ದೀಪಾವಳಿ ವೇಳೆಯೂ ಶುದ್ದ ಗಾಳಿ; ಭಾರತದ ಟಾಪ್ 10 ನಗರಗಳ ಪಟ್ಟಿಯಲ್ಲಿ ಚನ್ನರಾಯಪಟ್ಟಣ, ಹಾಸನ, ಬೇಲೂರಿಗೆ ಸ್ಥಾನ, ಬೆಂಗಳೂರಿಗೆ ಎಷ್ಟನೇ ಸ್ಥಾನ
Nov 05, 2024 12:55 PM IST
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರವು ದೇಶದ ಟಾಪ್ ಶುದ್ದ ಗಾಳಿ ನಗರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
ಶುದ್ದ ಗಾಳಿ( Quality air) ಹೊಂದಿರುವ ಭಾರತದ ಟಾಪ್ 10 ನಗರಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂರನೇ ಸ್ಥಾನ, ಹಾಸನ ಒಂಬತ್ತು ಹಾಗೂ ಬೇಲೂರು ನಗರ ಹತ್ತನೇ ಸ್ಥಾನ ಪಡೆದಿವೆ.
ಬೆಂಗಳೂರು: ದೀಪಾವಳಿ ವೇಳೆ ಕರ್ನಾಟಕದ ಮೂರು ನಗರಗಳು ಶುದ್ದಗಾಳಿಯನ್ನು ಹೊಂದಿರುವ ಭಾರತದ ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅದೂ ಮಲೆನಾಡಿನ ಹಾಸನ ಜಿಲ್ಲೆಯ ಮೂರು ನಗರಗಳು ಈ ಪಟ್ಟಿಯಲ್ಲಿವೆ. ಚನ್ನರಾಯಪಟ್ಟಣ ನಗರವು ಮೂರನೇ ಸ್ಥಾನದಲ್ಲಿದ್ದರೆ, ಹಾಸನ ನಗರ ಒಂಬತ್ತು ಹಾಗೂ ಐತಿಹಾಸಿಕ ದೇಗುಲ ನಗರಿ ಚನ್ನಕೇಶವನ ತವರು ಬೇಲೂರು ನಗರ ಹತ್ತನೇ ಸ್ಥಾನ ಪಡೆದಿವೆ. ಭಾರತದ ಗುಣಮಟ್ಟ ನಿಯಂತ್ರಣ ಘಟಕ quality control of India(QCI)ವು ನಡೆಸಿರುವ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದ್ದು. ಇದರಲ್ಲಿ ಈ ಮೂರು ನಗರಗಳೂ ಸ್ಥಾನ ಪಡೆದಿವೆ. ಆದರೆ ಅಧಿಕೃತವಾಗಿ ಚನ್ನರಾಯಪಟ್ಟಣ ಪುರಸಭೆಗಾಗಲಿ, ಹಾಸನದಲ್ಲಿರುವ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಾಗಲಿ ಮಾಹಿತಿ ಬಂದಿಲ್ಲ.
ಭಾರತದ ಗುಣಮಟ್ಟ ನಿಯಂತ್ರಣ ಘಟಕ ಭಾರತದ ಪ್ರಮುಖ ಮಹಾನಗರ, ನಗರಗಳು, ಪಟ್ಟಣಗಳ ವಾಯು ಮಾಲಿನ್ಯವನ್ನು ನಿಯಮಿತವಾಗಿ ಪರಿಶೀಲನೆ ಮಾಡಿದೆ. ಅದರಲ್ಲೂ ದೀಪಾವಳಿ ವೇಳೆಯಲ್ಲಿ ಪಟಾಕಿ ಸಿಡಿತದ ಕಾರಣದಿಂದ ಮಾಲಿನ್ಯ ಪ್ರಮಾಣ ಹೆಚ್ಚುವುದು ಸಾಮಾನ್ಯ.
ಸೋಮವಾರದಂದು ಭಾರತದ ಪ್ರಮುಖ ನಗರಗಳ ಹವಾಮಾನ ಹಾಗೂ ಶುದ್ದಗಾಳಿ ಹೊಂದಿದ ನಗರಗಳ ಪಟ್ಟಿಯನ್ನುಭಾರತದ ಗುಣಮಟ್ಟ ನಿಯಂತ್ರಣ ಘಟಕ ಬಿಡುಗಡೆ ಮಾಡಿದೆ. ಅದೂ ದೇಶದ ಶುದ್ದಗಾಳಿ ನಗರಗಳ ಪಟ್ಟಿಯಲ್ಲಿ ಈಶಾನ್ಯದ ರಾಜ್ಯಗಳ ಹೆಬ್ಬಾಗಿಲಿ ಎಂದು ಕರೆಯುವ ಡಾರ್ಜಲಿಂಗ್ ಪ್ರಥಮ ಸ್ಥಾನ ಪಡೆದಿದೆ. ಸಿಕ್ಕಿಂನ ರಾಜಧಾನಿ ಗ್ಯಾಂಗ್ಟಕ್ ಎರಡನೇ ಸ್ಥಾನ ಪಡೆದಿದೆ.
ಎರಡೂ ನಗರಗಳ ಶುದ್ದಗಾಳಿ ಪ್ರಮಾಣ 23 ರಷ್ಟಿದೆ. ನಂತರದ ಸ್ಥಾನದಲ್ಲಿ ಭಾರತದ ಟಾಪ್ 10 ನಗರಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆಯ ಚನ್ನಯರಾಯಪಟ್ಟಣ ಮೂರನೇ ಸ್ಥಾನ ಪಡೆದಿದೆ. ಇಲ್ಲಿನ ಶುದ್ದ ಗಾಳಿ ಪ್ರಮಾಣ 25ರಷ್ಟಿದೆ.
ಆನಂತರ ಸೋಪೂರ್, ಈಶಾನ್ಯ ರಾಜ್ಯಗಳ ಐಜ್ವಾಲ್, ಕೊಹಿಮಾ, ಕಾಶ್ಮೀರದ ಕುಲ್ಗಾಂ, ಹಾಗೂ ಉತ್ತರ ಭಾರತದ ಹಂದ್ವಾರ ನಗರಗಳು ಸೇರಿವೆ. ಒಂಬತ್ತನೇ ಸ್ಥಾನದಲ್ಲಿ ಹಾಸನ ಹಾಗೂ ಹತ್ತನೇ ಸ್ಥಾನದಲ್ಲಿ ಬೇಲೂರು ಸೇರಿವೆ. ಹಾಸನ 34 ಹಾಗೂ ಬೇಲೂರು ನಗರವು 39 ಅಂಕ ಪಡೆದುಕೊಂಡಿವೆ.
ಆಯಾ ಊರುಗಳ ಪ್ರಮುಖ ಸ್ಥಳಗಳಲ್ಲಿನ ಗಾಳಿಯ ಶುದ್ದತೆಯನ್ನು ಗುಣಮಟ್ಟ ಪತ್ತೆ ಯಂತ್ರದ ಮೂಲಕ ಅಳೆಯಲಾಗುತ್ತದೆ. ತಂತ್ರಜ್ಞಾನ ಆಧರಿತವಾಗಿಯೂ ಗುಣಮಟ್ಟ ನಿಯಂತ್ರಣ ಘಟಕ ಮಾಹಿತಿ ಕಲೆಹಾಕುತ್ತದೆ. ಸತತ ಒಂದು ದಿನ ಕಾಲ, ಅದರಲ್ಲೂ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿನ ವಾಯುಮಾಲಿನ್ಯ ಪ್ರಮಾಣ ಪರೀಕ್ಷಿಸಲಾಗುತ್ತದೆ.
ಚನ್ನರಾಯಪಟ್ಟಣ ದೇಶದ ಟಾಪ್ ಹತ್ತರೊಳಗಿನ ಶುದ್ದಗಾಳಿ ನಗರದ ಪಟ್ಟಿಯಲ್ಲಿರುವ ಬಗ್ಗೆ ಮಾಧ್ಯಮದಲ್ಲೇ ಗಮನಿಸಿದ್ದೇವೆ. ಅಧಿಕೃತವಾಗಿ ನಮಗೆ ಮಾಹಿತಿ ಬಂದಿಲ್ಲ. ನಾವೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಕಳುಹಿಸಿಲ್ಲ ಎನ್ನುವುದು ಚನ್ನರಾಯಪಟ್ಟಣ ಪುರಸಭೆ ಪರಿಸರ ಎಂಜಿನಿಯರ್ ಕಾವ್ಯ ಖಚಿತಪಡಿಸಿದ್ದಾರೆ.
ಚನ್ನರಾಯಪಟ್ಟಣದಲ್ಲಿ ಮಧ್ಯರಾತ್ರಿ ವೇಳೆಯಂತೂ ಅತ್ಯಂತ ಶುದ್ದ ಗಾಳಿ ಸಿಗಲಿದೆ. ಸಂಜೆ ವೇಳೆ ಕೊಂಚ ವ್ಯತ್ಯಾಸವಾದರೂ ಅದೂ ಶುದ್ದಗಾಳಿಯೇ. ರಾತ್ರಿ ವೇಳೆ 8 ಅಂಕವಿದ್ದರೆ, ಸಂಜೆ 13ರ ಅಂಕವನ್ನು ತೋರಿಸಿದೆ. ಬೆಂಗಳೂರು 50 ನೇ ಸ್ಥಾನದಲ್ಲಿದೆ ಎನ್ನುವುದನ್ನು ವರದಿ ತೋರಿಸಿದೆ.
ಅತಿ ಕೆಟ್ಟ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನ ಪಡದಿದೆ. ಹರಿಯಾಣದ ಸೋನಿಪೇಟೆ, ರೋಹ್ಟಕ್, ಮಹಾರಾಷ್ಟ್ರದ ಅಂಕಲೇಶ್ವರ, ದೆಹಲಿಗೆ ಹೊಂದಿಕೊಂಡಿರುವ ಗುರಗಾಂವ್, ಫರಿದಾಬಾದ್, ಉರಾನ್, ಗಾಜಿಯಾಬಾದ್, ಭಿವಂಡಿ ಹಾಗೂ ಆಳ್ವಾರ್ ನಗರಗಳಿವೆ. ದೆಹಲಿಯಲ್ಲಿರುವ ಗಾಳಿಯ ಪ್ರಮಾಣ 265 ಅಂಕದೊಂದಿಗೆ ಕಲುಷಿತ ನಗರದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.