ಸಿಎಂ ಸಿದ್ದರಾಮಯ್ಯ ಓದಿದ ಪ್ರತಿಷ್ಠಿತ ಸರ್ಕಾರಿ ಕಾಲೇಜಿನಲ್ಲೀಗ ಮೂಲಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Mysore News: ಸಿಎಂ ಸಿದ್ದರಾಮಯ್ಯ ಅವರು ಓದಿದ ಪ್ರತಿಷ್ಠಿತ ಯುವರಾಜ ಸರ್ಕಾರಿ ಕಾಲೇಜಿನಲ್ಲೀಗ ಮೂಲಸೌಕರ್ಯಗಳ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಾಸಂಗ ಮಾಡಿದ ಮೈಸೂರಿನ ಪ್ರತಿಷ್ಠಿತ ಯುವರಾಜ ಸರ್ಕಾರಿ ಪದವಿ ಕಾಲೇಜಿನಲ್ಲೀಗ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ವಿದ್ಯಾರ್ಥಿಗಳು ರೊಚ್ಚಿಗೆದ್ದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ. ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು, ದಿಢೀರ್ ಪ್ರತಿಭಟನೆ ನಡೆಸಿದರು. ಸುಮಾರು 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಯುವರಾಜ ಕಾಲೇಜನ್ನು ಅಂದಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಇದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಇದೀಗ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಪ್ರತಿಷ್ಠಿತ ಯುವರಾಜ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಎದುರಾಗಿದೆ. ಹೀಗಾಗಿ ಸೌಲಭ್ಯಗಳನ್ನು ನೀಡುವಂತೆ ವಿದ್ಯಾರ್ಥಿಗಳು ಹಿಂದೆ ಬಾರಿ ಮನವಿ ಮಾಡಿದ್ದರೂ ಯಾರೊಬ್ಬರೂ ಸ್ಪಂದಿಸಿರಲಿಲ್ಲ. ಹೀಗಾಗಿ, ಯಾರೊಬ್ಬರೂ ಸ್ಪಂದಿಸದ ಕಾರಣ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಲ್ಯಾಬ್ ಅವ್ಯವಸ್ಥೆ, ಶೌಚಾಲಯದ ಅವ್ಯವಸ್ಥೆ ಸರಿಪಡಿಸಬೇಕು. ಅಧ್ಯಾಪಕರ ಕೊರತೆ ನೀಗಿಸಬೇಕು ಎಂದು ಆಗ್ರಹಿಸಿದ್ದಾರೆ ವಿದ್ಯಾರ್ಥಿಗಳು. ಈ ಕುರಿತು ಯುವರಾಜ ಕಾಲೇಜು ವಿದ್ಯಾರ್ಥಿಗಳಾದ ಸುಪ್ರಿಯಾ, ನಿಸರ್ಗ, ಆದಿತ್ಯ, ರಂಜನ್ ಗೌಡ ಎಂಬವರು ಮಾತನಾಡಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವರದಿ ನೋಡಿದ ಬಳಿಕವಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತ ಗಮನಹರಿಸುವರೇ, ತಾವು ಓದಿದ ಕಾಲೇಜಿನ ಅಭಿವೃದ್ಧಿಗೆ ಮುಂದಾಗುವರೇ ಎಂಬುದನ್ನು ಕಾಯ್ದುನೋಡಬೇಕಿದೆ.
1954ರಲ್ಲಿ ಮರುನಾಮಕರಣ
ಯುವರಾಜ ಕಾಲೇಜನ್ನು (ಸ್ವಾಯತ್ತ) 1928ರಲ್ಲಿ ಸ್ಥಾಪಿಸಲಾಯಿತು. ಅಂದು ಕೇವಲ ಪಿಯುಸಿ ಕಾಲೇಜು ಆಗಿತ್ತು. ಇದು ಮೈಸೂರು ವಿಶ್ವವಿದ್ಯಾನಿಲಯದ ನಾಲ್ಕು ಘಟಕ ಕಾಲೇಜುಗಳಲ್ಲಿ ಒಂದಾಗಿದೆ. ಈ ಕಾಲೇಜಿನಲ್ಲಿ ವಿಜ್ಞಾನದಲ್ಲಿ ವಿವಿಧ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ಗಳು ಲಭ್ಯವಿವೆ. 1954 ರಲ್ಲಿ ಯುವರಾಜ ಕಾಲೇಜು ಎಂದು ಮರುನಾಮಕರಣ ಮಾಡಲಾಯಿತು. ಯುವರಾಜ ಕಾಲೇಜಿಗೆ ಪ್ರವೇಶ ಪಡೆಯಲು ಎಂಟ್ರೆನ್ಸ್ ಎಕ್ಸಾಮ್ ಮತ್ತು ಮೆರಿಟ್ ಎರಡನ್ನೂ ಆಧರಿಸಿದೆ.
ವಿಜ್ಞಾನ: ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಸಸ್ಯಶಾಸ್ತ್ರ, ಮ್ಯಾನೇಜ್ಮೆಂಟ್ ಸೈನ್ಸಸ್, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಎನ್ವಿರಾನ್ಮೆಂಟಲ್ ಸೈನ್ಸ್, ಆಹಾರ ವಿಜ್ಞಾನ ಮತ್ತು ಪೋಷಣೆ, ಭೂವಿಜ್ಞಾನ, ಗಣಿತಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ಆಣ್ವಿಕ ಜೀವಶಾಸ್ತ್ರ, ಭೌತಶಾಸ್ತ್ರ, ರೇಷ್ಮೆ ಕೃಷಿ, ಸ್ಟ್ಯಾಟಿಸ್ಟಿಕ್ಸ್, ಪ್ರಾಣಿಶಾಸ್ತ್ರ.
ಭಾಷೆಗಳು: ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತ, ಪರ್ಷಿಯನ್.