ಮೈಸೂರು ಯುವ ದಸರಾಗೆ ಬಂದ ಹೆಣ್ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟ ಸಂಸ್ಕಾರ ಇಲ್ಲದ ಜನ: ರಂಗಸ್ವಾಮಿ ಮೂಕನಹಳ್ಳಿ ಬರಹ
Oct 25, 2024 09:57 PM IST
ಮೈಸೂರು ಯುವ ದಸರಾಗೆ ಬಂದ ಹೆಣ್ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟ ಸಂಸ್ಕಾರ ಇಲ್ಲದ ಜನ: ರಂಗಸ್ವಾಮಿ ಮೂಕನಹಳ್ಳಿ ಬರಹ
- ರಂಗಸ್ವಾಮಿ ಮೂಕನಹಳ್ಳಿ: ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ಬಂದಿದ್ದ ಹೆಣ್ಮಕ್ಕಳಿಗೆ ಚಿತ್ರಹಿಂಸೆ ಕೊಟ್ಟು ಜನರು ಸಂಸ್ಕಾರ ಇಲ್ಲದಂತೆ ವರ್ತಿಸಿರುವ ಘಟನೆ ನಡೆದಿದೆ. ರಂಗಸ್ವಾಮಿ ಮೂಕನಹಳ್ಳಿ ಈ ಬಗ್ಗೆ ಪೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಮೈಸೂರು ದಸರಾ ಅತ್ಯಂತ ಯಶಸ್ವಿಯಾಗಿ ಮುಗಿಯಿತು. ಅದರಲ್ಲೂ ಎಲ್ಲರನ್ನೂ ಆಕರ್ಷಿಸಿದ್ದು, ಯುವ ದಸರಾ. ಆದರೆ, ಯುವ ದಸರಾದಲ್ಲಿ ಹೆಣ್ಣುಮಕ್ಕಳಿಗೆ ಚಿತ್ರಹಿಂಸೆ ಕೊಟ್ಟ ಘಟನೆಗಳು ನಡೆದಿವೆ. ಅಣ್ಣ, ತಮ್ಮ, ಸ್ನೇಹಿತರ ಜೊತೆೆ ಬಂದಿದ್ದ ಹೆಣ್ಣುಮಕ್ಕಳೂ ಅಲ್ಲಿ ಸುರಕ್ಷಿತವಾಗಿರಲಿಲ್ಲ. ಅಷ್ಟರಮಟ್ಟಿಗೆ ಕೆಟ್ಟ ವಾತಾವರಣ ಸೃಷ್ಟಿಯಾಗಿತ್ತು. ಸಾಂಸ್ಕೃತಿಕ ನಗರಿಗೆ ಸಂಸ್ಕಾರ ಇಲ್ಲದ ಜನ ಬಂದು ಗಬ್ಬೆಬ್ಬಿಸಿ ಬಿಟ್ಟರು. ರಂಗಸ್ವಾಮಿ ಮೂಕನಹಳ್ಳಿ ಅವರು ಈ ಬಗ್ಗೆ ಪೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಇವತ್ತು ಬೆಳಿಗ್ಗೆ ನಡೆದ ಒಂದು ಘಟನೆ ಇದನ್ನು ಬರೆಯಲು ಕಾರಣವಾಗಿದೆ. ಇವತ್ತು ಬೆಳಿಗ್ಗೆ ಅನನ್ಯಳನ್ನು ಟ್ಯೂಷನ್ನಿಂದ ಕರೆದುಕೊಂಡು ಬರಲು ಹೋಗಿದ್ದಾಗ ನಮ್ಮಂತೆ ಮಗಳನ್ನು ಕರೆದು ಕೊಂಡು ಹೋಗಲು ಬಂದ ತಾಯಿಯೊಬ್ಬರು ತಮ್ಮ ಮಗಳ ಕುರಿತು ‘ನೋಡು ನಾವು ಹೇಳುವಷ್ಟು ಹೇಳಿ ಸಾಕಾಯ್ತು , ನೀನು ಎಸ್ಸೆಸೆಲ್ಸಿಯಲ್ಲಿ ಒಳ್ಳೆ ಅಂಕ ಗಳಿಸದಿದ್ದರೆ ಮದುವೆ ಮಾಡಿ ಕಳಿಸುತ್ತೇವೆ ಅಷ್ಟೇ’ ಎನ್ನುವ ಮಾತುಗಳನ್ನು ಆಡಿದರು. ಅವರು ಯಾರು ಗೊತ್ತಿಲ್ಲ, ಮುಖವನ್ನು ನೋಡುವ ಗೋಜಿಗೆ ಹೋಗಲಿಲ್ಲ.
ಮೈಸೂರು ದಸರಾ ಹಬ್ಬವನ್ನು ಮುಗಿಸಿಕೊಂಡು ನಿಧಾನಕ್ಕೆ ತನ್ನ ಸಹಜ ಸ್ಥಿತಿಗೆ ಬರಲು ಪ್ರಯತ್ನಿಸುತ್ತಿದೆ. ಈ ಬಾರಿಯ ದಸರಾ ಹಬ್ಬವನ್ನು ಬೇರೆ ವರ್ಷಗಳಿಗಿಂತ ಉತ್ತಮವಾಗಿ ಆಯೋಜಿಸಿದ್ದರು. ಯುವ ದಸರಾ ಎನ್ನುವ ಕಾರ್ಯಕ್ರಮವನ್ನು ಮೈಸೂರು ನಗರ ಭಾಗದಿಂದ ತೆಗೆದು ರಿಂಗ್ ರೋಡ್ನಲ್ಲಿರುವ ಉತ್ತನಹಳ್ಳಿ ಬಳಿ ಆಯೋಜಿಸಿದ್ದರು. ಲಕ್ಷಾಂತರ ಜನರು ಇಲ್ಲಿ ಸೇರಿದ್ದು ವಿಶೇಷ. ಜನ ಸೇರಿದ ಮೇಲೆ ಅದು ಜಾತ್ರೆ ಆಗುವುದು ಸಾಮಾನ್ಯ. ಅದು ಕೂಡ ಹತ್ತಾರು ಊರುಗಳಿಂದ ಬಂದ ಮೇಲೆ ಕೇಳುವುದಿನ್ನೇನು?
ಅದರಲ್ಲೂ ಯುವ ದಸರಾ ಹೆಸರೇ ಹೇಳುವಂತೆ ಮುಕ್ಕಾಲು ಪಾಲು ತುಂಬಿದ್ದವರು ಯುವಜನತೆ. ನಾಲ್ಕಾರು ಹಿಂದಿ ಹಾಡುಗರನ್ನು ಕರೆಸಿದ್ದರು. ರೆಹಮಾನ್ ಕೂಡ ಒಂದು ದಿನ ಬಂದಿದ್ದರು. ಇದರ ಬಗ್ಗೆ ಇನ್ನೊಂದು ಪೋಸ್ಟ್ ಹಾಕುವೆ. ಇಲ್ಲಿನ ಸಂದರ್ಭದಲ್ಲಿ ಅದನ್ನು ಬೆರೆಸಿದರೆ ಸರಿಯಾಗುವುದಿಲ್ಲ.
ಗುಂಪಲ್ಲಿ ಮುಖ ಕಾಣುವುದಿಲ್ಲದಂತೆ! ಅದೆಷ್ಟು ನಿಜ ನೋಡಿ. ಪರ ಊರುಗಳಿಂದ ಬಂದು ಸೇರಿದ್ದ ಗುಂಪಿನಲ್ಲಿ ಅಷ್ಟೊಂದು ಜನಜಂಗುಳಿಯಲ್ಲಿ ಹೆಣ್ಣುಮಕ್ಕಳ ಸ್ಥಿತಿ ನಮ್ಮ ಶತ್ರುವಿಗೂ ಬೇಡ ಎನ್ನುವಂತಾಗಿತ್ತು. ಅದೇನು ಕೇಕೆ ಅದೇನು ಕೂಗಾಟ, ಇಂದಿನ ಚಲಚಿತ್ರಗಳ ಬಳುವಳಿ ಅಲ್ಲಿ ಸೇರಿದ್ದ ಪ್ರತಿಯೊಬ್ಬ ಹುಡುಗನೂ ತನ್ನನ್ನ ತಾನು ಹೀರೋ ಎಂದುಕೊಂಡಿದ್ದ ಅನ್ನಿಸುತ್ತದೆ. ಸಿನಿಮಾದಲ್ಲಿ ಹೀರೋಯಿನ್ಗಳನ್ನು ಹೇಗೆ ಎಳೆದಾಡುತ್ತಾರೆ ಅದಕ್ಕಿಂತ ಒಂದೆಜ್ಜೆ ಮುಂದೆ ಹೋಗಿದ್ದರು.
ಸಭ್ಯತೆಯ ಪಾಠ ಮಾಡುವುದು ಯಾರಿಗೆ?
ಅಂತಹ ಕಡೆಗೆ ಹೆಣ್ಣುಮಕ್ಕಳು ಏಕೆ ಹೋಗಬೇಕು ಎನ್ನುವ ಕಾಮೆಂಟ್ ಮಾಡಬೇಡಿ ಮತ್ತೆ, ಸಭ್ಯತೆ ಎನ್ನುವುದು ನಾಲ್ಕು ಜನರ ಮುಂದೆ ಮಾತ್ರ ಇಟ್ಟುಕೊಳ್ಳುವ ವಿಷಯವಲ್ಲ. ಯಾರೂ ಇಲ್ಲದಾಗ ಕೂಡ ಅದು ನಮ್ಮದಾಗಿರಬೇಕು. ಮಾಬ್ ಕ್ಯಾನ್ ನಾಟ್ ಥಿಂಕ್ ಇಟ್ ಕ್ಯಾನ್ ಓನ್ಲಿ ಆಕ್ಟ್ ಎನ್ನುವ ಮಾತುಗಳು ಅದೆಷ್ಟು ಸತ್ಯ ಎನ್ನಿಸಿತು. ಸಭ್ಯತೆಯ ಪಾಠ ಮಾಡುವುದಾದರೂ ಯಾರಿಗೆ?
ಅಣ್ಣ, ತಮ್ಮ, ಸ್ನೇಹಿತರ ಜೊತೆಗೆ ಬಂದಿದ್ದ ಹೆಣ್ಣುಮಕ್ಕಳು ಕೂಡ ಅಲ್ಲಿ ಸುರಕ್ಷಿತವಾಗಿರಲಿಲ್ಲ. ಸಾಂಸ್ಕೃತಿಕ ನಗರಿಗೆ ಸಂಸ್ಕಾರ ಇಲ್ಲದ ಜನ ಬಂದು ಗಬ್ಬೆಬ್ಬಿಸಿ ಬಿಟ್ಟರು. ಈ ಎರಡೂ ಘಟನೆ ಮನಸ್ಸು ಕದಡಿ ಬಿಟ್ಟಿದೆ. ತನ್ನ ಹೆತ್ತಮ್ಮ ಅಂಕ ಗಳಿಸದಿದ್ದರೆ ಮದುವೆ ಮಾಡಿ ಕಳಿಸುತ್ತೇನೆ ಎಂದದ್ದಕ್ಕೂ , ಇಲ್ಲಿ ಯಾರೂ ನೋಡುವರಿಲ್ಲ , ಶಿಕ್ಷಿಸುವುದು ಕಷ್ಟ ಎಂದು ಗೊತ್ತಾದಾಗ ಅಸಭ್ಯವಾಗಿ ನಡೆದುಕೊಂಡ ಹುಡುಗರಿಗೂ ನನಗೇನೂ ಹೆಚ್ಚಿನ ವ್ಯತ್ಯಾಸ ಕಾಣಲಿಲ್ಲ.
ಹೆಣ್ಣು ಗಂಡಿಗೆ ಸಮನಾಗಿ ನಭಕ್ಕೆ ಕೂಡ ಹಾರುತ್ತಿರುವ ಈ ಕಾಲಘಟ್ಟದಲ್ಲೂ ಇದೆಂತಹ ವಿಪರ್ಯಾಸ! ಪ್ರಮಾಣ ಮಾಡಿ ಹೇಳುತ್ತೇನೆ ಎಲ್ಲಿಯವರೆಗೆ ದೃಶ್ಯ ಮಾಧ್ಯಮಗಳಲ್ಲಿ ಹೆಣ್ಣನ್ನು ಕೇವಲ ಎಂಟರ್ಟೈನ್ಮೆಂಟ್ ವಸ್ತು ಎನ್ನುವಂತೆ ತೋರಿಸುವುದು ಬಿಡುವುದಿಲ್ಲ ಅಲ್ಲಿಯವರೆಗೆ ಇದು ನಿಲ್ಲುವುದಿಲ್ಲ. ಸಮಾಜವಾಗಿ ನಾವು ಬದಲಾಗುವ ಸಮಯ ಮೀರಿದೆವೇನೋ ಎನ್ನುವ ಭಯ, ಆತಂಕ ಎರಡೂ ನನ್ನದು.