ಧೋ ಎಂದು ಸುರಿದ ಮಳೆಗೆ ಕಂಗಾಲಾದ ಬೆಂಗಳೂರು ನಿವಾಸಿಗಳು: ಸೋಷಿಯಲ್ ಮಿಡಿಯಾದಲ್ಲಿ ವಿಡಿಯೊ ಹಂಚಿಕೊಂಡು ಬಿಬಿಎಂಪಿ ವಿರುದ್ಧ ಆಕ್ರೋಶ
ವಾಯುಭಾರತದ ಕುಸಿತದ ಕಾರಣದಿಂದ ಮಹಾನಗರಿ ಬೆಂಗಳೂರಿನಲ್ಲಿ ಮಳೆ ಜೋರಾಗಿದೆ. ಕಳೆದ ರಾತ್ರಿಯಿಂದ ನಿರಂತರ ಮಳೆ ಸುರಿದಿದ್ದು ರಸ್ತೆಗಳೆಲ್ಲಾ ಜಲಾವೃತವಾಗಿದೆ. ಬಹುತೇಕ ಕಡೆ ನೀರು ನಿಂತು ಸಮುದ್ರದಂತಾಗಿದ್ದು ಬಿಬಿಎಂಪಿಯ ಅವ್ಯವಸ್ಥೆಯ ವಿರುದ್ಧ ಬೆಂಗಳೂರು ನಿವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಮಹಾನಗರಿ, ಸಿಲಿಕಾನ್ ಸಿಟಿ ಎಂದೆಲ್ಲಾ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಮಳೆ ಬಂತೆಂದರೆ ಜನರು ಬಿಬಿಎಂಪಿಗೆ ಹಿಡಿ ಶಾಪ ಹಾಕುತ್ತಾರೆ. ಯಾಕೆಂದರೆ ಇಲ್ಲಿನ ರಸ್ತೆಗಳು ಹಾಗೂ ಚರಂಡಿಗಳಲ್ಲಿನ ಅವ್ಯವಸ್ಥೆಯ ಕಾರಣದಿಂದ ಸಣ್ಣ ಪ್ರಮಾಣ ಮಳೆ ಬಂದರೂ ರಸ್ತೆ ಮೇಲೆಲ್ಲಾ ನೀರು ತುಂಬುತ್ತದೆ, ಮನೆಗಳೆಲ್ಲಾ ಜಲಾವೃತವಾಗುತ್ತವೆ. ಅಂಥದ್ದರಲ್ಲಿ ನಿನ್ನೆ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿದಿದ್ದು ಬಹುತೇಕ ರಸ್ತೆಗಳು ಸಮುದ್ರದಂತಾಗಿವೆ.
ಮಳೆ ನೀರು ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಸಂಚಾರ ತೀವ್ರ ಅಸ್ತವ್ಯಸ್ಥವಾಗಿದೆ. ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆಫೀಸ್, ಕಾಲೇಜಿಗೆ ತೆರಳುವವರು ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಮಳೆ ಬಂದಾಗ ರಸ್ತೆಗಳು ಹೊಳೆಯಂತಾಗಲು ಬಿಬಿಎಂಪಿಯ ಅವ್ಯವಸ್ಥೆ ಕಾರಣ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗಳಲ್ಲಿ ನೀರು ನಿಂತಿರುವ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡು ಬಿಬಿಎಂಪಿಗೆ ಧಿಕ್ಕಾರ ಎನ್ನುತ್ತಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಆಕ್ರೋಶ
ಮಳೆ ಸುರಿದಾಗಲೆಲ್ಲ ಬೆಂಗಳೂರಿನಲ್ಲಿ ಬಿಬಿಎಂಪಿಯ ದುರಾಡಳಿತ ಎದ್ದು ಕಾಣುತ್ತಿದೆ. ಇದು ಕೆಲವು ಗಂಟೆಗಳ ಕಾಲ ಭಾರಿ ಮಳೆಯ ಬಗ್ಗೆ ಅಲ್ಲ; ಒಂದು ಸಣ್ಣ 30 ನಿಮಿಷದ ಮಳೆಯು ಇಡಿ ನಗರವನ್ನು ಜಲಾವೃತ ಮಾಡಿ ಅವ್ಯವಸ್ಥೆಗೆ ಕಾರಣವಾಗುತ್ತದೆ. ಸಣ್ಣ ಮಳೆಗೂ ಬಹುತೇಕ ಬೀದಿಗಳು ಜಲಾವೃತವಾಗಿ ಕೊಳಗಳಂತಾಗುತ್ತವೆ. ಇದು ನಗರದಾದ್ಯಂತ ಕಳಪೆ ಮೂಲಸೌಕರ್ಯ ಮತ್ತು ಅಸಮರ್ಪಕ ಒಳಚರಂಡಿ ವ್ಯವಸ್ಥೆಗಳನ್ನು ಬಹಿರಂಗಪಡಿಸುತ್ತದೆ. ಬಿಬಿಎಂಪಿಯಿಂದ ಸರಿಯಾದ ಯೋಜನೆ ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಬೆಂಗಳೂರು ಇಂತಹ ಪ್ರವಾಹಕ್ಕೆ ಗುರಿಯಾಗುತ್ತಿದೆ, ಇದು ನಾಗರಿಕರಿಗೆ ಭಾರಿ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ, ಹಲವು ಅಪಾಯಗಳಿಗೂ ಇದು ಎಡೆ ಮಾಡಿ ಕೊಡುತ್ತಿದೆ. ಪ್ರತಿ ಬಾರಿ ಮಳೆ ಸುರಿದಾಗಲೂ ನಗರ ಇಂತಹ ಬಿಕ್ಕಟ್ಟಿಗೆ ಸಿಲುಕುವುದನ್ನು ತಡೆಯಲು ತಕ್ಷಣದ ಕ್ರಮ ಮತ್ತು ದೀರ್ಘಾವಧಿ ಪರಿಹಾರಗಳು ಅತ್ಯಗತ್ಯ‘ ಎಂದು Karnataka Portfolio ಎನ್ನುವ ಟ್ವಿಟರ್ ಪುಟ ನಿರ್ವಹಿಸುವವರು ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಪೋಸ್ಟ್ ಜೊತೆ ರಸ್ತೆಯ ಮೇಲೆ ಹೊಳೆಯಂತೆ ನೀರು ತುಂಬಿಕೊಂಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
‘ಬಿಬಿಎಂಪಿಯ ಯೋಜಿತವಲ್ಲದ ಹಾಗೂ ಪ್ರಜ್ಞಾಹೀನ ಕೆಲಸಗಳಿಂದಾಗಿ ಇಂದು ಬೆಂಗಳೂರಿನಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಚರಂಡಿ ನೀರು ಹೋಗಲು ಇಲ್ಲಿದೆ ಸರಿಯಾದ ವ್ಯವಸ್ಥೆಗಳಿಲ್ಲ. ಕೆಲವು ಜೀವಗಳು ಹೋಗುವವರೆಗೂ ಬಿಬಿಎಂಪಿ ಕ್ರಮ ತೆಗೆದುಕೊಳ್ಳುವುದಿಲ್ಲ ಎನ್ನಿಸುತ್ತದೆ ಎಂದು IndianCitizen ಎನ್ನುವವರು ಬಿಬಿಎಂಪಿ, ಸಿದ್ದರಾಮಯ್ಯ, ಡಿಕೆಶಿವಕುಮಾರ್, ಎಸ್‌ಆರ್‌ವಿಶ್ವನಾಥ್ ಮೊದಲಾದವರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಬಾಗಲೂರು ರಸ್ತೆಯಲ್ಲಿ ಶಾಲಾ ವಾಹನವೊಂದು ನೀರಿನಲ್ಲಿ ಸಿಲುಕಿದ್ದು, ಮಕ್ಕಳನ್ನು ಬಸ್‌ನಿಂದ ಇಳಿಸುವ ದ್ರಶ್ಯ ಇರುವ ವಿಡಿಯೊ ಹಂಚಿಕೊಂಡಿದ್ದಾರೆ Namma Balagere ಎಂಬ ಟ್ವಿಟರ್ ನಿರ್ವಹಿಸುತ್ತಿರುವವರು, Jayant Shahi ಎನ್ನುವವರು ಈ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿ ಬಿಬಿಎಂಪಿ ಅವ್ಯವಸ್ಥೆಗೆ ಆಕ್ರೋಶ ಹೊರ ಹಾಕಿದ್ದಾರೆ.
‘ಅಸಮರ್ಥ ಬಿಬಿಎಂಪಿ ಮತ್ತು ಬೇಜವಾಬ್ದಾರಿ ರಾಜಕಾರಣಿಗಳ ಮಾರಣಾಂತಿಕ ಸಂಯೋಜನೆಯು ನಮ್ಮ ರಸ್ತೆಗಳನ್ನು ಮೋಟಾರು ವಾಹನ ಅಥವಾ ನೀರಿನ ವಾಹನಗಳನ್ನು ಏಕಕಾಲದಲ್ಲಿ ಬಳಸಬಹುದಾದ ಎರಡು ಉದ್ದೇಶದ ಸಾರಿಗೆ ಮಾರ್ಗಗಳಾಗಿ ಪರಿವರ್ತಿಸಿದೆ ಎಂಬುದರ ಮತ್ತೊಂದು ವಿಡಿಯೊ. . ಈ ಪೇಟೆಂಟ್ ತಂತ್ರಜ್ಞಾನವು ನಮ್ಮ ದೇಶಕ್ಕೆ ವಿಶಿಷ್ಟವಾಗಿದೆ. ಹೆಣ್ಣೂರು ರಸ್ತೆಯು ಈ ತಂತ್ರಜ್ಞಾನಕ್ಕೆ ಒಂದು ಅಪೇಕ್ಷಣೀಯ ಉದಾಹರಣೆಯಾಗಿದೆ ಎಂಬ ಹೆಮ್ಮೆ ನಮಗೂ ಇದೆ‘ ಎಂದು sanjai velayudhan ಎನ್ನುವವರು ವ್ಯಂಗ್ಯವಾಡುವ ಮೂಲಕ ವಿಡಿಯೊ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.