World Environment Day: ಜೂನ್ 5ರಂದೇ ವಿಶ್ವ ಪರಿಸರ ದಿನ ಆಚರಿಸುವುದೇಕೆ? ಈ ದಿನದ ಕುರಿತು ನೀವು ತಿಳಿಯಬೇಕಾದ ಮಾಹಿತಿಯಿದು
Sep 30, 2024 11:57 AM IST
ಜೂನ್ 5ರಂದೇ ವಿಶ್ವ ಪರಿಸರ ದಿನ ಆಚರಿಸುವುದೇಕೆ? ಈ ದಿನದ ಕುರಿತು ನೀವು ತಿಳಿಯಬೇಕಾದ ಮಾಹಿತಿಯಿದು
- World Environment Day 2024: ಪರಿಸರವನ್ನು ಉಳಿಸಿ, ಬೆಳೆಸುವ ಉದ್ದೇಶ ಹಾಗೂ ಪ್ರಕೃತಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಜೂನ್ 5 ರಂದೆ ಆಚರಿಸುವುದೇಕೆ? 2024ರ ವಿಶ್ವ ಪರಿಸರ ದಿನದ ಥೀಮ್ ಎಂಬ ವಿವರ ಇಲ್ಲಿದೆ.
ಪ್ರಕೃತಿಮಾತೆ ನಮ್ಮೆಲ್ಲರನ್ನೂ ಸಲಹುವ ತಾಯಿ. ಭೂಮಿಯು ಜಗತ್ತಿನ ಸಕಲ ಜೀವಿಗಳು ವಾಸಿಸುವ ವಿಶಾಲವಾದ ಮನೆ ಎಂದರೂ ತಪ್ಪಾಗಲಿಕ್ಕಿಲ್ಲ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಭೂದೇವಿಯು ನಮ್ಮನ್ನು ತನ್ನ ಮಡಲಿಲ್ಲಿಟ್ಟುಕೊಂಡು ಜೋಪಾನ ಮಾಡುತ್ತಾಳೆ. ಭೂದೇವಿ ನಮ್ಮನ್ನು ಅಪ್ಪಿ, ಮುದ್ದಾಡಿ ಪೋಷಿಸುತ್ತಾಳೆ. ಭೂಮಿತಾಯಿಯು ನಮ್ಮ ಬದುಕಿಗೆ ಅವಶ್ಯವಿರುವ ಎಲ್ಲವನ್ನೂ ನೀಡುತ್ತಾಳೆ. ಮಾನವನ ಯೋಗಕ್ಷೇಮಕ್ಕೆ ಅವಶ್ಯವಿರುವ ಎಲ್ಲಾ ಸಂಪನ್ಮೂಲಗಳು ಈ ಭೂಮಿಯ ಮೇಲಿದೆ. ಆದರೆ ಮಾನವ ಮಾತ್ರ ಪ್ರಕೃತಿಯ ವಿಚಾರದಲ್ಲಿ ನಿರ್ದಯವಾಗಿದ್ದಾನೆ. ಮಾನವರು ನೈಸರ್ಗಿಕ ಸಂಪನ್ಮೂಲವನ್ನು ದಿನೇ ದಿನೇ ಹಾಳುಗೆಡುವುತ್ತಿದ್ದಾರೆ. ಕಾಡುಗಳನ್ನು ಕಡಿದು ಮಾಲಿನ್ಯ ಹಾಗೂ ಜಾಗತಿಕ ತಾಪಮಾನ ಹೆಚ್ಚಲು ಕಾರಣರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಂತೂ ಪರಿಸರ ಹಾನಿ ಎಷ್ಟರ ಮಟ್ಟಿಗೆ ಆಗಿದೆ ಎಂಬುದಕ್ಕೆ ಈ ವರ್ಷದ ಬಿಸಿಲಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಭೂದೇವಿಯನ್ನು ರಕ್ಷಿಸುವ ಕಾಯಕದಲ್ಲಿ ಇಂದಿನಿಂದಲೇ ತೊಡಗಬೇಕು. ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ, ಅರಣ್ಯನಾಶ ಮತ್ತು ಜೀವವೈವಿಧ್ಯದ ನಷ್ಟದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ವಿಶೇಷ ದಿನವನ್ನು ಆಚರಿಸಲು ನಾವು ಸಜ್ಜಾಗುತ್ತಿರುವಾಗ, ನಾವು ತಿಳಿದಿರಬೇಕಾದ ಕೆಲವು ವಿಷಯಗಳು ಇಲ್ಲಿವೆ.
ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸುವುದೇಕೆ?
1972ರಲ್ಲಿ ಜೂನ್ 5 ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಮಾನವ ಪರಿಸರ ಸಂಬಂಧದ ಕುರಿತು ವಿಶ್ವಸಂಸ್ಥೆಯು ಸಮ್ಮೇಳನವೊಂದನ್ನು ನಡೆಸಿತ್ತು. ಈ ದಿನವನ್ನು ಗೌರವಿಸಿ 1973ರಲ್ಲಿ ಪ್ರಪಂಚದಾದ್ಯಂತದ ಮೊದಲ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಆ ದಿನವನ್ನು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತದೆ.
ವಿಶ್ವ ಪರಿಸರ ದಿನ 2024ರ ಥೀಮ್
ಪ್ರತಿ ವರ್ಷ ಹವಾಮಾನ ಬದಲಾವಣೆಯಿಂದ, ಜಾಗತಿಕ ತಾಪಮಾನ ಏರಿಕೆಯಿಂದ ಅರಣ್ಯನಾಶದವರೆಗೆ ತಕ್ಷಣದ ಸಮಸ್ಯೆಗಳನ್ನು ಗುರಿಯಾಗಿಟ್ಟುಕೊಂಡು ನಿರ್ದಿಷ್ಟ ಥೀಮ್‌ನೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ, ವಿಶ್ವ ಪರಿಸರ ದಿನದ ಥೀಮ್ - ಭೂಮಿ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವ. ಯುಎನ್ ಕನ್ವೆಷನ್ ಪ್ರಕಾರ ಭೂಮಿಯು ಈಗಾಗಲೇ ಶೇ 40 ರಷ್ಟು ಕ್ಷೀಣಿಸಿದೆ. ಇದು ಪ್ರಪಂಚದ ಅರ್ಧದಷ್ಟು ಜನಸಂಖ್ಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಬರಗಾಲದ ಅವಧಿಯು 2000ನೇ ಇಸವಿಯಿಂದ ಶೇ 29 ರಷ್ಟು ಹೆಚ್ಚಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ 2050ರ ವೇಳೆಗೆ ವಿಶ್ವದ ಜನಸಂಖ್ಯೆಯ ಮಕ್ಕಾಲು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ವ ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.
ಇನ್ನಾದರೂ ಪರಿಸರ ಹಾಳು ಮಾಡುವುದನ್ನು ನಿಲ್ಲಿಸಿ, ಪ್ರಕೃತಿ ನಾಶಕ್ಕೆ ಕಡಿವಾಣ ಹಾಕಿ, ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ, ಮರಗಳನ್ನು ಉಳಿಸಿ. ಪ್ರಕೃತಿ ಮಾತೆಯ ಒಡಲು ಹಸಿರಾಗಿರುವಂತೆ ನೋಡಿಕೊಳ್ಳಿ.
ವಿಭಾಗ