ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಕ್ರೀಡಾಂಗಣಗಳಿವು; ಚಿನ್ನಸ್ವಾಮಿ ಮೈದಾನ ಮಾತ್ರವಲ್ಲ, ಇವೂ ಫೇಮಸ್
ಕನ್ನಡ ರಾಜ್ಯೋತ್ಸವ 2024ರ (Karnataka Rajyotsava) ಸಮಯದಲ್ಲಿ ಕರ್ನಾಟಕದ ಪ್ರಮುಖ ಹತ್ತು ಕ್ರೀಡಾಂಗಣಗಳ (Top 10 Stadiums in Karnataka) ವಿವರ ಪಡೆಯೋಣ. ಬೆಂಗಳೂರಿನಲ್ಲಿ ಹಲವು ಪ್ರಸಿದ್ಧ ಕ್ರೀಡಾಂಗಣಗಳಿದ್ದು, ಇದರೊಂದಿಗೆ ರಾಜ್ಯದಾದ್ಯಂತ ಹಲವು ಸ್ಟೇಡಿಯಂಗಳಿವೆ.
ಕರ್ನಾಟಕ ರಾಜ್ಯದಲ್ಲಿ ಕ್ರೀಡೆಗೆ ಭಾರಿ ಮಹತ್ವ ಕೊಡಲಾಗುತ್ತದೆ. ರಾಜ್ಯದ ಹಲವಾರು ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ, ರಾಜ್ಯದಾದ್ಯಂತ ಹಲವು ಕ್ರೀಡಾಂಗಣಗಳು ನಾಡಿನ ಕ್ರೀಡಾಪಟುಗಳಿಗೆ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ನೆರವಾಗುತ್ತಿವೆ. ಕರ್ನಾಟಕ ರಾಜ್ಯವು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದು, ವಿಶೇಷ ಸಂದರ್ಭದಲ್ಲಿ ಕರ್ನಾಟಕದಲ್ಲಿರುವ 10 ಪ್ರಮುಖ ಕ್ರೀಡಾಂಗಣಗಳು ಯಾವುವು ಎಂಬುದನ್ನು ಗುರುತಿಸೋಣ.
ಕ್ರೀಡಾಂಗಣವೆಂದಾಕ್ಷಣ ಮೊದಲು ನೆನಪಾಗುವುದೇ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ. ಇದನ್ನು ಹೊರತುಪಡಿಸಿ ವಿವಿಧ ಕ್ರೀಡೆಗಳಿಗೆ ಆತಿಥ್ಯ ನೀಡುವ ಹಲವು ಕ್ರೀಡಾಂಗಣಗಳು ರಾಜ್ಯದಲ್ಲಿವೆ. ಈ ಎಲ್ಲಾ ಕ್ರೀಡಾಂಗಣಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ.
1. ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ರಾಜ್ಯದ ಕ್ರಿಕೆಟ್ ಪ್ರೇಮಿಗಳ ಸ್ವರ್ಗವಾಗಿರುವ ಚಿನ್ನಸ್ವಾಮಿ ಮೈದಾನವು, ರಾಜ್ಯದ ಪ್ರಮುಖ ಹಾಗೂ ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿರುವ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಅಂತಾರಾಷ್ಟ್ರೀಯ ಟೆಸ್ಟ್, ಏಕದಿನ, ಟಿ20 ಪಂದ್ಯಗಳು ಮಾತ್ರವಲ್ಲದೆ ಐಪಿಎಲ್ ಸೇರಿದಂತೆ ಹಲವು ಟೂರ್ನಿಗಳಿಗೆ ದಶಕಗಳಿಂದ ಆತಿಥ್ಯ ನೀಡುತ್ತಾ ಬಂದಿದೆ. ಅತ್ಯಾಧುನಿಕ ಡ್ರೈನೇಜ್ ವ್ಯವಸ್ಥೆ ಹೊಂದಿರುವ ವಿಶ್ವದ ಕೆಲವೇ ಕ್ರೀಡಾಂಗಳಲ್ಲಿ ಚಿನ್ನಸ್ವಾಮಿ ಮೈದಾನ ಕೂಡಾ ಒಂದು ಎಂಬುದು ಕನ್ನಡಿಗರ ಹೆಮ್ಮೆ. ಸ್ಟೇಡಿಯಂಬಲ್ಲಿ 40,000 ಆಸನ ಸಾಮರ್ಥ್ಯವಿದೆ.
2. ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣ
ಬೆಂಗಳೂರಿನಲ್ಲಿರುವ ಅತಿದೊಡ್ಡ ಕ್ರೀಡಾ ಸಂಕೀರ್ಣವಿದು. ಈ ಕ್ರೀಡಾಂಗಣದಲ್ಲಿ ವಿವಿಧ ಕ್ರೀಡೆಗಳನ್ನು ಆಡಬಹುದು. ಮೈದಾನದಲ್li ಅಂತಾರಾಷ್ಟ್ರೀಯ ಗುಣಮಟ್ಟದ ಅಥ್ಲೆಟಿಕ್ ಟ್ರ್ಯಾಕ್ ಇದ್ದು, ಫುಟ್‌ಬಾಲ್ ಕೋರ್ಟ್ ಕೂಡಾ ಇದೆ. ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುವ ಬೆಂಗಳೂರಿನ ಬಹುಪಯೋಗಿ ಕ್ರೀಡಾಂಗಣ ಎಂಬ ಹೆಗ್ಗಳಿಗೆ ಇದರದ್ದು. ಇಲ್ಲಿ ಭಾರತ ಫುಟ್ಬಾಲ್ ತಂಡದ ಪಂದ್ಯಗಳು ನಡೆದಿದ್ದು, ಐಎಸ್‌ಎಲ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡದ ಪಂದ್ಯಗಳು ಕೂಡಾ ಅದ್ಧೂರಿಯಾಗಿ ನಡೆಯುತ್ತವೆ.
3. ಕಂಠೀರವ ಒಳಾಂಗಣ ಕ್ರೀಡಾಂಗಣ
ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ಬಳಿ ಕಂಠೀರವ ಒಳಾಂಗಣ ಕ್ರೀಡಾಂಗಣ ಇದೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ತಂಡದ ಹಲವು ಪಂದ್ಯಗಳು ಇಲ್ಲಿ ನಡೆದಿವೆ. ಭಾರತದ ಜನಪ್ರಿಯ ಒಳಾಂಗಣ ಕ್ರೀಡಾಂಗಣಗಳಲ್ಲಿ ಕಂಠೀರವ ಕೂಡಾ ಒಂದು. ಇಲ್ಲಿ 4,000 ಜನರು ಕುಳಿತುಗೊಳ್ಳುವ ಸಾಮರ್ಥ್ಯವಿದೆ. 2015 ಮತ್ತು 2016ರಲ್ಲಿ SABA ಚಾಂಪಿಯನ್‌ಶಿಪ್ ಇಲ್ಲಿ ನಡೆದಿತ್ತು. ಭಾರತದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ತಂಡವು ಎರಡು ಬಾರಿಯೂ ಚಿನ್ನದ ಪದಕ ಗೆದ್ದಿತ್ತು.
4. ಕೆಎಸ್‌ಸಿಎ ಕ್ರೀಡಾಂಗಣ, ಶಿವಮೊಗ್ಗ
ಶಿವಮೊಗ್ಗದ ನವುಲೆಯಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕೆಎಸ್‌ಸಿಎ ಸ್ಟೇಡಿಯಂ ಇದೆ. ಇಂಗ್ಲೆಂಡ್‌ನ ಕೌಂಟಿ ಪಿಚ್‌ಗಳಿಗೆ ಹೋಲುವ ಪಿಚ್ ಶಿವಮೊಗ್ಗದಲ್ಲೂ ಇದೆ. ಇಲ್ಲಿನ ವಾತಾವರಣಕ್ಕೆ ಸರಿಹೊಂದುವಂತೆ ಮೈದಾನ ರೂಪಿಸಲಾಗಿದೆ. ಚಿನ್ನಸ್ವಾಮಿ ಮೈದಾನದ ಹೊರತುಪಡಿಸಿದರೆ, ಪೆವಿಲಿಯನ್, ಸುಸಜ್ಜಿಯ ಡ್ರೆಸ್ಸಿಂಗ್ ರೂಮ್‌ಗಳು ಈ ಮೈದಾನದಲ್ಲಿವೆ. ಕೂಚ್ ಬೆಹಾರ್, ರಣಜಿ, ಭಾರತ ಎ ತಂಡಗಳ ಪಂದ್ಯಗಳೂ ಇಲ್ಲಿ ನಡೆದಿವೆ.
5. ಕೆಎಸ್‌ಸಿಎ ಸ್ಟೇಡಿಯಂ, ಬೆಂಗಳೂರು
ಬೆಂಗಳೂರಿನಲ್ಲಿಯೇ ಇರುವ ಕೆಎಸ್‌ಸಿಎ ಕ್ರೀಡಾಂಗಣವು ಹಲವಾರು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದೆ. ಚಿನ್ನಸ್ವಾಮಿ ಮೈದಾನದ ಜೊತೆಗೆ ಅಭ್ಯಾಸ ಪಂದ್ಯ ಸೇರಿದಂತೆ ಆಟಗಾರರಿಗೆ ಅತ್ಯುತ್ತಮ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತದೆ.
6. ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ
ನಗರದಲ್ಲಿ ಫುಟ್ಬಾಲ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಜನಪ್ರಿಯ ಕ್ರೀಡಾಂಗಣ ಇದಾಗಿದೆ. ಈ ಕ್ರೀಡಾಂಗಣವು ಹಲವಾರು ರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸಿದೆ. ಇದೇ ಮೈದಾನದಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡ ಕೂಡಾ ಆಡಿದೆ.
7. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನ, ಮೈಸೂರು
ಗಂಗೋತ್ರಿ ಗ್ಲೇಡ್ಸ್ ಮೈದಾನವನ್ನು ಹಿಂದೆ ಮೈಸೂರು ವಿಶ್ವವಿದ್ಯಾನಿಲಯ ಪ್ಲಾಟಿನಂ ಜುಬಿಲಿ ಕ್ರಿಕೆಟ್ ಸ್ಟೇಡಿಯಂ ಎಂದು ಕರೆಯಲಾಗುತ್ತಿತ್ತು. ಸುಂದರ ಪ್ರಾಕೃತಿಕ ಹಿನ್ನೆಲೆಯಲ್ಲಿರುವ ಈ ಕ್ರೀಡಾಂಗಣದಲ್ಲಿ ಸುಮಾರು 15,000 ಜನರು ಪಂದ್ಯ ವೀಕ್ಷಿಸಬಹುದು. ಇದನ್ನು ಮೈಸೂರು ವಿಶ್ವವಿದ್ಯಾನಿಲಯ ನಿರ್ಮಿಸಿದೆ. 1997ರಲ್ಲಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಆಟವನ್ನು ಉತ್ತೇಜಿಸುವ ಸಲುವಾಗಿ, ಮೈದಾನವನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ವಿಶ್ವವಿದ್ಯಾಲಯದೊಂದಿಗೆ 20 ವರ್ಷಗಳ ಒಪ್ಪಂದ ಮಾಡಿಕೊಂಡಿತು. 2007ರಲ್ಲಿ ಇಲ್ಲಿ ಹೊಸ ಪೆವಿಲಿಯನ್ ಸಂಕೀರ್ಣ ನಿರ್ಮಿಸಲಾಯಿತು. ಈಗಾಗಲೇ ಈ ಮೈದಾನದಲ್ಲಿ ವನಿತೆಯರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಿವೆ. ಹಲವು ರಣಜಿ ಟ್ರೋಫಿ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ನಂತರ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಈ ಮೈದಾನ ಎರಡನೇ ತವರು ಮೈದಾನವಾಗಿದೆ.
8. ಕೆಎಸ್‌ಸಿಎ ಸ್ಟೇಡಿಯಂ, ಬೆಳಗಾವಿ
ಉತ್ತರ ಕರ್ನಾಟಕದಲ್ಲಿರುವ ಪ್ರಮುಖ ಕ್ರಿಕೆಟ್ ಮೈದಾನವಿದು. ಇಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿಲ್ಲ. ಬೆಳಗಾವಿಯಲ್ಲಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಮೈದಾನದಲ್ಲಿ ಮೊದಲ ಮಹತ್ವದ ಪಂದ್ಯ 2016/17ರಲ್ಲಿ ನಡೆಯಿತು. ರಣಜಿ ಟ್ರೋಫಿಯ ಎರಡು ಪ್ರಥಮ ದರ್ಜೆ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ರಾಜ್ಯಮಟ್ಟದ ಹಲವು ಪಂದ್ಯಗಳು ಇಲ್ಲಿ ನಡೆದಿವೆ. ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಭಾಗಿಯಾಗಿದ್ದಾರೆ.
9. ದರಾ ಬೇಂದ್ರೆ ಕ್ರಿಕೆಟ್ ಸ್ಟೇಡಿಯಂ ಹುಬ್ಬಳ್ಳಿ
ಹುಬ್ಬಳ್ಳಿಯ ಈ ಕ್ರೀಡಾಂಗಣವನ್ನು 2012ರಲ್ಲಿ ನಿರ್ಮಿಸಲಾಯಿತು. 50000 ಆಸನ ಸಾಮರ್ಥ್ಯದೊಂದಿಗೆ ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಎ ಮತ್ತು ವೆಸ್ಟ್ ಇಂಡೀಸ್ ಎ ಕ್ರಿಕೆಟ್ ತಂಡಗಳ ನಡುವಿನ ಅನಧಿಕೃತ ಟೆಸ್ಟ್ ಪಂದ್ಯಕ್ಕೆ ಈ ಮೈದಾನ ಆತಿಥ್ಯ ವಹಿಸಿದೆ. ಗೌತಮ್ ಗಂಭೀರ್, ಚೇತೇಶ್ವರ ಪೂಜಾರ, ಜಹೀರ್ ಖಾನ್ ಸೇರಿದಂತೆ ಜನಪ್ರಿ ಕ್ರಿಕೆಟಿಗರು ಇಲ್ಲಿ ಆಡಿದ್ದಾರೆ. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಮಹಾರಾಜಾ ಟ್ರೋಫಿ) ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಇದು ತವರು ಮೈದಾನವಾಗಿದೆ.
10. ಬೆಂಗಳೂರು ಹಾಕಿ ಸ್ಟೇಡಿಯಂ
ಕೆಎಸ್‌ಎಚ್‌ಎ ಹಾಕಿ ಸ್ಟೇಡಿಯಂ ಎಂದು ಕರೆಯಲಾಗುವ ಈ ಹಾಕಿ ಸ್ಟೇಡಿಯಂ ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿಯಲ್ಲಿದೆ. 7000 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಈ ಸ್ಟೇಡಿಯಂನಲ್ಲಿದೆ. ಇಲ್ಲಿ ಕರ್ನಾಟಕ ಲಯನ್ಸ್ ತಂಡದ ಪಂದ್ಯಗಳು ನಡೆದಿವೆ. ನಗರದಲ್ಲಿರುವ ಗುಣಮಟ್ಟದ ಹಾಕಿ ಕ್ರೀಡಾಂಗಣ ಇದಾಗಿದ್ದು, ವರ್ಲ್ಡ್ ಸೀರೀಸ್ ಹಾಕಿಯಲ್ಲಿ ಕರ್ನಾಟಕ ಲಯನ್ಸ್ ತಂಡದ ಏಳು ಪಂದ್ಯಗಳನ್ನು ಆಯೋಜಿಸಿತ್ತು.
(ರಾಜ್ಯದಲ್ಲಿ ಇನ್ನಷ್ಟು ಜನಪ್ರಿಯ ಹಾಗೂ ಪ್ರಮುಖ ಕ್ರೀಡಾಂಗಣಗಳಿವೆ. ಇಲ್ಲಿ ವಿವಿಧ ಆಯಾಮಗಳಿಂದ ಆಯ್ಕೆ ಮಾಡಿ ಹತ್ತು ಕ್ರೀಡಾಂಗಣಗಳನ್ನಷ್ಟೇ ಹೆಸರಿಸಲಾಗಿದೆ.)