Prajwal Revanna: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ: ಇಂದು ಜರ್ಮನಿಯಿಂದ ಹೊರಡಲಿರುವ ಪ್ರಜ್ವಲ್ ರೇವಣ್ಣ
May 30, 2024 09:33 AM IST
ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 30ರ ಗುರುವಾರ ಜರ್ಮನಿಯ ಮ್ಯೂನಿಚ್‌ನಿಂದ ಹೊರಟು 31ರ ಶುಕ್ರವಾರ ಬೆಳಗ್ಗೆ ಬೆಂಗಳೂರು ತಲುಪಲಿದ್ದಾರೆ.
- ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 30ರ ಗುರುವಾರ ಜರ್ಮನಿಯ ಮ್ಯೂನಿಚ್‌ನಿಂದ ಹೊರಟು ನಾಳೆ ಬೆಳಗ್ಗೆ ಬೆಂಗಳೂರು ತಲುಪಲಿದ್ದಾರೆ. ಮ್ಯೂನಿಚ್‌ನಿಂದ ಬೆಂಗಳೂರಿಗೆ 8 ಗಂಟೆ 55 ನಿಮಿಷ ಬೇಕಾಗುತ್ತೆ.
ಬೆಂಗಳೂರು: ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೌಂಗಿಕ ದೌರ್ಜನ್ಯ ಹಾಗೂ ಇತರೆ 2 ಅತ್ಯಾಚಾರ ಪ್ರಕರಣದ ಆರೋಪಿ ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Sexual Assault Case) ಇಂದು (ಮೇ 30, ಗುರುವಾರ) ಜರ್ಮನಿಯಿಂದ ಬೆಂಗಳೂರಿನತ್ತ ಹೊರಡಲಿದ್ದಾರೆ. ಜರ್ಮನಿಯ (Germany) ಮ್ಯೂನಿಚ್‌ನಿಂದ ಬೆಂಗಳೂರಿಗೆ (Munich to Bengaluru Flight) ಟಿಕೆಟ್ ಬುಕ್ ಮಾಡಿದ್ದಾರೆ ಎಂದು ವರದಿಯಾಗಿದೆ. ಮೇ 31 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಬಂದು ಎಸ್‌ಐಟಿ ಮುಂದೆ ಹಾಜರಾಗುವುದಾಗಿ ಇತ್ತೀಚೆಗಷ್ಟೇ ಪ್ರಜ್ವಲ್ ವಿಡಿಯೊ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ 8 ಗಂಟೆ 55 ನಿಮಿಷ ವಿಮಾನ ಪ್ರಯಾಣದ ಅವಧಿಯಾಗಿದೆ.
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಜರ್ಮನಿಯ ಮ್ಯೂನಿಚ್ ನಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ಕಾಯ್ದಿರಿಸಲಾಗಿದ್ದು, ಅವರು ಶುಕ್ರವಾರ ಮುಂಜಾನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ಸಾಧ್ಯತೆಯಿದೆ. ಮೇ 31ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎಸ್ಐಟಿ ವಿಚಾರಣೆಗೆ ಹಾಜರಾಗುವುದಾಗಿ ಜೆಡಿಎಸ್ ಅಮಾನತುಗೊಂಡಿರುವ ಸಂಸದ ಈಗಾಗಲೇ ಘೋಷಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಬೆಂಗಳೂರಿಗೆ ಬಂದಿಳಿದ ಕೂಡಲೇ ಅವರನ್ನು ಬಂಧಿಸಲಾಗುವುದು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ, ತನ್ನ ವಿದೇಶ ಪ್ರವಾಸವು ಪೂರ್ವಯೋಜಿತವಾಗಿತ್ತು. ದೇಶವನ್ನು ತೊರೆದ ಮೂರ್ನಾಲ್ಕು ದಿನಗಳ ನಂತರವೇ ಆರೋಪಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. "ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ವದಂತಿಗಳನ್ನು ಹರಡಿದ ನಂತರ, ನಾನು ಖಿನ್ನತೆಗೆ ಒಳಗಾಗಿದ್ದೆ. ನನ್ನ ವೃತ್ತಿಜೀವನವನ್ನು ಮುಗಿಸಲು ರಾಜಕೀಯ ಪಿತೂರಿ ನಡೆಯುತ್ತಿದೆ. ನಾನು ಅದನ್ನು ಎದುರಿಸುತ್ತೇನೆ ಎಂದು ಪ್ರಜ್ವಲ್ ಹೇಳಿದ್ದಾರೆ.
ಇದನ್ನೂ ಓದಿ: ತಲೆಮರಿಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ
2024ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಲ್ಲಿ ಮತದಾನ ನಡೆಯುವ ಕೆಲವೇ ದಿನಗಳ ಮೊದಲು ಪ್ರಜ್ವಲ್ ರೇವಣ್ಣ ಅವರು ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾದ ಅಶ್ಲೀಲ ವೀಡಿಯೊಗಳು ಏಪ್ರಿಲ್‌ನಲ್ಲಿ ಹೊರಬಂದಿವೆ. ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಅದೇ ಏಪ್ರಿಲ್ 27 ರಂದು ಜರ್ಮನಿಗೆ ಪ್ರಯಾಣಿಸಿ ಆ ಬಳಿಕ ತಲೆ ಮರೆಸಿಕೊಂಡಿದ್ದರು.
ಅಶ್ಲೀಲ ವಿಡಿಯೊದಲ್ಲಿ ಇದ್ದವರು ಎನ್ನಲಾದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಪ್ರಕರಣದಲ್ಲಿ ಏಪ್ರಿಲ್ 28 ರಂದು ಪ್ರಜ್ವಲ್ ತಂದೆ ಹಾಲಿ ಶಾಸಕ ಹೆಚ್‌ಡಿ ರೇವಣ್ಣ ವಿರುದ್ಧ ಮೊದಲ ಎಫ್ಐಆರ್ ದಾಖಲಿಸಲಾಯಿತು. ಪ್ರಜ್ವಲ್ ರೇವಣ್ಣ ವಿರುದ್ಧ ಲೌಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪ ಪ್ರಕರಣಗಳ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಈ ವಿಚಾರವಾಗಿ ಜೆಡಿಎಸ್ ನಾಯಕ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ, ಆಡಳಿತ ಪಕ್ಷ ಕಾಂಗ್ರೆಸ್ ನಾಯಕರ ವಿರುದ್ಧ ಮಾತಿನ ಸಮರ ಮುಂದುವರಿಯುತ್ತಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)