logo
ಕನ್ನಡ ಸುದ್ದಿ  /  ಕರ್ನಾಟಕ  /  ಏರುಗತಿಯಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ; ಪ್ರವಾಹ-ನೀರಿನ ಅಭಾವದ ನಡುವೆಯೂ ಬೆಂಗಳೂರಿನಲ್ಲಿ ವಾಸದ ಮನೆಗಳಿಗೆ ಹೆಚ್ಚಿದ ಬೇಡಿಕೆ

ಏರುಗತಿಯಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ; ಪ್ರವಾಹ-ನೀರಿನ ಅಭಾವದ ನಡುವೆಯೂ ಬೆಂಗಳೂರಿನಲ್ಲಿ ವಾಸದ ಮನೆಗಳಿಗೆ ಹೆಚ್ಚಿದ ಬೇಡಿಕೆ

Jayaraj HT Kannada

Sep 07, 2024 11:14 PM IST

google News

ಏರುಗತಿಯಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ; ಬೆಂಗಳೂರಿನಲ್ಲಿ ವಾಸದ ಮನೆಗಳಿಗೆ ಹೆಚ್ಚಿದ ಬೇಡಿಕೆ

    • ಕೋವಿಡ್‌ ನಂತರದ ಕಾಲದಲ್ಲಿ ಭಾರತದಲ್ಲಿ ಹಲವು ಉದ್ಯಮಗಳು ಕುಸಿತ ಕಂಡಿವೆ. ಇದೀಗ ಬಹುತೇಕ ಎಲ್ಲವೂ ಒಂದು ಹಂತಕ್ಕೆ ಬಂದಿವೆ. ಇದರಲ್ಲಿ ರಿಯಲ್‌ ಎಸ್ಟೇಟ್‌ನಲ್ಲಿ ಲಾಭವು ಬಾನೆತ್ತರಕ್ಕೆ ಸಾಗಿದೆ. ಬೆಂಗಳೂರಿನಲ್ಲೂ ಭೂಮಿ ಬೆಲೆ ಹೆಚ್ಚುತ್ತಿದ್ದು, ವಾಸದ ಮನೆಗಳಿಗೆ ಬೇಡಿಕೆ ದುಪ್ಪಟ್ಟಾಗಿದೆ. (ವರದಿ: ಎಚ್.ಮಾರುತಿ)
ಏರುಗತಿಯಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ; ಬೆಂಗಳೂರಿನಲ್ಲಿ ವಾಸದ ಮನೆಗಳಿಗೆ ಹೆಚ್ಚಿದ ಬೇಡಿಕೆ
ಏರುಗತಿಯಲ್ಲಿ ರಿಯಲ್ ಎಸ್ಟೇಟ್‌ ಉದ್ಯಮ; ಬೆಂಗಳೂರಿನಲ್ಲಿ ವಾಸದ ಮನೆಗಳಿಗೆ ಹೆಚ್ಚಿದ ಬೇಡಿಕೆ (AFP)

ಕಳೆದ ಎರಡು ದಶಕಗಳಿಂದ ಭಾರತದಲ್ಲಿ ಹಲವಾರು ಉದ್ಯಮಗಳು ಏರಿಳಿತಗಳನ್ನು ಕಂಡರೂ ರಿಯಲ್‌ ಎಸ್ಟೇಟ್‌ ಉದ್ಯಮ (Real Estate) ಮಾತ್ರ ಏರುಗತಿಯಲ್ಲೇ ಸಾಗುತ್ತಿದೆ. ಈ ವರ್ಷದ ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ದೇಶದ ಪ್ರಮುಖ 21 ರಿಯಲ್‌ ಎಸ್ಟೇಟ್‌ ಕಂಪನಿಗಳು ಸುಮಾರು 35 ಸಾವಿರ ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡಿವೆ, ಇಲ್ಲವೇ ಬುಕ್ಕಿಂಗ್‌ ಮಾಡಿಕೊಂಡಿವೆ. ಇದರಲ್ಲಿ ಗೋದ್ರೇಜ್‌ ಪ್ರಾಪರ್ಟೀಸ್‌ ಸಿಂಹಪಾಲು ಹೊಂದಿದೆ. ಕೆಲವು ಕಂಪನಿಗಳನ್ನು ಹೊರತುಪಡಿಸಿದರೆ ಬಹುತೇಕ ಕಂಪನಿಗಳು ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ಗರಿಷ್ಠ ಪ್ರಮಾಣದಲ್ಲಿ ವ್ಯವಹಾರ ನಡೆಸಿವೆ. ಅದರಲ್ಲೂ ವಾಸದ ಮನೆಗಳಿಗೆ ಉತ್ತಮ ಬೇಡಿಕೆ ಇದ್ದು, ಐಷಾರಮಿ ಮನೆಗಳಿಗೂ ಬೇಡಿಕೆ ಕುದುರಿದೆ.

2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 21 ಪ್ರಮುಖ ರಿಯಲ್‌ ಎಸ್ಟೇಟ್‌ ಕಂಪನಿಗಳು 3 ತಿಂಗಳಲ್ಲಿ 34,927.5 ಕೋಟಿ ರೂ. ವಹಿವಾಟು ನಡೆಸಿವೆ. ಇದರಲ್ಲಿ ಮುಖ್ಯವಾಗಿ ವಾಸದ ಮನೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಬುಕ್ಕಿಂಗ್‌ ಆಗಿವೆ ಎಂದು ಮೂಲಗಳು ತಿಳಿಸಿವೆ. ಈ ಕಂಪನಿಗಳ ಪೈಕಿ ಗೋದ್ರೇಜ್‌ ಪ್ರಾಪರ್ಟೀಸ್‌ ಅಗ್ರಸ್ಥಾನದಲ್ಲಿದ್ದು, 8.637 ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ.

ಬೆಂಗಳೂರು ಮೂಲದ ಪ್ರೆಸ್ಟೀಜ್‌ ಗ್ರೂಪ್‌ 3,029.5 ಕೋಟಿ ರೂ.ಗಳ ಬುಕ್ಕಿಂಗ್‌ ವಹಿವಾಟು ನಡೆಸಿದೆ. ಬೆಂಗಳೂರು ಮೂಲದ ಮತ್ತೊಂದು ರಿಯಲ್‌ ಎಸ್ಟೇಟ್‌ ಕಂಪನಿ ಶೋಭಾ ಡೆವಲಪರ್ಸ್‌ 1,824 ಕೋಟಿ ಮತ್ತು ಬ್ರಿಗೇಡ್‌ ಎಂಟರ್‌ಪ್ರೈಸಸ್‌ ಏಪ್ರಿಲ್‌ -ಜೂನ್ ತ್ರೈ ಮಾಸಿಕದಲ್ಲಿ 1,086 ಕೋಟಿ ರೂ.ಗಳ ಬುಕ್ಕಿಂಗ್‌ ಮಾಡಿದೆ. ಶ್ರೀರಾಮ್‌ ಪ್ರಾಪರ್ಟೀಸ್‌ 376 ಕೋಟಿ ರೂಪಾಯಿಗಳ ಬುಕಿಂಗ್‌ ವ್ಯವಹಾರ ನಡೆಸಿದೆ.

ದೇಶದ ಬಹು ದೊಡ್ಡ ರಿಯಲ್‌ ಎಸ್ಟೇಟ್‌ ಕಂಪನಿಗಳಲ್ಲೊಂದಾಗಿರುವ ಡಿಎಲ್‌ಎಫ್‌, ತನ್ನ ವಹಿವಾಟನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದು, 6,404 ಕೋಟಿ ರೂ.ಗಳ ಬುಕ್ಕಿಂಗ್‌ ಮಾಡಿಕೊಂಡಿದೆ. ಮುಂಬೈ ಮೂಲದ ಮ್ಯಾಕ್ರೋಟೆಕ್‌ ಡವಲಪರ್ಸ್‌ 4,030 ಕೋಟಿ ರೂಗಳ ಬುಕ್ಕಿಂಗ್‌ ಮಾಡಿಕೊಂಡಿದ್ದು ರಿಯಲ್‌ ಎಸ್ಟೇಟ್‌ ತಜ್ಞರ ಹುಬ್ಬೇರುವಂತೆ ಮಾಡಿದೆ. ಗುರ್‌ ಗಾಂವ್‌ ಮೂಲದ ಸಿಗ್ನೇಚರ್‌ ಗ್ಲೋಬಲ್‌ 3,120 ಕೋಟಿ ರೂ.ಗಳ ಬುಕ್ಕಿಂಗ್‌ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ.

ಉದ್ಯಾನ ನಗರಿಯಲ್ಲಿ ವಾಸದ ಮನೆಗಳಿಗೆ ಹೆಚ್ಚಿದ ಬೇಡಿಕೆ

ಕೋವಿಡ್‌ ನಂತರ ರಿಯಲ್‌ ಎಸ್ಟೇಟ್‌ ಉದ್ಯಮ ಚಿಗುರಿಕೊಳ್ಳುತ್ತಿದ್ದು, ವಾಸದ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ವಹಿವಾಟು ವಿಸ್ತರಿಸಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ತ್ರೈ ಮಾಸಿಕದಲ್ಲಿ ಬೆಂಗಳೂರಿನಲ್ಲಿ 28,356 ಬ್ಯಾಂಕಿಂಗ್‌ ವಹಿವಾಟುಗಳು ನಡೆದಿವೆ. ಇದೇ ವೇಳೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭೂಮಿ ಬೆಲೆಯು ಪ್ರತಿ ಚದರ ಅಡಿಗೆ ಶೇ.4ರಿಂದ 19ರಷ್ಟು ವೃದ್ಧಿಯಾಗಿದೆ ಎಂದು ತಿಳಿದು ಬಂದಿದೆ. ಉತ್ತಮ ವಾತಾವರಣದಿಂದಾಗಿ ಬೆಂಗಳೂರಿನಲ್ಲಿ ಮನೆ ಮಾಡುವುದು ಹಲವರ ಕನಸು. ಹೀಗಾಗಿ ಸಿಲಿಕಾನ್‌ ಸಿಟಿಯಲ್ಲಿ ಭೂಮಿ ಮೇಲೆ ಜನರ ವ್ಯಾಮೋಹ ತಗ್ಗಿಲ್ಲ. 

ಬೆಂಗಳೂರಿನಲ್ಲಿ ಕಂಡು ಕೇಳರಿಯದ ಪ್ರವಾಹ ಒಂದು ಕಡೆಯಾದರೆ ಕುಡಿಯುವ ನೀರಿನ ಅಭಾವವಿದ್ದರೂ ವಾಸದ ಮನೆಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇಲ್ಲಿರುವ ಐಟಿ ಬಿಟಿ ಕಂಪನಿ ಉದ್ಯೋಗಿಗಳು ಮನೆಗಳನ್ನು ಕೊಳ್ಳುತ್ತಿರುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ರಾಜ್ಯ ರಾಜಧಾನಿಯ ದಕ್ಷಿಣ ಭಾಗದಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಪೂರ್ವ ಮತ್ತು ದಕ್ಷಿಣ ಭಾಗ ಬೇಡಿಕೆಯನ್ನು ಉಳಿಸಿಕೊಂಡಿದೆ ಎಂದು ಹೇಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ