ಬೆಂಗಳೂರು Real Estate: ಭೂಮಿ ಮೇಲೆ ಹೂಡಿಕೆ ಮಾಡಿದ್ರೆ ಭರ್ಜರಿ ಲಾಭ, ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಮಾಡುವವರು ಈ 5 ಅಂಶ ಗಮನಿಸಿ
Real Estate Bangalore: ಚಿನ್ನ ಅಥವಾ ಷೇರು ಮಾರುಕಟ್ಟೆಗಿಂತಲೂ ನಿಶ್ಚಿತ ಲಾಭ ತಂದು ಕೊಡುವ ಕ್ಷೇತ್ರ ಎಂದರೆ ಅದು ರಿಯಲ್ ಎಸ್ಟೇಟ್. ನಿವೇಶನ ಅಥವಾ ಅಪಾರ್ಟ್ಮೆಂಟ್ ಮೇಲೆ ಬಂಡವಾಳ ಹೂಡಿದರೆ ಲಾಭ ಪಕ್ಕಾ. ಆದರೆ ಈ ಐದು ಅಂಶಗಳನ್ನು ಪಾಲಿಸಬೇಕು ಅಷ್ಟೇ. (ವರದಿ-ಎಚ್.ಮಾರುತಿ)
ಬೆಂಗಳೂರು: ಲಾಭ ತಂದುಕೊಡುವ ಎರಡು ಬಂಡವಾಳ ಹೂಡಿಕೆಯ ಕ್ಷೇತ್ರಗಳು ಎಂದರೆ ಚಿನ್ನ ಖರೀದಿ ಮತ್ತು ಭೂಮಿಯ ಮೇಲೆ ಹೂಡಿಕೆ ಅರ್ಥಾತ್ ರಿಯಲ್ ಎಸ್ಟೇಟ್ ಉದ್ಯಮ. ಅದರಲ್ಲೂ ದೇಶದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಶರವೇಗದಲ್ಲಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಮುಂಚೂಣಿಯಲ್ಲಿದೆ. ವಾಣಿಜ್ಯ, ವಾಸದ ಮನೆ, ರೀಟೇಲ್ ಮತ್ತು ವೇರ್ ಹೌಸಿಂಗ್ ವಲಯಗಳಲ್ಲಿ ಅಪಾರ ಬೇಡಿಕೆ ಇದೆ.
ಹಾಗೆಯೇ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ರಿಯಲ್ ಎಸ್ಟೇಟ್ (Bengaluru Real estate) ವಲಯದಲ್ಲಿ ಹೆಚ್ಚುತ್ತಿರುವ ಯೋಜನೆಗಳು, ಸೌಲಭ್ಯಗಳು, ಬೆಲೆಯ ಹೆಚ್ಚಳ, ಹಾಕಿದ ಬಂಡವಾಳಕ್ಕೆ ತಕ್ಕ ಲಾಭ ಇವೇ ಮೊದಲಾದ ಕಾರಣಗಳಿಗಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಸ್ಥಿರವಾಗಿರಲು ಕಾರಣವಾಗಿದೆ. ಹಲವು ವರ್ಷಗಳ ಡೇಟಾವನ್ನು ಅವಲೋಕಿಸಿದರೆ ತಿಳಿದು ಬರುತ್ತದೆ.
ಹೂಡಿಕೆದಾರರಿಗಿಂತಲೂ ನಿರೀಕ್ಷೆ ಮೀರಿ ಲಾಭ ತಂದುಕೊಡುತ್ತಿದೆ ಈ ಉದ್ಯಮ. ದೇಶದ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಹೆಸರಾಗಿರುವ ಬೆಂಗಳೂರು ದೇಶೀಯ ಮತ್ತು ಜಾಗತಿಕ ಬಂಡವಾಳವನ್ನು ಆಕರ್ಷಿಸುತ್ತಲೇ ಇದೆ. ಜತೆಗೆ ಇಲ್ಲಿರುವ ಶೈಕ್ಷಣಿಕ ಅವಕಾಶಗಳೂ ಕಾರಣವಾಗಿವೆ. ಉದಾಹರಣೆಗೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳಿವೆ. ಅತ್ಯುತ್ತಮ ಮ್ಯಾನೇಜ್ ಮೆಂಟ್ ಕಾಲೇಜುಗಳಿಗೂ ಹೆಸರುವಾಸಿಯಾಗಿದೆ. ಉದ್ಯೋಗಾವಕಾಶಗಳಿಗಂತೂ ಕೊರತೆ ಇಲ್ಲ.
ಇಂತಹ ಹಲವಾರು ಕಾರಣಗಳಿಗೆ ವಾಸದ ಮನೆಗಳು, ರೀಟೇಲ್, ವಾಣಿಜ್ಯ ಮತ್ತು ವೇರ್ ಹೌಸಿಂಗ್ಗೆ ಬೇಡಿಕೆ ಇದೆ. ಬೆಂಗಳೂರಿನಲ್ಲಿ ಹೂಡಿಕೆ ಏಕೆ ಮಾಡಬೇಕು ಎನ್ನುವುದಕ್ಕೆ ರಿಯಲ್ ಎಸ್ಟೇಟ್ ತಜ್ಞರು ಐದು ಕಾರಣಗಳನ್ನು ಗುರುತಿಸುತ್ತಾರೆ.
1. ಪ್ರೀಮಿಯಂ ವಲಯದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಲೇ ಇರುತ್ತದೆ ಮತ್ತು ಏರಿಳಿತಗಳ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಆದ್ದರಿಂದ ಹೂಡಿಕೆದಾರರು ಪ್ರೀಮಿಯಂ ವಲಯಗಳಲ್ಲಿ ಬಂಡವಾಳ ಹೂಡಲು ಬಯಸುತ್ತಾರೆ.
2. ಮೈಕ್ರೋ ಮಾರುಕಟ್ಟೆಗಳು ಎಂದು ಗುರುತಿಸಲ್ಪಟ್ಟಿರುವ ದೇವನಹಳ್ಳಿ, ಸರ್ಜಾಪುರ ಮುಂತಾದ ಪ್ರದೇಶಗಳಲ್ಲಿ ಹೂಡಿಕೆ ಮಾಡಿದರೆ ಲಾಂಗ್ ಟರ್ಮ್ನಲ್ಲಿ ಆದಾಯ ತಂದು ಕೊಡುತ್ತದೆ.
3. ಹೂಡಿಕೆದಾರರು ಹೂಡಿಕೆ ಮಾಡುವ ಪ್ರದೇಶದಿಂದ ವಿವಿಧ ಸ್ಥಳಗಳಿಗೆ ಸಂಪರ್ಕ ಹೇಗಿದೆ ಎಂದು ಪ್ರಮುಖವಾಗಿ ಪರಿಗಣಿಸುತ್ತಾರೆ. ಉದಾಹರಣೆ ಮೂಲಕ ಹೇಳುವುದಾದರೆ ಸರ್ಜಾಪುರ, ಮಹದೇವಪುರ, ವೈಟ್ ಫೀಲ್ಡ್ ಸೇರಿದಂತೆ ಬೆಂಗಳೂರು ಉತ್ತರ ಭಾಗದ ಪ್ರದೇಶಗಳಿಗೆ ಮತ್ತು ಐಟಿ ಬಿಟಿ ಹಬ್ ಗಳಿಗೆ ಉತ್ತಮ ಸಂಪರ್ಕವಿರುವುದರಿಂದ ಈ ಪ್ರದೇಶಗಳಲ್ಲಿ ಬೇಡಿಕೆ ಹೆಚ್ಚು.
4. ಬಂಡವಾಳ ಹೂಡಿಕೆಗೂ ಮುನ್ನ ಡೆವಲಪರ್ ಅಥವಾ ಅಂತಹ ಸಂಸ್ಥೆಯ ಪೂರ್ವಾಪರ ಚೆನ್ನಾಗಿ ಅಧ್ಯಯನ ನಡೆಸಬೇಕು. ಅವರ ಇತಿಹಾಸ, ಅವರ ಯೋಜನೆಗಳು, ಮಾರುಕಟ್ಟೆಯಲ್ಲಿ ಅವರ ವಿಶ್ವಾಸಾರ್ಹತೆ ಇತ್ಯಾದಿ ಅಂಶಗಳನ್ನು ತಿಳಿದುಕೊಳ್ಳಬೇಕು. ಪ್ರತಿಷ್ಠಿತ ಕಂಪನಿಗಳು ಅಭಿವೃದ್ಧಿಪಡಿಸಿರುವ ಲೇಔಟ್ ಅಥವಾ ಅಪಾರ್ಟ್‌ಮೆಂಟ್‌ಗಳಲ್ಲಿ ಬಂಡವಾಳ ಹೂಡಿದರೆ ಗಣನೀಯ ಪ್ರಮಾಣದಲ್ಲಿ ಲಾಭವನ್ನು ಕಾಣಬಹುದು.
5. ನಿಮ್ಮ ಅನುಕೂಲಕ್ಕೆ ತಕ್ಕಂತೆ ಬಂಡವಾಳ ಹೂಡಿಕೆ ಮಾಡಬೇಕು. ಅಲ್ಪಾವಧಿ, ಮಧ್ಯಮಾವಧಿ ಅಥವಾ ದೀರ್ಘಾವಧಿ ಯಾವುದು ಉತ್ತಮವೋ ಅಂತಹ ಹೂಡಿಕೆ ಮಾಡಿದರೆ ಲಾಭ ನಿಶ್ಚಿತ.