ನೋಡು ನನ್ನೊಂದಿಗೆ ಸಹಕರಿಸು, ಇಲ್ಲಾಂದ್ರೆ 24 ಪೀಸ್ ಮಾಡುವೆ: ಯುವಕನ ಬೆದರಿಕೆಗೆ ನೊಂದ ಯುವತಿ ಆತ್ಮಹತ್ಯೆಗೆ ಯತ್ನ
Mangaluru Crime: ‘ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ’ ಎಂದು ಹಿಂದೂ ಯುವತಿಗೆ ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ ಶಾರಿಕ್ ನೂರ್ ಜಹಾನ್ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮಂಗಳೂರು: ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡುವ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಸಮೀಪ ಯುವಕನೊಬ್ಬ ಯುವತಿಗೆ ತಾನು ಅದೇ ರೀತಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ತನ್ನೊಂದಿಗೆ ಬಾರದೇ ಇದ್ದರೆ, ಕೊಲ್ಲದೆ ಬಿಡುವುದಿಲ್ಲ ಎಂದು ಧೈರ್ಯವಾಗಿಯೇ ಮೆಸೇಜ್ ಹಾಕಿದ್ದಾನೆ. ಗಾಬರಿಯಾದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದೀಗ ಈ ಪ್ರಕರಣದ ಕುರಿತು ಸ್ಥಳೀಯ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದ್ದು, ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಶಾಸಕ ಭರತ್ ಶೆಟ್ಟಿ ಹೇಳುವುದೇನು?
ಸುರತ್ಕಲ್ ಸಮೀಪ ಇಡ್ಯಾ ನಿವಾಸಿ ಶಾರಿಕ್ ನೂರ್ಜಹಾನ್ ಎಂಬಾತ ಹಿಂದೂ ಯುವತಿಯೊಬ್ಬಳಿಗೆ ಫೇಸ್ಬುಕ್ ಮೆಸೆಂಜರ್ ಮೂಲಕ ಅಶ್ಲೀಲ ಮೆಸೇಜ್ ಹಾಗೂ ತನ್ನೊಂದಿಗೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆದರಿಕೆ ಹಾಕಿದ್ದು, ಯುವಕನ ವಿರುದ್ಧ ಕ್ಷಿಪ್ರ ಕ್ರಮವನ್ನು ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿಯ ಕುಟುಂಬಸ್ಥರು ದೂರು ದಾಖಲಿಸುವ ಸಂದರ್ಭ ಠಾಣಾ ಪೊಲೀಸರ ಕ್ರಮವನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕಿತ್ತು. ಯುವತಿ ಇದೀಗ ಜೀವನ್ಮರಣದ ಸ್ಥಿತಿಯಲ್ಲಿದ್ದಾಳೆ ಎಂದರು.
ಮೆಸೇಜ್ನಲ್ಲಿ ಏನಿದೆ?
‘ನನ್ನ ಜತೆ ಸಹಕರಿಸು, ಇಲ್ಲಾಂದ್ರೆ 24 ತುಂಡು ಮಾಡುವೆ’ ಎಂದು ಬೆದರಿಕೆ ಸಂದೇಶವನ್ನು ಸುರತ್ಕಲ್ ಇಡ್ಯಾದ ಸದಾಶಿವನಗರದ ನಿವಾಸಿ ಶಾರಿಕ್ ನೂರ್ ಜಹಾನ್, ಹಿಂದೂ ಯುವತಿಗೆ ಕಳಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಸದ್ಯ ಪೊಲೀಸರು ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈತ ಯುವತಿ ಸಹೋದರನಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದಲ್ಲದೆ ಬೆದರಿಕೆಯೊಡ್ಡಿದ್ದ. ಅಲ್ಲದೆ ಯುವತಿಯ ಸಹೋದರನಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿ ಧಮ್ಕಿ ಹಾಕಿದ್ದ ಎನ್ನಲಾಗಿದೆ. ನಿರಂತರ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಯತ್ನಿಸಿದ್ದಾಳೆ.
ಈ ಹಿಂದೆಯೇ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಸಾಕ್ಷ್ಯ ಸಿಗದ ಹಿನ್ನೆಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು. ಆ ಬಳಿಕವೂ ನಿರಂತರ ಮೆಸೇಜ್ ಹಿನ್ನೆಲೆಯಲ್ಲಿ ಮನನೊಂದ ಯುವತಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆತ್ಮಹತ್ಯೆ ಯತ್ನಕ್ಕೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಳು. ಅತ್ಯಾಚಾರವಾಗಿ ಸಾಯುವ ಬದಲು ಈಗಲೇ ಸಾಯ್ತೇನೆ ಎಂದು ಯುವತಿ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಯತ್ನಿಸಿದ್ದಾಳೆ ಎಂದು ತಿಳಿದುಬಂದಿದೆ. ಇದೀಗ ಆರೋಪಿ ವಿರುದ್ದ ಹಿಂದು ಸಂಘಟನೆಗಳು ಕೆಂಡವಾಗಿದ್ದು, ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸಿದ್ದಾರೆ.