Sandalwood Farming: ಕೃಷಿಯಲ್ಲಿ ಕೋಟಿ ಕೋಟಿ ನೋಡ್ಬೇಕೆಂದರೆ ಬೆಳೆಯಿರಿ ಶ್ರೀಗಂಧ; 12 ವರ್ಷಗಳಲ್ಲಿ ನೀವು ಆಗ್ಬೋದು ಕೋಟ್ಯಧಿಪತಿ!
Aug 31, 2024 02:40 PM IST
ಶ್ರೀಗಂಧ ಕೃಷಿ ಬೆಳೆದು ಕೋಟಿ ಕೋಟಿ ಲಾಭ ಪಡೆಯಬಹುದು.
- Sandalwood Farming: ಕೃಷಿಯಲ್ಲಿ ಅತ್ಯಂತ ಲಾಭದಾಯಕ ಉದ್ಯಮ ನಡೆಸಬೇಕು ಎಂದರೆ ಶ್ರೀಗಂಧ ಬೆಳೆಯುವುದು ಸೂಕ್ತ. ಈ ಕೃಷಿಯಿಂದ 12 ವರ್ಷಗಳಲ್ಲಿ ಕೋಟಿಗಟ್ಟಲ್ಲೇ ಲಾಭ ಪಡೆಯಲಿದ್ದೀರಿ. ಅದು ಹೇಗೆ ಸಾಧ್ಯ? ಇಲ್ಲಿದೆ ವಿವರ.
Sandalwood Farming: ಹಳ್ಳಿಯಿಂದ ಹಿಡಿದು ದೇಶ, ದೇಶದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದವರೆಗೂ ಜನರು ದುಡ್ಡು ದುಡಿಯಲು ಅನೇಕ ಮಾರ್ಗಗಳಲ್ಲಿ ಸಾಗುತ್ತಿದ್ದಾರೆ. ಏನಾದರೂ ಬಿಸಿನೆಸ್ ಮಾಡಿ ಸೆಟಲ್ ಆಗಬೇಕು. ದುಡ್ಡು ಸಂಪಾದಿಸಬೇಕು, ಸಮಾಜದಲ್ಲಿ ಘನತೆ ಗೌರವ ಹೆಚ್ಚಿಸಿಕೊಳ್ಳಬೇಕು ಎಂಬುದು ಸಾಕಷ್ಟು ಮಂದಿಯ ಕನಸು. ಆದರೆ ಕೆಲವರು ವ್ಯವಹಾರ ನಡೆಸಿ ಕೈ ಸುಟ್ಟುಕೊಂಡಿದ್ದೂ ಇದೆ. ಉದ್ಯಮ ಆರಂಭಿಸಿ ಕೆಲವೇ ದಿನಗಳಲ್ಲಿ ಶ್ರೀಮಂತರಾಗಬೇಕು, ಬೇಗ ಬೇಗನೇ ಬೆಳೆಯಬೇಕು ಎಂದು ಅವಸರ ಮಾಡಿಕೊಳ್ಳುತ್ತಾರೆ. ಇದು ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಅಂತಹವರಿಗೆ ತಾಳ್ಮೆ ಮುಖ್ಯವಾಗಿ ಇರಬೇಕು.
ಪ್ರತಿಯೊಬ್ಬರು ಲಾಭದಾಯಕ ವ್ಯಾಪಾರಕ್ಕೆ ಕೈ ಹಾಕುತ್ತಾರೆ. ಆದರೆ ಯಶಸ್ಸು ಕಾಣಲು ತಾಳ್ಮೆ ಅಗಾಧವಾಗಿ ಇರಬೇಕು. ಅದೊಂದು ದೀರ್ಘಾವಧಿ ಹೂಡಿಕೆ ಎಂದು ಭಾವಿಸಿ ಮುಂದುವರೆಯಬೇಕು. ಅಂತಹವರಿಗೆ ಇಲ್ಲೊಂದು ಭರ್ಜರಿ ಲಾಭದಾಯಕ ವ್ಯಾಪಾರ ಇದೆ. ಆದರೆ ಅದು ಕೃಷಿಯಲ್ಲಿ. ಭೂಮಿ ಹೊಂದಿರುವ ಯಾರೇ ಆದರೂ ಈ ಕೃಷಿ ಮಾಡಬಹುದು. ಕೆಲವರ ಬಳಿ ಭೂಮಿ ಇದ್ದರೂ ಅಥವಾ ಖರೀದಿಸಿದರೂ ಯಾವ ಬೆಳೆಗೆ ಹೇಗೆ ಲಾಭ ಮಾಡಬೇಕು ಎಂಬುದು ತಿಳಿದಿರುವುದಿಲ್ಲ. ಅಂತಹವರಿಗೊಂದು ಇಲ್ಲಿದೆ ಸಖತ್ ಐಡಿಯಾ. ತಾಳ್ಮೆಯಿಂದ ಇದ್ದರೆ ಕೋಟಿಗಟ್ಟಲೆ ಲಾಭ!!
ಹೌದು, ಇದೊಂದು ದೀರ್ಘಾವಧಿ ಬೆಳೆ. ಹೂಡಿಕೆಗೂ ದೊಡ್ಡ ಮೊತ್ತ ಬೇಕಿಲ್ಲ. ಆದರೆ 12 ರಿಂದ 15 ವರ್ಷಗಳ ಕಾಲ ತಾಳ್ಮೆ ಅಗತ್ಯ. ಆಗ ನೋಡಿ ನೀವೂ ಕೋಟ್ಯಾಧಿಪತಿಗಳಾಗದಿದ್ದರೆ ಕೇಳಿ.! ಆ ಬೆಳೆ ಬೇರೆ ಯಾವುದೂ ಅಲ್ಲ, ಶ್ರೀಗಂಧ ಕೃಷಿ. ಇದು ಲಾಭದಾಯಕ ಉದ್ಯಮವಾಗಿ ವಿಶ್ವಾದಾದ್ಯಂತೆ ಬೆಳೆದಿದೆ. ಶ್ರೀಗಂಧ (ಸ್ಯಾಂಡಲ್ವುಡ್) ವಿಶ್ವದಲ್ಲೇ ಅತ್ಯಂತ ಬೇಡಿಕೆ ಮತ್ತು ಜನಪ್ರಿಯವಾದ ಮರ. ಇದರಿಂದ ಅತ್ಯಂತ ದುಬಾರಿ ಉತ್ಫನ್ನಗಳ ತಯಾರಿಗೆ ಬಳಸಲಾಗುತ್ತದೆ. ಅವುಗಳ ಸುವಾಸನೆ ಎಂಥಹವನ್ನೂ ಆಕರ್ಷಿಸುತ್ತದೆ. ಹಾಗಿದ್ದರೆ ಶ್ರೀಗಂಧ ಕೃಷಿ ಹೇಗೆ? ಲಾಭ ಸಿಗುವುದೇಗೆ? ಎಂಬುದನ್ನು ಈ ಮುಂದೆ ನೋಡೋಣ.
8 ವರ್ಷಗಳ ನಂತರ ರಕ್ಷಣೆ ಅಗತ್ಯ
ಶ್ರೀಗಂಧದ ಕೃಷಿಗೆ ಮುಖ್ಯವಾಗಿ 2 ಮಾರ್ಗಗಳಿವೆ. 1. ಸಾವಯವ ಕೃಷಿ. 2. ಸಾಂಪ್ರದಾಯಿಕ ಕೃಷಿ. ಸಾವಯವ ಕೃಷಿಯಲ್ಲಿ ಶ್ರೀಗಂಧದ ಬೆಳೆಸಲು ಸುಮಾರು 10 ರಿಂದ 15 ವರ್ಷಗಳು ಬೇಕು. ಸಾಂಪ್ರದಾಯಿಕ ವಿಧಾನದ ಮೂಲಕ ಮರಗಳನ್ನು ಬೆಳೆಸಲು ಸುಮಾರು 20 ರಿಂದ 25 ವರ್ಷಗಳು ಬೇಕು. ಆರಂಭಿಕ 8 ವರ್ಷಗಳಲ್ಲಿ ಮರಗಳಿಗೆ ಯಾವುದೇ ಹೆಚ್ಚುವರಿ ರಕ್ಷಣೆ ಅಗತ್ಯ ಇಲ್ಲ. ಅದರ ನಂತರ, ಅದು ಗಾಳಿಯಲ್ಲಿ ಸಿಹಿ ಪರಿಮಳ ಉತ್ಪಾದಿಸಲು ಪ್ರಾರಂಭಿಸುತ್ತದೆ. ಈ ಹಂತದಲ್ಲಿ ಕಳ್ಳಸಾಗಾಣಿಕೆದಾರರು ಮತ್ತು ಪ್ರಾಣಿಗಳಿಂದ ರಕ್ಷಿಸುವುದು ಅತ್ಯಗತ್ಯ. ಬಹುಬೇಡಿಕೆಯ ಮತ್ತು ದುಬಾರಿ ಮರಗಳಲ್ಲಿ ಒಂದಾದ ಈ ಮರಕ್ಕೆ ಕಾವಲಿರುವುದು ಅಗತ್ಯ. ಈ ಕೃಷಿಯ ಮಧ್ಯೆ ಇತರೆ ಬೆಳೆಗಳನ್ನೂ ಬೆಳೆಯಬಹುದು. ಆದರೆ ಹೆಚ್ಚು ನೀರುವಂತೆ ಇಂಗುದಂತೆ ನೋಡಿಕೊಳ್ಳಿ.
ಕೋಟಿ ಕೋಟಿ ಕಾಣಲಿದ್ದೀರಿ
ಶ್ರೀಗಂಧದ ಮರಗಳನ್ನು ಮರಳು ಅಥವಾ ಹಿಮಭರಿತ ಪ್ರದೇಶಗಳಲ್ಲಿ ಹೊರತುಪಡಿಸಿ ಎಲ್ಲಿ ಬೇಕಾದರೂ ಬೆಳೆಯಬಹುದು. ಶ್ರೀಗಂಧದ ಕೃಷಿ ದೊಡ್ಡಮಟ್ಟದ ಲಾಭ ತರುವ ಕೃಷಿಯಾಗಿದೆ. ಒಂದು ಶ್ರೀಗಂಧದ ಮರ ಫಸಲು ಅಂದರೆ ಮಾರುಕಟ್ಟೆಗೆ ಮಾರುವ ಹಂತಕ್ಕೆ 5 ರಿಂದ 6 ಲಕ್ಷ ರೂ ಬೆಳೆಬಾಳುತ್ತದೆ. ಅದೇ ರೀತಿ, 5-10 ಮರಗಳನ್ನು ನೆಟ್ಟರೆ 50 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಬಹುದು. 100 ಕ್ಕೂ ಹೆಚ್ಚು ಮರಗಳನ್ನು ನೆಟ್ಟರೆ 10 ಕೋಟಿ ರೂಪಾಯಿಗಳವರೆಗೆ ಗಳಿಸಬಹುದು. ಒಂದು ಹೆಕ್ಟೇರ್ ಭೂಮಿಯಲ್ಲಿ ಈ ಬೆಳೆ ಬೆಳೆದರೆ ನಿಜವಾಗಿಯೂ ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುತ್ತೀರಿ ಎಂಬುದರಲ್ಲಿ ಅನುಮಾನವೇ ಇಲ್ಲ.
1 ಹೆಕ್ಟೇರ್ನಲ್ಲಿ ಎಷ್ಟು ಮರ ಬೆಳೆಯಬಹುದು?
ಒಂದು ಶ್ರೀಗಂಧದ ಮರದಿಂದ ಸುಮಾರು 15-20 ಕೆಜಿ ಮರದ ತುಂಡು ಸಿಗಲಿದೆ. ಮಾರುಕಟ್ಟೆಯಲ್ಲಿ 2 ಲಕ್ಷ ರೂ.ವರೆಗೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಶ್ರೀಗಂಧ ಕೆಜಿ ಗೆ 3 ರಿಂದ 7 ಸಾವಿರ ರೂ.ಗೆ ಮಾರಾಟವಾಗುತ್ತಿದ್ದರೂ ಬೇಡಿಕೆ ಹೆಚ್ಚುತ್ತಿರುವ ಕಾರಣ 10 ಸಾವಿರ ರೂ.ವರೆಗೆ ಬೆಲೆಗೆ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಮತ್ತಷ್ಟು ಏರುವುದು ಖಚಿತ. ಅರಣ್ಯ ಇಲಾಖೆಯಿಂದ ಒಂದು ಗಿಡ 100 ರಿಂದ 150 ರೂಪಾಯಿ ಬೆಲೆಯಲ್ಲಿ ಸಿಗಲಿದೆ. ರೈತರು ಬಯಸಿದರೆ, ಒಂದು ಹೆಕ್ಟೇರ್ ಭೂಮಿಯಲ್ಲಿ (ಎರಡೂವರೆ ಎಕರೆ) 600 ಗಿಡಗಳನ್ನು ನೆಡಬಹುದು. ಇದೇ ಗಿಡಗಳು ದೊಡ್ಡ ಮರಗಳಾಗುತ್ತವೆ. ಮುಂದಿನ 12 ವರ್ಷಗಳಲ್ಲಿ 30 ಕೋಟಿ ರೂ.ವರೆಗೆ ನಿವ್ವಳ ಲಾಭವನ್ನು ನೀಡುತ್ತವೆ. (ಆದರೆ ಮುಂದಿನ ದಿನಗಳಲ್ಲಿ ಇದರ ಬೆಲೆ ದುಪ್ಪಟ್ಟಾಗಬಹುದು.)
ಸರ್ಕಾರದಿಂದ ಅನುಮತಿ ಬೇಕು, ಸರ್ಕಾರಕ್ಕೇ ಮಾರಾಟ
ಅಂತಹ ಲಾಭದಾಯಕ ವ್ಯಾಪಾರ ಕೊಲ್ಲಿಯಲ್ಲಿ ಕಾಣಬಹುದು. ಆದರೆ ಈ ಕೃಷಿ ಮಾಡಲು ಸರ್ಕಾರದ ಅನುಮತಿ ಕಡ್ಡಾಯ ಸರ್ಕಾರ ವಿಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಕರಿಸಬೇಕು. 2017ರಲ್ಲಿ ಭಾರತ ಸರ್ಕಾರ ಶ್ರೀಗಂಧದ ಖರೀದಿ ಮತ್ತು ಮಾರಾಟ ನಿಷೇಧಿಸಿತು. ಈ ಕಾನೂನಿನ ಪ್ರಕಾರ, ಆರಂಭದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಅಥವಾ ಪರವಾನಗಿ ಪಡೆಯಬೇಕು. ಜೊತೆಗೆ ಈ ಮರಗಳನ್ನು 3ನೇ ವ್ಯಕ್ತಿಗೆ ಅಥವಾ ಬೇರೆ ಯಾರಿಗೋ ಮಾರಾಟ ಮಾಡುವಂತಿಲ್ಲ. ಸರ್ಕಾರಕ್ಕೆ ಮಾತ್ರವೇ ಮಾರಾಟ ಮಾಡಬೇಕು. ಅರಣ್ಯ ಇಲಾಖೆ ನಿಮ್ಮಿಂದ ಶ್ರೀಗಂಧದ ಮರ ಖರೀದಿಸುತ್ತದೆ. ಸರ್ಕಾರ ಇದರ ಸಾಗುವಳಿಗೆ 28-30 ಸಾವಿರ ರೂ.ವರೆಗೆ ಅನುದಾನ ನೀಡುತ್ತಿದೆ.
ಈ ವಿಷಯಗಳನ್ನು ನೆನಪಿನಲ್ಲಿಡಿ
- ಶ್ರೀಗಂಧದ ಮರವನ್ನು ನೆಡಬೇಡಿ. ಏಕೆಂದರೆ ಇದು ಇತರ ಮರಗಳಿಂದ ಪೋಷಣೆ ಪಡೆಯುವ ಪರಾವಲಂಬಿ ಪ್ರಭೇದವಾಗಿದೆ.
- ಶ್ರೀಗಂಧದ ಮರಗಳನ್ನು ಆರ್ದ್ರ ಪ್ರದೇಶಗಳಲ್ಲಿ ನೆಡಬಾರದು, ಏಕೆಂದರೆ, ಈ ಕೃಷಿಗೆ ಹೆಚ್ಚಿನ ನೀರು ಅಗತ್ಯ ಇಲ್ಲ.
- ಶ್ರೀಗಂಧವು ವೇಗವಾಗಿ ಬೆಳೆಯುವ ಸಸ್ಯ. ಹಾಗಾಗಿ ಬೇರೆ ಯಾವುದೇ ಸಸ್ಯಗಳನ್ನು 4-5 ಅಡಿ ಅಂತರದಲ್ಲಿ ನೆಡಬೇಕು.
- ಶ್ರೀಗಂಧದ ಮರಕ್ಕೆ ನೀರು ಅತಿಯಾದರೆ ಕೊಳೆಯುತ್ತದೆ. ಹಾಗಾಗಿ ಅದು ಜಲಾವೃತವಾಗದಂತೆ ನೋಡಿಕೊಳ್ಳಿ.
- ಶ್ರೀಗಂಧ ಕೃಷಿಗಾಗಿ ಕನಿಷ್ಠ 2 ರಿಂದ 2.5 ವರ್ಷ ವಯಸ್ಸಿನ ಸಸ್ಯವನ್ನು ನೆಡಬೇಕು.
- ಶ್ರೀಗಂಧದ ಮರಗಳ ಸುತ್ತಲೂ ಶುಚಿತ್ವ ಕಾಪಾಡಿಕೊಳ್ಳಬೇಕು. ಏಕೆಂದರೆ ಮಾಲಿನ್ಯವು ಬೆಳವಣಿಗೆಗೆ ಅಡ್ಡಿಯಾಗುತ್ತದೆ.
ದಕ್ಷಿಣ ಭಾರತದಲ್ಲಿ ಹೆಚ್ಚು
ಭಾರತದ ಶ್ರೀಗಂಧಕ್ಕೆ ವಿಶ್ವದಲ್ಲಿ ಭಾರಿ ಬೇಡಿಕೆ ಇದೆ. ಆದರೆ, ಅದನ್ನು ಪೂರೈಸುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಶ್ರೀಗಂಧಕ್ಕೆ ಹೆಚ್ಚುತ್ತಿರುವ ಬೇಡಿಕೆಯಿಂದ ಅದರ ಮರದ ಬೆಲೆಯು ಏರುತ್ತಿದೆ. ಈ ಕಾರಣಕ್ಕಾಗಿಯೇ ಭಾರತ ಸರ್ಕಾರ ಶ್ರೀಗಂಧವನ್ನು ಬೆಳೆಸಲು ರೈತರನ್ನು ಪ್ರೋತ್ಸಾಹಿಸುತ್ತಿದೆ. ಶ್ರೀಗಂಧದ ಪವಾಡಗಳನ್ನು ವೇದಗಳು ಮತ್ತು ಪುರಾಣಗಳಲ್ಲಿಯೂ ಉಲ್ಲೇಖಿಸಲಾಗಿದೆ. ಸೌಂದರ್ಯ ಹೆಚ್ಚಿಸುವುದರ ಜೊತೆಗೆ ಆಯುರ್ವೇದ ಔಷಧದಲ್ಲಿಯೂ ಇದನ್ನು ಬಳಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹೆಚ್ಚು ಶ್ರೀಗಂಧ ಬೆಳೆಯಲಾಗುತ್ತಿದೆ. ಇದೀಗ ಉತ್ತರ ಭಾರತದ ಕಡೆಗೂ ಈ ಕೃಷಿ ವ್ಯಾಪಿಸಿದೆ.
ನಿಜವಾದ ಶ್ರೀಗಂಧದ ಮರವು ಸುಮಾರು 10 ಮೀಟರ್ (33 ಅಡಿ) ಎತ್ತರಕ್ಕೆ ಬೆಳೆಯುತ್ತದೆ. ಮರ ಮತ್ತು ಬೇರುಗಳೆರಡೂ ಶ್ರೀಗಂಧದ ಎಣ್ಣೆ ಎಂದು ಕರೆಯಲ್ಪಡುವ ಹಳದಿ ಆರೊಮ್ಯಾಟಿಕ್ ಎಣ್ಣೆಯನ್ನು ಹೊಂದಿರುತ್ತವೆ. ಅಲಂಕಾರಿಕ ಪೆಟ್ಟಿಗೆಗಳು, ಪೀಠೋಪಕರಣಗಳು, ಬಿಳಿ ಸಪ್ವುಡ್ನಿಂದ ಮಾಡಿದ ಫ್ಯಾನ್, ಫರ್ಫ್ಯೂಮ್, ಮರದ ಉಗಿ ಬಟ್ಟಿ ಇಳಿಸುವಿಕೆಯಿಂದ ತೈಲವನ್ನು ಪಡೆಯಲಾಗುತ್ತದೆ ಮತ್ತು ಇದನ್ನು ಸುಗಂಧ ದ್ರವ್ಯಗಳು, ಸಾಬೂನುಗಳು, ಮೇಣದಬತ್ತಿಗಳು, ಧೂಪದ್ರವ್ಯ, ಔಷಧಗಳಲ್ಲಿ ಬಳಸಲಾಗುತ್ತದೆ.