಎಂಬ ಪದಗಳು ಕೇಳಿಸಿತು. ಸಿಟಿ ರವಿ ಹತ್ತಿರವೇ ಇದ್ದೆ. ಅಶ್ಲೀಲ ಅಥವಾ ಅವಾಚ್ಯ ಪದ ಬಳಸಿದ್ದು ಗಮನಕ್ಕೆ ಬರಲಿಲ್ಲ ಎಂದು ಜೆಡಿಎಸ್ ಸದಸ್ಯ ಶರವಣ ಹೇಳಿದ್ದಾಗಿ ಟಿವಿ 9 ಕನ್ನಡ ವರದಿ ಮಾಡಿದೆ.

5) ಛಲವಾದಿ ನಾರಾಯಣ ಸ್ವಾಮಿ: ಸಿಟಿ ರವಿ ಏನು ಹೇಳಿದ್ರು, ಲಕ್ಷ್ಮಿ ಹೆಬ್ಬಾಳ್ಕರ್ ಏನು ಹೇಳಿದರು ಎಂದು ಗಮನಿಸಿಲ್ಲ. ಸದನದ ಒಳಗೆ ನಡೆದಿರುವ ಕಾರಣ ವಿಡಿಯೋ, ಆಡಿಯೋ ದಾಖಲೆಗಳಿರುತ್ತವೆ. ಪರಿಶೀಲನೆ ಬಳಿಕ ಸತ್ಯ ಹೊರಗೆ ಬರಲಿದೆ ಎಂದು ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.

Whats_app_banner