ಮಸೀದಿಯೊಳಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಲ್ಲ: ಕರ್ನಾಟಕ ಹೈಕೋರ್ಟ್
Oct 16, 2024 06:30 AM IST
ಕರ್ನಾಟಕ ಹೈಕೋರ್ಟ್
- Karnataka High Court: ಮಸೀದಿಯಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದು ಮಾಡಿದೆ.
ಬೆಂಗಳೂರು: ಮಸೀದಿಯಲ್ಲಿ 'ಜೈ ಶ್ರೀರಾಮ್' ಎಂದು ಕೂಗಿದ್ದ ಆರೋಪದ ಮೇಲೆ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಇಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಈ ಘೋಷಣೆ ಕೂಗುವುದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಎಂದು ತಿಳಿಸಿದೆ. ಈ ಘೋಷಣೆಯು ಯಾವುದೇ ವರ್ಗದ ಧಾರ್ಮಿಕ ಭಾವನೆಗಳನ್ನು ಹೇಗೆ ಧಕ್ಕೆ ಉಂಟು ಮಾಡುತ್ತದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಚಾಟಿ ಬೀಸಿದೆ. ಸಂಬಂಧಿತ ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ಪ್ರಕರಣದ ದೂರುದಾರರೇ ಸ್ವತಃ ಹೇಳಿರುವುದನ್ನು ಉಲ್ಲೇಖಿಸಿದ ಹೈಕೋರ್ಟ್, ಇದನ್ನು ಹೇಳಿದೆ.
ದಕ್ಷಿಣ ಕನ್ನಡದ ಪುತ್ತೂರಿನ ಬಿಳಿನೆಲೆ ಗ್ರಾಮದ ಕೀರ್ತನ್ ಮತ್ತು ಮಂಗಳೂರಿನ ಕೈಕಂಬದ ಸಚಿನ್ ಅವರನ್ನು 2023ರ ಸೆಪ್ಟೆಂಬರ್ನಲ್ಲಿ ಬಂಧಿಸಲಾಗಿತ್ತು. ಅಂದು ಸೆಪ್ಟೆಂಬರ್ 24ರ ರಾತ್ರಿ 10.50ರ ಸುಮಾರಿಗೆ ಇಬ್ಬರು ಮಸೀದಿಗೆ ನುಗ್ಗಿ 'ಜೈ ಶ್ರೀರಾಮ್' ಎಂದು ಘೋಷಣೆಗಳನ್ನು ಕೂಗಿದ್ದರು. ಕಡಬ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಮೇಲೆ ಇಬ್ಬರನ್ನೂ ಬಂಧಿಸಿದ್ದರು. ಇಬ್ಬರ ವಿರುದ್ಧ ಸೆಕ್ಷನ್ 447, 505, 506, 34 ಮತ್ತು 295 ಎ ಸೇರಿದಂತೆ ವಿವಿಧ ಐಪಿಸಿ ಅಪರಾಧಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಆರೋಪಿಗಳು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಪೀಠ ಹೇಳಿದ್ದೇನು?
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ತೀರ್ಪು ಪ್ರಕಟಿಸಿದ್ದು, ಸೆಕ್ಷನ್ 295 ಎ ಬಗ್ಗೆ ವಿವರವಾಗಿ ತಿಳಿಸಿದೆ. ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ, ಆಕ್ರೋಶಗೊಳಿಸಲು ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ ಎಸಗುವುದಕ್ಕೆ ಸಂಬಂಧಿಸಿದ ಸೆಕ್ಷನ್ ಇದಾಗಿದೆ. ಆದರೆ 'ಜೈ ಶ್ರೀರಾಮ್' ಎಂದು ಕೂಗಿದ ಮಾತ್ರಕ್ಕೆ ಒಂದು ವರ್ಗದ ಧಾರ್ಮಿಕ ಭಾವನೆ ಕೆರಳಿಸಿದಂತಲ್ಲ ಎಂದು ಹೇಳಿದೆ. ಅದೂ ಅಲ್ಲದೆ, ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಮರು ಸ್ನೇಹ ಸೌಹಾರ್ದದಿಂದ ಬದುಕುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬೇಕು ಎಂದು ಪೀಠ ಹೇಳಿದೆ.
ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ಮಸೀದಿಯು ಸಾರ್ವಜನಿಕ ಸ್ಥಳ. ಆರೋಪಕ್ಕೆ ಅಗತ್ಯವಾದ ಯಾವುದೇ ಅಂಶಗಳು ಪ್ರಕರಣದಲ್ಲಿ ಇಲ್ಲ ಎಂದು ವಾದಿಸಿದರು. ಕ್ರಿಮಿನಲ್ ಅತಿಕ್ರಮಣಕ್ಕೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 447 ರ ಅಡಿಯಲ್ಲಿ ಅಪರಾಧವು ಮಸೀದಿ ಸಾರ್ವಜನಿಕ ಸ್ಥಳ. ಮತ್ತು ಅದರೊಳಗೆ ಪ್ರವೇಶಿಸುವುದು ಕ್ರಿಮಿನಲ್ ಅತಿಕ್ರಮಣ ಎಂದು ಅರ್ಥೈಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಪ್ರತಿವಾದಿ, ಮಸೀದಿಯೊಳಗೆ ಪ್ರವೇಶಿಸಿ 'ಜೈ ಶ್ರೀರಾಮ್' ಎಂದು ಕೂಗುವಂತಿಲ್ಲ. ಹಾಗಾಗಿ ಅರ್ಜಿವಜಾಗೊಳಿಸಿ ತನಿಖೆಗೆ ಅವಕಾಶ ನೀಡಬೇಕು ಎಂದು ವಾದಿಸಿದ್ದರು.
ವಾದ ವಿವಾದಗಳನ್ನು ಪರಿಶೀಲಿಸಿದ ನಂತರ ತೀರ್ಪು ಪ್ರಕಟಿಸಿದ ನ್ಯಾಯಪೀಠ, ಯಾವುದೇ ಆಪಾದಿತ ಅಪರಾಧಗಳ ಅಂಶಗಳನ್ನು ಕಂಡು ಹಿಡಿಯುವುದು, ಈ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಮತ್ತು ನ್ಯಾಯದ ತಪ್ಪಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು. ಅರ್ಜಿದಾರರ ಪರ ವಕೀಲ ವಕೀಲ ಸಚಿನ್ ಬಿಎಸ್ ವಾದಿಸಿದರೆ, ಪ್ರತಿವಾದಿ ಪರ ವಕೀಲ ಎಚ್‌ಸಿಜಿಪಿ ಸೌಮ್ಯ ಆರ್ ವಾದ ಮಂಡಿಸಿದರು.