ಕನ್ನಡ ರಾಜ್ಯೋತ್ಸವ 2024: ಬೆಂಗಳೂರಿನಲ್ಲಿ ಶಾಪಿಂಗ್ ಮಾಡಲು ಹೇಳಿ ಮಾಡಿಸಿದ 10 ಸ್ಥಳಗಳು, ಸಿಲಿಕಾನ್ ಸಿಟಿಯ ಜಾಗಗಳಿಗೆ ಒಮ್ಮೆ ಭೇಟಿ ಕೊಡಿ
ಕನ್ನಡ ರಾಜ್ಯೋತ್ಸವ 2024 (Karnataka Rajyotsava) ಸಮಯದಲ್ಲಿ ಬೆಂಗಳೂರಿನ ಪ್ರಮುಖ 10 ಶಾಪಿಂಗ್ ತಾಣಗಳ ಬಗ್ಗೆ (Top 10 Shopping Places in Bengaluru) ಇಲ್ಲಿ ಮಾಹಿತಿ ನೀಡಲಾಗಿದೆ. ಸಿಲಿಕಾನ್ ಸಿಟಿಗೆ ಭೇಟಿ ನೀಡಿದವರು ಒಮ್ಮೆಯಾದ್ರೂ ಈ ಜಾಗಗಳಿಗೆ ಹೋಗಬೇಕು.
10 Shopping places in bangalore: ನವೆಂಬರ್ 1 ಕನ್ನಡ ರಾಜ್ಯೋತ್ಸವ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ವಿಶೇಷಗಳ ಬಗ್ಗೆ ತಿಳಿದುಕೊಳ್ಳಲು ಮನ ಬಯಸುವುದು ಸಹಜ. ಕರ್ನಾಟಕ ಎಂದಾಕ್ಷಣ ಮೊದಲು ನೆನಪಾಗುವುದು ಬೆಂಗಳೂರು. ಇದು ಕರ್ನಾಟಕದ ರಾಜಧಾನಿಯೂ ಹೌದು. ಐಟಿ ಸಿಟಿಯಾಗಿರುವ ಬೆಂಗಳೂರು ಹಲವು ವಿಶೇಷಗಳ ತವರು. ಬೆಂಗಳೂರಿನಲ್ಲಿ ಶಾಪಿಂಗ್ ಮಾಡಲು ಹೇಳಿ ಮಾಡಿಸಿದ ಹಲವು ತಾಣಗಳಿವೆ.
ಬೆಂಗಳೂರಿಗೆ ನೀವು ಭೇಟಿ ನೀಡಿದ್ರೆ ಒಮ್ಮೆಯಾದ್ರೂ ಈ ಶಾಪಿಂಗ್ ತಾಣಗಳಿಗೆ ಭೇಟಿ ನೀಡಬೇಕು. ಇಲ್ಲಿ ನೀವು 10 ರೂಪಾಯಿಯಿಂದ 1ಲಕ್ಷದವರೆಗೆ ಖರೀದಿ ಮಾಡಬಹುದು. ಬೆಂಗಳೂರಿನ 10 ಪ್ರಮುಖ ಶಾಪಿಂಗ್ ತಾಣಗಳ ಪರಿಚಯ ಇಲ್ಲಿದೆ.
ಕಮರ್ಷಿಯಲ್ ಸ್ಟ್ರೀಟ್
ಬೆಂಗಳೂರಿನ ಶಾಪಿಂಗ್ ಸ್ಟ್ರೀಟ್‌ನಲ್ಲೇ ಕಮರ್ಷಿಯಲ್ ಸ್ಟ್ರೀಟ್‌ಗೆ ಅಗ್ರಸ್ಥಾನ. ಶಿವಾಜಿನಗರ ಹಾಗೂ ಎಂಜಿ ರಸ್ತೆಗೆ ಸಮೀಪದಲ್ಲಿರುವ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ನೀವು ಬೀದಿ ಬದಿಯ ಶಾಪಿಂಗ್‌ನಿಂದ ದೊಡ್ಡ ದೊಡ್ಡ ಬ್ರಾಂಡೆಂಡ್ ವಸ್ತುಗಳನ್ನೂ ಖರೀದಿಸಬಹುದು. ವರ್ಷದ 365 ದಿನವೂ ಬ್ಯುಸಿಯಾಗಿರುವ ಬೆಂಗಳೂರಿನ ಬೀದಿ ಇದು.
ಮಲ್ಲೇಶ್ವರಂ 8th ಕ್ರಾಸ್
ಬೆಂಗಳೂರಿನಲ್ಲಿ ಶಾಪಿಂಗ್ ಮಾಡಲು ಹೇಳಿ ಮಾಡಿಸಿದ ಇನ್ನೊಂದು ತಾಣ ಮಲ್ಲೇಶ್ವರಂ 8th ಕ್ರಾಸ್. ಇಲ್ಲಿ ನೀವು ಬಟ್ಟೆ, ಚಪ್ಪಲಿ ಅಂತಲ್ಲ ಮನೆಗೆ ಬೇಕಾಗುವ ಹೂ ಹಣ್ಣು ತರಕಾರಿಯಿಂದ ಸಕಲವನ್ನೂ ಶಾಪಿಂಗ್ ಮಾಡಬಹುದು. ಇದು ಮಧ್ಯಮವರ್ಗದವರಿಗೆ ಶಾಪಿಂಗ್ ಮಾಡಲು ಹೇಳಿ ಮಾಡಿಸಿದ ತಾಣ.
ಜಯನಗರ 4th ಬ್ಲಾಕ್
ಜಯನಗರ 4th ಬ್ಲಾಕ್ ಕೂಡ ಮಲ್ಲೇಶ್ವರಂನಂತೆ ಎಲ್ಲವೂ ಒಂದೇ ಜಾಗದಲ್ಲಿ ಸಿಗುವ ತಾಣ. ಇಲ್ಲಿನ ಕಾಂಪ್ಲೆಕ್ಸ್ ಒಳ ಹೊಕ್ಕರೆ ನಿಮಗೆ ಬೇಕಾಗಿರುವುದನ್ನೆಲ್ಲಾ ಖರೀದಿ ಮಾಡಿಯೇ ನೀವು ಹೊರ ಬರಬಹುದು. ಯಾಕೆಂದರೆ ನಿಮಗೆ ಬೇಕಾಗುವ ಎಲ್ಲಾ ವಸ್ತುಗಳು ಈ ಕಾಂಪ್ಲೆಕ್ಸ್‌ನಲ್ಲಿ ಸಿಗುತ್ತದೆ. ಇಲ್ಲಿ ಕೂಡ ನಿಮಗೆ ಎಲ್ಲಾ ರೀತಿಯ ಬ್ರಾಂಡೆಡ್ ಬಟ್ಟೆಗಳು ಸಿಗುತ್ತವೆ.
ಗಾಂಧಿ ಬಜಾರ್
ಗಾಂಧಿ ಬಜಾರ್ ಬೆಂಗಳೂರಿನ ಶಾಪಿಂಗ್ ತಾಣಗಳಲ್ಲಿ ಒಂದು. ಸಾಂಪ್ರದಾಯಿಕ ವಸ್ತುಗಳ ಖರೀದಿಯ ಜೊತೆಗೆ ನಿಮಗೆ ಇಷ್ಟವಾಗಿರುವ ಎಲ್ಲವೂ ಇಲ್ಲಿದೆ ಸಿಗುತ್ತದೆ. ಜೊತೆಗೆ ಶಾಪಿಂಗ್ ಮಾಡಿ ಹೊಟ್ಟೆ ಹಸಿವು ಶುರುವಾಯ್ತು ಎಂದರೆ ಇಲ್ಲಿ ರುಚಿ ರುಚಿಯಾದ ಆಹಾರ ಬಡಿಸುವ ಹೋಟೆಲ್‌ಗಳು ಲಭ್ಯವಿವೆ.
ಬ್ರಿಗೇಡ್ ರೋಡ್
ನೀವು ಬ್ರಾಂಡೆಡ್ ಪ್ರಿಯರಾದರೆ ನೀವು ಬೇರೆಲ್ಲೂ ಹೋಗುವುದು ಬೇಡ, ಬ್ರಿಗ್ರೆಡ್ ರೋಡ್‌ಗೆ ಬಂದರೆ ನಿಮಗೆ ಎಲ್ಲಾ ರೀತಿ ಬ್ರಾಂಡೆಡ್ ಬಟ್ಟೆ, ಶೂಗಳು ಸಿಗುತ್ತವೆ. ಇಲ್ಲಿನ ಆಂಬಿಯೆನ್ಸ್ ಕೂಡ ಸಖತ್ ಆಗಿರುತ್ತೆ. ರಾತ್ರಿ, ಇಳಿ ಸಂಜೆ ಹೊತ್ತು ಬ್ರಿಗೇಡ್ ರೋಡ್ ನೋಡುವುದೇ ಅಂದ.
ಚಿಕ್ಕಪೇಟೆ
ಮದುವೆ ಸೀರೆಗಳ ಖರೀದಿಗೆ ಕರ್ನಾಟಕದಾದ್ಯಂತ ಜನ ಬೆಂಗಳೂರಿನ ಚಿಕ್ಕಪೇಟೆ ಬರುತ್ತಾರೆ. ಚಿಕ್ಕ ಪೇಟೆ ಎನ್ನುವುದೇ ಒಂದು ಚಿಕ್ಕ ಪ್ರಪಂಚ. ಇಲ್ಲಿನ ಬೀದಿ ಬೀದಿಗಳಲ್ಲಿ ಸಿಗದ ವಸ್ತುವೇ ಇಲ್ಲ. ಪ್ರಪಂಚದ ಯಾವ ಮೂಲೆಯಲ್ಲಿ ಸಿಗದ ವಸ್ತುವೂ ಚಿಕ್ಕ ಪೇಟೆಯಲ್ಲಿ ಸಿಗುತ್ತದೆ. ಸೀರೆಗಳ ಖರೀದಿಗಂತೂ ಚಿಕ್ಕಪೇಟೆಗಿಂತ ಉತ್ತಮ ಜಾಗ ಇನ್ನೊಂದಿಲ್ಲ.
ಎಂಜಿ ರಸ್ತೆ
ಬೆಂಗಳೂರಿನಲ್ಲಿ ಶಾಪಿಂಗ್ ಮಾಡಲು ಎಂಜಿ ರಸ್ತೆ ಕೂಡ ಹೇಳಿ ಮಾಡಿಸಿದ ತಾಣ. ಇಲ್ಲಿ ಕೊಂಚ ಕಾಸ್ಟ್ಲಿ ಆದ್ರೂ ಕೂಡ ಎಂಜಿ ರೋಡ್ ಶಾಪಿಂಗ್ ಮಾಡೋಕೆ ಹೇಳಿ ಮಾಡಿಸಿದ ತಾಣ.
ಇಂದಿರಾನಗರ 80 ಅಡಿ ರಸ್ತೆ
ಬೆಂಗಳೂರಿನ ಕೆಲವು ಪಾಶ್ ಶಾಪಿಂಗ್ ಸ್ಟ್ರೀಟ್‌ಗಳಲ್ಲಿ ಬೆಂಗಳೂರಿನ ಇಂದಿರಾನಗರವು ಒಂದು. ಇಲ್ಲಿ ಕೂಡ ಮಧ್ಯಮವರ್ಗದಿಂದ ಹಿಡಿದು ಎಲ್ಲರೂ ಶಾಪಿಂಗ್ ಮಾಡಲು ಹೇಳಿ ಮಾಡಿಸಿದ ತಾಣವಾಗಿದೆ.
ನ್ಯಾಷನಲ್ ಮಾರ್ಕೆಟ್
ಮೆಜೆಸ್ಟಿಕ್ ಸಮೀಪ ಇರುವ ನ್ಯಾಷನಲ್ ಮಾರ್ಕೆಟ್ ಕೂಡ ಶಾಪಿಂಗ್ ಮಾಡಲು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ನೀವು ಬಟ್ಟೆಗಳು, ಶೂಗಳು, ಬ್ಯಾಗ್‌ಗಳು, ಫೋನ್, ಕ್ಯಾಮೆರಾ ಈ ಎಲ್ಲವನ್ನೂ ಅಗ್ಗದ ದರದಲ್ಲಿ ಖರೀದಿ ಮಾಡಬಹುದು.
ಅವೆನ್ಯೂ ರೋಡ್
ಪುಸ್ತಕಗಳ ಪ್ರಪಂಚ ಎಂದೇ ಈ ರಸ್ತೆಯನ್ನ ಕರೆಯಬಹುದು. ಇಲ್ಲಿ ಪುಸ್ತಕಗಳ ಜೊತೆಗೆ ಬಟ್ಟೆ, ಬ್ಯಾಗ್, ಶೂಗಳ ಖರೀದಿಯನ್ನೂ ಮಾಡಬಹುದು.
ಕೆಆರ್ ಮಾರ್ಕೆಟ್
ಬೆಂಗಳೂರಿನಲ್ಲಿ ಬೀದಿ ಬದಿ ಶಾಪಿಂಗ್‌ನ ಪ್ರಸಿದ್ಧ ತಾಣಗಳಲ್ಲಿ ಕೆಆರ್ ಮಾರ್ಕೆಟ್ ಕೂಡ ಒಂದು. ಇಲ್ಲಿ ಹೂ, ಹಣ್ಣು, ತರಕಾರಿ ಫೇಮಸ್ ಆದ್ರೂ ಇತರ ವಸ್ತುಗಳು ಕೂಡ ಸಿಗುತ್ತವೆ.